ಅಧ್ಯಕ್ಷರಾಗಿ ಹೀನಾಕೌಸರ್ ಉಪಾಧ್ಯಕ್ಷರಾಗಿ ರಾಜಾ ಪಿಡ್ಡನಾಯಕ ಆಯ್ಕೆ
ಯಾದಗಿರಿ ಜಿಲ್ಲೆಯ ಸುರಪುರ ನಗರಸಭೆಯ ಎರಡನೇಯ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೀನಾ ಕೌಸರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಾಜಾಪಿಡ್ಡನಾಯಕ(ತಾತಾ)ಅವರು 17 ಮತಗಳು ಪಡೆದರೆ ವಿಷ್ಣು ಗುತ್ತೇದಾರ್ ಅವರು 12 ಮತಗಳು ಪಡೆದರು.
ರಾಜಾ ಪಿಡ್ಡನಾಯಕರು 5 ಮತಗಳ ಅಂತರದಿಂದ ಜಯಶಾಲಿಯಾದರು ಎಂದು ಚುನಾವಣಾಧಿಕಾರಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ ಅವರು ತಿಳಿಸಿದರು.
ಸುರಪುರ ನಗರಸಭೆಯಲ್ಲಿ ಒಟ್ಟು 31 ಜನ ನಗರಸಭೆ ಸದಸ್ಯರು ಹಾಗೂ ಸಂಸದ, ಶಾಸಕರು ಸೇರಿ ಒಟ್ಟು 33ರ ಪೈಕಿ ಅದರಲ್ಲಿ ಬಿಜೆಪಿಯ ನಾಲ್ಕು ಜನ ಸದಸ್ಯರು ಗೈರಾಗಿದ್ದರು.
ಒಟ್ಟು 27 ಜನ ಸದಸ್ಯರು ಹಾಗೂ ಸಂಸದ, ಶಾಸಕರು ಸೇರಿ 29 ಜನರು ಚುನಾವಣೆಯಲ್ಲಿ ಭಾಗಿಯಾಗಿದ್ದರು.
ಅಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ) ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲು ನಿಗದಿಯಾಗಿತ್ತು.ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸುರಪುರದ ವಾರ್ಡ್ ನಂ.12 ಖುರೇಷಿ ಮೊಹಲ್ಲಾಹದ ಹೀನಾಕೌಸರ್ ಶಕೀಲ್ ಅಹಮದ್ ಅವರು ನಾಮಪತ್ರ ಸಲ್ಲಿಸಿದ್ದರು.ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.5 ಉಪ್ಪಾರ ಮೊಹಲ್ಲಾದ ರಾಜಾ ಪಿಡ್ಡನಾಯಕ ರಾಜಾ ಲಚಮಪ್ಪ ನಾಯಕ, ಬಿಜೆಪಿಯಿಂದ ವಾರ್ಡ್ ನಂ.16 ಬೋವಿಗಲ್ಲಿಯ ವಿಷ್ಣು ಸೋಮಣ್ಣ ಗುತ್ತೇದಾರ್ ಅವರು ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಹೀನಾ ಕೌಸರ್ ಶಕೀಲ್ ಅಹಮದ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಕಾರ್ಯ ನಿರ್ವಹಿಸಿದರು.
ತಹಸೀಲ್ದಾರ್ ಹುಸೇನ್ ಸಾಬ್ ಸರಕಾವಸ್, ಪೌರಾಯುಕ್ತ ಜೀವನ ಕಟ್ಟಿಮನಿ ಉಪಸ್ಥಿತರಿದ್ದರು.
ಮೊದಲ ಅವಧಿಯಲ್ಲಿ ಸ್ಪಷ್ಟ ಬಹುಮತ ಹೊಂದಿದ ಬಿಜೆಪಿ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನ ಪಡೆದು ಸಂಪೂರ್ಣ ಅವಧಿ ಪೂರ್ಣಗೊಳಿಸಿದ್ದರು.ಎರಡನೆಯ ಅವಧಿಗೆ ನಡೆದ ಅಧ್ಯಕ್ಷೆ ಸ್ಥಾನ ಬಿಸಿಎ ಮಹಿಳೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು.ಬಿಸಿಎ ಮಹಿಳೆ ಇಲ್ಲದಿರುವುದರಿಂದ ನಾಮಪತ್ರ ಸಲ್ಲಿಸಿದ ಕಾರಣ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆಯಾಯಿತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 15 ಜನ ಸದಸ್ಯರು ಹಾಗೂ ರಾಯಚೂರು ಸಂಸದ ಜಿ.ರಾಜಾ ಕುಮಾರ ನಾಯಕ, ಶಾಸಕ ರಾಜಾ ವೇಣುಗೋಪಾಲ್ ನಾಯಕ ಅವರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು.ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಯಾಗುವ ಮೂಲಕ ನಗರಸಭೆ ಕಾಂಗ್ರೆಸ್ ಮಡಿಲಿಗೆ ಬಂದಿದೆ.
ನಗರಸಭೆ ಸದಸ್ಯರಾದ ರಾಜಾ ವೇಣು ಮಾಧವ ನಾಯಕ, ಮಹೇಶ್ ಪಾಟೀಲ್, ನರಸಿಂಹ ಪಂಚಮಗಿರಿ, ಸುಜಾತ ಜೇವರ್ಗಿ,ಉತ್ತಮ ಅಕ್ಕಿ,ಮಲ್ಲೇಶಿ,ಮಾನಪ್ಪ ಚಳ್ಳಿಗಿಡ ,ಜುಮ್ಮಣ್ಣ ಕೆಂಗೂರಿ, ನಾಸೀರ್ ಕುಂಡಾಲೆ,ಖಮುರಲ್ ನಾರಾಯಣಪೇಠ್, ಅಹ್ಮದ್ ಶರೀಪ್, ಮೆಹಬೂಬ್,ಚೆನ್ನಮ್ಮ ಮಡಿವಾಳ,ಸುವರ್ಣ ಎಲಿಗಾರ,ಲಕ್ಷ್ಮೀ ಬಿಲ್ಲವ, ಪಾರ್ವತಿ ಹಾದಿಮನಿ, ಸಿದ್ದಲಿಂಗಮ್ಮ ಹಸನಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.