ಸರ್ವರಿಗೂ ನಮಸ್ಕಾರಗಳು ಏನಪ್ಪಾ ಇವನು ಚಿತ್ರನಟ ಶ್ರೀ ಪುನೀತ ರಾಜಕುಮಾರ ಅವರ ಚಲನಚಿತ್ರದ ಹಾಡು ಹೇಳತಿದ್ದಾನೆ ಅಂತ ಅಂದುಕೊಂಡಿದ್ದೀರಾ ಅಲ್ಲವಾ,ನಿಜ ಚಿತ್ರದ ಹಾಡಿನ ಸಾಲುಗಳೇ ಆದ್ರೆ ಇದ್ರಲ್ಲೆ ಅರ್ಥ ಬಹಳ ಇದೆ ಸ್ನೇಹಿತರೆ ಬನ್ನಿ ಏನು ಅಂತ ತಿಳಿಸುತ್ತೇನೆ.
ನಮ್ಮದು ಗ್ರಾಮೀಣ ಪ್ರದೇಶ ಸುತ್ತಲೂ ಕರಿಮಣ್ಣಿನ ಜಮೀನು (ಎರಿ)ಮತ್ತು ಸ್ವಲ್ಪ ಬಲಗಡೆ ತಿರುಗಿದ್ರೆ ಕೆಂಪು ಮಣ್ಣಿನ ಜಮೀನು (ಮಸಾರಿ) ಪಕ್ಕದಲ್ಲೇ ಗುಡ್ಡಪ್ರದೇಶಯಿದೆ ನಮ್ಮ ಹಿರಿಕರು ಜಮೀನಿನಲ್ಲಿ ಉತ್ತಮ ಫಸಲು ಮೈತಳೆದು ನಿಂತಾಗ ಯಾವುದೇ ಕೆಟ್ಟ ದೃಷ್ಟಿ ಯಾಗಲಿ ಕಳ್ಳ-ಕಾಕರ ಪ್ರವೇಶವಾಗುವುದನ್ನು ತಡೆಯಲು ತಮ್ಮ ತಮ್ಮ ಜಮೀನುಗಳಲ್ಲಿ “ಬೆದರು ಗೊಂಬೆ ” ನಿಲ್ಲಿಸುತ್ತಿದ್ದರು ಅಯ್ಯೋ ಇವನೇನೋ ಎಲ್ಲರಿಗೂ ಗೊತ್ತಿರುವ ವಿಷಯ ಹೇಳತಿದ್ದಾನೆ ಅಂಥ ಬೇಜಾರ್ ಮಾಡಕೋಬೇಡಿ ಇಲ್ಲೇ ಇರೋದು ವಿಷಯ!. ನಮ್ಮ ಹಿರಿಕರು ಬೆದರು ಗೊಂಬೆಯನ್ನು ಬಿದಿರು, ಚಿಕ್ಕ ಮಡಿಕೆ,ಮನೆಯಲ್ಲಿರುವ ಹಳೆಯ ಪ್ಯಾಂಟ್ -ಶರ್ಟ್ ಹಾಕಿ ಚೆನ್ನಾಗಿ ಭತ್ತದ ಪೈರಿನ ಹುಲ್ಲುನ್ನು ತುಂಬಿ ನಿಜವಾದ ಮನುಷ್ಯ ಹೊಲದಲ್ಲಿ ಕಾವಲುಕಾಯುತ್ತಿರುವಂತೆ ನಿಲ್ಲಿಸುತಿದ್ದರು ಆದರೆ ಇಂದಿನ ಕಾಲದ ಬೆದರು ಗೊಂಬೆಯನ್ನು ನೋಡಿ ಮೇಲಿದೆ ವಾವ್ಹ್ ಕೈಯಲ್ಲಿ ಬಾಯಿಯಲ್ಲಿ ತಲೆಮೇಲೆ ಎಲ್ಲಿ ನೋಡಿದ್ರು ಅಲ್ಲಿ ಬರಿ ಮದ್ಯದ ಬಾಟಲಿ, ಖಾಲಿ ಬೀರು ಬಾಟಲ್ ಹಿಡಿದು ನಿಂತಿರುವ ಇಂದಿನ ನಿಜ ಮನಸ್ಥಿತಿಯ ಮನುಷ್ಯನ ಪ್ರತಿಬಿಂಬವೇ ಈ ಬೆದರು ಗೊಂಬೆ ಅಂದರೆ ತಪ್ಪಾಗಲ್ಲ.
