ರಾಯಚೂರು:ಹತ್ತು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಸೂಲಗಿತ್ತಿ ಮಲ್ಲಮ್ಮ “ರಾಜ್ಯಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ”ಗೆ ಭಾಜನರಾಗುತ್ತಿರುವುದಕ್ಕೆ ಅಭಿನಂದನೆಗಳು:ಸಾಮಾಜಿಕ ಕಾರ್ಯಕರ್ತ ಶಿವರಾಜ್ ಮೋತಿ
ಹೆರಿಗೆ ಮಾಡಿಸಿ ಜೀವನ ಸಾಗಿಸುವುದು ಅವರ ವೃತ್ತಿ. “ಹಡೆಯುವವಳ ನೋವು ಸೂಲಗಿತ್ತಿಗೆ ಬಾರದು” ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಿ ಎಲ್ಲಾ ಹೆರಿಗೆಗಳ ನೋವ ತಾನೇ ಉಂಡು ಸೂತಕವಿಲ್ಲದ ಮಲ್ಲಮ್ಮನ ಸೇವೆ ಸಮಾಜಕ್ಕೆ,ವೈದ್ಯಕೀಯ ಕ್ಷೇತ್ರಕ್ಕೆ ಮಾದರಿ ಹಾಗೂ ಅಚ್ಚರಿ.ಇವರ ಸಾಧನೆಯ ಹಾದಿಯೇ ಒಂದು ವಿಸ್ಮಯ,ವೈದ್ಯಲೋಕದ ಬೆರಗು.ನಿರ್ವಹಿಸಿದ, ನಿರ್ವಹಿಸುತ್ತಿರುವ ಅಪರೂಪದ ಸೂಲಗಿತ್ತಿ ಸೇವೆಯ, ಜೀವನದುದ್ದಕ್ಕೂ ಅಸಹಾಯಕರಿಗಾಗಿ,ಬಡವರಿಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು,ಸದ್ದಿಲ್ಲದೇ ಮಾಡುತ್ತಿರುವ ಜೀವಪೊರೆಯುವ ಮಾನವೀಯ ಸೇವೆ ಹಾಗೂ ಜನಪದ ವೈದ್ಯೆಯ ಸೇವೆಯನ್ನು ಗುರುತಿಸಿ
ದಿ.06 ರಂದು ರಾಯಚೂರಲ್ಲಿ ನಡೆಯುವ ಕನ್ನಡ ಸಿರಿವಂತಿಕೆ ಸಂಭ್ರಮದಲ್ಲಿ ಮಲ್ಲಮ್ಮ ಅವರನ್ನು ಬೆಳಕು ಟ್ರಸ್ಟ್ ಹಾಗೂ ಮಾನವ ಹಕ್ಕುಗಳು ಹಿತ ರಕ್ಷಣಾ ಸಂಸ್ಥೆ ರಾಯಚೂರಲ್ಲಿ ರಾಜ್ಯಮಟ್ಟದ “ಕಾಯಕ ಕಣ್ಮಣಿ ಪ್ರಶಸ್ತಿ”ಯನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶಿವರಾಜ್ ಮೋತಿ ತಿಳಿಸಿದರು.
ಕೇವಲ ಪಂಚೇಂದ್ರಿಯ ಜ್ಞಾನದಿಂದ ಸರಳವಾಗಿ ಮಾಡುವ ಹೆರಿಗೆಗಳಿಗೆ ಈ ದಿನಗಳಲ್ಲಿಯೂ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ ಜನಮಾತ್ರ ಇನ್ನೂ ಇವರ ಜನಪದ ವೈದ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಇವರ ಸೇವೆ ಸಮಾಜಕ್ಕೆ,ವೈದ್ಯಕೀಯ ಕ್ಷೇತ್ರಕ್ಕೆ ಮಾದರಿ ಹಾಗೂ ಅಚ್ಚರಿ ಸಹಜ-ಸರಳ,ಆರೋಗ್ಯವಂತ ಜನನಕ್ಕೆ ಕಾರಣವಾಗಿರುವ ಮಲ್ಲಮ್ಮಳ ತಾಯ್ತನ, ಅಂತಃಕರಣ, ವಿಶ್ವಾಸ, ಮಾನವೀಯತೆಯ ಬಗ್ಗೆ ಹೇಳಲು ಅಸಾಧ್ಯ. ಅವರ ಸಾಧನೆಯ ಹಾದಿಯೇ ಒಂದು ವಿಸ್ಮಯ, ಬೆರಗು.
ಬರೀ ಸೂಲಗಿತ್ತಿಗೆ ಸೀಮಿತವಾಗದೇ,ಗಿಡಮೂಲಿಕೆಯ ಔಷಧಿ ನೀಡುವ ಪರಿಣಿತ ಹೊಂದಿ ಜನಪದ ವೈದ್ಯೆಯಾಗಿಯೂ ಮಲ್ಲಮ್ಮ,ಬಡವರ ಬಾಯಲ್ಲಿ ಇದ್ದಾರೆ.ಬೇರೆ-ಬೇರೆ ಕಡೆಯಿಂದ ಜನಪದ ವೈದ್ಯದ ಗಿಡಮೂಲಿಕೆಯ ಔಷಧಿಗಾಗಿ ಹಾಗೂ ಸೂಲಗಿತ್ತಿ ಎಂಬ ಕಾರಣಕ್ಕೆ ಬಾಣಂತಿಯರು,ಜನರೂ ಕೂಡ ಈಗಲೂ ಬರುತ್ತಲೇ ಇದ್ದಾರೆ.ಬಂದವರೆಲ್ಲ ಪುಣ್ಯಕ್ಕೆ ಇವರ ಕೈಗುಣದಿಂದ ಚೇತರಿಕೆಯೂ ಕಾಣುತ್ತಿದ್ದಾರೆ.
ಹಣಕ್ಕಾಗಿ ಕೆಲಸ ಮಾಡಿದ್ರೆ ನಾನು ಮಾಡುವ ಕೆಲಸ ಹುಸಿಯಾಗುತ್ತದೆ ಎಂದು ನಂಬಿರುವ ಇವರ ಬದುಕು ಮಾತ್ರ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ವಾಸಿ ಈ ಮಲ್ಲಮ್ಮ ಸ್ವಂತ ಜಾಗವಿಲ್ಲದೇ, ಸೂರಿಲ್ಲದೆ ಗೋಳಾಡುತ್ತಿರುವ ಅವರಿಗೆ ಜಿಲ್ಲಾಡಳಿತವು ಅಗತ್ಯ ನೆರವು ಒದಗಿಸಿ,ಸಹಾಯಕ್ಕೆ ಧಾವಿಸಬೇಕೆಂದು ಈ ಮೂಲಕ ಸಾಮಾಜಿಕ ಕಾರ್ಯಕರ್ತ ಶಿವರಾಜ್ ಮೋತಿ ಒತ್ತಾಯಿಸಿದ್ದಾರೆ.