ಚಿಕ್ಕ ವಯಸ್ಸು,ತುಂಟಾಟದ ವಯಸ್ಸು.ಆಗ ನಮ್ಮ ಕೆಲ ತಪ್ಪುಗಳಿಗೆ ಕೇಳದೆ ಕ್ಷಮೆ ಸಿಗುವ ಕಾಲವದು. ಅಷ್ಟು ಮುದ್ದಾದ ಪ್ರೀತಿಯ ದಿನಗಳು ಬಾಲ್ಯದ ದಿನಗಳು…ಇದು ಸುಮಾರು ಹತ್ತು ವರ್ಷದ ಹಿಂದೆ ಬಾಲ್ಯದ ನೆನಪು ಇದ್ದರವರಿಗೆ ಮಾತ್ರ ಸೀಮಿತವಾಗಿದೆ. ಅಂದರೆ ಇತ್ತೀಚೆಗೆ ಬಾಲ್ಯದ ನೆನಪುಗಳೆಲ್ಲ ಪೆನ್ನು ಪುಸ್ತಕ ನಾಲ್ಕು ಗೋಡೆ ಅಪ್ಪ-ಅಮ್ಮ ಶಾಲೆ,ನಮ್ಮ ಮನೆ,ತೀರಾ ಇತ್ತೀಚೆಗೆ ಮೊಬೈಲ್ ಕೂಡಾ ಅದಕ್ಕೆ ಸೇರ್ಪಡೆಗೊಂಡಿದೆ.ಇತ್ತೀಚಿನ ಬಾಲ್ಯ ಇವುಗಳ ಸುತ್ತಲೇ ತಿರುಗುತ್ತದೆ.
ಆದರೆ ನಮ್ಮ ಬಾಲ್ಯದ ಸಮಯಗಳು”ಚಿನ್ನದ ನೆನಪುಗಳು”ನಮ್ಮ ಬಾಲ್ಯದ ದಿನಗಳಲ್ಲಿ ಸ್ಥಳ,ಜಾತಿ, ಒಂದೇ ಆಟ,ಗಂಡು-ಹೆಣ್ಣು ಎಂಬ ಯಾವುದೇ ಸೀಮಿತ ಅಡ್ಡ ಗೋಡೆಗಳು ಇರಲಿಲ್ಲ.ನಾವೆಲ್ಲಾ ಇಡೀ ಊರಿನ ತುಂಬಾ ಓಡಾಡಿ ಆಟ ಆಡುತ್ತಿದ್ದೆವು,ಇಡೀ ಬೀದಿಯ ಎಲ್ಲರೂ ನಮ್ಮ ಆಪ್ತಮಿತ್ರರೇ.
ಅವರ ತಂದೆ ತಾಯಿಗಳು ಅವರ ಮಕ್ಕಳಂತೆ ನಮ್ಮನ್ನು ಪ್ರೀತಿಸುತ್ತಿದ್ದರು.ಇಡೀ ಕೇರಿಯ ಮಕ್ಕಳೆಲ್ಲರೂ ಸೇರಿ ಆಟವಾಡುತ್ತಿದ್ದೆವು.ಒಬ್ಬರು ಇಬ್ಬರು ಆಡುವ ಆಟಕ್ಕಿಂತ ತಂಡ ತಂಡವಾಗಿ ಆಡುವ ಆಟಗಳೇ ಆಗ ಹೆಚ್ಚು ಖುಷಿ ನೀಡುತ್ತಿದ್ದವು.ನಮಗೆ ಸಿಗುತ್ತಿದ್ದ ಐದು ಪೈಸೆಯ “ಪೆಪ್ಪರಿಮೆಂಟ್”,
20 ಪೈಸೆಯ “ಪುರಿಉಂಡೆ”,ಬಾಯನ್ನ ಕೆಂಪಾಗಿಸುತ್ತಿದ್ದ “ಬಾಂಬೆ ಮಿಠಾಯಿ” ಜಾತ್ರೆಯ “ಕಡ್ಲೆಪುರಿ ಕಲ್ಯಾಣಸೇವೆ”ಸಿಹಿಯಾದ “ಬತಾಸು” ಇಷ್ಟಪಟ್ಟು ತಿನ್ನುತ್ತಿದ್ದ “ಮರಸೇಬು” ಹಳೇ ಕಬ್ಬಿಣ ಹಳೆ ನೋಟ್ ಬುಕ್ ಗಳನ್ನ ಮಾರಿ ಕೊಂಡುಕೊಳ್ಳುತ್ತಿದ್ದ “ಸಿಹಿಗೆಣಸು” ಆಟದಲ್ಲಿ ಇಡೀ ತಂಡ ಸೇರಿ ಆಡುತ್ತಿದ್ದ “ಲಗೋರಿ” “ಕಣ್ಣಮುಚ್ಚಾಲೆ” “ಗೋಲಿಆಟ” ಇವೆಲ್ಲಾ ಅತ್ಯಂತ ಪ್ರೀತಿಯ ನೆನಪುಗಳು.