ಹಚ್ಚ ಹಸಿರಾದ ಫಲತುಂಬಿ ಭೂತಾಯಿಯು ಕೈಮಾಡಿ ಕರೆಯುತ್ತಿರುವಂತೆ ಭಾಸವಾಗುವ ವಾತಾವರಣ ಆದರೆ ನಮ್ಮ ನವ ರೈತರು,ಅಜ್ಜ -ಮುತ್ತಜ್ಜರ,ತಂದೆಯವರ ವ್ಯವಸಾಯ ಕ್ರಮಗಳನ್ನು ಅರೆತುಕೊಂಡು ಕೃಷಿಯಲ್ಲಿ ಆಧುನಿಕ ಯುಗದ ಹೊಸ ಪ್ರಗೋಗಗಳೊಂದಿಗೆ ಕೃಷಿಯಲ್ಲಿ ತೊಡಗಿದ್ದಾನೆ ಆದ್ರೆ ಯಾವ ಫಲ ತುಂಬಿದ ಹೊಲದಲ್ಲಿ ಕಾಲಿಗೆ ಚಪ್ಪಲಿ ಕೂಡಾ ಹಾಕದೆ ಕೈ ಮುಗಿದು ಹೊಲದಲ್ಲಿ ಪಾದ ಇಡುತ್ತಿದ್ದ ಪೂರ್ವಜರ ಆಚಾರ-ವಿಚಾರ ಪೂರಾ ಮರೆತು,ಫಲ ತುಂಬಿದ ಜಮೀನಿನಲ್ಲಿ ನಡೆದಾಡುವುದು ಸರಿಯೇ ಹಾಗೂ ಮದ್ಯದ ಬಾಟಲ್ ನಿಂದ ಬೆದರು ಗೊಂಬೆ ಮಾಡಿ ನಿಲ್ಲಿಸಿ ಖುಷಿ ಪಡುವುದು ಎಷ್ಟು ಸೂಕ್ತ ನೀವೆ ಹೇಳಿ.
ಭೂಮಿತಾಯಿ ಶ್ರೇಷ್ಠವಾದ ಸ್ಥಳ ಹಾಗೂ ಸರ್ವರಿಗೂ ಅನ್ನದಾತೆ,ಅಂತ ನೆಲದಲ್ಲಿ ನಾವುಗಳು ಮಾಡಬಾರದ ಕೆಲಸ ಮಾಡುತಿದ್ದೇವೆ ಅತಿಯಾದ ಕೀಟನಾಶಕ,ಸರ್ಕಾರಿ ಗೊಬ್ಬರ,ಕಳೆನಾಶಕ ಬಳಕೆಯಿಂದ ಭೂತಾಯಿಯ ಒಡಲು ಅದೆಷ್ಟು ಸಂಕಟ ಪಡುತ್ತಿರಬಹುದು ಯೋಚಿಸಿ ಇದನೆಲ್ಲ ನೋಡುತ್ತಾ ನೀವೆ ನಿಲ್ಲಿಸಿರುವ “ಬಿಯರ್ ನಿಂದ ಶೃಂಗರಿಸಿದ ಗೊಂಬೆ ಹೇಳುತೈತೆ,ಮತ್ತೆ ಹೇಳುತೈತೆ ನಾನೇ ನಿಮ್ಮ ಸಾವಿನ ರಾಜಕುಮಾರ” ಎಂದು ನಗು ನಗುತ ಹಾಡುತ್ತಿರುವುದು.
ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುವುದು ಬರಿ ಇದೆ ರಾಸಾಯನಿಕ ಡಬ್ಬಗಳು,ಮದ್ಯದ ಬಾಟಲ್ಗಳು,ಪಾನ-ಗುಟಖಾ ಚೀಟುಗಳು ಅಲ್ಲವೇ… ನಾನು ಹೇಳ ಹೊರಟಿರುವುದು ಇಷ್ಟೇ ದಯಮಾಡಿ ನಮ್ಮ ಪೂರ್ವಜರ ಆಚಾರ-ವಿಚಾರದೊಂದಿಗೆ ಆಧುನಿಕ ಕೃಷಿ ಪದ್ಧತಿ ಅಳವಡಿಕೊಂಡು ಭೂತಾಯಿಯ ಸೇವೆ ಮಾಡೋಣ.”ಮೈಮುರಿದು ದುಡಿಯೋಣ,ಮನಸಾರೆ ಉಣ್ಣೋಣ,ಆರೋಗ್ಯಕರ ನಿದ್ದೆಮಾಡೋಣ”
“ಜೈ ಜವಾನ್ ಜೈ ಕಿಸಾನ್ “
ಲೇಖಕರು-ಸದಾಶಿವ ಭೀ ಮುಡೆಮ್ಮನವರ