ಕೊಪ್ಪಳ ಜಿಲ್ಲೆ ಸಾಂಸ್ಕೃತಿಕ,ಧಾರ್ಮಿಕ,ರಾಜಕೀಯ,ಶೈಕ್ಷಣಿಕ ರಂಗಗಳಲ್ಲಿ ಮುಂಚೂಣಿಯಲ್ಲಿರುವುದಾದರೂ, ಸಾಮಾಜಿಕವಾಗಿ,ಆರ್ಥಿಕವಾಗಿ ಹೇಳಿಕೊಳ್ಳುವಂತಹ ಸಾಧನೆ ಮಾಡುವಲ್ಲಿ ಹಿಂದೆ ಬಿದ್ದಿದೆ ಎಂದು ಹೇಳಿದರೆ
ತಪ್ಪಾಗಲಾರದು.
ಇದಕ್ಕೆ ಮುಖ್ಯವಾಗಿ ಇಲ್ಲಿನ ಬಡತನ,ಅನಕ್ಷರತೆ, ನಿರುದ್ಯೋಗ ದಂತಹ ಸಮಸ್ಯೆಗಳು ಕಾರಣವಾಗಿವೆ.
ಇಂತಹ ಬಡತನದ ಕುಟುಂಬವೊಂದರಲ್ಲಿ ಜನಿಸಿದ, ಅನಕ್ಷರಸ್ಥ,ಬಸಮ್ಮ ಅರಕೇರಿ ಎಂಬ ೬೦ ವರ್ಷ ದಾಟಿದ ಮಹಿಳೆಯೊಬ್ಬರು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗೇಟಿನ ಹೊರಭಾಗದಲ್ಲಿ ಕುಳಿತು ಹರಿದ ಚಪ್ಪಲಿಗಳನ್ನು ಹೊಲಿದು ಕೊಟ್ಟು ಜನರು ಸುಗಮವಾಗಿ ಅಡ್ಡಾಡುವ ಹಾಗೆ ಮಾಡುತ್ತಿರುವುದು ದಿನ ನಿತ್ಯ ಆ ದಾರಿಯಲ್ಲಿ ಓಡಾಡುತ್ತಿರುವ ಎಲ್ಲರೂ ಕಾಣುವ ಸಾಮಾನ್ಯ ದೃಶ್ಯವಾಗಿದೆ,ಬಿಸಿಲಿನ ತಾಪ,ರಸ್ತೆಯಲ್ಲಿನ ಧೂಳು,ಸಹಿಸಿಕೊಂಡು,ಈ ಮಹಿಳೆ,ದಿನಕ್ಕೆ ಹೆಚ್ಚೆಂದರೆ ಕೇವಲ ನೂರು ರೂಪಾಯಿಗಳನ್ನು ಸಂಪಾದಿಸುತ್ತಾರೆ.
ಬಸಮ್ಮ ಅರಕೇರಿಯವರನ್ನು
ನಾನು ಮಾತನಾಡಿಸಿ ಅವರ ಮಾಹಿತಿಯನ್ನು ಅವರ ಪರಿಶ್ರಮದ ಬದುಕಿನ ಕಿರು ನೋಟವನ್ನು ಈ ಬರಹದ ಮೂಲಕ ಅಭಿವ್ಯಕ್ತಪಡಿಸುತ್ತಿರುವೆ…
ಬಸಮ್ಮ ಅರಕೇರಿ ಅವರು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದು ಈ ಮಹಿಳೆಗೆ
ಒಟ್ಟು ನಾಲ್ಕು ಜನ ಮಕ್ಕಳು ಮೂವರು ಹೆಣ್ಣು ಮಕ್ಕಳು,ಒಬ್ಬನೇ ಮಗ.ಮೂವರು ಹೆಣ್ಣುಮಕ್ಕಳ ಮದುವೆ ಮಾಡಿ ಕೊಟ್ಟು,ಮೊಮ್ಮಕ್ಕಳನ್ನು ಕಂಡು ಹಿರಿಯ ಜೀವಿ,ಬಸಮ್ಮ ಅರಕೇರಿಯವರು ಕೆಲ ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡವರು.ಇವರ ಪೂರ್ವಜರೂ ಚಪ್ಪಲಿ ಹೊಲಿಯುವ ಕಾಯಕವನ್ನು ಮಾಡುತ್ತಿದ್ದರಂತೆ, ಬಸಮ್ಮನವರು ತಮ್ಮ ನಾಲ್ಕು ಮಕ್ಕಳ ಲಾಲನೆ,ಪಾಲನೆ,ಪೋಷಣೆ ಮಾಡುತ್ತಲೇ,ಚಪ್ಪಲಿ ಹೊಲಿಯುವ ಕೆಲಸವನ್ನೂ ಮಾಡುತ್ತಾ ಎಲ್ಲಾ ಮಕ್ಕಳ ಮದುವೆ ಮಾಡಿ,ಮೊಮ್ಮಕ್ಕಳೊಂದಿಗೆ ನೆಮ್ಮದಿಯು ಬದುಕನ್ನು ಬದುಕುತ್ತಿರುವರು.
