ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗೇರುಬೀಜ ಸಂಸ್ಕರಣೆಯಲ್ಲಿ ಗೆದ್ದು ದಾರಿ ತೋರಿದ ಕೃಷಿಕ !

ಈ ಸಾಹಸಗಾಥೆ ಇತರ ಕೃಷಿಕ,ರೈತೋತ್ಪಾದಕ ಸಂಘ ಹಾಗೂ ಸ್ವ-ಸಹಾಯ ಸಂಘಗಳಿಗೆ ಉತ್ಸಾಹ ಹಾಗೂ ಉತ್ತೇಜನ ನೀಡಬಲ್ಲುದು.ಮಾಡುವ ಮನಸ್ಸಿದ್ದರೆ ಇಲ್ಲಿದೆ ಪಥ.

ಮಲೆನಾಡು/ಕರಾವಳಿಯಲ್ಲಿ ಗೇರು ಬೆಳೆಯ ವಿಚಿತ್ರ ಸನ್ನಿವೇಶ ನೋಡಿ.ನೀವು ಗೇರು ಕೃಷಿಕರಾದರೆ ಸಂಸ್ಕರಿಸದ ಗೇರುಬೀಜಕ್ಕೆ ಆಯಾ ಮಾರುಕಟ್ಟೆಯನ್ನು ಹೊಂದಿಕೊಂಡು ಒಂದು ಕೆಜಿಗೆ ಸುಮಾರು 80 ರೂಪಾಯಿಗಳಿಂದ 110 ರೂಗಳವರೆಗೆ ಮಾತ್ರ ಸಿಗುತ್ತದೆ.ಅದೇ ನೀವು ತಿರುಳನ್ನು ಕೊಳ್ಳಹೋದರೆ ಒಂದು ಕೆಜಿಗೆ ಎಂಟುನೂರು ರೂಪಾಯಿಗಳಿಂದ ಸಾವಿರದಿನ್ನೂರವರೆಗೂ ಬೆಲೆ ತೆರಬೇಕು.ಇಲ್ಲಿನ ಕೂಲಿ ಹಾಗೂ ಒಳಸುರಿಗಳ ವೆಚ್ಚವನ್ನು ಗಣನೆಗೆ ತೆಗೆದುಕೊಂಡರೆ ಕೃಷಿಕನಿಗೆ ಹೆಚ್ಚಿನ ಲಾಭ ಬರುವುದು ದೂರವೇ ಉಳಿಯಿತು. ಹೀಗಿರುವಾಗ ಹೊಸತಾಗಿ ಗೇರು ಬೆಳೆಯುವ ಮನಸ್ಸಾದರೂ ಕೃಷಿಕರಿಗೆ ಹೇಗೆ ಬರುತ್ತದೆ? ಅದರಲ್ಲೂ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಇರುವಾಗ ಕಡಿಮೆ ಬೆಲೆ ಸಿಗುವ ಗೇರು ಬೆಳೆಯಿರಿ ಎಂದು ಹೇಳುವುದಾದರೂ ಹೇಗೆ?ಇಲ್ಲಿ ಗುಡ್ಡ/ಬ್ಯಾಣಗಳ ಖಾಲಿ ಜಾಗದಲ್ಲಿ ಈಗಾಗಲೇ ಗೇರು ಬೇರು ಬಿಟ್ಟಿದೆ. ಅದರಲ್ಲೂ ಮಲೆನಾಡಿನ ಸಾಗರ-ಸೊರಬ ತಾಲೂಕುಗಳಲ್ಲಿ ಗೇರಿನ ಕೃಷಿ ವ್ಯಾಪಕವಾಗಿ ನಡೆದಿದೆ. ಇದಕ್ಕೆ ಗೇರಿಗೆ ನೀರು ಬೇಡ ಎನ್ನುವುದೂ ಮುಖ್ಯ ಕಾರಣ.ಆದರೆ ಗುಡ್ಡದಲ್ಲಿ ಬೋರ್ ವೆಲ್ ಕೊರೆದು ನೀರು ಸಿಕ್ಕರೆ ಅಡಿಕೆ ಬೆಳೆಯಲು ಹೊರಡುವ ಕೃಷಿಕರಿಗೆ ಬೇಡ ಅಂತ ಹೇಳುವುದು ಸಾಧ್ಯವೇ ? ಮಿಲಿಯನ್ ಡಾಲರ್ ಪ್ರಶ್ನೆ ಇದಕ್ಕೆ ವ್ಯತಿರಿಕ್ತವಾಗಿ ಬಯಲುಸೀಮೆಯ ಕೆಂಪುಮಣ್ಣಿನಲ್ಲಿ ಗೇರು ಬಹಳ ಚೆನ್ನಾಗಿ ಬರುತ್ತದೆ ಇಳುವರಿಯೂ ಹೆಚ್ಚು ನೀರಿನ ಕೊರತೆ ಇರುವ ಅಲ್ಲಿನ ಕೃಷಿಕರಿಗೆ ಗೇರು ಬೇರೆ ಬೆಳೆಗಿಂತ ಲಾಭದಾಯಕ. ಹಾಗಾಗಿ ಬಯಲುಸೀಮೆಯಲ್ಲಿ ವ್ಯಾಪಕವಾಗಿ ಗೇರು ವಿಸ್ತರಣೆಯಾಗುತ್ತಿದೆ.

