ಭಾವದುಂದುಬಿ ಮೊಳಗುತಿದೆ
ನೋವಿನೊಡವೆ ಕಡೆಗಣಿಸಿ
ಹದಗೊಳಿಸಿ ಹೊಸೆದು
ಮೆದುವಾದ ನೆಲದಲ್ಲಿ ಚಿಗುರ ಕನಸಹೊತ್ತು.
ಕಷ್ಟ ನಷ್ಟದ ಬಳುವಳಿ ಕ್ಷಣಿಕ
ಮೀರಿ ಜಯ ಘೋಷ ಮೊಳಗುವುದಕೆ
ಕಾಲದ ಮಿತಿಯಲಿ ಎಲ್ಲವೂ ನಡೆವುದು
ಸಹನೆಯ ಪೋಷಾಕು ತೊಟ್ಟು ಬಿಡಲು.
ನಂಬಿಕೆಯ ಮೊಳಕೆಯಲಿ
ಸಾಧನೆಯ ಮೈನೆರೆವ ಹರೆಯಕೆ
ದೃಢಮನದ ಬೀಜ ಬಿತ್ತಿ ಬಿಡಿ
ಪ್ರಯತ್ನದ ಬೇರು ಫಲ ನೀಡುವ ಭರವಸೆಯಲಿ.
ಸಮಯಸಾಧಕರ ನಡುವೆ
ಛಲಬಿಡದೆ ಅವಕಾಶ ಬಾಚುತ
ನಮ್ಮತನವ ಬಿಡದೆ ಕಡೆವರೆಗೂ
ಹಮ್ಮ ಬಿಮ್ಮು ಬಿಡುತ ಗುರಿಮುಟ್ಟುವ ತವಕದಿ.
ಗಮನದ ನಡೆನುಡಿಯಲಿ
ಆಗುಂತಕರನು ಬಗ್ಗು ಬಡಿದು
ಆತಂಕವನು ತಡೆಹಿಡಿದು
ಜೀವನದ ಸಾಧನೆ ಮೊಳಗುವುದಕೆ.
ನಂದನದ ಮನವಿದು
ಚಂದನದ ಕೊರಡಂತೆ ತೇಯುತ
ಸಂಬಂಧದ ಬಂಧವ ಗಟ್ಟಿಗೊಳಿಸಿ
ತಿಳಿಮುಗಿಲಲಿ ಭಾವದುಂದುಬಿ ಮೊಳಗುವುದಕೆ.
–ರೇಷ್ಮಾ ಕಂದಕೂರ,ಶಿಕ್ಷಕಿ,ಸಿಂಧನೂರು