ವಿಜಯಪುರ: ಪತ್ರಕರ್ತರು ಕೇವಲ ಸಮಸ್ಯೆಗಳನ್ನೇ ವರದಿ ಮಾಡಬಾರದು, ಅದಕ್ಕೆ ಪರಿಹಾರಗಳನ್ನು ಹುಡುಕುವುದೂ ಅವರ ಜವಾಬ್ದಾರಿಯಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಸಪ್ನಾ.ಎಸ್.ಎಂ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಯುನಿಸೆಫ್ ಪ್ರಾಯೋಜಕತ್ವ ಮತ್ತು ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಆರೋಗ್ಯ ಎಂಬ ವಿಷಯದ ಕುರಿತ ಮಾಧ್ಯಮ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಮತ್ತು ಸಕಾರಾತ್ಮಕ ವಿಷಯಗಳ ಬಗ್ಗೆ ಹೆಚ್ಚಿನ ಸುದ್ಧಿಗಳನ್ನು ಮಾಡಬೇಕು. ಸಮಾಜದಲ್ಲಿ ಬದಲಾವಣೆ ತರುವ ಅಭಿಯಾನಗಳ ಮೂಲಕ ವರದಿ ಮಾಡಬೇಕು. ವಿಶೇಷವಾಗಿ, ಪತ್ರಕರ್ತರು ಮಕ್ಕಳ ಧ್ವನಿಯಾಗಿ, ಅವರ ಸಮಸ್ಯೆಗಳನ್ನು, ಅಭಿರುಚಿಗಳನ್ನು, ಮತ್ತು ಸಾಧನೆಗಳನ್ನು ಜನರ ಮುಂದೆ ತರುವುದರಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಈ ರೀತಿಯ ಕಾರ್ಯಾಗಾರಗಳು ಪತ್ರಕರ್ತರ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಭವಿಷ್ಯದಲ್ಲಿ ಮಕ್ಕಳ ಹಕ್ಕುಗಳು, ಶಿಕ್ಷಣ, ಮತ್ತು ಆರೋಗ್ಯ ಸೇರಿದಂತೆ ಅನೇಕರೂ ಪ್ರಮುಖ ವಿಷಯಗಳ ಬಗ್ಗೆ ಇನ್ನಷ್ಟು ವರದಿಗಳನ್ನು ರಚಿಸಲು ಪ್ರೇರಣೆ ನೀಡುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ಇತ್ತೀಚಿಗೆ ಅಭಿವೃದ್ಧಿ ವರದಿಗಾರಿಕೆಗೆ ಗಮನ ಕೊಡುವ ಪ್ರಮಾಣವು ಕಡಿಮೆಯಾಗಿದೆ. ಆದರೆ, ಅಭಿವೃದ್ಧಿ ಪತ್ರಿಕೋದ್ಯಮವೇ ನಿಜವಾದ ಪ್ರಗತಿ ಮತ್ತು ಯಶಸ್ಸು ತಂದುಕೊಡುವ ಮಾರ್ಗವಾಗಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕೆ, ಪತ್ರಕರ್ತರು ನಿಸ್ಸಂದೇಹವಾಗಿ ಸಮಾಜದ ಒಳಿತಿಗಾಗಿ ಬದ್ಧರಾಗಿರಬೇಕು. ಈ ಕಾರ್ಯಾಗಾರದಲ್ಲಿ ತಜ್ಞರು ಮಂಡಿಸಿದ ಮಾಹಿತಿ, ಅವರ ಮಾರ್ಗದರ್ಶನ, ಮತ್ತು ಉಲ್ಲೇಖಗಳನ್ನು ನಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಕಾರ್ಯಾಗಾರವು ಸಾರ್ಥಕವಾಗಲು ಸಾಧ್ಯ ಎಂದರು.
ಪತ್ರಕರ್ತರು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ಹಾಗೂ ಅವುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹೆಚ್ಚು ಆಳವಾದ, ಸಮಗ್ರ ವರದಿಗಳನ್ನು ಮಾಡಬೇಕು. ಇದರಿಂದಾಗಿ ಸಮಾಜದಲ್ಲಿ ಮಕ್ಕಳ ಅಭಿವೃದ್ದಿಗೆ ಮತ್ತು ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಪ್ರೋತ್ಸಾಹ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಯುನಿಸೆಫ್‍ನ ಪ್ರಸೂನ್ ಸೇನ್ ಮಾತನಾಡಿದರು. ಸಮಾರಂಭದಲ್ಲಿ ಪತ್ರಕರ್ತರಾದ ಡಿ.ಬಿ.ವಡವಡಗಿ, ಬಸವರಾಜ ಉಳ್ಳಾಗಡ್ಡಿ ಮತ್ತು ಜಗದೀಶ ಹದ್ಲಿ ಅನಿಸಿಕೆಗಳನ್ನು ಹಂಚಿಕೊಂಡರು. ಸಮಾರಂಭದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ತಮೀನಾ ಕೋಲಾರ, ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಗಳಿಂದ ಆಯ್ದ ಮೂವತ್ತಕ್ಕೂ ಅಧಿಕ ಪತ್ರಕರ್ತರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಸಂದೀಪ್ ನಾಯಕ್ ನಿರೂಪಿಸಿ, ವಂದಿಸಿದರು.