ಸೊರಬ:ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಪವಿತ್ರ ಸ್ಥಾನವಿದೆ.ಸ್ತ್ರೀ ಭಾರತೀಯ ಸಂಸ್ಕೃತಿಯ ಸಂರಕ್ಷಕಿ,ಸ್ತ್ರೀ ಪ್ರಧಾನ ಮೌಲ್ಯಗಳು ಈ ದೇಶದ ಶ್ರೇಷ್ಠ ಸಂಸ್ಕೃತಿಯ ಬಿಂಬ ಎಂದು ಸೊರಬ ತಾಲ್ಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ರಾಧಾ ಉಮೇಶ್ ಹೇಳಿದರು.
ಪಟ್ಟಣದ ಜೀವಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಚುಂಚಾದ್ರಿ ಮಹಿಳಾ ವೇದಿಕೆ ಆಯೋಜಿಸಿದ್ದ 2 ನೇ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಆರೋಗ್ಯ ತರಬೇತಿ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯರನ್ನು ಗೌರವಿಸುವ ಸಮಾಜಗಳು ಬಹುಬೇಗ ಪ್ರಗತಿ ಪಥದತ್ತ ಸಾಗುತ್ತವೆ.ಮಹಿಳಾ ಸಬಲೀಕರಣ ಮನೆಯಿಂದಲೇ ಆರಂಭವಾಗಬೇಕು. ಗ್ರಾಮೀಣ ಮಹಿಳೆಯರ ಶೈಕ್ಷಣಿಕ ಪ್ರಗತಿ ಮತ್ತು ಸಂಘಟನೆ ಚುಂಚಾದ್ರಿ ಮಹಿಳಾ ವೇದಿಕೆಯ ಧ್ಯೇಯ. ಕೃಷಿಕ ಮಹಿಳೆಯರು ಕೃಷಿಯ ಜೊತೆಯಲ್ಲಿ ಕೈಕಸುಬು ಮಾಡುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಬೇಕು.ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುವ ಮೂಲಕ ಹೊರ ಪ್ರಪಂಚದ ಅರಿವು ಹೊಂದಬೇಕು.ಮಹಿಳೆಯರ ಪ್ರತಿಭೆಯನ್ನು ಪುರಸ್ಕರಿಸಿ ಗೌರವಿಸುವುದು ವೇದಿಕೆಯ ಉದ್ದೇಶ ಎಂದರು.
ಆರೋಗ್ಯದ ಅರಿವು ವಿಷಯ ಕುರಿತು ಶಿಕಾರಿಪುರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಶುಶ್ರೂಷಾಧಿಕಾರಿ ಮಾನಸ ಆರ್ ಉಪನ್ಯಾಸ ನೀಡಿ ಮಹಿಳೆಯರ ಆರೋಗ್ಯ ಸಂರಕ್ಷಣೆಯಲ್ಲಿ ಹಿಂಜರಿಕೆ ಸಲ್ಲದು.ಮಹಿಳೆಯರು ವೈಜ್ಞಾನಿಕ ದೃಷ್ಟಿಕೋನದಲ್ಲಿ ಜೀವಿಸಬೇಕು.ಮಡಿ ಮೈಲಿಗೆ ಪರಿಕಲ್ಪನೆಯನ್ನು ತೊರೆದು ಶುಚಿತ್ವಕ್ಕೆ ಮಹತ್ವ ನೀಡಬೇಕು. ಅನಾರೋಗ್ಯಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಭಾರತಿ ರಾಮಕೃಷ್ಣ ಮಾತನಾಡಿ ಸಮುದಾಯದ ಮಹಿಳೆಯರು ಸಂಘಟಿತರಾಗಿ ಸುಧಾರಣೆ ಹೊಂದಬೇಕು ಎಂದರು.ಸಾಗರ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಭಾಗೀರಥಿ ಕೆರೆಕೊಪ್ಪ ಮಾತನಾಡಿ ಅಸಂಘಟಿತ ಗ್ರಾಮೀಣ ಮಹಿಳೆಯರನ್ನು ಸಂಘಟಿಸುವಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಡಾ.ಪವಿತ್ರಾ ಸುನಿಲ್ ಮಾತನಾಡಿ ಮಹಿಳೆಯರ ಸಾಧನೆ ಮತ್ತು ಸಂಘಟನೆಗೆ ಪುರುಷರ ಪಾತ್ರ ಪ್ರಧಾನವಾದದ್ದು ಎಂದರು.
ಸೊರಬ ಪಿಯು ಕಾಲೇಜಿನ ಉಪನ್ಯಾಸಕ ಡಾ.ಉಮೇಶ್ ಭದ್ರಾಪುರ ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದರು.ಶಿವಮೊಗ್ಗ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಡಾ.ನೇತ್ರಾವತಿ ಗೌಡ,ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮಾಕಾಂತ್ ಗೌಡ ನೆಲ್ಲೂರು,ಕೃಷ್ಣಪ್ಪ ಕಾರೆಹೊಂಡ,ವಿಜಯ ವಿನಾಯಕ ಶೇಟ್ ಶಿರಸಿ,ಜ್ಯೋತಿ ಉಮಾಕಾಂತ,ಸುಲೋಚನ ಸುಬ್ರಾಯ,ಸವಿತಾ ಕೃಷ್ಣ,ಅಶ್ವಿನಿ ಹೊಸಕೊಪ್ಪ,ಮಮತಾ ಭೈರಪ್ಪ ನಿಸರಾಣಿ, ಗೋದಾವರಿ ಹೊಸಕೊಪ್ಪ, ಗೋದಾವರಿ ಗಣಪತಪ್ಪ, ಸುಮಲತ ವಿನಾಯಕ, ಅನುಪಮಾ ಉಮೇಶ್,ಚೇತನ ರಮೇಶ್,ಸಾವಿತ್ರಮ್ಮ ಬೀರಪ್ಪ, ಏಕಾಂಬರಿ,ಪ್ರೇಮ ಮಂಜಪ್ಪ,ವೀಣಾ ನಾಯ್ಕ್, ಉಮೇಶ್,ರಾಮಪ್ಪ ಹುಲೇಮರಡಿ,ಲೀಲಮ್ಮ,ಭಾಸ್ಕರ,ಹೇಮಂತರಾಜ, ಕವನಾ ಉಪಸ್ಥಿತರಿದ್ದರು.ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಮಹಿಳೆಯರಿಗೆ ರಂಗೋಲಿ,ಜನಪದ ಗೀತೆ,ಜನಪದ ನೃತ್ಯ ಮತ್ತು ಪಾಸಿಂಗ್ ಬಾಲ್ ಸ್ಪರ್ಧೆ ಏರ್ಪಡಿಸಲಾಗಿತ್ತು.
-ಸಂದೀಪ ಯು.ಎಲ್.