ಮಲೆನಾಡು/ಕರಾವಳಿಯಲ್ಲಿನ ಗೇರು ಬೆಳೆಯ ಸಮಸ್ಯೆಗೆ ಉತ್ತರ ಬೇಕೆಂದರೆ ನೀವು ಕಾಸರಗೋಡು ಸಮೀಪದ ಕೃಷಿಕ ಕುರುವೇರಿಯ ವಿಶ್ವಕೇಶವರನ್ನೊಮ್ಮೆ ಮಾತಾಡಿಸಬೇಕು.ಇವರ ಊರು ದಕ್ಷಿಣ ಕನ್ನಡದ ವಿಟ್ಲದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಕಾಸರಗೋಡು ಜಿಲ್ಲೆಯ ಪೈವಳಿಕೆ.ಇವರ ಮನೆಯ ಹೆಸರು ಕುರುವೇರಿ. ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಸಂಸ್ಥೆಯೊಡನೆ ನಿಕಟ ಸಂಪರ್ಕ ಇಟ್ಟುಕೊಂಡ ಆಸುಪಾಸಿನ ಕೃಷಿಕರಲ್ಲಿ ವಿಶ್ವಕೇಶವರೂ ಒಬ್ಬರು ಇಲ್ಲಿಂದ ಭಾಸ್ಕರ, ಉಳ್ಳಾಲ-3, ವೆಂಗುರ್ಲಾ -7 ಹಾಗೂ ನೇತ್ರಾ ಗಂಗಾ ಗೇರು ತಳಿಗಳನ್ನು ತಂದು ನಾಲ್ಕು ಎಕರೆಯಲ್ಲಿ ಬೆಳೆಸಿದ್ದಾರೆ. ಇವುಗಳಲ್ಲಿ ಭಾಸ್ಕರ ಮತ್ತು ಉಳ್ಳಾಲ -3 ಚೆನ್ನಾಗಿ ಬರುತ್ತಿವೆ. ನೇತ್ರಾ ಗಂಗಾ ಇಳುವರಿ ಈಗ ತಾನೇ ಶುರುವಾಗಿದೆ. ಇವರಿಗೆ ಗೇರುಬೀಜ ಸಂಸ್ಕರಣೆಯ ಹೊಳಹು ಮೂಡಲು ಕಾರಣ 2019 ರ ಗೇರುಬೀಜದ ದರ ಕುಸಿತ. ಆ ಸಮಯದಲ್ಲಿ ಶಿರಾದ ಕೃಷಿಕ ಮಂಜುನಾಥ್ ಅವರು ಸಂಸ್ಕರಣೆ ಮಾಡುತ್ತಿದ್ದುದನ್ನು ಫಾರ್ಮ್ ಟಿವಿಯಲ್ಲಿ ನೋಡಿ ಹೀಗೂ ಮಾಡುವ ಸಾಧ್ಯತೆ ಇದೆಯೆಂದು ಮನವರಿಕೆ. ಗೇರು ಸಂಶೋಧನಾ ಕೇಂದ್ರದಿಂದಲೂ ನಿರಂತರ ಪ್ರೋತ್ಸಾಹ ಹಾಗೂ ಮಾಹಿತಿ. ಕೇಂದ್ರ ನಡೆಸುವ ವಾಟ್ಸಪ್ ಗುಂಪು “ಕ್ಯಾಶ್ಯೂ ಕಮ್ಯೂನಿಟಿ’ ಯಲ್ಲಿ ನಡೆಯುವ ಮಾಹಿತಿ ವಿನಿಮಯ ಕೂಡಾ ಸಾಕಷ್ಟು ಉತ್ತೇಜನ ಕೊಟ್ಟಿತು.