ನಮ್ಮೂರಿನ ಶಾಲೆಯ ಮಾಸ್ತರರು ಬೀದಿಯಲ್ಲಿ ಬರುತ್ತಿದ್ದಾರೆ ಎಂದು ತಿಳಿದ ತಕ್ಷಣವೇ,ಆಟವಾಡುತ್ತಿದ್ದ ನಾವುಗಳು,ಮರೆಯಾಗಿ ಬಚ್ಚಿಟ್ಟುಕೊಳ್ಳುತ್ತಿದ್ದೆವು,ಮಾಸ್ಟರರ ಬಗ್ಗೆ ಅಷ್ಟು ಗೌರವ ಮತ್ತು ಭಯ.”ಕುಟುಂಬ” ಎಂದರು ಅಷ್ಟೇ ತಂದೆಯ ಜೊತೆಗೆ ನಾಲ್ಕೈದು ಜನ ಅಣ್ಣತಮ್ಮಂದಿರು, ಮೂರ್ನಾಲ್ಕು ಜನ ಅಕ್ಕತಂಗಿಯರು,ಅವರೆಲ್ಲಾ ನಮಗೆ ದೊಡ್ಡಪ್ಪ,ಚಿಕ್ಕಪ್ಪ,ಅತ್ತೆಯಂದಿರು.ಹೀಗೆ ನಮ್ಮ ಬಾಲ್ಯದ ದಿನಗಳಲ್ಲಿ ನಾವು ಕಾಣುತ್ತಿದ್ದು ಸಂಬಂಧಗಳ ಭಾವಕ್ಕೊಳಗಾಗಿದ್ದ ದೊಡ್ಡ ಕುಟುಂಬವನ್ನು.ಹಬ್ಬ ಹರಿದಿನಗಳಲ್ಲಂತೂ ಕುಟುಂಬದ ಎಲ್ಲರಿಗೂ ಒಂದು ಕಡೆ ಸೇರುತ್ತಿದ್ದರು.ಅವರ ಮಕ್ಕಳು ಸೇರಿ”ಮಕ್ಕಳ ಸೈನ್ಯ”ವೇ ಏರ್ಪಡುತ್ತಿತ್ತು.ಎಲ್ಲರೂ ಒಟ್ಟಾಗಿ ವಿಧವಿಧದ ಆಟಗಳನ್ನಾಡುತ್ತಾ ಸಂತೋಷ ಪಡುತ್ತಿದ್ದೆವು…
ಇತ್ತೀಚೆಗೆ ಎಲ್ಲವೂ ಬದಲಾಗಿದೆ.ಓದು ಮುಗಿಸಿ, ಕೆಲಸಕ್ಕೆ ಸೇರಿದೆವೆಂದರೆ,ಕುಟುಂಬದ ಕಲ್ಪನೆಯಿಂದ ದೂರಾಗಿ ಬಿಡುತ್ತೇವೆ.ಹಬ್ಬ ಹರಿ ದಿನಗಳಲ್ಲೂ ಕುಟುಂಬಕ್ಕೆ ಸಮಯ ನೀಡಲು ಬಿಡುವಿಲ್ಲದ ಕೆಲಸದ ಒತ್ತಡಕ್ಕೆ ಬಿದ್ದುಬಿಡುತ್ತೇವೆ.ಇಷ್ಟಪಟ್ಟ ಹುಡುಗಿಯ ಕೈಹಿಡಿದು,ವಯಸ್ಸಾದ ತಂದೆ ತಾಯಂದಿರನ್ನು ಹಳೆಯ ಮನೆ,ಹಳ್ಳಿಯಲ್ಲೇ ಬಿಟ್ಟು ಪಟ್ಟಣಕ್ಕೆ ಬಂದು ಕೆಲಸ ಮಾಡುತ್ತಾ ಹಣ ಗಳಿಸುವ ಒತ್ತಡಕ್ಕೆ ಬಿದ್ದು ಹೆಂಡತಿಯನ್ನು ಸಹ ದುಡಿಯಲು ಕಳಿಸಿ ಬಿಡುತ್ತೇವೆ. ತಂದೆ ತಾಯಿಯ ಬಗ್ಗೆ ಪ್ರೀತಿ ಇದ್ದರೂ,ಅವರನ್ನು ಕರೆತಂದು ಜೊತೆಯಲ್ಲಿಟ್ಟುಕೊಂಡು ಸೇವೆ ಮಾಡಲು ಸಮಯವೇ ಇಲ್ಲದಂತೆ ವಾತಾವರಣ ಸೃಷ್ಟಿಸಿಕೊಳ್ಳುತ್ತೇವೆ.ಇದೆಲ್ಲಾ ನಮ್ಮ ಅನುಕೂಲಕ್ಕೆ ನಾವು ಮಾಡಿಕೊಂಡ ಮಾರ್ಪಾಡುಗಳಾದರೂ…ಇಲ್ಲಿ ಪ್ರೀತಿಯಿಂದ ವಂಚಿತರಾದದ್ದು ಮಾತ್ರ ನಮ್ಮ ಕರುಳ ಕುಡಿಗಳು,ಅಜ್ಜಿ,ತಾತ ದೊಡ್ಡಪ್ಪ,ದೊಡ್ಡಮ್ಮ,ಅತ್ತೆ ಮಾವ,ಚಿಕ್ಕಪ್ಪ,ಚಿಕ್ಕಮ್ಮ…ಹೀಗೆ ಬರುವ ಸಂಬಂಧಗಳ ಪ್ರೀತಿ ಈಗಿನ ಮಕ್ಕಳಿಗೆ ಸಿಗದಂತಾಗುತ್ತಿದೆ.