ತುಮಕೂರು/ಕುಣಿಗಲ್ :ದಲಿತರು ದೇವಸ್ಥಾನ ಪ್ರವೇಶ ಮಾಡುವುದಕ್ಕೆ ಯಾರೂ ಅಡ್ಡಿಪಡಿಸಬಾರದು, ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ವೈ.ಎಸ್ಪಿ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ದಲಿತರ ಕುಂದು ಕೊರತೆ ಸಭೆ ಹಾಗೂ ನೊಂದವರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅಸ್ಪೃಶ್ಯತೆ ಸಾಮಾಜಿಕ ಪಿಡುಗು, ದೇವಸ್ಥಾನ ಪ್ರವೇಶಕ್ಕೆ ಜಾತಿಯ ಅಡ್ಡ ಬರಬಾರದು, ಹಳ್ಳಿಗಳಲ್ಲಿ ಅಸ್ಪೃಶ್ಯತೆ ತಡೆಯುವ ನಿಟ್ಟಿನಲ್ಲಿ ಬೀಟ್ ಪೊಲೀಸರ ನೇತೃತ್ವದಲ್ಲಿ ದಲಿತರ ಸಮಸ್ಯೆಗಳ ಬಗ್ಗೆ ದೇವಸ್ಥಾನಗಳಲ್ಲಿ ಸಭೆ ನಡೆಸಲಾಗುವುದು ಎಂದರು.
ಇನ್ಸ್ಪೆಕ್ಟರ್ ಗುರುಪ್ರಸಾದ್ ಮಾತನಾಡಿ ಪ್ರಕರಣ ದಾಖಲಾದ ನಂತರ ದೂರುದಾರನಿಗೆ ಆರೋಪಿಗಳು ಕೇಸ್ ವಾಪಸ್ ಪಡೆಯಲು ಒತ್ತಾಯಿಸುವುದು,ತೊಂದರೆ ಕೊಡುವುದು ಮತ್ತೆ ಹಲ್ಲೇ ನಡೆಸುವುದು ಬೆದರಿಕೆ ಹಾಕುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ 60 ದಿನಗಳ ಒಳಗಡೆ ಆದ್ಯತೆ ಮೇರೆಗೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದರು. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 70 ಮಂದಿ ರೌಡಿಶೀಟರ್ ಗಳಿದ್ದು, ಉತ್ತಮ ನಡತೆಯಿಂದ ಜೀವನ ನಡೆಸುತ್ತಿರುವ 11 ಮಂದಿಯನ್ನ ಕಳೆದ ವರ್ಷ ರೌಡಿಶೀಟರ್ ನಿಂದ ಕೈ ಬಿಡಲಾಗಿದ್ದು ಮತ್ತೆ 13 ಮಂದಿಯನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ದಲಿತರು ದೂರು ನೀಡಿದಾಗ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.
ದಲಿತ ಮುಖಂಡರು ಮಾತನಾಡಿ ಸುಳ್ಳು ಪ್ರಕರಣ ದಾಖಲಾದಂತೆ ನೋಡಿಕೊಳ್ಳುವುದರ ಜೊತೆಗೆ ನಿಜವಾಗಿ ದಲಿತರ ಮೇಲೆ ಅಲ್ಲೇ ನಡೆದಾಗ ಪ್ರಕರಣ ದಾಖಲಿಸಲು ಹಿಂಜರಿಯಬಾರದು ಎಂದರು ಸಭೆಯಲ್ಲಿ ದಲಿತ ಮುಖಂಡರಾದ ವಿ ಶಿವಶಂಕರ್, ರಾಮಚಂದ್ರಯ್ಯ ,ಚಿಕ್ಕಣ್ಣ ,ಸಿದ್ದಲಿಂಗಯ್ಯ, ಕೃಷ್ಣರಾಜು, ರಾಜು ವೆಂಕಟಪ್ಪ, ಗೋಪಾಲ್, ವರದರಾಜು ,ರಾಮಕೃಷ್ಣ ,ಎಸ್.ಟಿ ರಾಜು, ನರಸಿಂಹಮೂರ್ತಿ,ನರಸಿಂಹ ಪ್ರಸಾದ್,ಪ್ರಹಲ್ಲಾದ ಮುಂತಾದವರು ಉಪಸ್ಥಿತರಿದ್ದರು.
ವರದಿ-ಮನುಕುಮಾರ್