ಮೊದಲಿಗೆ ಪುಣೆಯ ರೋಟೆಕ್ಸ್ ಇಂಡಸ್ಟ್ರೀಸ್ ಅವರಿಂದ ಕೆಲವು ಯಂತ್ರೋಪಕರಣಗಳನ್ನು ತಂದರು. ಮನೆಯ ಔಟ್ ಹೌಸಿನಲ್ಲಿ ಇವುಗಳ ಸ್ಥಾಪನೆ. ನಂತರ ಬೇಕಾದ ಉಪಕರಣಗಳನ್ನು ಮ್ಯಾಕ್ಸಿಮ್ ಇಂಜಿನೀಯರಿಂಗ್, ಅಹಮದಾಬಾದಿನಿಂದಲೂ ತರಿಸಿದ್ದಾರೆ. ” ಈಗ ನಮ್ಮಲ್ಲಿ 12 ವೋಲ್ಟಿನ ಕಾಯಿಲ್ ಇರುವ ಒಂದು ಮಿನಿ ಬಾಯ್ಲರ್/ಕುಕ್ಕರ್ ಇದೆ. ಇದರ ಸಾಮರ್ಥ್ಯ 40 ಕೆಜಿ. ಐವತ್ತರವರೆಗೂ ಹಾಕಬಹುದು. ಬೆಲೆ 30 ಸಾವಿರ. ಇದರಲ್ಲಿ ಸ್ಟೀಮ್ ಮೂಲಕ ಗೇರುಬೀಜ ಬೇಯಿಸಲು 2 ಗಂಟೆ ಬೇಕಾಗುತ್ತದೆ. ಇದರಿಂದ ತೆಗೆದು ಒಂದು ದಿನ ಹಾಗೇ ಇಡುತ್ತೇವೆ. ನಂತರ ಕಟಿಂಗ್ ಮೆಷೀನ್ನಿಗೆ ಹಾಕುತ್ತೇವೆ. ಆಟೋಮ್ಯಾಟಿಕ್ ಕಟಿಂಗ್ ಮಶೀನ್ ಎರಡಿವೆ. ಮೊದಲನೆಯದಕ್ಕೆ ಒಂದು ಲಕ್ಷದ ಇಪ್ಪತ್ತೊಂದು ಸಾವಿರ. ಸಾಮರ್ಥ್ಯ 10 ಕೆಜಿ. ಮತ್ತೊಂದು 20 ಕೆಜಿ ಸಾಮರ್ಥ್ಯದ್ದು. ಇದು ಒಬ್ಬರು ಕಡಿಮೆ ದರಕ್ಕೆ ಒದಗಿಸಿದ ಯಂತ್ರ. ಇವುಗಳಿಂದ ಬರುವ ಬೀಜದ ಮೇಲಿನ ಕಂದುಸಿಪ್ಪೆ ಹಾಗೇ ಇರುತ್ತದೆ. ಇದನ್ನು ಸುಲಭದಲ್ಲಿ ತೆಗೆಯುವಂತೆ ಹಬೆ ಕೊಡಲು ಇಪ್ಪತ್ತೈದು ಸಾವಿರ ವೆಚ್ಚದ ಮಾಯಿಶ್ಚರೈಸಿಂಗ್ ಮಶೀನ್ ಇದೆ.ಇದರಲ್ಲಿ ಎರಡು ಗಂಟೆ ಇಟ್ಟರೆ ಸಾಕು. ಇದಾದ ನಂತರ ಸಿಪ್ಪೆಯನ್ನು ತೆಗೆಯಲು ಪೀಲರ್ ಮಶೀನ್ನಿಗೆ ಹಾಕುತ್ತೇವೆ. ಪೀಲರಿಗೆ ಒಮ್ಮೆ ಹಾಕಿದಾಗ ಅಷ್ಟೂ ಸಿಪ್ಪೆ ಹೋಗದಿದ್ದರೆ ಮತ್ತೊಮ್ಮೆ ಹಾಕುತ್ತೇವೆ. ಆಗ ಚೆನ್ನಾಗಿ ಸುಲಿದು ಬರುತ್ತದೆ. ಇದರಲ್ಲಿ 90% ಪೀಲ್ ಆಗುತ್ತದೆ. ಪೀಲರ್ ಸಾಮರ್ಥ್ಯ ಗಂಟೆಗೆ ಮೂವತ್ತು ಕೆಜಿ. ನಂತರ ಡ್ರೈಯರಿನಲ್ಲಿ ಬೀಜಗಳನ್ನು ಒಣಗಿಸುವಿಕೆ. ವಾರಕ್ಕೆ 120 ಕೆಜಿ ಸಂಸ್ಕರಣೆ ಮಾಡುತ್ತೇವೆ. ಉಳಿಯುವ ಕಂದು ಸಿಪ್ಪೆಯನ್ನು ಬಾಳೆಗಿಡಗಳಿಗೆ ಹಾಕುತ್ತೇವೆ” ಮಾಹಿತಿ ನೀಡುತ್ತಾರೆ ವಿಶ್ವಕೇಶವ.

