ಹನೂರು: ತಾಲೂಕು ಕೆಂದ್ರ ಮಾತ್ರವಲ್ಲದೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಆಕ್ರಮ ಮಧ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಗಡಿಯಂಚಿನ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ದಂಧೆ ಅಂತರರಾಜ್ಯ ದಂಧೆಯಾಗಿ ಮಾರ್ಪಟ್ಟಿದೆ ,ಅಧಿಕಾರಿಗಳಿಗೆ ಹಣದ ಹೊಳೆಯೆಸುರಿಯುವಂತಾಗಿದೆ ಸಾಮನ್ಯರ ಬೆವರ ಹನಿ ರಕ್ತದಂತೆ ಸುರಿದ ಹಣದಲ್ಲಿ ಇವರ ಅಂದ ದರ್ಬಾರ್ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹನೂರು ತಾಲೂಕು ಬಹುಪಾಲು ಗುಡ್ಡಗಾಡು ಪ್ರದೇಶಗಳಿಂದ ಆವೃತವಾಗಿದ್ದು 450ಕ್ಕೂ ಹೆಚ್ಚು ಹಳ್ಳಿಗಳಿಂದ ಕೂಡಿದ್ದು ನೆರೆಯ ತಮಿಳುನಾಡು ರಾಜ್ಯದ ಗಡಿಗೆ ಅಂಟಿಕೊಂಡಿದೆ. ಆದರೆ ಇದನ್ನೇ ಲಾಭದಾಯಕವನ್ನಾಗಿಸಿ ಕೊಂಡಿರುವ ಕೆಲ ದಂಧೆ ಕೋರರು ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ನೆರೆಯ ರಾಜ್ಯ ತಮಿಳುನಾಡಿಗೆ ಕರ್ನಾಟಕ ರಾಜ್ಯದ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ. ಆದರೆ ಈ ಬಗ್ಗೆ ಎಲ್ಲಾ ಖಚಿತ ಮಾಹಿತಿ ದೊರೆದಿದ್ದರೂ ಕೂಡ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ನಮ್ಮ ವ್ಯವಸ್ಥೆಯ ದೌರ್ಬಲ್ಯಕ್ಕೆ ಹಿಡಿದ ಕೈಗಡಿಯಾಗಿದೆ.
ಗೋಪಿನಾಥಂ, ಮಾರ್ಟಳ್ಳಿ, ಹೂಗ್ಯ ಗ್ರಾಮಗಳಿಂದ ಸಾಗಣೆ: ಹನೂರು ತಾಲೂಕಿನ ಗಡಿಯಂಚಿನ ಗ್ರಾಮಗಳಾದ ಗೋಪಿನಾಥಂ, ಮಾರ್ಟಳ್ಳಿ, ಹೂಗ್ಯಂ ಗ್ರಾಮಗಳಿಂದ ಯಥೇಚ್ಛವಾಗಿ ನೆರೆಯ ತಮಿಳುನಾಡು ರಾಜ್ಯಕ್ಕೆ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಇಂದಿನ ಕೆಲ ಸ್ಥಳೀಯ ದಂಧೆಕೋರರು ತಮಿಳುನಾಡಿನ ದಂಧೆಕೋರರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿನಿತ್ಯ ಅರಣ್ಯದೊಳಗಿನ ಕಾಲುದಾರಿಗಳ ಮೂಲಕ ಮದ್ವನ್ನು ಸಾಗಾಟ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ತಮಿಳುನಾಡು ರಾಜ್ಯದ ಪೊಲೀಸರು ಕಳೆದ ಕೆಲವು ದಿನಗಳ ಹಿಂದೆ ಕರ್ನಾಟಕ ರಾಜ್ಯದಿಂದ ತಮಿಳುನಾಡಿಗೆ ಸಾಗಿಸುತ್ತಿದ್ದ ಮದ್ಯವನ್ನು ಮಾಲು ಸಮೇತ ಹಿಡಿದು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಈ ಸರಕನ್ನು ಇಂತಹ ಮಧ್ಯದ ಅಂಗಡಿಯಿಂದಲೇ ತೆಗೆದುಕೊಂಡು ಹೋಗಲಾಗುತ್ತಿದೆ ಎಂಬ ಮಾಹಿತಿ ದೊರೆತರೂ ಕೂಡ ಕರ್ನಾಟಕ ರಾಜ್ಯ ಕೊಳ್ಳೇಗಾಲ ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಕೈ ಚೆಲ್ಲಿ ಕುಳಿತರು. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದಲ್ಲಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಂಗಡಿಯನ್ನು ಶಾಶ್ವತವಾಗಿ ಮುಚ್ಚಿಸಬಹುದಾಗಿತ್ತು. ಇದರ ಬದಲಾಗಿ ಕಪ್ಪ ತಿಂದು ತೆಪ್ಪಗಿರುವುದು ಸಾರ್ವಜನಿಕ ಟೀಕೆಗೆ ಕಾರಣವಾಗಿದೆ.
