ತುಮಕೂರು:ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಹಾಗೂ ಕುಣಿಗಲ್ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಅವರ ಸೋಲಿನ ಕುರಿತಂತೆ ತುಮಕೂರು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಕುಣಿಗಲ್ ನೂತನ ಶಾಸಕ ಡಾ.ರಂಗನಾಥ್ ಗಿಫ್ಟ್ ಕಾರ್ಡ್ ಹಂಚಿ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಂಗನಾಥ್ ಕ್ಯೂ.ಆರ್ .ಕೋಡ್ ಹೊಂದಿರುವ ಎಟಿಎಂ ಮಾದರಿಯ ಕಾರ್ಡುಗಳನ್ನು ನೀಡಿ, ಚುನಾವಣೆಯಲ್ಲಿ ಗೆದ್ದ ನಂತರ 3000 ರೂಗಳ ಗಿಫ್ಟ್ ತಲುಪಿಸುವುದಾಗಿ ಆಶ್ವಾಸನೆ ನೀಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿದರು.
ಈ ಚುನಾವಣಾ ಅಕ್ರಮದ ಕುರಿತು ನಾವು ಕಾನೂನು ಹೋರಾಟ ನಡೆಸಲಿದ್ದೇವೆ,ನಮಗೆ ಶೀಘ್ರ ಜಯ ಸಿಗುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು 2018 ರ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ಅವರ ಚುನಾವಣಾ ಕ್ರಮದ ಕುರಿತು ಬಿಜೆಪಿ ದಾಖಲಿಸಿದ್ದ ಕೇಸ್ನಲ್ಲಿ ದೊರೆತ ಯಶಸ್ಸನ್ನು ಇಲ್ಲಿ ಸ್ಮರಿಸಿಕೊಂಡರು.
ಈ ಗಿಫ್ಟ್ ಕಾರ್ಡ್ ಕುರಿತು ಇತ್ತೀಚಿಗಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಕುಣಿಗಲ್ ಸೇರಿದಂತೆ 42 ಕ್ಷೇತ್ರಗಳಲ್ಲಿ ಈ ರೀತಿ ಗಿಫ್ಟ್ ಕಾರ್ಡ್ ಗಳನ್ನು ಹಂಚಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸುದ್ದಿಗೋಷ್ಠಿಯ ನಂತರ ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಹಾಗೂ ಕುಣಿಗಲ್ ಬಿಜೆಪಿ ಮುಖಂಡರಾದ ಡಿ.ಕೃಷ್ಣಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಿ.ಕೃಷ್ಣಕುಮಾರ್,ಕುಣಿಗಲ್ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಕೆ.ಎಸ್.ಬಲರಾಮ್, ತುಮಕೂರು ಬಿಜೆಪಿ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
-ಮನುಕುಮಾರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.