ಕರ್ನಾಟಕ ರಾಜ್ಯ ಇನ್ನು ನಾಲ್ಕೈದು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಲು ಸಿದ್ದವಾಗಿದೆ ಈಗಾಗಲೇ ರಾಜಕೀಯ ಪಕ್ಷಗಳು ತಂತ್ರಗಾರಿಕೆಗಳನ್ನು ರೂಪಿಸುವುತ್ತ ಅಖಾಡಕ್ಕೆ ಇಳಿದಿರುವುದು ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಸಮಾವೇಶಗಳನ್ನು,ರ‍್ಯಾಲಿಗಳನ್ನು ನೋಡಿದರೆ ತಿಳಿಯುತ್ತದೆ. ಚುನಾವಣೆ ನಡೆಯಲು ಕೆಲವೇ ತಿಂಗಳುಗಳು ಬಾಕಿ ಇದ್ದರೂ ರಾಜಕೀಯ ನಾಯಕರು ಅಖಾಡದಲ್ಲಿ ಈಗಾಗಲೇ ಮತ ಬೇಟೆಗೆ ಇಳಿದಿದ್ದಾರೆ,ಆಡಳಿತ ಪಕ್ಷ ಬಿಜೆಪಿಗೆ ಸೆಡ್ಡು ಹೊಡೆಯುವ ರೀತಿ ಕಾಂಗ್ರೇಸ್,ಜೆಡಿಎಸ್ ಕೂಡಾ ಭರ್ಜರಿ ರೋಡ್ ಶೋ,ಪ್ರಚಾರ ಸಭೆಗಳು,ರ‍್ಯಾಲಿಗಳು,ಸಮಾವೇಶಗಳನ್ನು ಹಮ್ಮಿಕೊಂಡು ಶತಾಯಗತಾಯ ಮತದಾರರನ್ನು ಓಲೈಸಿಕೊಳ್ಳುವತ್ತ ಪಕ್ಷಗಳು ಸಕ್ರಿಯವಾಗಿವೆ ಬಿಜೆಪಿಯಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಜನಸಂಕಲ್ಪ ಸಮಾವೇಶಗಳನ್ನು ಕಾಂಗ್ರೆಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೇಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಲಾಗುತ್ತಿದೆ. ರಾಷ್ಟೀಯ ಪಕ್ಷಗಳಿಗೆ ಎದುರಾಳಿಯಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡಾ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ನಡೆಸಲಾಗುತ್ತಿದೆ ರಾಜ್ಯದ ಬಹುತೇಕ ಚಿತ್ರಣ ಚುನಾವಣೆಯಲ್ಲಿ ಅಕ್ಷರಶಃ ಮುಳುಗಿದಂತಿದೆ.ರಾಜಕೀಯ ನಾಯಕರುಗಳು ಎಲ್ಲಿಲ್ಲದ ಕಸರತ್ತು ಆರಂಭಿಸಿದ್ದಾರೆ ಮತಬೇಟೆಯ ನೆಪದಲ್ಲಿ ಹಮ್ಮಿಕೊಳ್ಳುತ್ತಿರುವ ಸಮಾವೇಶಗಳು, ಯಾತ್ರೆಗಳು,ರ‍್ಯಾಲಿಗಳ ರಾಜಕೀಯ ಲೆಕ್ಕಾಚಾರಗಳ ಕುರಿತ ವಿಶೇಷ ವರದಿ ಇದಾಗಿದೆ.
ಕಾಂಗ್ರೇಸ್ಸಿನ ಪಾದಯಾತ್ರೆಗಳು ಫಲ ಕೊಡುತ್ತವಾ…?
