ಬೀದರ್:ಕ್ಷೇತ್ರದಲ್ಲಿ ಸರ್ವಧರ್ಮೀಯರೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ
ಬಲವಾಗಿ ನೆಲೆಯೂರಿದ ಕಾಂಗ್ರೆಸ್,ಕೊನೆಯ ಕ್ಷಣದಲ್ಲಿ ತಿರುಗಿಬಿದ್ದ ಬಿಜೆಪಿಯನ್ನು ಹೇಗೆ ಎದುರಿಸುತ್ತೀರಿ?
ನಾನು ಯಾರ ವಿರುದ್ಧವೂ ಮಾತನಾಡುವುದಿಲ್ಲ. ಬಿಜೆಪಿ ಕೊನೆಯ ಕ್ಷಣದಲ್ಲಿ ಟಿಕೆಟ್ ಕೊಡಲು ನಿರಾಕರಿಸಿತು. ಹಾಗಂತ ಯಾರನ್ನೂ ದೂರುವುದಿಲ್ಲ. ಕಳೆದ ಚುನಾವಣೆಯಲ್ಲಿ ಕೆಲವರು ನನ್ನ ವಿರುದ್ಧವೇ ಕೆಲಸ ಮಾಡಿದರು. ಒಳ್ಳೆಯವರಿಗೆ ಒಳ್ಳೆಯದಾಗಲಿದೆ. ಕೆಟ್ಟವರಿಗೂ ಒಳ್ಳೆಯದಾಗಲಿ ಎನ್ನುವುದು ನನ್ನ ಸಿದ್ಧಾಂತ.
• ಮತ ವಿಭಜನೆ ತಡೆಯಲು ಏನು ತಯಾರಿ ಮಾಡಿಕೊಂಡಿದ್ದೀರಿ?
ಹಲವು ಸಮಾಜಗಳ ಮುಖಂಡರ ಸಭೆ ನಡೆಸಿ ನನಗೆ ಮತ ನೀಡುವಂತೆ ಮನವಿ ಮಾಡಿಕೊಂಡಿರುವೆ. ಕ್ಷೇತ್ರದ ಅಭಿವೃದ್ಧಿಗೆ ನಾನು ರೂಪಿಸಿರುವ ಯೋಜನೆ ಹಾಗೂ ಪಕ್ಷದ ಪ್ರಣಾಳಿಕೆಯ ಅನುಷ್ಠಾನದ ಬಗ್ಗೆ ಮನವರಿಕೆ ಮಾಡಿರುವೆ. ಇದರಿಂದ ಸಮುದಾಯಗಳ ಮತ ವಿಭಜನೆ ತಡೆಯಲು ಸಾಧ್ಯವಾಗಲಿದೆ ಎಂದು ಭಾವಿಸಿರುವೆ.
• ಮತದಾರರು ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?
ನಮ್ಮ ಕುಟು೦ಬ ನಾಲ್ಕು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಇದೆ. ನಾನು ಸಹ ಅನೇಕ ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವೆ. ಲಾಕ್ ಡೌನ್ ಅವಧಿಯಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿರುವ ಜನಪ್ರತಿನಿಧಿಯಾಗಿ ಆಯ್ಕೆಯಾದರೆ,ಇನ್ನಷ್ಟು ಕಾರ್ಯಗಳನ್ನು ದೊಡ್ಡ ಮಟ್ಟದಲ್ಲಿ ಮಾಡಲು ಸಾಧ್ಯವಾಗಲಿದೆ. ಹೀಗಾಗಿ, ಜೆಡಿಎಸ್ ಅಭ್ಯರ್ಥಿಯನ್ನೇ ಬೆಂಬಲಿಸಬೇಕು ಎನ್ನುವುದು ನನ್ನ ಮನವಿ.
ಆರಂಭದಿಂದಲೂ ಲಿಂಗಾಯತರ ಒಂದು ಬಣ ತಮ್ಮನ್ನು ವಿರೋಧಿಸಲು ಕಾರಣ ಏನು?
ಎಲ್ಲ ಲಿಂಗಾಯತರು ವಿರೋಧಿಸಿಲ್ಲ.ರಾಜಕೀಯ ಹಿನ್ನೆಲೆಯ ಕೆಲವರು ವಿರೋಧಿಸಿರಬಹುದು. ಅದು ಕೆಲವರ ವೈಯಕ್ತಿಕ ವಿಚಾರ. ಅದು ಸಮಾಜದ ನಿರ್ಧಾರವಲ್ಲ ಎನ್ನುವುದು ಸ್ಪಷ್ಟವಾಗಿದೆ. ಲಿಂಗಾಯತ ಸಮಾಜದ ಮುಖಂಡರು ಸೇರಿ ಅನೇಕ ಸಮುದಾಯಗಳ ಮುಖಂಡರು ಸಭೆ ನಡೆಸಿ
ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಲಿಂಗಾಯತ ಮತಗಳು ಸಹಜವಾಗಿಯೇ ನನಗೆ ದೊರೆಯಲಿವೆ.
ಈ ಶಾಸಕರಾಗಿ ಆಯ್ಕೆಯಾದರೆ ತಮ್ಮ ಮುಂದಿನ ಯೋಜನೆಗಳು ಏನು?
ಜಿಲ್ಲೆಯ ಜನ ಉದ್ಯೋಗ ಅರಸಿ ದೂರದ ಹೈದರಾಬಾದ್, ಪುಣೆ, ಬೆಂಗಳೂರು ಇನ್ನಿತರ ಕಡೆ ಹೋಗುತ್ತಿದ್ದಾರೆ. ಬೀದರ್‌ನಲ್ಲಿ ಕೈಗಾರಿಕೆಗಳು ಆರಂಭವಾದರೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ನಾನು ಉದ್ಯೋಗ ಮೇಳ ಆಯೋಜಿಸಿ ಅನೇಕ ಯುವಕರಿಗೆ ಉದ್ಯೋಗ ಕೊಡಿಸಿರುವುದು ಎಲ್ಲರಿಗೂ ತಿಳಿದಿದೆ. ಸಣ್ಣ ಕೈಗಾರಿಕೆಗಳ ಸ್ಥಾಪನೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ಕೊಡುವೆ ಎಂದು ತಿಳಿಸಿದರು.
ವರದಿ – ಸಾಗರ್ ಪಡಸಲೆ