ಮುನಿರತ್ನ ನಾಯ್ಡು ವಿರುದ್ಧ ಪ್ರಬಲ ಪೈಪೋಟಿ ನಡೆಸಿದ ಶ್ರೀಮಂತ ಕುಟುಂಬದ ಅಕ್ಷರವಂತೆ ಕುಸುಮ ಅವರ ಬಗ್ಗೆ ಎಲ್ಲ ಕಡೆಗೆ ದೊಡ್ಡ ಚರ್ಚೆ ಆಗುತ್ತಿದೆ. ಆದರೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬಡವರು ರಾಜಕಾರಣ ಮಾಡಬೇಕೋ, ಬೇಡವೋ ಎನ್ನುವ ಪರಿಸ್ಥಿತಿಯಲ್ಲೂ ಬಿಜೆಪಿ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದ ಜೆಡಿಎಸ್ ಪಕ್ಷದ ಕರೆಮ್ಮ ನಾಯಕ ಸ್ವಾಭಿಮಾನದ ಛಲದಂಕೆಯ ಗಟ್ಟಿಗಿತ್ತಿ ಬಡತನದ ಮಹಿಳೆ ಬಗ್ಗೆ ಕೇಂದ್ರಿಕೃತ ಬೆಂಗಳೂರಿಗರಿಗೆ ಗೊತ್ತೇ ಆಗುವುದಿಲ್ಲ ಜೆಡಿಎಸ್ ಸೋತಿದ್ದು ಇಂತಹ ಪ್ರಚಾರದ ಕೆಲಸದಲ್ಲೇ ಎಂದು ಬಹುತೇಕರು ಪಕ್ಷಾತೀತವಾಗಿ ಅಭಿಪ್ರಾಯಪಟ್ಟಿದ್ದಾರೆ.
ನನ್ನ ಮತ ಶಾಂತಿಗೆ, ನನ್ನ ಮತ ಸಮಾನತೆಗೆ, ನನ್ನ ಮತ ಮಹಿಳಾ ಸಬಲೀಕರಣಕ್ಕೆ, ನನ್ನ ಮತ ಸರ್ವ ಜನಾಂಗದ ಅಭಿವೃದ್ಧಿಗೆ ಎಂದು ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಿದ್ದ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ ನಾಯಕ ಅವರ ಪರ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ದೇವದುರ್ಗ ಕ್ಷೇತ್ರಕ್ಕೆ ಜೆಡಿಎಸ್ ಪರ ಮತಯಾಚನೆಗೆ ಬಂದಾಗ ಸೇರಿದ ಜನಸ್ತೋಮದಂದೇ ಗೆದ್ದು ಬಿಟ್ಟಿದ್ದರು. ಕೇವಲ ಫಲಿತಾಂಶಕ್ಕಾಗಿ ಇಷ್ಟು ದಿನ ಕಾದು ಕೊನೆಗೂ ಗೆದ್ದು ನಗೆಯಬೀರಿ ಬಿಟ್ಟರು.
“ಒಬ್ಬ ಸಾಮಾನ್ಯ ಹೆಣ್ಣು ಮಗಳು ಎಷ್ಟು ಜನರನ್ನು ಸೇರಿಸಿ ಸಭೆ ಮಾಡಿದ್ದಾರೆ ಅಂದರೆ ಅದು ಊಹೆಗೆ ನಿಲುಕದ್ದು!”
ದೇವದುರ್ಗ ಕ್ಷೇತ್ರದಲ್ಲಿ ಹೋದ ಸಲ ಜೆಡಿಎಸ್ ಟಿಕೆಟ್‌ಗೆ ವಂಚಿತಗೊಳಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಆಗ ಧೃತಿಗೆಡದೇ ಸ್ಪರ್ಧಿಸಿದ್ದ ಕರೆಮ್ಮ ಜಿ ನಾಯಕ ಅವರಿಗೆ ಎಲ್ಲರೂ ಹಣ, ಹೆಂಡ ಹಂಚಿ ಮತ ಪಡೆದರೆ ಮತದಾರರೇ ಈ ಮಹಿಳೆಗೆ ಚುನಾವಣೆ ವೆಚ್ಚಕ್ಕೆ ಹಣ ಕೊಟ್ಟು 25226 ಮತಗಳನ್ನು ಹಾಕಿದ್ದರು. ದೇವದುರ್ಗದ ಜನತೆ ಎಂದೆಂದೂ ಆ ಕ್ಷೇತ್ರಕ್ಕೆ ದೇವೇಗೌಡರು ಕೊಟ್ಟಿರೋ ಯೋಜನೆಗಳನ್ನು ಮರೆಯುವುದಿಲ್ಲ ಅನ್ನೋದಕ್ಕೆ ಇದು ಸಾಕ್ಷಿ ಎಂಬಂತೆ ಈ ಸಾರಿ ಪ್ರಚಂಡ ಬಹುಮತದಿಂದ ಜೆಡಿಎಸ್ ಪಕ್ಷದಿಂದ ಜನತೆ ಆರಿಸಿ ಇವರನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ.
