ನಿಡಗುಂದಿ : ಪಟ್ಟಣದ ಬಿ ಎಂ ಎಸ್ ಶಾಲೆಯಲ್ಲಿ ಗುರುಪೂರ್ಣಿಮೆ ಪ್ರಯುಕ್ತ “ಗುರುವೇ ಬೆಳಕು” ಎಂಬ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಶರಣಪ್ಪ ನಾಗರಬೆಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಕಿರುನಾಟಕ ಪ್ರದರ್ಶನ ಜರುಗಿತು. ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕ ನಜೀರ ದಡ್ಡಿ ಮಾತನಾಡಿ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವವರೇ ಗುರುಗಳು, ಅವರನ್ನು ಗೌರವದಿಂದ ಕಾಣುವುದು ಶಿಷ್ಯಂದಿರ ಲಕ್ಷಣ, ಗುರುವಿನೊಡನೆ ವಿನಯದಿಂದ ನಡೆದುಕೊಂಡವರಿಗೆ ವಿದ್ಯೆ ಸಲೀಸಾಗಿ ಒಲಿಯುತ್ತದೆ ಎಂದರು. ಹಿರಿಯರಾದ ವಿಜಯಲಕ್ಷ್ಮಿ ನಾಗರಬೆಟ್ಟ ,ಸಂಸ್ಥೆಯ ನಿರ್ದೇಶಕ ಸೋಮಶೇಖರ್ ನಾಗರಬೆಟ್ಟ, ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸೀಮಾ ನಾಗರಬೆಟ್ಟ, ಉಪನ್ಯಾಸಕರಾದ ಶಿಲ್ಪಾ ಶಾ , ಯಾಸೀನ್ ಮುಲ್ಲಾ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವ ಸಾಹಿತಿ ಅಸ್ಲಂ ಶೇಖ ನರಸಲಗಿ ಅವರ ರಚನೆ ಹಾಗೂ ನಿರ್ದೇಶನದ ಈ ನಾಟಕವನ್ನು ಸಂಗೀತ ಶಿಕ್ಷಕ ಮಲ್ಲು ಗದ್ದಿ ಅವರ ಸಹಕಾರದೊಂದಿಗೆ ಮಕ್ಕಳು ನಟಿಸಿ ಗುರುವಿನ ಮಹತ್ವದ ಬಗ್ಗೆ ಸಂದೇಶ ನೀಡಿದರು. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.