ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಹೋಬಳಿಯ ಢಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಬ್ಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರದಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ತಹಸೀಲ್ದಾರ್ ಯು.ನಾಗರಾಜ್ ಅವರ ಅಧ್ಯಕ್ಷೆಯಲ್ಲಿ ಜರುಗಿತು.
ತಹಸೀಲ್ದಾರ್ ಮಾತನಾಡಿ ಗ್ರಾಮೀಣ ಜನರು ಸರ್ಕಾರದ ಸೌಲಭ್ಯಗಳಿಗಾಗಿ ಸಂಬಂಧಿಸಿದ ಇಲಾಖೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಮಾತನಾಡಿ ಸಾರ್ವಜನಿಕರಲ್ಲಿ ಆಡಳಿತ ಮತ್ತು ಅಧಿಕಾರಿಗಳ ವರ್ಗ ದೂರವಿದೆ ಎಂಬ ಭಾವನೆ ಹೋಗಲಾಡಿಸಲು ಸರಕಾರ ಮತ್ತು ಕಂದಾಯ ಕಾರ್ಯಕ್ರಮ ರೂಪಿಸಿದೆ. ಅಧಿಕಾರಿಗಳು ದಿನಪೂರ್ತಿ ಗ್ರಾಮದಲ್ಲಿದ್ದು, ಅಹವಾಲು ಕೇಳಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲು ಇದೊಂದು ಅವಕಾಶವಾಗಿದೆ ಎಂದರು.
ಆದೇಶ ಪ್ರತಿ ವಿತರಣೆ: ವೃದ್ಯಾಪ್ಯ ವೇತನ, ವಿಕಲಚೇತನರ ವೇತನ, ವಿಧವಾ ವೇತನ ಆದೇಶ ಪ್ರತಿಯನ್ನು ವಿತರಣೆ ಮಾಡಿದರು.
ಗ್ರಾಮಸ್ಥರ ಅಹವಾಲು ಸಲ್ಲಿಕೆ: ಹೆಬ್ಬಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲವಾದ ಕೊಠಡಿ ನಿರ್ಮಾಣ, ಹೆಬ್ಬಾಳ ಕ್ಯಾಂಪ್ ನಲ್ಲಿ ನ್ಯಾಯ ಬೆಲೆ ಅಂಗಡಿ, ಹೆಬ್ಬಾಳ ಕ್ಯಾಂಪ್ ನಲ್ಲಿ ಸ್ಮಶಾನ ಅಭಿವೃದ್ಧಿ ಪಡಿಸುವುದು, ವೀರಶೈವ ಲಿಂಗಾಯತ ರುಧ್ರಭೂಮಿ ಒತ್ತುವರಿ, ಹೆಬ್ಬಾಳ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣದ ನಿರ್ಮಾಣ, ಮಹಿಳೆಯರ ಹೊಲಿಗೆ ಯಂತ್ರಗಳ ವಿತರಿಸುವಂತೆ, ಗ್ರಂಥಾಲಯ, ರಸಗೊಬ್ಬರ ಬೆಲೆ ಏರಿಕೆ ಕಡಿಮೆ ಮಾಡುವಂತೆ, ವಿಕಲಚೇತನರ ತ್ರಿಚಕ್ರ ವಾಹನ, ಪೋಡಿ ಮುಕ್ತ ಹೆಬ್ಬಾಳ ಗ್ರಾಮ ಮಾಡುವಂತೆ, ಹೆಬ್ಬಾಳ ಗ್ರಾಮದ ಸುಮಾರು ವರ್ಷಗಳ ಸೋಮನಾಥ ದೇವಸ್ಥಾನದ ಅಭಿವೃದ್ಧಿ ಪುರಾತನ ಕಲ್ಯಾಣಿ ಪುನಶ್ಚೇತನ ಗೊಳಿಸುವ ಬಗ್ಗೆ, ಪ್ರಥಮ ಚಿಕಿತ್ಸಾ ಪಟ್ಟಿಗೆ, ಹೆಬ್ಬಾಳ ಗ್ರಾಮಕ್ಕೆ ಆಶಾ ಕಾರ್ಯಕರ್ತೆ ನೇಮಕಾತಿ, ಸ್ವಸಹಾಯ ಸಂಘದ ಸಂಜೀವಿನಿ ವರ್ಕ್ ಶೆಡ್ ನಿರ್ಮಾಣ, ಶ್ರೀ ಬೋಳೋಡಿ ಬಸವೇಶ್ವರ ಏತ ನೀರಾವರಿ ಸಂಘದಿಂದ ಅಹವಾಲು ಸಲ್ಲಿಕೆಯಾದವು. ಕೆಲವೊಂದು ಅಹವಾಲುಗಳಿಗೆ ತಹಸೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಅವರು ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿದರು. ಸ್ಥಳದಲ್ಲಿ ಆಗದಿರುವ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆ ಕಳಿಸಿ ಸಮಸ್ಯೆಯನ್ನು ಬಗೆಹರಿಸಿ ಕೊಡುವುದಾಗಿ ತಿಳಿಸಿದರು.
ತದ ನಂತರ ಗ್ರಾಮಸ್ಥರಿಂದ ಸಲ್ಲಿಕೆಯಾದ ಅಹವಾಲು ಸಂಬಂಧಿಸಿದಂತೆ ಹೆಬ್ಬಾಳ ಗ್ರಾಮದ ಪುರಾತನ ಕಾಲದ ಸೋಮನಾಥ ದೇವಾಲಯದ ಅಭಿವೃದ್ಧಿ, ಕಲ್ಯಾಣಿ ಪುನಶ್ಚೇತನ ಕಾಮಗಾರಿ ಪ್ರಾರಂಭಿಸುವ ಸ್ಥಳ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಷ್ಮಾ ರೋಷನ್ ಜಮೀರ್,ಉಪಾಧ್ಯಕ್ಷರಾದ ಲಕ್ಷ್ಮಿ ಧರ್ಮಣ್ಣ,ಸದಸ್ಯರಾದ ಉಮೇಶ್ ಹೇರೂರು, ಪಾತಪ್ಪ ಅಭಿವೃದ್ಧಿ ಅಧಿಕಾರಿ ರವಿಶಾಸ್ತ್ರೀ,ಸೇರಿ ವಿವಿಧ ಇಲಾಖೆಯ ತಾಲೂಕು ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು.