ಕಲಬುರಗಿ:ಇದೇ ತಿಂಗಳು ಜುಲೈ 22 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರು ಚಲೋ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತಗೌಡ ಆರ್ ಮಾಲಿಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಕೃಷಿ ಹೊಂಡ, ಡ್ರಿಪ್, ಪೈಪ್ ಲೈನ್ ಮತ್ತು ರೈತರು ಉಪಯೋಗಿಸುವ ಕೃಷಿ ಸಲಕರಣೆಗಳ ಸಬ್ಸಿಡಿ ದರವನ್ನು ಪರಿಷ್ಕರಣೆ ಮಾಡಬೇಕು ರಾಜ್ಯ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಂಡು ರೈತರ ಬೆಳೆ ಸಾಲವನ್ನು ಸಂಪೂರ್ಣವಾಗಿ “ಮನ್ನಾ ಮಾಡಬೇಕು” ಬೆಂಗಳೂರಿನ ಶಾಪಿಂಗ್ ಜೆ.ಟಿ ಮಾಲ್‍ನಲ್ಲಿ ರೈತನಿಗೆ ಅವಮಾನಿಸಿದ್ದು, ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುವುದು.
ರೈತರ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ರೈತರ ಪಂಪ್ ಸೆಟ್ಟುಗಳಿಗೆ ಉಚಿತ ಪರಿಕರಗಳನ್ನು ವಿತರಿಸಬೇಕು ರಾಜ್ಯದ ಮೂರು ನೀರಾವರಿ ಯೋಜನೆಗಳಾದ ಮಹದಾಯಿ, ಬೆಣ್ಣೆ ಹಳ್ಳ, ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಹೋರಾಟ ಹಮ್ಮಿಕೊಳ್ಳಲಾಗಿದೆ.
ಕಲಬುರಗಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಜಿಲ್ಲೆಯ ರೈತರು ನಮ್ಮೊಂದಿಗೆ ಕೈಜೋಡಿಸಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಬೆಂಬಲಿಸಿ ಯಶಸ್ವಿಗೊಳಿಸುವಂತೆ ಮಾಲಿ ಪಾಟೀಲ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್