ಭದ್ರಾವತಿ:ನಗರಸಭೆ ವ್ಯಾಪ್ತಿಯ ಜನ್ನಾಪುರ ಹಾಗೂ ಸಿದ್ದಾಪುರದಲ್ಲಿ ಹಲವು ಸಮಸ್ಯೆಗಳಿದ್ದು,ಇಲ್ಲಿನ ಮತದಾರರು ಈ ಬಾರಿ ಲೋಕಸಭೆ ಚುನಾವಣೆ ಬಹಿಷ್ಕರಿಸುವ ಸಾಧ್ಯತೆ ಕಂಡು ಬರುತ್ತಿದೆ.ಈ ಹಿನ್ನಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು,ಜನ್ನಾಪುರ ಲಿಂಗಾಯಿತರ ಬೀದಿ ಹಾಗೂ ಸಿದ್ದಾಪುರ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಬೋರ್‌ವೆಲ್‌ಗಳನ್ನು ದುರಸ್ತಿ ಮಾಡಿಸುವುದು. ಜನ್ನಾಪುರ ಜಯಶ್ರೀ ಕಲ್ಯಾಣ ಮಂದಿರ ಪಕ್ಕದ ರಸ್ತೆಯಲ್ಲಿ ಡಾ.ಹೆಗ್ಗಡೆ ಮನೆಯ ಹತ್ತಿರವಿರುವ ಕಿರು ನೀರು ಸರಬರಾಜು ಯೋಜನೆಯ ಮೋಟರ್ ಕೆಟ್ಟು ಹೋಗಿದ್ದು,ಈ ಮೋಟರ್ ಜೊತೆಗೆ ನಗರಸಭೆ ವ್ಯಾಪ್ತಿಯ ಎಲ್ಲಾ ಕಿರು ನೀರು ಸರಬರಾಜು ಯೋಜನೆಯ ಮೋಟರ್‌ಗಳನ್ನು ತಪಾಸಣೆ ನಡೆಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು.
ನಗರಸಭೆ ವ್ಯಾಪ್ತಿಯ ಜನ್ನಾಪುರ,ಸಿದ್ದಾಪುರ, ಹುತ್ತಾಕಾಲೋನಿ,ಉಜ್ಜನಿಪುರ,ಬುಳ್ಳಾಪುರ, ಡಿಎಆರ್ ಕಾಲೋನಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳು ನಿರ್ಮಾಣಗೊಂಡು ಸುಮಾರು 25ಕ್ಕೂ ಅಧಿಕ ವರ್ಷಗಳಾಗಿದ್ದು,ಈ ಟ್ಯಾಂಕ್‌ಗಳು ಶಿಥಿಲಗೊಂಡಿವೆ.ಇದರಿಂದ ನೀರಿನ ಸೋರಿಕೆಯಾಗುತ್ತಿದೆ.ಅಲ್ಲದೆ ಮುಂದಿನ ದೊಡ್ಡ ಪ್ರಮಾಣದ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.ಇದನ್ನು ತಪ್ಪಿಸಲು ಎಲ್ಲಾ ಟ್ಯಾಂಕ್‌ಗಳನ್ನು ತಪಾಸಣೆ ನಡೆಸಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಜನ್ನಾಪುರ,ಸಿದ್ದಾಪುರ ಸಮೀಪವಿರುವ ಜನ್ನಾಪುರ ಕೆರೆಯಲ್ಲಿ ಕಲ್ಮಶಗೊಂಡ ನೀರು ಶೇಖರಣೆಯಾಗಿರುವುದರಿಂದ ಸೊಳ್ಳೆಗಳ ಹಾವಳಿ ಹಾಗೂ ಸಾಂಕ್ರಾಮಿಕ ಭೀತಿ ಹೆಚ್ಚಾಗಿದೆ,ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನಲೆಯಲ್ಲಿ ತಕ್ಷಣ ಕೀಟನಾಶಕ ಔಷಧಿ ಸಿಂಪಡಿಸುವುದು ಹಾಗು ಜನ್ನಾಪುರ ಎನ್.ಟಿ.ಬಿ.ಕಛೇರಿ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಔಷಧಿ, ಮಾತ್ರೆಗಳನ್ನು ಪೂರೈಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.
ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ವೇಣುಗೋಪಾಲ್,ಕಾರ್ಯದರ್ಶಿ ಬಿ.ವಿ ಗಿರಿನಾಯ್ಡು,ಸಹಕಾರ್ಯದರ್ಶಿ ಎಂ.ವಿ ಚಂದ್ರಶೇಖರ್,ಉಪಾಧ್ಯಕ್ಷ ವಿಶ್ವನಾಥ್ ರಾವ್ ಗಾಯಕ್‌ವಾಡ್,ಸುವರ್ಣ ಮಹಿಳಾ ವೇದಿಕೆ ಅಧ್ಯಕ್ಷೆ ಎನ್.ಎಲ್ ರಮಾವೆಂಕಟೇಶ್,ಕಾರ್ಯದರ್ಶಿ ಗೀತಾರವಿಕುಮಾರ್ ಹಾಗೂ ನಗರಸಭೆ ಸಿಬ್ಬಂದಿ ಪ್ರಶಾಂತ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ:ಕೆ ಆರ್ ಶಂಕರ್ ಭದ್ರಾವತಿ