ಇದರ ನಂತರ ಗ್ರೇಡಿಂಗ್ ಇಡೀ ಬೀಜ, ಎರಡು ಪೀಸ್, ನಾಲ್ಕು ಪೀಸ್, ಎಂಟು ಪೀಸ್, ಹನ್ನೆರಡು ಪೀಸ್ ಮತ್ತು ಬೇಬಿ ಬಿಟ್ಸ್ ಒಟ್ಟು ಆರು ಗ್ರೇಡ್ಸ್. ಇವಕ್ಕೆ ಕ್ರಮವಾಗಿ ಒಂದು ಕೆಜಿಗೆ 1000, 750, 700, 680, 500, 400 ರೂ ದರ. ಇಡೀ ಬೀಜದಲ್ಲಿ ಇನ್ನೂ ನಾಲ್ಕು ವಿಧ- ಉಪ್ಪು ಹಾಕಿದ್ದು, ಚಾಟ್ ಮಸಾಲಾ, ಪೆಪ್ಪರ್, ಮೆಣಸು + ಬೆಳ್ಳುಳ್ಳಿ ಫ಼್ಲೇವರ್ ಇವೆ. ಇವೆಲ್ಲದಕ್ಕೂ ಒಂದೇ ದರ – ಒಂದು ಕೆಜಿಗೆ 1500 ರೂ. ಪ್ರತೀ ಹಂತದಲ್ಲೂ ಸ್ವಚ್ಛತೆಗೆ ಅತ್ಯಂತ ಗಮನ. ಗೇರು ಬೀಜದ ಕವಚವನ್ನು ಗೇರುಸಂಸ್ಕರಣಾ ಫ್ಯಾಕ್ಟರಿಯವರಿಗೆ ಕೊಡುತ್ತಾರೆ. “ನಮ್ಮ ಗೇರು ಬೀಜಕ್ಕೆ ಒಳ್ಳೇ ಬೇಡಿಕೆ ಇದೆ. ಬೆಂಗಳೂರಿಗೂ ಹೋಗುತ್ತಿದೆ. ಸ್ಥಳೀಯವಾಗಿ ಹಲವರು ನಮ್ಮಲ್ಲಿಂದಲೇ ತೆಗೆದುಕೊಂಡು ಹೋಗುತ್ತಾರೆ. ಉತ್ತರ ಭಾರತದ ಗ್ರಾಹಕರೂ ಇದ್ದಾರೆ. ನಮ್ಮ ಮಕ್ಕಳು ಕೂಡಾ ಅವರವರ ಶಾಲೆಯಲ್ಲಿ ಬೇಕಾದವರಿಗೆ ಗೇರುಬೀಜವನ್ನು ಕೊಡುತ್ತಾರೆ. ಬೇಕಾದ ಪೋಷಕರು ಅವರ ಮಕ್ಕಳ ಹತ್ತಿರ ಹೇಳಿ ಕಳಿಸುತ್ತಾರೆ. ” ಎನ್ನುತ್ತಾರೆ ವಿಶ್ವಕೇಶವ. ” ನಮಗೆ ಒಂದು ಕೆಜಿಗೆ 240 ರೂಗಳವರೆಗೆ ಸಿಗುತ್ತದೆ. ಖರ್ಚು ಕಳೆದು ಒಳ್ಳೇ ಲಾಭವೂ ಇದೆ”.