ಹಳ್ಳಿ ಹಳ್ಳಿಗಳಲ್ಲೂ ಎಣ್ಣೆಯ ಘಾಟು: ಇನ್ನು ಹನೂರು ತಾಲೂಕು ವ್ಯಾಪ್ತಿಯ ಗ್ರಾಮಗಳ ವಿಚಾರವನ್ನು ಅವಲೋಕಿಸಿದರೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಸಣ್ಣಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲಿ ಎಣ್ಣೆ ದೊರೆಯುತ್ತಿದ್ದು ಎಣ್ಣೆಯ ಘಾಟು ಎಲ್ಲೆಡೆ ಪಸರಿಸುತ್ತಿದೆ . ತಾಲೂಕಿನ ಹಳ್ಳಿಗಳಿಗೆ ಆಯಾ ಕಟ್ಟಿನ ಕೆಲ ನಗರ ಪ್ರದೇಶಗಳಿಂದ ದೈನಂದಿನವಾಗಿ ಅಕ್ರಮ ಮದ್ಯ ಪೂರೈಕೆಯಾಗುತ್ತಿದೆ. ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಬೆಳಿಗ್ಗೆ ಟೀ ಕುಡಿಯುವ ವೇಳೆಗೆ ಎಣ್ಣೆ ದೊರೆಯುವಂತಾಗಿದೆ. ಇದಕ್ಕೆ ಪೂರಕವೆಂಬಂತೆ ಒಡೆಯರಪಾಳ್ಯ ಸುತ್ತಮುತ್ತಲ ಸೋಲಿಗರ ಪೋಡಿನ ಮಹಿಳೆಯರು ಹನೂರು ಪೊಲೀಸ್ ಠಾಣೆಗೆ ಮತ್ತು ಗೆಜ್ಜಲನಾಥ ಗ್ರಾಮದ ಮಹಿಳೆಯರು ರಾಮಾಪುರ ಪೊಲೀಸ್ ಠಾಣೆಗೆ ಆಗಮಿಸಿ ಎಣ್ಣೆ ಮಾರಾಟಕ್ಕೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದ್ದು ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿದೆ. ಈ ರೀತಿ ದೂರು ಬಂದ ವೇಳೆ ಒಂದೆರಡು ವ್ಯಕ್ತಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಬಳಿಕ ಮತ್ತೆ ತಟಸ್ಥವಾಗಿರುವುದು ಹಲವು ಗುಮಾನಿಗೆ ಎಡೆ ಮಾಡಿಕೊಟ್ಟಿದೆ.
ಮಾದಪ್ಪನ ನೆಲೆಯಲ್ಲೂ ಸಿಗುತ್ತದೆ ಮದ್ಯ: ರಾಜ್ಯದ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಮನೆ ಮಹದೇಶ್ವರನ ನೆಲೆಯಲ್ಲಿಯೂ ಕೂಡ ಯಗ್ಗಿಲದೆ ದಂಧೆ ನಡೆಯುತ್ತಿದೆ. ಶ್ರೀ ಕ್ಷೇತ್ರದಲ್ಲಿ ಕೆಲ ಸ್ಥಳೀಯ ವ್ಯಕ್ತಿಗಳು ಯಾವುದೇ ಭಯವಿಲ್ಲದೆ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಎಣ್ಣೆ ಕುಡಿಸುವಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರಗಳು ವಿಡಿಯೋಗಳು ಹರಿದಾಡಿದರು ಕೂಡ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಇದರ ಪರಿಣಾಮ ದಂಧೆ ಕೋರರು ನಿರ್ಭೀತಿಯಾಗಿ ಎಣ್ಣೆ ಮಾರಾಟದಲ್ಲಿ ತೊಡಗಿದ್ದಾರೆ. ಪಾದಯಾತ್ರೆಯಲ್ಲಿ ಬರುವಂತಹ ಭಕ್ತಾದಿಗಳೇ ಇಲ್ಲಿನ ದಂಧೆ ಕೋರರ ಟಾರ್ಗೆಟ್ ಆಗಿದ್ದು ದುಪ್ಪಟ್ಟು ದರಕ್ಕೆ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕೆಲ ವಸತಿಗೃಹಗಳ ಹಿಂಭಾಗದಲ್ಲಿ ಎಣ್ಣೆಯ ಬಾಟಲಿಗಳು ಪೌಚುಗಳು ರಾಶಿ ರಾಶಿ ಬಿದ್ದಿರುವುದೇ ಪುರಾವೆಯಾಗಿದೆ.
