ಕಾರವಾರ: ಕಾಳಿನದಿಯ ಎರಡೂ ದಂಡೆಗಳ ಪ್ರಮುಖ ಗ್ರಾಮಗಳಾಗಿರುವ ಉಳಗಾ ಮತ್ತು ಕೆರವಡಿ ಸಂಪರ್ಕಿಸಲು 2018ರಲ್ಲಿ ಆರಂಭಗೊಂಡ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರ ಬದಲಾದ ಬಳಿಕವಾದರೂ ಯೋಜನೆ ಪೂರ್ಣಗೊಳ್ಳಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.
2018ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸೇತುವೆಗೆ ಸುಮಾರು ₹25 ಕೋಟಿ ಅನುದಾನ ಬಿಡುಗಡೆಯಾಗಿತ್ತು. ವಿಧಾನಸಭೆ ಚುನಾವಣೆಗೆ ಮುನ್ನ ಕಾಮಗಾರಿಯೂ ಆರಂಭಗೊಂಡಿತ್ತು. 2020ರ ವರೆಗೂ ಆಮೆಗತಿಯಲ್ಲೇ ಮುಂದುವರೆದಿದ್ದ ಕಾಮಗಾರಿಯು ತದನಂತರ ಸ್ಥಗಿತಗೊಂಡಿದೆ.
ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆ.ಆರ್.ಡಿ.ಸಿ.ಎಲ್) ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಯೋಜನೆ ಆರಂಭವಾದಾಗಿನಿಂದ ಈವರೆಗೆ ಹಲವು ಗುತ್ತಿಗೆದಾರರು ಬದಲಾಗಿದ್ದಾರೆ ಎಂಬುದು ಸ್ಥಳೀಯರ ಆರೋಪ.
ಕೆಲವು ದಿನದ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳನ್ನು ತರಾಟೆಗೆ ಪಡೆದಿದ್ದ ಶಾಸಕ ಸತೀಶ ಸೈಲ್ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದರು. ಈವರೆಗೂ ಕೆಲಸ ಆರಂಭಿಸಿಲ್ಲ ಎಂಬುದು ಉಳಗಾ ಗ್ರಾಮಸ್ಥರ ದೂರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಯನ್ನು ಪೂರ್ಣಗೊಳಿಸಲು ತದನಂತರ ಬಂದ ಬಿಜೆಪಿ ಸರ್ಕಾರ ಪೂರ್ಣಗೊಳಿಸಲು ಆಸಕ್ತಿ ತೋರಿಸಿಲ್ಲ. ಈ ಕಾರಣಕ್ಕೆ ಜನೋಪಯೋಗಿ ಯೋಜನೆಯೊಂದು ಅರ್ಧಕ್ಕೆ ನಿಂತಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪ. ಕ್ಷೇತ್ರದ ಹಿಂದಿನ ಶಾಸಕರನ್ನು ಇದೇ ಸೇತುವೆ ವಿಚಾರದಲ್ಲಿ ಟೀಕಿಸುತ್ತಿದ್ದ ಹಾಲಿ ಶಾಸಕರು ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಕೆಲಸ ಆರಂಭಿಸುವಂತೆ ನೋಡಿಕೊಂಡಿಲ್ಲ ಎಂಬುದು ಬಿಜೆಪಿ ಕಾರ್ಯಕರ್ತರ ದೂರು.
‘ಸೇತುವೆ ಕಾಮಗಾರಿ ಮುಗಿಯಬಹುದು ಎಂದು ಕಾಯುತ್ತಲೇ ಐದು ವರ್ಷ ಕಳೆದಿದೆ. ಸೇತುವೆಯ ಮುಕ್ಕಾಲು ಭಾಗದಷ್ಟು ಕೆಲಸವೂ ಮುಗಿದಿದೆ. ಆದರೆ ಇನ್ನೂ ಸ್ವಲ್ಪ ಭಾಗ ಕೆಲಸ ಮುಗಿಸಲು ಸಾಧ್ಯವಾಗದಿರುವುದು ಆಡಳಿತ ವ್ಯವಸ್ಥೆಯ ದೌರ್ಬಲ್ಯ ಎತ್ತಿತೋರಿಸುತ್ತಿದೆ’ ಎಂದು ಉಳಗಾ ಗ್ರಾಮಸ್ಥ ಪ್ರಸಾದ್ ಹಾಗೂ ಇತರರು ಟೀಕಿಸುತ್ತಾರೆ.
‘ಸೇತುವೆ ಕಾಮಗಾರಿ ಪೂರ್ಣಗೊಂಡರೆ ಉಳಗಾ ಭಾಗದ ಜನರಿಗೆ ಮಲ್ಲಾಪುರ, ಕೈಗಾಕ್ಕೆ ತೆರಳಲು ಸುತ್ತುಬಳಸಿ ಸಾಗುವುದು ತಪ್ಪಲಿದೆ. ಕದ್ರಾ, ಜೊಯಿಡಾಕ್ಕೆ ತೆರಳಲು ಕೆರವಡಿ ಭಾಗದವರಿಗೆ ಹೆಚ್ಚು ಅನುಕೂಲವಾಗುತ್ತದೆ. ಸೇತುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ತುರ್ತು ಕ್ರಮವಾಗಬೇಕು’ ಎನ್ನುತ್ತಾರೆ ಘಾಡಸಾಯಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷೆ ಚಂದಾ ನಾಯ್ಕ.