ಬೀದರ್:ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸಹಕಾರ,ಪ್ರೋತ್ಸಾಹ ಮತ್ತು
ನಿರಂತರ ನೂತನ ಬೋಧನಾ ತಂತ್ರಗಾರಿಕೆ ಅಳವಡಿಸಿದ ಪರಿಣಾಮದಿಂದ 2024ರ ದ್ವಿತೀಯ ಪಿಯು ಪರೀಕ್ಷೆ-1 ರ ಫಲಿತಾಂಶ ಹೆಚ್ಚಳಗೊಂಡಿದೆ. ಫಲಿತಾಂಶ ಅಧಿಕಗೊಳ್ಳುವಲ್ಲಿ
ನಾನೋಬ್ಬನೇ ಕಾರಣೀಕೃತನಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ತಮ್ಮ ಮನದಾಳದ ಮಾತು ಹೊರಹಾಕಿದರು.
ಇಲ್ಲಿಯ ಆರ್.ಆರ್.ಕೆ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘದ ವತಿಯಿಂದ ಹಮ್ಮಿಕೊಂಡ 2024ರ ದ್ವಿತೀಯ ಪಿಯು ಪರೀಕ್ಷೆ-1 ರ ಫಲಿತಾಂಶ ಹೆಚ್ಚಳದ ನಿಮಿತ್ಯ ನಡೆದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ,ಹಿಂದಿನ ವರ್ಷಗಳಲ್ಲಿ ಬೀದರ್ ಜಿಲ್ಲೆಯ ಪಿಯು ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯ ಫಲಿತಾಂಶ ಕೆಳಮಟ್ಟದಿಂದ ನೋಡಬೇಕಾಗುತ್ತಿತ್ತು ಆದರೆ ಇಂದು ನಮ್ಮ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹೊಂದಿದ ವಿದ್ಯಾರ್ಥಿಗಳ ಮೇಲಿನ ವೈಯಕ್ತಿಕ ಕಾಳಜಿ ಮತ್ತು ಇಲಾಖೆಯೊಂದಿಗೆ ಹಾಗೂ ಆಡಳಿತ ಮಂಡಳಿಯವರೊಂದಿಗೆ ಪರಸ್ಪರ ಸಮಾಲೋಚನೆ ಅಲ್ಲದೆ ಜಿಲ್ಲಾ,ತಾಲ್ಲೂಕು ಮಟ್ಟದಲ್ಲಿ ಆಯೋಜಿಸಿದ ಫಲಿತಾಂಶ ಸುಧಾರಣೆ ಕಾರ್ಯಾಗಾರದಿಂದ ಬೀದರ್ ಜಿಲ್ಲೆಯ ಫಲಿತಾಂಶ ಪ್ರಸ್ತುತ ಸಾಲಿನಲ್ಲಿ ಶೇ.81.69 ಇದ್ದು,ಕ-ಕ ಭಾಗದಲ್ಲಿ ನಂಬರ ಒನ್ ಸ್ಥಾನದಲ್ಲಿದೆ.ಅತಿ ಹೆಚ್ಚು ಡಿಸ್ಟಿಂಕ್ಷನ್ ಹೊಂದಿದ ರಾಜ್ಯ ಮಟ್ಟದ ಡಿಸ್ಟಿಂಕ್ಷನ್‌ನಲ್ಲಿ ಬೀದರ್ ವಿದ್ಯಾರ್ಥಿಗಳು 3ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮುಂದಿನ ವರ್ಷದಲ್ಲಿ ಪಿಯು ಫಲಿತಾಂಶ ರಾಜ್ಯಮಟ್ಟದಲ್ಲಿ ಸಿಂಗಲ್ ಡಿಜಿಟ್‌ನಲ್ಲಿ ಪಡೆಯಲು ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ ಮಾತನಾಡಿ ಈ ಬಾರಿಯ ಪಿಯು ಫಲಿತಾಂಶ ನಮ್ಮೆಲ್ಲರಿಗೆ ಖುಷಿ ತಂದಿದೆ.ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಫಲಿತಾಂಶ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.ಪ್ರತಿ ವರ್ಷ ವಿಜ್ಞಾನ ವಿಭಾಗದಲ್ಲಿ ಬೀದರ್ ಜಿಲ್ಲೆಯ ಮಕ್ಕಳು ಗುಣಮಟ್ಟದ ಫಲಿತಾಂಶ ನೀಡುತ್ತಿರುವುದು-ಹೆಮ್ಮೆಯ ವಿಷಯವಾಗಿದೆ.