೨೦೧೩ ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವ ಮೊದಲು ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ಬೃಹತ್ ಪಾದಯಾತ್ರೆ ಮಾಡುವ ಮೂಲಕ ರಾಜಕೀಯ ದಿಕ್ಕನ್ನೇ ಬದಲಿಸಿದರು ಆ ನಂತರ ಎದುರಾದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೇಸ್ ಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾದರು.೨೦೧೩ ರಲ್ಲಿ ಕಾಂಗ್ರೇಸ್ ಅಧಿಕಾರ ಪಡೆಯಲು ಪ್ರಮುಖ ಕಾರಣವೇ ಬಳ್ಳಾರಿ ಪಾದಯಾತ್ರೆ ಎಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದರು ಈಗ ಅದೇ ದಾರಿಯಲ್ಲಿ ಸಾಗುತ್ತಿರುವ ರಾಜ್ಯ ಕಾಂಗ್ರೇಸ್ ಪಾದಯಾತ್ರೆಗಳ ಬೆನ್ನು ಬಿದ್ದಿದೆ. ಆ ಮೂಲಕ ಮತ್ತೊಮ್ಮೆ ಅಧಿಕಾರದ ನಿರೀಕ್ಷೆಯಲ್ಲಿ ಕಾಂಗ್ರೇಸ್ ಆಡಳಿತ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷವಾಗಿ ಹರಿಹಾಯ್ತಿದೆ ಮೆಕೇದಾಟು ಪಾದಯಾತ್ರೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಗುಡುಗಿತ್ತು ಮತ್ತು ಅಧಿಕೃತವಾಗಿ ೨೦೨೩ ರ ಚುನಾವಣೆಗೆ ಕಹಳೆ ಊದಿತ್ತು ನಂತರ ದಾವಣಗೆರೆಯಲ್ಲಿ ಸಿದ್ಧಾರಾಮೋತ್ಸವ ಮೂಲಕ ಬೃಹತ್ ಸಮಾವೇಶ ನಡೆಸಿ ಅದನ್ನು ಪಕ್ಷದ ಕಾರ್ಯಕ್ರಮವಾಗಿ ಬಿಂಬಿಸಲಾಗಿತ್ತು ಈ ಮೂಲಕ ಕಾಂಗ್ರೇಸ್ ತನ್ನ ಶಕ್ತಿ ಪ್ರದರ್ಶನ ನಡೆಸಿತ್ತು ತದನಂತರ ರಾಷ್ಟ್ರೀಯ ಕಾಂಗ್ರೇಸ್ ರಾಹುಲ್ ಗಾಂಧೀ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಭಾರತ್ ಜೋಡೋ ಪಾದಯಾತ್ರೆ ರಾಜ್ಯ ಪ್ರವೇಶಿಸಿದಾಗ ರಾಜ್ಯ ಕಾಂಗ್ರೇಸ್ ಗೆ ಟಾನಿಕ್ ಸಿಕ್ಕಂತಾಯಿತು ಎಂದೇ ಹೇಳಲಾಗುತ್ತಿದೆ. ರಾಹುಲ್ ಗಾಂಧೀಯವರ ಭಾರತ್ ಜೋಡೋ ಪಾದಯಾತ್ರೆ ಕೇರಳ ಮೂಲಕ ರಾಜ್ಯ ಪ್ರವೇಶಿಸಿದಾಗ ಗಡಿಭಾಗದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡು ರಾಜ್ಯದ ಕಾಂಗ್ರೇಸ್ ನಾಯಕರು ಒಗ್ಗಟ್ಟು ಪ್ರದರ್ಶಿದ್ದರು ನಂತರ ವಿವಿಧ ಮತ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿಯವರ ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಸ್ಥಳೀಯ ನಾಯಕರು ಹೆಜ್ಜೆ ಹಾಕುವ ಮೂಲಕ ಸಾಥ್ ನೀಡಿದ್ದರು ಈ ಮೂಲಕ ರಾಜ್ಯದಲ್ಲಿ ಕಾಂಗ್ರೇಸ್ ಗೆ ಅಧಿಕಾರ ನೀಡುವಂತೆ ರಾಹುಲ್ ಗಾಂಧಿ ಮನವಿ ಮಾಡಿದ್ದರು. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದ ರಾಹುಲ್ ಗಾಂಧೀ ಕರ್ನಾಟಕದಲ್ಲಿ ೨೦೨೩ಕ್ಕೆ ಕಾಂಗ್ರೇಸ್ ಅಧಿಕಾರಕ್ಕೆ ಬರುವ ಮಾತುಗಳನ್ನಾಡಿದರು ಹೀಗೆ ಕರ್ನಾಟಕದಲ್ಲಿ ಭಾರತ್ ಜೋಡೋ ಯಶಸ್ವಿಯಾಗಿ ಮುಗಿದು ತೆಲಂಗಾಣದತ್ತ ಹೊರಟಿತು ನಂತರ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷರಾದ ಬಳಿಕ ಬೆಂಗಳೂರಿನಲ್ಲಿ ಅವರಿಗೆ ಸ್ವಾಗತ ಕೋರುವ ಸಲುವಾಗಿ ಸಮಾವೇಶ ಹಮ್ಮಿಕೊಂಡು ಶಕ್ತಿಪ್ರದರ್ಶನ ನಡೆಸಿದ್ದರು ಸಾಲು-ಸಾಲು ಸಮಾವೇಶಗಳನ್ನು ಹಮ್ಮಿಕೊಂಡು ಮತಬೇಟೆ ಶುರು ಮಾಡಿರುವ ಕಾಂಗ್ರೇಸ್ ಅಹಿಂದ ಮತಗಳ ಓಲೈಕೆಗೂ ಯತ್ನಿಸುತ್ತಿದೆ. ಕಲಬುರ್ಗಿಯಲ್ಲಿ ಬೃಹತ್ ಅಹಿಂದ ಸಮಾವೇಶ ಕೂಡಾ ನಡೆಸಿದ್ದರು. ಚಿತ್ರದುರ್ಗದಲ್ಲಿ ಕೂಡಾ ಎಸ್ ಸಿ ಎಸ್ ಟಿ ಸಮಾವೇಶ ಹಮ್ಮಿಕೊಂಡು ಆ ಮೂಲಕ ಎಲ್ಲಾ ವರ್ಗದ ಜನರನ್ನು ಸೆಳೆಯುವತ್ತ ಕಾಂಗ್ರೇಸ್ ಹೆಜ್ಜೆ ಇಡುತ್ತಿದೆ ಜನವರಿಯಿಂದ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜಂಟಿಯಾತ್ರೆ ಹಮ್ಮಿಕೊಂಡಿದ್ದು ರಾಜ್ಯಾದ್ಯಂತ ಯಾತ್ರೆ ನಡೆಸಲು ಈಗಾಗಲೇ ವಿಭಿನ್ನವಾಗಿ ಬಸ್ ಗಳನ್ನು ಸಜ್ಜುಗೊಳಿಸಲಾಗಿದೆ ಆತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಬಸ್ಸುಗಳು ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿವೆ ೨೦೧೩ ರ ಚುನಾವಣೆಯ ಫಲಿತಾಂಶ ಮರುಕಳಿಸುವ ಪ್ರಯತ್ನದಲ್ಲಿ ತನ್ನೆಲ್ಲಾ ಬಲವನ್ನು ಪ್ರಯೋಗಿಸುತ್ತಿರುವುದು ಆ ನಿಟ್ಟಿನಲ್ಲಿ ಪ್ರತಿ ಕ್ಷೇತ್ರದಲ್ಲಿ ಯಾತ್ರೆಗಳನ್ನು ಸಮಾವೇಶಗಳನ್ನು ಹಮ್ಮಿಕೊಂಡು ಮತ ಪ್ರಚಾರದಲ್ಲಿ ನಿರತವಾಗಿದೆ.
ಕಮಲಕ್ಕೆ ಜನಸಂಕಲ್ಪ ಯಾತ್ರೆಗಳು ಟಾನಿಕ್
ಆಡಳಿತರೂಢ ಬಿಜೆಪಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರ ಪಡೆಯಲು ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದು ಅದರ ಭಾಗವಾಗಿ ರಾಜ್ಯಾದ್ಯಾಂತ ಜನಸಂಕಲ್ಪ ಸಮಾವೇಶಗಳನ್ನು ನಡೆಸುತ್ತಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದ ಬಳಿ ಬೃಹತ್ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಧಿಕೃತವಾಗಿ ಚುನಾವಣೆಗೆ ಕಹಳೆ ಊದಿದ್ದರು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ನಿರೀಕ್ಷೆಯಲ್ಲಿ ಬಿಜೆಪಿ ಈಗ ರಾಜ್ಯಾದ್ಯಂತ ಜನಸಂಕಲ್ಪ ಯಾತ್ರೆಗಳನ್ನು ಮಾಡುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮುಂದಾಳತ್ವ ವಹಿಸಿಕೊಂಡಿದ್ದಾರೆ ಈಗಾಗಲೇ ರಾಷ್ಟ್ರೀಯ ನಾಯಕರನ್ನು ಕರೆ ತಂದು ಪ್ರಚಾರ ನಡೆಸುತ್ತಿರುವ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪ್ರಿಯ ಯೋಜನೆಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದಾರೆ ಈಗಾಗಲೇ ಬಳ್ಳಾರಿ,ಕಲಬುರ್ಗಿ,ಕೊಪ್ಪಳ ಸೇರಿದಂತೆ ವಿವಿಧೆಡೆ ಬೃಹತ್ ಸಮಾವೇಶಗಳನ್ನು ಹಮ್ಮಿಕೊಂಡು ಶಕ್ತಿಪ್ರದರ್ಶನ ತೋರುತ್ತಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದೆ. ಸಂಪುಟ ಸಚಿವರು ಸೇರಿದಂತೆ ಬಿಜೆಪಿ ಮುಖಂಡರು ಜನಸಂಕಲ್ಪ ಸಮಾವೇಶಗಳಿಗೆ ಸಾಥ್ ನೀಡುತ್ತಿದ್ದು ಸ್ಥಳೀಯ ಕಾರ್ಯಕರ್ತರಿಗೆ ಚುನಾವಣೆಗೆ ಸಜ್ಜಾಗುವಂತೆ ಸಂದೇಶ ರವಾನಿಸುವ ಕೆಲಸವೂ ಜೊತೆಗೆ ನಡೆಯುತ್ತಿದೆ.
ಸಾಲು ಸಾಲು ಬಿಜೆಪಿಯ ರಾಷ್ಟ್ರೀಯ ನಾಯಕರ ಕರ್ನಾಟಕ ಭೇಟಿ ರಾಜ್ಯ ಬಿಜೆಪಿಯ ವರ್ಚಸ್ಸು ಹೆಚ್ಚಿಸಬಹುದು. ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇರುವುದರಿಂದ ಪ್ರಧಾನಮಂತ್ರಿ ಮೋದಿ ಸೇರಿದಂತೆ ಅನೇಕ ನಾಯಕರುಗಳು ಡಬಲ್ ಇಂಜಿನ್ ಸರ್ಕಾರ ಅಭಿವೃದ್ದಿಯತ್ತ ಓಟ ಮುಂದುವರೆಸುತ್ತಿದೆ ಎಂದು ರಾಜ್ಯದಲ್ಲಿ ಭಾಷಣ ಬೀಗುತ್ತಿದ್ದಾರೆ.ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ರಾಜ್ಯದಲ್ಲಿ ಬೆಂಗಳೂರು,ಕೊಪ್ಪಳ,ಕಲಬುರ್ಗಿಯಲ್ಲಿ ಮಿಂಚಿನ ಸಂಚಾರ ನಡೆಸಿದ್ದು ಬೆಂಗಳೂರಿನಲ್ಲಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಪ್ರಕೋಷ್ಟಗಳ ಸಮಾವೇಶ ನಡೆಸಲಾಗಿದೆ.
ಜನವರಿ ೧೨ ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಬೆಳಗಾವಿಗೆ ಮೋದಿ ಆಗಮಿಸಲಿದ್ದು,ಐಐಟಿ ಉದ್ಘಾಟನೆ ಕಾರ‍್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಹಾಗೂ ಆರೋಗ್ಯ ಇಲಾಖೆ ಕಾರ‍್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ ಇದೇ ವೇಳೆ ವಿವಿಧ ಯೋಜನೆಗಳಿಗೂ ಮೋದಿ ಚಾಲನೆ ಕೊಡಲಿದ್ದಾರೆ ಜನವರಿ ಮೂರನೇ ವಾರದಲ್ಲಿ ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಸಹ ಆದಿತ್ಯನಾಥ್ ಆಗಮಿಸಲಿದ್ದಾರೆ. ಉಡುಪಿಯಲ್ಲಿ ಜನವರಿ ೨೩ ಕ್ಕೆ ಬಿಜೆಪಿಯಿಂದ ಬೃಹತ್ ಯುವ ಸಮಾವೇಶ ನಡೆಯಲಿದೆ ಯುವ ಸಮಾವೇಶ ಉದ್ಘಾಟಿಸಿ ಯೋಗಿ ಆದಿತ್ಯನಾಥ್ ಭಾಷಣ ಮಾಡಲಿದ್ದಾರೆ.ಜನವರಿಯಲ್ಲೇ ರಾಜ್ಯಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಷಾ ಆಗಮಿಸಲಿದ್ದಾರೆ.ಚಿತ್ರದುರ್ಗದಲ್ಲಿ ಎಸ್ಸಿ ಸಮುದಾಯದ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ.ಎಸ್.ಸಿ ಸಮಾವೇಶದಲ್ಲಿ ಅಮಿತ್ ಷಾ ಭಾಗವಹಿಸಲಿದ್ದಾರೆ.