ಸದ್ಯಕ್ಕೆ “ಕುರುವೇರಿ ಕ್ಯಾಶ್ಯೂ” ಹೆಸರಿನಲ್ಲಿ ಮಾರಾಟ. ಬ್ರಾಂಡ್ ಮಾಡಿಲ್ಲ. ಮುಖ್ಯವಾಗಿ ” ನಾವು ಮಾರುಕಟ್ಟೆಯಲ್ಲಿ ಸಿಗುವಂತೆ ಬಿಳಿ ಬೀಜದ ರೀತಿಯಲ್ಲಿ ನಮ್ಮ ಉತ್ಪನ್ನಗಳನ್ನು ತಯಾರಿಸುವುದಿಲ್ಲ. ಬೇಯಿಸುವಾಗ ಉಷ್ಣತೆ ಜಾಸ್ತಿ ಇಡುವುದರಿಂದ ಬೀಜ ಹುರಿದ ಹಾಗೆ ಆಗುತ್ತದೆ. ಕಂದು ಬಣ್ಣ, ಸ್ವಲ್ಪ ಸಿಹಿ ಹಾಗು ಹೆಚ್ಚು ರುಚಿಕರ. ಮಾರಾಟವಾಗಲು ಗೇರು ಬೀಜ ಬಿಳಿ ಬಣ್ಣವೇ ಇರಬೇಕು ಎಂದೇನೂ ಇಲ್ಲ”. “ಮೊದಲೆಲ್ಲಾ ಬೇರೆಡೆಗೆ ಕೊರಿಯರ್ ಮೂಲಕ ಕಳಿಸುವಾಗ ಬೀಜಗಳು ಹೋಳಾಗುತ್ತಿದ್ದವು. ಅದನ್ನು ತಪ್ಪಿಸಲು 35 ಸಾವಿರ ವೆಚ್ಚ ಮಾಡಿ ವ್ಯಾಕ್ಯೂಮ್ ಪ್ಯಾಕಿಂಗ್ ಯಂತ್ರವನ್ನು ತಂದಿದ್ದೇವೆ. ಇದರಲ್ಲಿ ಪ್ಯಾಕ್ ಮಾಡಿದರೆ ಒಡೆಯುವುದಿಲ್ಲ. ಬೀಜದ ಬಾಳಿಕೆಯೂ ಜಾಸ್ತಿ. ನೋಡುವುದಕ್ಕೂ ಚೆಂದ” ವಿಶ್ವ ಅವರ ಪತ್ನಿ ನವ್ಯಶ್ರೀಯವರ ಮಾಹಿತಿ.

ಈ ಕೃಷಿಕುಟುಂಬದ ಸಂಸ್ಕರಣೆ ಈ ವರ್ಷ ಮೂರನೆಯದ್ದು. ಹೋದ ವರ್ಷ 50 ಕ್ವಿಂಟಾಲ್ ಸಂಸ್ಕರಣೆ. ಈ ಬಾರಿ 10 ಕ್ವಿಂಟಾಲ್ ಆಗಿದೆ. ಇನ್ನೂ ಮಾಡುವುದಕ್ಕಿದೆ. ಸುತ್ತಮುತ್ತಲ ಗೇರು ಬೆಳೆಗಾರರೂ ಇವರಿಗೆ ಬೀಜ ಕೊಡುತ್ತಿದ್ದಾರೆ. ಮುಂದೆ ಸಂಸ್ಕರಣೆಯನ್ನು ಸ್ವಲ್ಪ ದೊಡ್ಡಮಟ್ಟದಲ್ಲಿ ಮಾಡಬೇಕು ಎಂಬ ಇರಾದೆ. “ಗೇರುಬೀಜದ ಸಿಪ್ಪೆಯಿಂದ ಗೇರೆಣ್ಣೆ ತೆಗೆಯುವ ಹಾಗೂ ಹಣ್ಣನ್ನು ಸಂಸ್ಕರಣೆ ಮಾಡುವ ಸಾಧ್ಯತೆಯನ್ನೂ ಯೋಚಿಸಬಹುದು”. ಇವರು ಸರಾಸರಿ ಆರು ಜನಕ್ಕೆ ಕೆಲಸ ಕೊಟ್ಟಿದ್ದಾರೆ. ಕೆಲಸಗಾರರು ಸಂಸ್ಕರಣೆಯ ಜೊತೆ ಗೇರು ಬೀಜ ಹೆಕ್ಕುವ ಹಾಗೂ ಮತ್ತಿತರ ಕೆಲಸ ಮಾಡುತ್ತಾರೆ. ಸೀಸನ್ ಇಲ್ಲದಿರುವಾಗ ಇನ್ನಿತರ ತೋಟದ ಕೆಲಸ.