ಸಿಂಪಥಿ ಇದ್ದರೂ ಅದೊಂದೇ ಕೆಲಸ ಮಾಡುವುದಿಲ್ಲ, ಜೊತೆಗೆ ಸರಣಿಯಾಗಿ ಕಠಿಣ ಪ್ರಯತ್ನವಿದ್ದರೆ ಮಾತ್ರ ಗೆಲುವಾಗಬಲ್ಲದು ಎಂಬ ಸಂಗತಿಯನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ.
ಏಷ್ಯಾ ಖಂಡದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕೆಂದು ಖ್ಯಾತಿ ಪಡೆದ ದೇವದುರ್ಗದಲ್ಲಿ ಜನಸ್ತೋಮವೇ ಅಭ್ಯರ್ಥಿಗಳ ಖರ್ಚು ನಿಭಾಯಿಸುವ ಪದ್ಧತಿ ಈ ಕರೆಮ್ಮ ಎಂಬ ಮಹಾತಾಯಿಯ ಕಾಲದಿಂದ ಮತ್ತೆ ಚಾಲ್ತಿಗೆ ಬಂದಿದೆ ಎನ್ನಬಹುದು. ಪ್ರತಿಯೊಂದು ಗ್ರಾಮವು ಕೂಡ ಚುನಾವಣಾ ಖರ್ಚಿಗಾಗಿ 2000-100000 ರೂ.ವರೆಗೆ ಅವರ ಉಡಿಯಲ್ಲಿ ಹಾಕಿ ಆಶೀರ್ವದಿಸಿ, ಆಶಾಭಾವನೆಯಿಂದ ಹಾರೈಸುತ್ತಿದ್ದ ಜನ ಕಾಣ ಸಿಗುತ್ತಿದ್ದರು. ಸರಳತೆಯ ಜೊತೆಗೆ ಜನಗಳ ನಿರಂತರ ಸಂಪರ್ಕ ಮತ್ತು ಬೇರೆ ಪಕ್ಷಗಳ ಕ್ಷುಲ್ಲಕ ಮಾತುಗಳು ಕರೆಮ್ಮನ್ನನ್ನು ಒಬ್ಬ ಜನನಾಯಕಿಯನ್ನಾಗಿ ಇಂದು ರೂಪುಗೊಳಿಸಿವೆ ಎಂದರೂ ಕೂಡ ತಪ್ಪಾಗಲಿಕ್ಕಿಲ್ಲ.
ಒಂದು ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿ ಇಲ್ಲಿಯವರೆಗೆ ಬಂದು ನಿಂತಿರುವ ಕರೆಮ್ಮ, ಸತತ 8 ವರ್ಷಗಳಿಂದ ದೇವದುರ್ಗ ವಿಧಾನಸಭಾ ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಹಗಲು ರಾತ್ರಿಯೆನ್ನದೇ ಭಾಗಿಯಾಗಿದ್ದರ ಫಲವಾಗಿಯೇ ಆ ಕ್ಷೇತ್ರದ 200 ಹಳ್ಳಿಗಳ ಜನರು ಸಹ ನಮ್ಮ ಊರಿನ ಮಗಳೆಂದು ಹಾರೈಸಿ, ಸನ್ಮಾನಿಸಿ, ಉಡಿ ತುಂಬಿ ಹಾರೈಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇತ್ತು. ಗ್ರಾಮ ವಾಸ್ತ್ಯವ್ಯವು ಕೂಡ ಕೈ ಹಿಡಿದಿದೆ ಎನ್ನುವುದನ್ನು ಮರೆಯದೇ ಸ್ಮರಿಸಬೇಕಾಗಿದೆ.
