ಸೊರಬ:ಸರಳ,ಅರ್ಥಗರ್ಭಿತವಾದ ವಚನಗಳನ್ನು ರಚಿಸುವ ಮೂಲಕ ಸಮಾಜದ ತಪ್ಪುಗಳನ್ನು ತಿದ್ದಿ, ತಮ್ಮ ಕಾಯಕ ತತ್ವದ ಮೂಲಕ ಜನೋಪಯೋಗಿ ಕಾರ್ಯಗಳ ಮೂಲಕ ದಾರಿದೀಪವಾಗಿರುವ ಸಿದ್ದರಾಮ ಶಿವಯೋಗಿಗಳ ತತ್ವ,ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಅನುಸರಿಸಿ ಮಹಾಪುರುಷರು ನಡೆದ ದಾರಿಯಲ್ಲಿ ಸಾಗಬೇಕಿದೆ ಎಂದು ಸೊರಬ ತಾಲ್ಲೂಕು ಬೋವಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷರು ಹಾಗೂ ತಾ.ಪಂ.ಮಾಜಿ ಉಪಾಧ್ಯಕ್ಷರಾದ ಸುರೇಶ್ ಹಾವಣ್ಣನವರ್ ಕರೆ ನೀಡಿದರು.
ಸೋಮವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿವಯೋಗಿ ಸಿದ್ದರಾಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ಸಾಕಾರ ರೂಪಿ ಶಿವಯೋಗಿ ಸಿದ್ದರಾಮೇಶ್ವರರ ಜೀವನ ತತ್ವಗಳು ಸರ್ವರ ಸರ್ವಾಂಗೀಣ ಪ್ರಗತಿಗೆ ಮಾರ್ಗದರ್ಶಕವಾಗಿದೆ ಎಂದರು.
ತಹಶೀಲ್ದಾರ್ ಹುಸೇನ್ ಎ.ಸರಕಾವಸ್ ಮತ್ತು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ.ಪ್ರದೀಪ್ ಮಾತನಾಡಿ,ಅಂದಿನ ದಿನಗಳಲ್ಲಿ 12ಸಾವಿರ ಕೆರೆಗಳನ್ನು ನಿರ್ಮಿಸಿದ ಮಹಾನ್ ಕಾಯಕ ಯೋಗಿ ಇವರಾಗಿದ್ದಾರೆ ಇವರ ಜೀವನ ಚರಿತ್ರೆಗೆ ಸಂಬ0ಧಿಸಿದ ಅನೇಕ ಆಧಾರಗಳು,ವಚನಕಾರರ ವಚನಗಳಲ್ಲಿ, ಕಾವ್ಯ ಶಾಸನಗಳಲ್ಲಿ ಮತ್ತು ಐತಿಹ್ಯಗಳಲ್ಲಿ ಕಾಣಬಹುದಾಗಿದೆ ಎಂದರು.
ತಾಲೂಕು ಆಡಳಿತದಿಂದ ನಡೆಸುವಂತಹ ಸರ್ಕಾರಿ ಕಾರ್ಯಕ್ರಮಗಳಲ್ಲಿ 24 ಇಲಾಖೆಗಳ ಮುಖ್ಯಸ್ಥರು ಗೈರು ಹಾಜರಾದ ಬಗ್ಗೆ ಭೋವಿ ಸಮಾಜದ ಮುಖಂಡರಾದ ಸುರೇಶ್ ಹಾವಣ್ಣನವರ್,ಸುರೇಶ್ ಕೆ.ಹೆಚ್,ನಿಂಗಪ್ಪ ಕುನ್ನೂರು ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗೈರು ಹಾಜರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಮೇರೆಗೆ ತಹಶೀಲ್ದಾರ್ ರವರು ಗೈರು ಹಾಜರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿಯೂ,ಸರ್ಕಾರಿ ಕಾರ್ಯಕ್ರಮಗಳು ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗಿರುವುದಿಲ್ಲ ಅಧಿಕಾರಿಗಳು ಎಲ್ಲಾ ಜಯಂತಿಗಳು ಸರ್ಕಾರದ ಕಾರ್ಯಕ್ರಮಗಳೇ ಆಗಿದ್ದು, ಇದಕ್ಕೆ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕೆಂಬ ತಿಳುವಳಿಕೆ ಹೊಂದಿರಬೇಕು ಎಂದರು.
ಎ.ಇ.ಇ ಕಿರಣಕುಮಾರ್,ವಿನೋದ್ ಬಿ.ಜೆ,ಬಿಸಿಎಂ, ತಾಲೂಕು ಕಚೇರಿ ಸಿಬ್ಬಂದಿಗಳು,ಭೋವಿ ಸಮಾಜದ ಮುಖಂಡರಾದ ಶಿವಕುಮಾರ್ ಎನ್.ಜಿ, ಬಸವರಾಜಪ್ಪ.ಹೆಚ್,ಕಿರಣಕುಮಾರ ಬಿ, ಚಂದ್ರಶೇಖರ ಎಂ.ಹೆಚ್,ಓಂಕಾರಪ್ಪ ಉದ್ರಿ, ಮೇಘರಾಜ,ಅಭಿಷೇಕ್,ರಾಮಪ್ಪ ಹುರುಳಿ,ನಿಂಗಪ್ಪ ಕುನ್ನೂರು,ಪ್ರಶಾಂತ್ ಕೋವೇರ್,ಶಿವಕುಮಾರ್ ಹಿರೇಮಾಗಡಿ,ವಿನಾಯಕ ಬಿಳಗಲಿ ಮತ್ತಿತರರಿದ್ದರು.
ವರದಿ-ಸಂದೀಪ ಯು.ಎಲ್.,ಕರುನಾಡ ಕಂದ ನ್ಯೂಸ್ ಸೊರಬ