ಉತ್ತರ ಕನ್ನಡ/ಮುಂಡಗೋಡ:ನಗರದ ಹೃದಯ ಭಾಗದಲ್ಲಿರುವ ಪದವಿಪೂರ್ವ ಕಾಲೇಜು ಸೌಲಭ್ಯಗಳ ವಿಚಾರದಲ್ಲಿ ತುಂಬಾ ಹಿಂದೆ ಉಳಿದಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 477 ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಇದರಲ್ಲಿ ಕಲಾ ವಿಭಾಗದಲ್ಲಿ ಪ್ರಥಮ ಪಿಯುಸಿಯಲ್ಲಿ 183 ಹಾಗೂ ದ್ವಿತೀಯ ಪಿಯುಸಿಯಲ್ಲಿ 124 ವಿಧ್ಯಾರ್ಥಿಗಳು,ವಾಣಿಜ್ಯ ವಿಭಾಗದ ಪ್ರಥಮ ಪಿಯುಸಿ ತರಗತಿಯಲ್ಲಿ 58 ವಿಧ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿ ತರಗತಿಯಲ್ಲಿ 48 ವಿಧ್ಯಾರ್ಥಿಗಳು ಮತ್ತು ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ 40 ಹಾಗೂ ದ್ವಿತೀಯ ಪಿಯುಸಿ ವಿಭಾಗದಲ್ಲಿ 24 ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಸೂಕ್ತ ಪ್ರಯೋಗಾಲಯದ ಕೊರತೆ:
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ವಿಷಯಗಳಲ್ಲಿ ಪ್ರಯೋಗಗಳನ್ನು ನಡೆಸಲು ಸೂಕ್ತ ಹಾಗೂ ಸುಸಜ್ಜಿತ ಪ್ರಯೋಗಾಲಯ ಕೊರತೆ ಇದ್ದು, ಸದ್ಯ ರಸಾಯನ ಶಾಸ್ತ್ರದ ಪ್ರಯೋಗಾಲಯವಿದ್ದು ಅದು ಕೂಡಾ ಸೂಕ್ತ ಸಲಕರಣೆಗಳು ಇಲ್ಲದೆ ಹಾಗೂ ಅದನ್ನು ಸರಿಯಾಗಿ ಕೂಡಾ
ಬಳಸಲಾಗದ ಸ್ಥಿತಿಯಲ್ಲಿದೆ ಮತ್ತು ಜೀವಶಾಸ್ತ್ರ ಮತ್ತು ಭೌತಶಾಸ್ತ್ರದ ಸುಸಜ್ಜಿತ ಪ್ರಯೋಗಾಲಯಗಳ ಕೊರತೆ ಇದ್ದು ಇದರಿಂದ ಮಕ್ಕಳಿಗೆ ಪ್ರಾಯೋಗಿಕ ಪರೀಕ್ಷೆ ಕೊರತೆ ಉಂಟಾಗುತ್ತಿದೆ.
ಉಪನ್ಯಾಸಕರ ಕೊರತೆ:
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನುರಿತ ಖಾಯಂ ಉಪನ್ಯಾಸಕರ ಕೊರತೆ ಇದ್ದು ಇದರಿಂದ ಮಕ್ಕಳಿಗೆ ಪಾಠ ಮಾಡುವಲ್ಲಿ ತೊಂದರೆ ಉಂಟಾಗುತ್ತಿದೆ ಕಲಾ ವಿಭಾಗದಲ್ಲಿ ಅರ್ಥಶಾಸ್ತ್ರ ಹಾಗೂ ಸಮಾಜವಾದ ವಿಷಯಗಳ ಖಾಯಂ ಉಪನ್ಯಾಸಕರ ಕೊರತೆ ಇದೆ ಹಾಗೂ ವಿಜ್ಞಾನ ವಿಭಾಗದ ರಸಾಯನಶಾಸ್ತ್ರ,ಜೀವಶಾಸ್ತ್ರ,ಗಣಿತ, ಭೌತಶಾಸ್ತ್ರ ವಿಷಯಗಳಲ್ಲಿ ಖಾಯಂ ಉಪನ್ಯಾಸಕರ ಕೊರತೆ ಇದೆ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ಹಾಗೂ ಇಂಗ್ಲೀಷ್ ಭಾಷಾ ಉಪನ್ಯಾಸಕರ ಕೊರತೆ ಸಾಕಷ್ಟಿದ್ದು ಇದ್ದು ಇದರಿಂದ ಮಕ್ಕಳ ಗುಣಮಟ್ಟದ ಕಲಿಕೆಗೆ ಹಿನ್ನೆಡೆ ಆಗುತ್ತಿದೆ, ಸದ್ಯ ಅತಿಥಿ ಉಪನ್ಯಾಸಕರನ್ನು ನೆಚ್ಚಿಕೊಂಡು ಪಾಠ ಪ್ರವಚನ ಮುಂದುವರೆಸಲಾಗುತ್ತಿದೆ.