ಬಸಮ್ಮ ಅರಕೇರಿಯವರ ಏಕೈಕ ಪುತ್ರ,ವಸಂತಕುಮಾರನೂ ಸಹ
ತಾಯಿಯ ಹಾಗೆ ಚಪ್ಪಲಿ ಹೊಲಿಯುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡು,
ಹೆಂಡತಿ,ಮಕ್ಕಳೊಂದಿಗೆ,ಜೀವನದ ಬಂಡಿಯನ್ನು ಸಾಗಿಸುತ್ತ ನಡೆದಿದ್ದಾನೆ.ಸಧ್ಯ ಬಸಮ್ಮ ನವರಿಗೆ ಎಂಟು ಜನ ಮೊಮ್ಮಕ್ಕಳು ಇದ್ದಾರೆ ಎಂದರೆ, ನಂಬಲಿಕ್ಕೇ ಆಗಲಿಲ್ಲ,ಆದರೆ ನಂಬಲೇಬೇಕಾದ ಸತ್ಯವಿದು.
ಕೊಪ್ಪಳ ನಗರದ ಮುಖ್ಯ ರಸ್ತೆಯಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗೇಟಿನ ಹೊರಭಾಗದಲ್ಲಿ ಅಂದರೆ ಬಿ.ಈ.ಓ.ಕಛೇರಿಯ ಪಕ್ಕದಲ್ಲೇ
ಧೂಳು ತುಂಬಿದ ಜಾಗವನ್ನು ಸ್ವಚ್ಛ ಮಾಡಿಕೊಂಡು,ಧೂಳನ್ನು,ಬಿಸಿಲನ್ನೂ,ಲೆಕ್ಕಿಸದೇ ಮುಂಜಾನೆ ೯ ಗಂಟೆಯಿಂದ ,ಸಂಜೆ ೭ ಗಂಟೆಯವರೆಗೆ,ಜನರ ಹರಿದ ಚಪ್ಪಲಿ ಗಳನ್ನು ಹೊಲಿದು ಕೊಡುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡ
ಈ ವೃಧ್ಧ ಮಹಿಳೆಯ ದಿನದ ದುಡಿಮೆ (ಸಂಪಾದನೆ) ಕೇವಲ ಒಂದು ನೂರು ರೂಪಾಯಿ,ಹೆಚ್ಚೆಂದರೆ ನೂರಾ ಐವತ್ತು ರೂಪಾಯಿ,ಇದು ಕೂಡಾ ನಂಬಲೇಬೇಕಾದ ಸತ್ಯ.
ದಿನ ನಿತ್ಯದ ಅಗತ್ಯ ವಸ್ತುಗಳೆಲ್ಲದರ ಬೆಲೆ ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲೂ ಬಸಮ್ಮ ಅರಕೇರಿಯವರು ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಪಾಲಿಗೆ ಬಂದದ್ದು ಪಂಚಾಮೃತ ಎಂದು ಬದುಕಿನ ಬಂಡಿಯನ್ನು ನೂಕುತ್ತಾ ಸಾಗಿರುವುದು ಎಂಥವರ ಕರುಳನ್ನೂ ಚುರ್ ಎನಿಸುತ್ತದೆ!
ಚಪ್ಪಲಿ ಹೊಲಿಯುವ ಕಾಯಕಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಈ ವೃದ್ಧ ಮಹಿಳೆಯ ಬದುಕು ಇನ್ನಷ್ಟು ಹಸನಾಗಬೇಕಿದೆ,ಸರಕಾರ ಇಂತಹ ಮಹಿಳೆಯರ ಕಡೆಗೆ ಗಮನ ಹರಿಸಿ,ಅವರಿಗೆ ಸಹಾನುಭೂತಿ ತೋರಿಸಿ,ಅವರ ಜೀವನ ಮಟ್ಟವನ್ನು ಸುಧಾರಿಸುವ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಹಾಗಾಗಲಿ ಎಂದು ಆಶಿಸುತ್ತೇನೆ.
-ಬರಹ ಮತ್ತು ಫೋಟೋ ಶಿವಪ್ರಸಾದ್ ಹಾದಿಮನಿ,ಕನ್ನಡ ಉಪನ್ಯಾಸಕರು.ಕೊಪ್ಪಳ.೫೮೩೨೩೧.ಸಂಚಾರಿ ದೂರವಾಣಿ:
೭೯೯೬೭೯೦೧೮೯.