ಹೊನ್ನಾಳಿ:ಮನುಷ್ಯನ ಸಾಕಷ್ಟು ಸಮಸ್ಯೆ, ಸಂಕಷ್ಟಗಳಿಗೆ ಮೌನವೇ ಸೂಕ್ತ ಪರಿಹಾರ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಅಭಿಪ್ರಾಯಪಟ್ಟರು.
ತಾಲೂಕಿನ ಗಡಿಭಾಗದ ಹಳ್ಳೂರು ಗ್ರಾಮದಲ್ಲಿ ಬುಧವಾರ ರಾತ್ರಿ ಮೂರು ದಿನಗಳಿಂದ ಆಚರಿಸಿದ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ಸಮಸ್ಯೆ ಬಂದಾಗ ಮೌನಕ್ಕೆ ಶರಣಾದರೆ ಸಮಸ್ಯೆಗಳು ತಂತಾನೇ ಪರಿಹಾರವಾಗುತ್ತವೆ ಹಾಗಾಗಿಯೇ ನಮ್ಮ ಹಿರಿಯರು ಮಾತು ಬೆಳ್ಳಿ ಮೌನ ಬಂಗಾರ ಎಂದು ಹೇಳುತ್ತಿದ್ದರು.ಹಿರಿಯರು ಹೇಳುತ್ತಿದ್ದ ಪ್ರತಿಯೊಂದು ವಾಕ್ಯವೂ ನಮ್ಮ ಜೀವನಕ್ಕೆ ಹತ್ತಿರವಾಗಿವೆ ಎಂದರು.
ನಮ್ಮ ಲಿಂ.ಪೂಜ್ಯ ಗುರುಗಳಾದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಸಂಕಲ್ಪದಂತೆ ನಾವು ಪ್ರತಿವರ್ಷ ವಿವಿಧ ಪವಿತ್ರ ಸ್ಥಳಗಳಲ್ಲಿ ಇಷ್ಟಲಿಂಗ ಪೂಜಾನುಷ್ಠಾನ ಆಚರಿಸಿಕೊಂಡು ಬರುತ್ತಿದ್ದೇವೆ.ಪ್ರತಿವರ್ಷ ಪ್ರತಿ ಗ್ರಾಮದವರು ನಮ್ಮ ಇಷ್ಟಲಿಂಗ ಪೂಜಾಕಾರ್ಯವನ್ನು ಭಕ್ತಿಯಿಂದ
ನೆರವೇರಿಸಲಿಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕೊಣಂದೂರು ಶ್ರೀಪತಿ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ,ಹೊನ್ನಾಳಿ ಶ್ರೀಗಳು ಪ್ರತಿವರ್ಷ ಭಕ್ತ ಕಲ್ಯಾಣಕ್ಕಾಗಿ ಮೌನ ಇಷ್ಟಲಿಂಗ ಪೂಜಾಕಾರ್ಯ ನೆರವೇರಿಸಿಕೊಂಡು ಬರುತ್ತಿದ್ದಾರೆ.ಈ ಪೂಜಾ ಕಾರ್ಯಕ್ರಮ ಸ್ವಾರ್ಥಕ್ಕೆ ಅಲ್ಲ..ಅದು ಲೋಕ ಕಲ್ಯಾಣಕ್ಕೆ ಎಂಬುದನ್ನು ನಾವ್ಯಾರೂ ಊಮರೆಯಬಾರದು ಎಂದು ಹೇಳಿದರು.
ಹೊನ್ನಾಳಿ ಹಿರೇಕಲ್ಮಠಕ್ಕೂ ಹಾಗೂ ಕೊಣಂದೂರು ಶ್ರೀಮಠಕ್ಕೂ ಹಿಂದಿನ ಶ್ರೀಗಳ ಕಾಲದಿಂದಲ್ಲೂ ಅವಿನಾಭಾವ ಸಂಬಂಧ ಇದೆ ಎಂದು ಹಲವು ಉದಾಹರಣೆ ಸಹಿತ ತಿಳಿಸಿದರು.
ಚಿಕ್ಕಕಬ್ಬಾರ ಗ್ರಾಮದ ರೇವಣಸಿದ್ದಯ್ಯ ಹಿರೇಮಠ ಉಪನ್ಯಾಸ ನೀಡಿದರು ಕತ್ತಿಗೆ ಮಠದ ಚನ್ನಪ್ಪ ಸ್ವಾಮಿಜಿ,ನಿವೃತ್ತ ಉಪನ್ಯಾಸಕ ಬಸವರಾಜಪ್ಪ, ನ್ಯಾಮತಿ ಹವಳದ ಲಿಂಗರಾಜು ಮಾತನಾಡಿದರು. ಪ್ರಕಾಶ ಶಾಸ್ತ್ರಿ,ಹಾಲಸ್ವಾಮಿ,ಸಂತೋಷ ಪಾಟೀಲ್, ತಿಮ್ಮಯ್ಯ,ಜಗದೀಶ್,ಹೆಚ್ ಕಡದಕಟ್ಟೆ ಗ್ರಾಮಸ್ಥರು ಇದ್ದರು.