ಇದಕ್ಕೆ ಪೂರಕವಾಗಿ ಮೊನ್ನೆ ನಮ್ಮ ಸ್ನೇಹಿತ ತನ್ನ ಅಳಲನ್ನು ತೋಡಿಕೊಂಡ ಒಂದು ಘಟನೆ ನೆನಪಾಗುತ್ತದೆ. ಕುಟುಂಬ ತೋರಿದ ಹುಡುಗಿಯನ್ನ ಮದುವೆಯಾಗಲು ಒಪ್ಪದೇ ತಾನು ಪ್ರೀತಿಸಿದ ಹುಡುಗಿಯನ್ನ ಮದುವೆಯಾಗಲು ತಂದೆ ತಾಯಿಯನ್ನು ಸಂಬಂಧಗಳನ್ನು ತೊರೆದು ಬಂದು ತಾನೇ ಒಂದು ಕುಟುಂಬವನ್ನ ಕಟ್ಟಿಕೊಂಡು ಗಂಡ ಹೆಂಡತಿ ಇಬ್ಬರೂ ಸುಖದ ಸಂಸಾರಕ್ಕೆ ಪಾದರ್ಪಣೆ ಮಾಡುತ್ತಾರೆ.ಆದರೆ ಒಂದೇ ವರುಷದ ಅವಧಿಯಲ್ಲಿ, ಹೆಂಡತಿ ಗರ್ಭಿಣಿಯಾಗುತ್ತಾಳೆ.ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವ ಹೊಣೆಯು ಆತನ ಮೇಲೆ ಬೀಳುತ್ತದೆ.ತಿಂಗಳು ತುಂಬುತ್ತಾ ಹೋದಂತೆ ಅವಳು ಕೆಲಸ ಮಾಡುವುದು ಕಷ್ಟವಾಗುತ್ತದೆ.ತನ್ನ ಕೆಲಸವನ್ನು ಮಾಡಿಕೊಳ್ಳುವುದರ ಜೊತೆಗೆ ಆಕೆಯನ್ನು ಪೋಷಿಸುತ್ತಾ ಕೆಲಸಕ್ಕೂ ಹೋಗುವ ಅನಿವಾರ್ಯ ಅವನಿಗೆ ಎದುರಾಗುತ್ತದೆ.ಹೇಗೋ ನಿಭಾಯಿಸಿದ ಅವನು ಸುಂದರ ಹೆಣ್ಣು ಮಗು ಒಂದರ ತಂದೆಯಾಗುತ್ತಾನೆ ಆದರೆ ಕೆಲಸಕ್ಕೆ ಹೋಗಿ ದುಡಿಯುವುದರ ಜೊತೆಗೆ ಬಾಣಂತಿಯಾದ ಹೆಂಡತಿ ಮಗುವನ್ನ ನೋಡಿಕೊಳ್ಳಬೇಕಾದದ್ದು ಅವನಿಗೆ ಅನಿವಾರ್ಯವಾಗುತ್ತದೆ.
ಆಗ ಹಿರಿಯರು ಮಾಡಿರುವ ಕುಟುಂಬ ವ್ಯವಸ್ಥೆಯ ತಾಕತ್ತು ಅವನಿಗೆ ಅರ್ಥವಾಗುತ್ತದೆ.ಅದನ್ನು ನನ್ನೊಡನೆ ಹಂಚಿಕೊಳ್ಳುತ್ತಾ…
ಹಣವಂತನಾಗಲಿ,ಗುಣವಂತನಾಗಲಿ,ಬಡವನಾಗಲಿ, ಶ್ರೀಮಂತನಾಗಲಿ,ಕಾರಿರಲಿ,ಬಂಗಲೆ ಇರಲಿ,ನಮ್ಮದು ಅಂತ ಒಂದಷ್ಟು ಜನ ತುಂಬಿದ ಕುಟುಂಬವಿರಬೇಕು, ಆ ಕುಟುಂಬದಲ್ಲಿ ಮಾರ್ಗದರ್ಶನ ನೀಡುವ “ಹಿರಿಯರಿರಬೇಕು”ಎಂದು ತನ್ನ ಕಷ್ಟ ಹೇಳಿಕೊಂಡ…
-ಗಿರೀಶ ಎಸ್ ಸಿ (ರಾಗಿ),ರಂಗಭೂಮಿ ಕಲಾವಿದರು,
ರಾಮನಗರ,9945017517