ಫಲಿತಾಂಶ ಹೆಚ್ಚಿಸುವಲ್ಲಿ ಡಿಡಿಪಿಯು ಅವರ ಪಾತ್ರ ಮುಖ್ಯವಾಗಿದೆ ಎಂದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಪ್ರ.ಕಾರ್ಯದರ್ಶಿ ಡಾ.ಮನ್ನತ ಡೋಳೆ ಮಾತನಾಡಿ ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಅವರು ನಿರಂತರವಾಗಿ ಉಪನ್ಯಾಸಕ,ವಿದ್ಯಾರ್ಥಿಯೊಂದಿಗೆ ಸಂವಾದ ನಡೆಸಿ, ಪ್ರತಿಯೊಬ್ಬರೂ ಕಲಿಕೆ-ಕಲಿಸುವಿಕೆಯಲ್ಲಿ ತಲ್ಲೀನರಾಗುವಂತೆ ಮಾಡಿರುವುದರ ಪರಿಣಾಮ ಬೀದರ್ ಜಿಲ್ಲೆ ಪಿಯು ರಿಸಲ್ಟ್ ಅಧಿಕವಾಗಿದೆ ಎಂದು ಹೇಳಿದರು.ಸ.ನೌ.ಸಂಘದ ಕಾರ್ಯದರ್ಶಿ ರಾಜಶೇಖರ ಮಂಗಲಗಿ,ಪ್ರಾಚಾರ್ಯ ಶಿವಾಜಿ,ಪ್ರಾಚಾರ್ಯೆ ಮಂಗಲಾ ಮಾತನಾಡಿದರು.ಪಿಯು ಫಲಿತಾಂಶ ಹೆಚ್ಚಳಗೊಂಡ ಪ್ರಯುಕ್ತ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಓಂಪ್ರಕಾಶ ದಡ್ಡೆ ಸ್ವರಚಿತ ಅಭಿನಂದನಾ ಪತ್ರ ಡಿಡಿಪಿಯು ಅವರಿಗೆ ಸಲ್ಲಿಸಿದರು.
ಪ್ರಾಂಶುಪಾಲರ ಸಂಘದ ರಾಜ್ಯ ಪ್ರತಿನಿಧಿ ಸಿದ್ದಾರ್ಥ ಕಾಲೇಜು ಪ್ರಾಚಾರ್ಯ ಎಸ್.ಪ್ರಭು,ಶಿವಕುಮಾರ ರಾಜನಾಳೆ,ಆರ್‌ಆರ್ ಕೆ.ಕಾಲೇಜು ಪ್ರಾಚಾರ್ಯ ಶ್ರೀಕಾಂತ ಪಾಟೀಲ,ಪ್ರಾಂಶುಪಾಲರ ಸಂಘದ ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಜೈಶೆನಪ್ರಸಾದ್ ಆರ್.ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಸಾಗರ ಪಡಸಲೆ,ಚಂದ್ರಕಾಂತ ಝಬಾಡೆ, ಸ್ವಾಮಿ ನರೇಂದ್ರ ಪದವಿಪೂರ್ವ ಕಾಲೇಜು ನಿರ್ದೇಶಕಿ ಕಲ್ಪನಾ,ಬಸವಕಲ್ಯಾಣದ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಸಿದ್ದಯ್ಯ ಎಸ್.ಬರಸಾನೋರ್ ಹಾಗೂ ಚಿಟಗುಪ್ಪದ ಗೌರಿಬಾಯಿ ಅಗ್ರವಾಲ್ ಕನ್ಯಾ ಪದವಿಪೂರ್ವ ಕಾಲೇ ಜು ಪ್ರಾಚಾರ್ಯ ವಿಜಯಕುಮಾರ ಕೆ. ಪಾಟೀಲ,ಡೈಮಂಡ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಾಧವರಾವ,ಡಾ.ಬಸವರಾಜ ಬಲ್ಲೂರ, ಚಂದ್ರಕಾಂತ ಬಿರಾದಾರ,ಶಿವರಾಜ ನಾಯ್ಕ್, ಬಸವರಾಜ ಮರ್ಯೂ ಮತ್ತಿತರರು ಡಿಡಿಪಿಯು ಅವರಿಗೆ ಸನ್ಮಾನಿಸಿದರು.ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಚಾರ್ಯರು,ಉಪನ್ಯಾಸಕರು ಪಾಲ್ಗೊಂಡಿದ್ದರು. ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ ನಿರೂಪಿಸಿದರು.ನೋಡಲ್ ಅಧಿಕಾರಿ ಚಂದ್ರಕಾಂತ ಗಂಗಶೆಟ್ಟಿ ವಂದಿಸಿದರು.
ವರದಿ:ಸಾಗರ ಪಡಸಲೆ