ಯಾದಗಿರಿ: ದಿನನಿತ್ಯ ಜಿಲ್ಲೆಯ ಆರ್, ಟಿ.ಓ. ಕಚೇರಿ ಮುಂದೆಯೇ ಹಾದು ಹೋಗುತ್ತಿರುವ ನೋಂದಣಿ ಸಂಖ್ಯೆ ಇಲ್ಲದ ವಾಹನ ಮತ್ತು ಅನುಮತಿಗಿಂತಲೂ ಭಾರಿ ಪ್ರಮಾಣದಲ್ಲಿ ಓವರ್ ಲೋಡ್ ಮಾಡಿಕೊಂಡು ಸಾಗುವ ವಾಹನಗಳಿಗೆ ಕಡಿವಾಣ ಯಾವಾಗ ಅಧಿಕಾರಿಗಳು ಹಾಕುತ್ತಾರೆ ಎಂದು ಕೋಲಿ ಸಮಾಜದ ಕರ್ನಾಟಕ ಪ್ರದೇಶ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಅವರು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.
ಯಾದಗಿರಿ ಜಿಲ್ಲೆಯ ತಮ್ಮ ಆರ್, ಟಿ.ಓ. ಕಚೇರಿ ಎದುರಿಗೆ ದಿನನಿತ್ಯ ಹಗಲು ರಾತ್ರಿ ಎನ್ನದೇ ನೋಂದಣಿ ಸಂಖ್ಯೆ ಇಲ್ಲದ ಮತ್ತು ಅನುಮತಿಗಿಂತಲೂ ಭಾರಿ ಪ್ರಮಾಣದಲ್ಲಿ ಓವರ್ ಲೋಡ್ ಮಾಡಿಕೊಂಡು ಸಾಗುವ ವಾಹನಗಳು ಎಗ್ಗಿಲ್ಲದೇ ಸಾಗುತ್ತಿವೆ. ಆದರೆ ತಮ್ಮ ಇಲಾಖೆಯ ವತಿಯಿಂದ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇವುಗಳ ಹಾವಳಿಗೆ ಮಿತಿಯೇ ಇಲ್ಲವಾಗಿದೆ ಎಂದು ಆರೋಪಿಸಿದರು.
ನಿತ್ಯ ಲಾರಿಗಳಲ್ಲಿ ಓವರ್ ಲೋಡ್ ಹಾಕಿಕೊಂಡು ಹಗಲು ರಾತ್ರಿ ಓಡಿಸಲಾಗುತ್ತಿದೆ ಆದರೆ ಇದಕ್ಕೆ ಯಾವುದೇ ಕಡಿವಾಣ ಇಲ್ಲದಂತಾಗಿದೆ. ಇದರಿಂದ ತಮ್ಮ ಇಲಾಖೆ ಕೆಲಸ ಮಾಡುತ್ತಿದೆಯೇ ಇಲ್ಲವೇ ಎಂಬುವುದು ಅನುಮಾನ ಸಾರ್ವಜನಿಕರಿಗೆ ದಿನಾಲೂ ಕಾಡುತ್ತಿದೆ. ಸಣ್ಣ ಪುಟ್ಟ ರೈತರ ವಾಹನಗಳಿಗೆ ದಾರಿ ಮಧ್ಯ ಹಿಡಿಯುವ ನಿಮ್ಮ ಇಲಾಖೆ ಅಧಿಕಾರಿಗಳು ಇಂತಹ ಅಕ್ರಮ ತಡೆಯಲು ಮುಂದಾಗಬೇಕೆಂದು ಒತ್ತಾಯಿಸಿದರು.
ತಕ್ಷಣ ತಾವು ಎಚ್ಚೆತ್ತುಕೊಂಡು ಅಕ್ರಮವಾಗಿ ನೋಂದಣಿ ಸಂಖ್ಯೆ ಇಲ್ಲದೆ ಓಡಿಸುತ್ತಿರುವ ವಾಹನಗಳು, ಓವರ್ ಲೋಡ್ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಿ ಶಬ್ದ ಮಾಲಿನ್ಯ ತಡೆಯಬೇಕು. ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಬೇಕೆಂದು ಒತ್ತಾಯಿಸಿದರು.
ಕಡಿವಾಣ ಹಾಕದೆ ಇದ್ದಲ್ಲಿ ತಮ್ಮ ಕಚೇರಿ ಮುಂದಿರುವ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರವಿ, ಜಂಬಣ್ಣ, ಯಂಕಪ್ಪ, ತಾಯಪ್ಪ, ಮಲ್ಲಿಕಾರ್ಜುನ, ಪ್ರಭು ಕೊಡಲ್, ಮಲ್ಲು, ಪ್ರಕಾಶ, ಓಂ ಶಂಕರ್, ಶಿವು, ಭೀಮರಾಯ, ಯಲ್ಲಪ್ಪ, ಶರಣು,ಗೋವಿಂದ, ರಾಜು ಇದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