ಜನತೆಯಂತೂ ಅತಿಯಾದ ಭರವಸೆ ಇಟ್ಟಿದ್ದಾರೆ. ಆ ಭರವಸೆಯನ್ನು ಈಗ ಉಳಿಸಿಕೊಳ್ಳುವುದು ಕೂಡ ತುಂಬಾ ಸವಾಲಿನ ಕೆಲಸ ಆದರೂ ಕೂಡ ಕೊಟ್ಟ ಮಾತಿನಂತೆ ಅಭಿವೃದ್ಧಿ ಮಾಡಿದರೆ ಮುಂದಿನ ಸಲ ಅಧಿಕಾರ, ಇಲ್ಲದಿದ್ದರೆ ಮನೆಗೆ ಕಳುಹಿಸುತ್ತಾರೆ ಎನ್ನುವ ಸಂಗತಿಯನ್ನು ಈ ನಗೆಯ ಸಂದರ್ಭದಲ್ಲಿ ಮರೆಯಬಾರದು. “ಗೆದ್ದವರಂತೆ ಕಾರ್ಯ ಮಾಡುವುದಕ್ಕಿಂತ, ಸೋತವರಂತೆ ಕಾರ್ಯ ಮಾಡುವುದು ಬಹುಮುಖ್ಯವಾಗಿದೆ.”
ಈ ಕ್ಷೇತ್ರದ ಅಧ್ಯಯನದ ಜೊತೆಗೆ ಕರೆಮ್ಮ ಅವರ ಬಗ್ಗೆ ಚುನಾವಣಾ ರೂಪುರೇಷೆಗಳ ಬಗ್ಗೆ ಅಧ್ಯಯನ ಅಗತ್ಯವಾಗಿ ನಡೆಯಬೇಕಿದೆ. ಏಕೆಂದರೆ ಜನರಿಂದ, ಜನರಿಗಾಗಿ, ಜನಗಳಿಂದಲೇ ಆಯ್ಕೆಯಾಗಿ ಇಂದು ಮೊದಲ ಸಲ ಶಾಸಕಿಯಾಗಿ ನಮ್ಮ ಮುಂದಿದ್ದಾರೆ.
ಬೆಂಗಳೂರುಗರಿಗೆ ಹೈದರಾಬಾದ್ ಕರ್ನಾಟಕ ಕಾಣುವುದೇ ಇಲ್ಲ, ಇಲ್ಲಿನ ರಾಜಕೀಯ ವಾತಾವರಣವೂ ಸ್ಪಷ್ಟವಾಗಿ ಅವರಿಗೆ ಗೋಚರಿಸುವುದಿಲ್ಲ. ಹಾಗಾಗಿ ಅಧಿಕಾರ ವಿಕೇಂದ್ರೀಕರಣ ಆಗಬೇಕಿದೆ. ಬೆಂಗಳೂರಿನ ಅರ್ಧದಷ್ಟು ಇಲಾಖೆಗಳು ನಮ್ಮ ಹೈದರಾಬಾದ್ ಕರ್ನಾಟಕಕ್ಕೆ ಸ್ಥಳಾಂತರವಾಗಲಿ ಎಂಬ ಆಶಯದೊಂದಿಗೆ, ಪ್ರಜಾಪ್ರಭುತ್ವಕ್ಕೆ ಸೌಂದರ್ಯ ಕರೆಮ್ಮ ನಾಯಕ ಒಂದೊಳ್ಳೆಯ ಉದಾಹರಣೆ ಎಂದು ಬಣ್ಣಿಸಬಹುದು. ಕೊನೆಗಳಿಗೆಯಲ್ಲಿ ಕಾಂಗ್ರೆಸ್ಸನ್ನು ಧಿಕ್ಕರಿಸಿ, ಮರಳಿ ಮಾತೃ ಪಕ್ಷವಾದ ಜೆಡಿಎಸ್ ಸೇರಿದ ಧೀನ ದಲಿತರ ನಾಯಕ, ಅಭಿವೃದ್ಧಿಯ ಹರಿಕಾರ ದೇವದುರ್ಗ ಕ್ಷೇತ್ರದ ಮಾಜಿ ಸಚಿವರಾದ ಶ್ರೀ ಹನುಮಂತಪ್ಪ ಆಲ್ಕೋಡ ಅವರ ಪಕ್ಷ ಸೇರ್ಪಡೆ ಆನೆಬಲ ಬಂದೊದಗಿತ್ತು ಎನ್ನುವುದನ್ನೂ ಕೂಡ ಇಲ್ಲಿ ನಾವ್ಯಾರು ಅಲ್ಲಗಳೆಯುವಂತಿಲ್ಲ.
-ಶಿವರಾಜ್ ಮೋತಿ
ಯುವ ಬರಹಗಾರ, ರಾಯಚೂರು