ವಿಶ್ವ ಅವರ ಅಭಿಪ್ರಾಯದಂತೆ “ದಕ್ಷಿಣಕನ್ನಡದಲ್ಲಿ ಈಗಾಗಲೇ ಗೇರು ಬೆಳೆಸಿರುವ ಇವರ ಪರಿಚಯದ ಕೆಲವು ರೈತರು ಗೇರು ತೆಗೆದು ಅಡಿಕೆ ಹಾಕುವ ಯೋಚನೆಯಲ್ಲಿದ್ದಾರೆ. ಇದು ದೀರ್ಘಾವಧಿಯಲ್ಲಿ ಒಳ್ಳೆ ಯೋಜನೆಯಲ್ಲ. ಯಾಕೆಂದರೆ ಬೇರೆ ಪ್ರದೇಶಗಳಲ್ಲಿ ಅಡಿಕೆ ವಿಸ್ತರಣೆ ಅಷ್ಟಿದೆ. ದರ ಬಿದ್ದರೆ ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ. ಅದಕ್ಕಾಗಿ ನಾವು ಅಡಿಕೆ, ಗೇರು, ಕಾಳುಮೆಣಸು, ರಬ್ಬರ್ ಹೀಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದೇವೆ”. ಅವರು ಕೆಲ ರೈತರಿಗೆ ಹೇಳಿದ್ದಾರೆ “ನಿಮ್ಮಲ್ಲಿನ ಗೇರುಬೀಜವನ್ನು ಒಳ್ಳೆ ದರ ಕೊಟ್ಟು ಕೊಂಡುಕೊಳ್ಳುತ್ತೇನೆ. ಮರ ಕಡಿಯುವುದು ಬೇಡ” .

ಗೇರು ಸಂಸ್ಕರಣೆಗೆ ತಾಳ್ಮೆ ಬೇಕು. ಕಷ್ಟಪಡಲು ಸಿದ್ಧರಿದ್ದರೆ ಲಾಭವಿದೆ ಎನ್ನುತ್ತಾರೆ ವಿಶ್ವಕೇಶವ. ” ಈ ಗೃಹೋದ್ಯಮದಲ್ಲಿ ವಿಶೇಷ ಸಮಸ್ಯೆಗಳು ಅಂತೇನೂ ಇಲ್ಲ. ಆದರೆ ಮೊದಲು ಬಂಡವಾಳ ಹಾಕಲಿಕ್ಕೆ ಕೆಲವರಿಗೆ ಕಷ್ಟವಾಗಬಹುದು. ಧೈರ್ಯ ಬೇಕು”. “ಸಣ್ಣ ಯಂತ್ರಗಳಿಗೆ ರೋಟೆಕ್ಸ್ ಹಾಗೂ ಮ್ಯಾಕ್ಸಿಮ್ ಕಂಪೆನಿಗಳೇ ಉತ್ತಮ. ಕರ್ನಾಟಕದಲ್ಲಿ ಸಣ್ಣ ಯಂತ್ರಗಳನ್ನು ತಯಾರಿಸುವವರು ನನಗೆ ಗೊತ್ತಿದ್ದಂತೆ ಇಲ್ಲ” ಎಂದೂ ಸೇರಿಸುತ್ತಾರೆ. ಸೂಕ್ಷ್ಮವಾಗಿ ಅವಲೋಕಿಸಿದರೆ ವಿಶ್ವಕೇಶವ ದಂಪತಿಯ ಛಲ, ದುಡಿಮೆಯ ಜೊತೆಗೆ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು, ಶಿರಾದ ಕೃಷಿಕರ ಗೇರು ಸಂಸ್ಕರಣೆ ಹಾಗೂ ಫಾರ್ಮ್ ಟಿವಿ ಮಾಧ್ಯಮದ ಬೆಳಕು ಇವೆಲ್ಲಾ ಅಂಶಗಳು ಇವರ ಯಶಸ್ಸಿಗೆ ಕಾರಣ.

ಕರಾವಳಿ/ಮಲೆನಾಡಿನ ಗೇರು ಕೃಷಿ ಆಸಕ್ತರಿಗೆ ದಾರಿದೀವಿಗೆಯಾಗುವ ಅನನ್ಯ ಕೆಲಸ ಇದು.

ವಿಶ್ವಕೇಶವ ಅವರ ಸಂಪರ್ಕ : 82813 48522 (ಅನುಕೂಲ ಸಮಯ:ಸಂಜೆ 7-9 ಘಂಟೆ)

ಲೇಖಕರು-ಮೋಹನ್ ತಲಕಾಲುಕೊಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