ಚಾಮರಾಜನಗರ/ಹನೂರು:ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳು ಕೈ ಪಾಲಾದರೆ ಹನೂರು ಕ್ಷೇತ್ರದಲ್ಲಿ ಮಾತ್ರ ತೆನೆ ಹೊತ್ತ ಮಹಿಳೆಯನ್ನು ಈ ಬಾರಿ ಮತದಾರ ಬೆಂಬಲಿಸಿದ್ದಾನೆ.ಅಲ್ಲದೆ ದಶಕಗಳಿಗೂ ಹೆಚ್ಚುಕಾಲ ಎರಡು ಕುಟುಂಬಗಳ ನಡುವೆ ಇದ್ದ ಅಧಿಕಾರಕ್ಕೆ ಮೊದಲ ಬಾರಿಗೆ ಬ್ರೇಕ್ ಬಿದ್ದಿದೆ.
ಹೌದು…ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಬಿಜೆಪಿ ನಾಗಪ್ಪ ಕುಟುಂಬ ಹಾಗೂ ಕಾಂಗ್ರೆಸ್ ನ ರಾಜೂಗೌಡ ಕುಟುಂಬದ ನಡುವೆಯಷ್ಟೇ ಹಂಚಿಕೆಯಾಗುತ್ತಿದ್ದ ಅಧಿಕಾರ ಈ ಬಾರಿ ಬದಲಾಗಿದ್ದು ಜೆಡಿಎಸ್ ಗೆ ಮತದಾರ ಬೆಂಬಲಿಸಿದ್ದಾನೆ.
ಹನೂರಿನಲ್ಲಿ ಕಳೆದ 3 ಸಾಲಿನಿಂದ ಶಾಸಕ ನರೇಂದ್ರ ಆರಿಸಿ ಬರುತ್ತಿದ್ದರು ನಾಗಪ್ಪ ಪುತ್ರ ಡಾ.ಪ್ರೀತನ್ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದರು ದೂರದ ಬೆಂಗಳೂರಿನಿಂದ ಬಂದು ಕಳೆದ 5 ವರ್ಷಗಳಿಂದ ನಿರಂತರ ಕೆಲಸ-ಕಾರ್ಯ ಮಾಡುತ್ತಿದ್ದ ಜೆಡಿಎಸ್ ಮಂಜುನಾಥ್ ಗೆ ಜನಾಶೀರ್ವಾದ ಸಿಕ್ಕಿದ್ದು 2 ಕುಟುಂಬದ ನಡುವೆ ಇದ್ದ ಅಧಿಕಾರ ಈ ಬಾರಿ ಬದಲಾಗಿದೆ.
ಮತದಾರರನ್ನು ಸೆಳೆಯದ ಸ್ಟಾರ್ ಪ್ರಚಾರ:
ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರವಾದ ” ಜನ ಸಂಕಲ್ಪ ಯಾತ್ರೆ”ಯೂ ರಾಜ್ಯದಲ್ಲಿ ಹನೂರು ತಾಲೂಕಿನಿಂದಲೇ ಆರಂಭಗೊಂಡಿತ್ತು.ಜೆ.ಪಿ.ನಡ್ಡಾ, ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ,ಸುದೀಪ್ ಹನೂರಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು.ಪ್ರಜಾ ಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ,ಡಿಕೆಶಿ ಬಂದಿದ್ದ ಚುನಾವಣೆ ಹೊತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಮಹಿಳೆಯರ ಬೃಹತ್ ಸಮಾವೇಶ ನಡೆಸಿದ್ದರು ಬಹಿರಂಗ ಪ್ರಚಾರಕ್ಕೆ ಎರಡು ದಿನ ಬಾಕಿ ಇರುವಾಗವಷ್ಟೇ ಎಚ್.ಡಿ.ಕೆ ಅರ್ಧ ತಾಸು ರೋಡ್ ಶೋ ಮಾಡಿದ್ದರು ಮತದಾರ ಕೊನೆಗೂ ಜೆಡಿಎಸ್ ಬೆಂಬಲಿಸಿ ಮಂಜುನಾಥ್ ಗೆಲ್ಲಿಸುವ ಮೂಲಕ ದಶಕಗಳಿಂದ ಅಧಿಕಾರಕ್ಕಾಗಿ ಜಿದ್ದಾಜಿದ್ದಿ ನಡೆಸಿದ್ದ ಎರಡು ಕುಟುಂಬಗಳು ಈ ಬಾರಿ ಅಧಿಕಾರ ಕಳೆದುಕೊಂಡಿದೆ.
ಪ್ರಾರಂಭದಿಂದಕೂ ಕೈ ಹಿನ್ನಡೆ: ಮೂರನೇ ಸ್ಥಾನಕ್ಜೆ ಕಮಲ:
ಮೊದಲ ಸುತ್ತಿನಿಂದ ಕೊನೆಯ 19 ನೇ ಸುತ್ತಿನಲ್ಲೂ ಜೆಡಿಎಸ್ ಅಭ್ಯರ್ಥಿ ಮುನ್ನಡೆ ಸಾಧಿಸಿಕೊಂಡು ಬಂದರು. ಈ ಬಾರಿ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಬಿಜೆಪಿ ಸಂಘಟನೆ ಛಿದ್ರವಾಗಿರುವುದು ಮತಯಂತ್ರದಲ್ಲಿ ನಿಚ್ಚಳವಾಗಿದೆ.
ಬದಲವಣೆ ಜಗದ ನಿಯಮ:
ಹನೂರಿನ ವಿಜೇತ ಅಭ್ಯರ್ಥಿ ‘ ಬದಲಾವಣೆ ಜಗದ ನಿಯಮ , ಜನಾಶೀರ್ವಾದಕ್ಕೆ ಎಲ್ಲರೂ ತಲೆ ಬಾಗಲೇ ಬೇಕು’ ಎಂದಿದ್ದಾರೆ
ನನ್ನ ಮೇಲೆ ನಂಬಿಕೆ ಇಟ್ಟು, ಹಲವು ಭರವಸೆಗಳನ್ನು ಇಟ್ಟು ಜನರು ಹರಸಿದ್ದಾರೆ, ಆದ್ಯತೆ ಮೇರೆಗೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಆಸ್ಪತ್ರೆ, ರಸ್ತೆಗಳನ್ನು ನಿರ್ಮಾಣ ಮಾಡುತ್ತೇನೆ, ಜನರ ಜೊತೆ ಸದಾ ಇರುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.
ಪಡೆದ ಮತಗಳ ವಿವರ:
ಜೆಡಿಎಸ್- ಮಂಜುನಾಥ್- 75632.
ಕಾಂಗ್ರೆಸ್- ಆರ್.ನರೇಂದ್ರ- 57978.
ಬಿಜೆಪಿ- ಡಾ.ಪ್ರೀತನ್- 35,870.
ನೋಟಾ ಮತಗಳು: 602
ವರದಿ:ಉಸ್ಮಾನ್ ಖಾನ್