ರಾಷ್ಟ್ರೀಯ ನಾಯಕರ ಆಗಮನ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಸಿದ್ಧತೆಗಳು ಚುರುಕುಗೊಂಡಿವೆ. ಜನವರಿಯಲ್ಲಿ ಮೂರು ಪ್ರಮುಖ ಸಮಾವೇಶಗಳಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಭಾಗವಹಿಸಲಿರುವುದರಿಂದ ಸಮಾವೇಶಗಳಿಗೆ ಅಪಾರ ಜನ ಸೇರಿಸಿ ಯಶಸ್ವಿಗೊಳಿಸಲು ಪ್ಲಾನ್ ರೂಪಿಸಲಾಗುತ್ತಿದೆ ಜನ ಸೇರಿಸಲು ಸಚಿವರು,ಶಾಸಕರಿಗೆ ಕ್ಷೇತ್ರವಾರು ಟಾರ‍್ಗೆಟ್ ಕೊಡಲಾಗಿದ್ದು,ತಲಾ ಸಮಾವೇಶಕ್ಕೆ ೫ ಲಕ್ಷಕ್ಕೂ ಹೆಚ್ಚು ಜನ ಸೇರಿಸಲು ಟಾಸ್ಕ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಪಕ್ಷಗಳ ನಡುವೆ ಪುಟಿದೇಳುತ್ತಾ ಜೆಡಿಎಸ್?
ಶತಾಗತಾಯ ಅಧಿಕಾರದ ಗದ್ದುಗೆ ಏರಲೇ ಬೇಕೆಂದು ರಾಷ್ಟ್ರೀಯ ಪಕ್ಷಗಳು ವಿವಿಧ ರೀತಿಯ ಕಸರತ್ತು ಆರಂಭಿಸಿದ್ದಾರೆ ಅದರ ನಡುವೆ ಪ್ರಾದೇಶಿಕ ಪಕ್ಷವಾಗಿ ಕರ್ನಾಟಕದಲ್ಲಿ ತನ್ನದೇ ವರ್ಚಸ್ಸು ಹೊಂದಿರುವ ಜೆಡಿಎಸ್ ೨೦೨೩ರ ವಿಧಾನಸಭಾ ಸಭಾ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರ ಪಡೆಯುವ ನೀರೀಕ್ಷೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ ಈಗಾಗಲೇ ಕಾಂಗ್ರೇಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸಿ ಬೇಸತ್ತಿರುವ ಜೆಡಿಎಸ್ ನಾಯಕರು ಈ ಬಾರಿ ೧೨೩ ಮಿಷನ್ ಎಂದು ರಾಜ್ಯದ ಮತದಾರರ ಬಳಿಗೆ ಹೋಗುತ್ತಿದ್ದಾರೆ ಈಗಾಗಲೇ ಪಂಚರತ್ನ ಯೋಜನೆಗಳನ್ನು ರೂಪಿಸಿದ್ದು ಅಧಿಕಾರಕ್ಕೆ ಬಂದರೆ ಅವುಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ಭರವಸೆ ನೀಡುತ್ತಿದ್ದಾರೆ.ಶಿಕ್ಷಣ,ಆರೋಗ್ಯ, ವಸತಿ,ರೈತ ಚೈತನ್ಯ,ಯುವ ಮತ್ತು ಮಹಿಳಾ ಸಬಲೀಕರಣ ಇವು ಜೆಡಿಎಸ್ ಘೋಷಿಸಿರುವ ಪಂಚರತ್ನ ಯೋಜನೆಯಲ್ಲಿವೆ.ಅಧಿಕೃತವಾಗಿ ಮಾಜಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೋಲಾರದ ಮುಳಬಾಗಿಲಿನಲ್ಲಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದ್ದು ಈ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ.ಮುಳಬಾಗಿಲಿನಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ ದೇವೆಗೌಡ ಸೇರಿದಂತೆ ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಜೆಡಿಎಸ್ ಶಾಸಕರುಗಳು ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದರು.ಮಿಷನ್ ೧೨೩ ಸಕಾರಗೊಳಿಸಬೇಕು ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಲಾಗಿತ್ತು. ಪ್ರಸ್ತುತ ಪಂಚರತ್ನ ರಥಯಾತ್ರೆ ಹಳೆ ಮೈಸೂರು ಭಾಗದಲ್ಲಿ ಸಂಚಾರ ನಡೆಸುತ್ತಿದ್ದು ಪ್ರತಿ ವಿಧಾನಸಭಾ ಕ್ಷೇತ್ರದ ಪ್ರಮುಖ ಗ್ರಾಮೀಣ ಭಾಗಗಳಲ್ಲಿ ಸಂಚರಿಸುವ ಮೂಲಕ ಜನರ ವಿಶ್ವಾಸಗಳಿಸುವ ಪ್ರಯತ್ನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದ್ದಾರೆ.ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರು ಅಥವಾ ಸಂಭವನೀಯ ಅಭ್ಯರ್ಥಿಗಳು ಅವರಿಗೆ ಸಾಥ್ ನೀಡುತಿದ್ದಾರೆ.ರಾಜ್ಯದಲ್ಲಿ ಗ್ರಾಮವಾಸ್ತವ್ಯ ಪರಿಕಲ್ಪನೆ ಜಾರಿಗೆ ತಂದಿದ್ದ ಅವರು ಈಗ ರಥಯಾತ್ರೆಯ ಸಂದರ್ಭದಲ್ಲಿ ಪುನಃ ಗ್ರಾಮವಾಸ್ತವ್ಯಗಳ ಮೂಲಕ ಮತದಾರರ ಜನಮಿಡಿತ ಅರಿಯುವ ಕೆಲಸ ಮಾಡಲಾಗುತ್ತಿದೆ.ಪ್ರತಿ ಊರಿನ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಜನರ ಅಹವಾಲುಗಳನ್ನು ಕೇಳುತ್ತಾ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಸ್ವಂತ ಅಧಿಕಾರ ಹಿಡಿಯುವ ನೀರಿಕ್ಷೆಯಲ್ಲಿದೆ.
ಒಟ್ಟಾರೆ ರಾಜ್ಯದ ಮತದಾರರ ಓಲೈಕೆಗೆ ಪ್ರಮುಖವಾಗಿ ಮೂರೂ ಪಕ್ಷಗಳು ವಿವಿಧ ಕಸರತ್ತುಗಳನ್ನು ನಡೆಸುತ್ತಿದ್ದು ಸಮಾವೇಶ, ರ‍್ಯಾಲಿಗಳು,ಪಾದಯಾತ್ರೆಗಳು ಚುನಾವಣೆವರೆಗೂ ನಿರಂತರವಾಗುವ ಸೂಚನೆಗಳು ರಾಜ್ಯದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ ತಮ್ಮ ಸರ್ಕಾರದ ಅವಧಿಯ ಯೋಜನೆಗಳನ್ನು ಜನಪರ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡುವ ಪ್ರಯತ್ನ ರಾಜಕೀಯ ನೇತಾರರಿಂದ ನಡೆಯುತ್ತಿದೆ. ಈಗಾಗಲೇ ಕೆಲವೊಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳು ಕ್ಷೇತ್ರದಾದ್ಯಂತ ಪ್ರಚಾರದ ಕಾರ್ಯಗಳಲ್ಲಿ ನಿರತರಾಗಿದ್ದಾರೆ.ಎಲ್ಲಾ ಪಕ್ಷಗಳು ಮುಂದಿನ ಬಾರಿ ತಮ್ಮದೇ ಅಧಿಕಾರ ಎನ್ನುತ್ತಿದ್ದು ರಾಜ್ಯದ ಮತದಾರ ಪ್ರಭುಗಳು ಯಾರಿಗೆ ಅಸ್ತು ಎನ್ನುತ್ತಾರೆ,ಯಾರಿಗೆ ಅಧಿಕಾರದ ಗದ್ದುಗೆ ಪಟ್ಟ ಸಿಗಲಿದೆ ಎಂಬುದಕ್ಕೆ ಚುನಾವಣೆ ಮುಗಿದು ಫಲಿತಾಂಶ ಹೊರಬೀಳುವವರೆಗೂ ಕಾದು ನೋಡಬೇಕು. ಅಲ್ಲಿಯವರೆಗೂ ಮತದಾರ ಯಾರಿಗೆ ಜೈಕಾರ ಹಾಕುತ್ತಾನೆ ಎಂಬುದೇ ನಿಗೂಢ.
-ಮಂಜುನಾಥ್,ಚಿಕ್ಕಬಳ್ಳಾಪುರ,೭೮೯೨೭೪೧೯೨೦