ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮಲ್ಕಾಪುರ ಶಾಲೆಯಲ್ಲಿ ಶ್ರಮಜೀವಿ ಸಂಸ್ಥೆಯಿಂದ ಆಯೋಜಿಸಿರುವ ಬೇಸಿಗೆ ಸಂಭ್ರಮ ಕಲಿಕಾ ಶಿಬಿರದಲ್ಲಿ ಮಲ್ಲಯ್ಯ ಗೋರ್ಕಲ್ ಅವರು ಸಂಚಿಕೆಯನ್ನು ಮುದ್ರಿಸಿಕೊಟ್ಟು ಬಿಡುಗಡೆ ಮಾಡಿದರು.
ಬೇಸಿಗೆ ರಜೆಯಲ್ಲಿ ಮಕ್ಕಳು ಆಸಕ್ತಿಯಿಂದ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮಾಡಿ ವಿವಿಧ ವಿಷಯಗಳನ್ನು ರಚನಾತ್ಮಕವಾಗಿ ಕ್ರಿಯಾತ್ಮಕವಾಗಿ ತೊಡಗಿಕೊಂಡು ಕಲಿಯುತ್ತಿರುವಂತೆ ಶ್ರಮಿಸುತ್ತಿರುವ ಶಿಕ್ಷಕರಾದ ರವಿಚಂದ್ರ,ಸ್ವಯಂ ಸೇವಾ ಶಿಕ್ಷಕ ಅಯ್ಯಪ್ಪ ಅವರ ಶ್ರಮ ಶ್ಲಾಘನೀಯ ಎಂದು ಶ್ರಮಜೀವಿ ಸಂಸ್ಥೆಯ ಮಲ್ಲಯ್ಯ ಗೋರ್ಕಲ್ ನುಡಿದರು.
16 ವರ್ಷಗಳಿಂದ ಮಕ್ಕಳ ಸೃಜನಶೀಲ ಬರಹಗಳಿಗೆ ವೇದಿಕೆಯಾಗಿ ಪ್ರಕಟವಾಗುತ್ತಿರುವ ಮಕ್ಕಳ ಸಂಪಾದಕೀಯ,ನೇತೃತ್ವದ ಮಕ್ಕಳ ಮಂದಾರ ವಿಶೇಷ ಸಂಚಿಕೆ ಮಕ್ಕಳ ಕಲ್ಪನಾಶೀಲತೆ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನ ಸಂಪಾದಕರಾದ ಶಿಕ್ಷಕ ರವಿಚಂದ್ರ ನುಡಿದರು.
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ರಾಯಚೂರು ಎನ್ನುವ ಹಣೆಪಟ್ಟಿ ಅಳಿಸುವಲ್ಲಿ , ನಮ್ಮ ಗ್ರಾಮೀಣ ಮಕ್ಕಳ ಬರಹ ಆಸಕ್ತಿ ಓದುವ ಅಭಿರುಚಿ ಬೆಳೆಸುವಲ್ಲಿ ಮಕ್ಕಳ ಮಂದಾರ ಯಶಸ್ವಿ ಪ್ರಯೋಗವಾಗಿದೆ ಎಂದು ಮಲ್ಲಯ್ಯ ಗೋರ್ಕಲ್ ಅವರು ಹೇಳಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ್, ಸದಸ್ಯರು,ಹಿರಿಯ ವಿದ್ಯಾರ್ಥಿಗಳು,ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.