ನಿಗದಿತ ಅವಧಿಗಿಂತ ಮುಂಚೆ ತೆರೆಯುವ ಬಾರ್ ಗಳು: ಹನೂರು ಪಟ್ಟಣ ಸೇರಿದಂತೆ ಕೆಲ ಗ್ರಾಮಗಳಲ್ಲಿ ಬಾರ್ ಗಳು ಮತ್ತು ವೈನ್ ಸ್ಟೋರ್ ಗಳು ನಿಗದಿತ ಅವಧಿಗಿಂತ ಮುಂಚೆಯೇ ತಮ್ಮ ವಹಿವಾಟುಗಳನ್ನು ಆರಂಭಿಸುತ್ತಿವೆ. ಇದರ ಪರಿಣಾಮ ರಸ್ತೆಯಲ್ಲಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮುಜುಗರದಿಂದಲೇ ತೆರಳುವಂತಾಗಿದೆ. ಕೆಲ ವೈನ್ ಸ್ಟೋರ್ ಗಳು ಮತ್ತು ಬಾರ್ ಗಳು ಬೆಳಗ್ಗೆ 8ರವೇಳೆಗೆ ಅರ್ಧ ಬಾಗಿಲು ತೆರೆದು (ನೋಡಿದವರಿಗೆ ಲೆಕ್ಕಾಚಾರ ನಡೆಸುತ್ತಿದ್ದಾರೆ ಎಂಬುವಂತೆ ಭಾಸವಾಗಲಿ ಎಂದು) ವಹಿವಾಟು ನಡೆಸುತ್ತಿದ್ದಾರೆ ಹಲವು ಸಂದರ್ಭಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ತೆರಳುವ ಮಾರ್ಗದಲ್ಲಿ ಹಲವರು ಮದ್ಯಪಾನ ಮಾಡಿ ರಸ್ತೆಗೆ ಅಡ್ಡಲಾಗಿ ಮಲಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಈ ಬಗ್ಗೆ ಯಾರಾದರೂ ಚಕಾರವೆತ್ತಿದಲ್ಲಿ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸ್ಥಳೀಯ ಒತ್ತಡಗಳನ್ನು ಹೇರಿ ಸುಮ್ಮನಿರುವಂತೆ ಮಾಡುತ್ತಿದ್ದಾರೆ.
ಅಲ್ಲಲ್ಲಿ ತಯಾರಾಗುತ್ತಲೇ ಇದೆ ಕಳ್ಳಭಟ್ಟಿ: ಅಕ್ರಮ ಮದ್ಯ ಸಾಗಾಟ ಮಾರಾಟ ಒಂದೆಡೆಯಾದರೆ ಕಳ್ಳ ಭಟ್ಟಿ ದಂತೆಯೂ ಕೂಡ ತಾಲೂಕಿನ ಕೆಲವು ಗ್ರಾಮಗಳಲ್ಲಿ ಯಥೇಚ್ಛವಾಗಿ ನಡೆಯುತ್ತಿದೆ. ತಾಲೂಕಿನ ದಿನ್ನಳ್ಳಿ, ಮಾರಳ್ಳಿ, ಗಾಜನೂರು, ದೊಮ್ಮನಗದ್ದೆ, ಪೊನ್ನಾಚಿ, ಕೋಟೆಪೊದೆ,ಮ ಬೆಟ್ಟ, ಸೇರಿದಂತೆ ಹಲವು ಗ್ರಾಮಗಳಲ್ಲಿ ಇನ್ನೂ ಕೂಡ ಕಳ್ಳಭಟ್ಟಿ ಕಾಯಿಸಲಾಗುತ್ತಿದೆ. ವರ್ಷದಲ್ಲಿ ಒಂದೆರಡು ಕಡೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದನ್ನು ಬಿಟ್ಟರೆ ಕಳ್ಳ ಭಟ್ಟಿ ದಂಧೆಗೆ ಕಡಿವಾಣ ಹಾಕುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಅಧಿಕಾರಿಗಳು ಹಾಗೂ ದಲ್ಲಾಳಿಗಳಿಗೆ ಹಣ ಸಂದಾಯವಾಗುತ್ತಿದೆ ಅಲ್ಲದೆ ಅವರ ಕೈಜೋಡಿಸಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ. ಕೆಲಸದಲ್ಲಿ ಕೆಲವು ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಆಯ್ದ ಪತ್ರಕರ್ತರನ್ನು ಸಮಾದಾನ ಪಡಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಕೂಗು
ಒಟ್ಟಾರೆ ಹನೂರು ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿಯೂ ಅಕ್ರಮ ದಂಧೆಗಳು ನಡೆಯುತ್ತಲೇ ಇದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಇಲಾಖೆಯ ಅಧಿಕಾರಿಗಳು ಕಪ್ಪ ತಿಂದು ತೆಪ್ಪಗಾಗುತ್ತಿದ್ದಾರೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.
ವರದಿ :ಉಸ್ಮಾನ್ ಖಾನ್.