ಪಾವಗಡ:- ಮುಂದಿನ ಬಾರಿ ನಿಡಗಲ್ಲು ಉತ್ಸವವನ್ನು ಸರ್ಕಾರದಿಂದಲೇ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ತಾಲೂಕಿನ ನಿಡಗಲ್ ದುರ್ಗದಲ್ಲಿ ಹಮ್ಮಿಕೊಂಡಿದ್ದ 2024ನೇ ಸಾಲಿನ ನಿಡಗಲ್ಲು ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಬಾರಿ ವಾಲ್ಮೀಕಿ ಜಾಗೃತಿ ವೇದಿಕೆಗೆ 5 ಲಕ್ಷ ಅನುದಾನವನ್ನು ನೀಡುವುದರ ಜೊತೆಗೆ 2025 ನೇ ಸಾಲಿನಿಂದ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಆಚರಿಸುವಂತಹ ಉತ್ಸವವನ್ನು ಸರ್ಕಾರದಿಂದಲೇ ಹಂಪಿ ಉತ್ಸವದ ಮಾದರಿಯಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಚ್ ವಿ ವೆಂಕಟೇಶ್ ಈ ಹಿಂದೆ ನಮ್ಮ ತಂದೆಯವರು ಶಾಸಕರಾದಂತಹ ಸಂದರ್ಭದಲ್ಲಿ ನಿಡಗಲ್ಲು ದುರ್ಗದ ಅಭಿವೃದ್ಧಿಗೆ ಶ್ರಮಿಸಿದ್ದು ಅನೇಕ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಹ ಕೈಗೊಂಡಿದ್ದರು ಮುಂದಿನ ದಿನಗಳಲ್ಲಿ ನಾನೂ ಸಹ ನೀಡಲು ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರವನ್ನು ಮಾಡಲು ಬದ್ಧನಾಗುತ್ತೇನೆ ವಾಲ್ಮೀಕಿ ಜಾಗೃತಿ ವೇದಿಕೆಗೆ 10 ಲಕ್ಷ ಅನುದಾನವನ್ನು ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ಮಾತನಾಡಿ ಈ ಹಿಂದೆ ನಾನು ಎರಡು ಬಾರಿ ಶಾಸಕನಾದಂತಹ ವೇಳೆ ನಿಡಗಲ್ಲು ದುರ್ಗದಲ್ಲಿನ ಅನೇಕ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿ ಅಭಿವೃದ್ಧಿಪಡಿಸಿದ್ದೆ ಅದೇ ರೀತಿ ನಿಡಗಲ್ಲಿನ ವೀರ ಪರಂಪರೆಯನ್ನು ಉಳಿಸಲು ಜನರೆಲ್ಲರೂ ಒಟ್ಟಾಗಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಪ್ರದರ್ಶಿಸಿದವು, ರಾಮತೀರ್ಥ ಬಳಿ ಜನರು ನಾಗ ಹಾಗೂ ಗಂಗಾ ಪೂಜೆಗಳನ್ನು ನೆರವೇರಿಸಿ ತಮ್ಮ ಹಾರೈಕೆಗಳನ್ನು ತೀರಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಪಿ ಎಚ್ ರಾಜೇಶ್, ತಾಲೂಕು ಪಂಚಾಯಿತಿ ಇ ಓ ಜಾನಕಿ ರಾಮ್ ತಾಲೂಕು ವಾಲ್ಮೀಕಿ ಜಾಗೃತಿ ವೇದಿಕೆಯ ಅಧ್ಯಕ್ಷ ಪಾಳೇಗಾರ ಲೋಕೇಶ್ ಸೇರಿದಂತೆ ಅನೇಕ ನಾಯಕರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ:ಮಾರುತಿ ಮುರಳಿ