ಮೂಲಭೂತ ಸೌಕರ್ಯ ಕೊರತೆ:
ಸುಮಾರು 50 ಕ್ಕಿಂತ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿರುವ ಪದವಿಪೂರ್ವ ಕಾಲೇಜು ಸಾವಿರಾರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿ ಸಮಾಜಕ್ಕೆ ನೀಡಿದೆ ಆದರೆ ಇಂತಹ ಕಾಲೇಜಿಗೆ ಇನ್ನೂ ಮೂಲಭೂತ ಸೌಕರ್ಯ ಕೊರತೆ ಕಾಡುತ್ತಿದೆ.ಸದ್ಯ ದಾಂಡೇಲಿ ವೇಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದರೂ ಅದು ಹೈಸ್ಕೂಲ್ ವಿಭಾಗದ ಮಕ್ಕಳು ಬಳಕೆ ಮಾಡುತ್ತಿದ್ದಾರೆ,ಕಾಲೇಜಿನ ಮಕ್ಕಳು ಕೂಡಾ ಅದನ್ನೇ ಅಶ್ರಯಿಸುವಂತಾಗಿದೆ ಆದರೆ ಕಾಲೇಜಿನ ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಕೊರತೆ ಇದೆ.
ಹಾಗೂ ಇಡೀ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಕೊರತೆ ಇದ್ದು,ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ,ಹತ್ತಿರದಲ್ಲಿ ಇರುವ ಟ್ಯಾಂಕ್ ರನಲ್ಲಿ ಪಾಚಿ ಕಟ್ಟಿರುತ್ತದೆ ಅದನ್ನೇ ಕುಡಿಯುವ ಅನಿವಾರ್ಯತೆ ಇದೆ ಕಳೆದ ಬಾರಿ VINP ಶುಗರ್ ಮಿಲ್ ನವರು ಮಕ್ಕಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿಕೊಟ್ಟಿದ್ದರು ಆದರೆ ಕಾಲೇಜು ಹಾಗೂ ಹೈಸ್ಕೂಲ್ ಆಡಳಿತ ದವರ ಸೂಕ್ತ ನಿರ್ವಹಣೆ ಇಲ್ಲದೆ ಅದು ದುರಸ್ತಿ ಮಾಡಿಸಬೇಕಿದೆ. ಮತ್ತು ದುರಸ್ತಿ ಮಾಡಲು ಯಾವುದೇ ರೀತಿಯ ಅನುದಾನ ನಮ್ಮ ಕಾಲೇಜಿಗೆ ಬರುವುದಿಲ್ಲ,ನಾವು ಸ್ವಂತ ಹಣ ಕೈಯಾರೆ ಹಾಕಿ ದುರಸ್ತಿ ಮಾಡಿಸಬೇಕಿದೆ ಎಂದು ಉಪನ್ಯಾಸಕರು ಮಾಹಿತಿ ನೀಡಿದರು.
ಸೂಕ್ತ ಗ್ರಂಥಾಲಯದ ಕೊರತೆ:
ಕಾಲೇಜಿನಲ್ಲಿ ಮಕ್ಕಳಿಗಾಗಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡುವ ಹಾಗೂ ವ್ಯಾಸಂಗ ಮಾಡಲು ಸೂಕ್ತ ಗ್ರಂಥಾಲಯ ಕೊರತೆ ಉಂಟಾಗಿದೆ.
ತಾಲೂಕಿನಲ್ಲಿ ಮಳಗಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ನಗರದಲ್ಲಿ ಖಾಸಗಿ ಸಂಸ್ಥೆಗೆ ಸೇರಿದ ಪಿಯು ಕಾಲೇಜು ಇದ್ದು ಕಾತುರ ರಾಮಾಪುರ ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳ ವಿಧ್ಯಾರ್ಥಿಗಳು ಪದವಿ ಪೂರ್ವ ಕಾಲೇಜನಲ್ಲಿಯೇ ಅಡ್ಮಿಷನ್ ಮಾಡಿಸುತ್ತಾರೆ
ಒಟ್ಟಿನಲ್ಲಿ ರಾಜ್ಯದಲ್ಲಿ ರಾಜಕೀಯ ಶಕ್ತಿ ಕೇಂದ್ರ ಎನಿಸಿಕೊಂಡಿರುವ ಮುಂಡಗೋಡ,ಘಟಾನುಘಟಿ ನಾಯಕರ ಇದ್ದರೂ,ಸ್ವಾತಂತ್ರ್ಯ ಸಿಕ್ಕು 76 ವರ್ಷಗಳು ಕಳೆದರೂ ಇನ್ನೂ ಮಕ್ಕಳಿಗೆ ಶೈಕ್ಷಣಿಕವಾಗಿ ಹಾಗೂ ಮೂಲಭೂತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ,ಸರ್ಕಾರ ಯಾವ್ಯಾವ ಯೋಜನೆಗಳಿಗೆ ಹಣ ವಿನಿಯೋಜನೆ ಮಾಡುತ್ತದೆ ಆದಷ್ಟು ಬೇಗ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪೂರೈಸಲು ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.
-ಕರುನಾಡ ಕಂದ