ಕಲ್ಯಾಣ ಕರ್ನಾಟಕ ಕಲ್ಯಾಣೋತ್ಸವ:
ಅಖಂಡ ಭಾರತಕ್ಕೆ ವಿಲೀನವಾದ ಹೈದರಾಬಾದ್ ಸಂಸ್ಥಾನ
ಭಾರತ, ಆ ಹೆಸರೇ ಅತ್ಯಂತ ಅದ್ಭುತ, ಮೈನವಿರೇಳಿಸುವ ಆ ಶಬ್ದದ ಝೇಂಕಾರದಲ್ಲಿ ಅನನ್ಯವಾದ ಸಾಂಸ್ಕೃತಿಕ ಮೌಲ್ಯಗಳು, ಕ್ಷಾತ್ರ ತೇಜಸ್ಸಿನ ರೋಮಾಂಚಕಾರಿ ಘಟನೆಗಳು ಸಾಲು ಸಾಲಾಗಿವೆ. ಭಾರತದ ಸಮಗ್ರ ಇತಿಹಾಸವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಇದರ ಕುರುಹುಗಳು ನಮಗೆ ಪ್ರತಿ ಕ್ಷಣಕ್ಕೂ ದೊರೆಯುತ್ತವೆ. ಸಹಸ್ರಾರು ವರ್ಷಗಳ ಈ ಗಾಥೆಯಲ್ಲಿ ಭಾರತ ಭೌಗೋಳಿಕವಾಗಿ ಸಾಂಸ್ಕೃತಿಕವಾಗಿ ತನ್ನ ಅಖಂಡತೆಯನ್ನು ಕಾಪಾಡಿಕೊಂಡು ಬಂದಿದೆ. ಸಾವಿರಾರು ರಾಜವಂಶಗಳು ಈ ರಾಷ್ಟ್ರವನ್ನು ಆಳಿದರೂ ಸಹ ಅವು ಭೌಗೋಳಿಕ ಚೌಕಟ್ಟುಗಳನ್ನು ಮಾತ್ರ ನಿರ್ಮಿಸಿಕೊಂಡಿದ್ದವೇ ಹೊರತು ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಿನ್ನತೆಗಳಲ್ಲ. ಈ ಮಣ್ಣಿನ ಮೇಲೆ ನಿರಂತರವಾಗಿ ಪರಕೀಯರ ದಾಳಿಗಳು ನಡೆದರೂ ಸಹ ಇಲ್ಲಿಯ ಜನಕ್ಕೆ ಇದು ಭರತವರ್ಷ, ಭರತಖಂಡ, ಭಾರತ ಇದು ನಮ್ಮ ಅಖಂಡವಾದ ರಾಷ್ಟ್ರ ಎಂಬ ಅದಮ್ಯ ವಿಶ್ವಾಸ ಮಾತ್ರ ಮಾಸಲಿಲ್ಲ.
ಇಡೀ ದೇಶ ಸ್ವಾತಂತ್ರ್ಯದ ಸಂತೋಷವನ್ನು ಆಚರಿಸುತ್ತಿದೆ. ಎಲ್ಲೆಡೆ ಸಂಭ್ರಮ, ಸಡಗರ, ಹರ್ಷೋಲ್ಲಾಸ, ಆದರೆ ಒಂದೆರಡು ಭೌಗೋಳಿಕ ಪ್ರದೇಶಗಳು ಈ ಸಂತೋಷದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಾದರೆ ಎಂತಹ ನೋವು ಅಂತಹ ನತದೃಷ್ಟ ಪ್ರದೇಶಗಳು ಕಾಶ್ಮೀರ, ಜುನಾಗಡ ಹಾಗೂ ಹೈದರಾಬಾದ್. 15 ಆಗಸ್ಟ್, 1947 ರಂದು ದೇಶ ಸ್ವತಂತ್ರ್ಯಗೊಂಡಾಗ ಈ ಮೂರು ಸಂಸ್ಥಾನಗಳು ಸ್ವತಂತ್ರ್ಯ ಭಾರತದ ಒಕ್ಕೂಟದಲ್ಲಿ ಸೇರಿರಲಿಲ್ಲ, ಕಾಶ್ಮೀರದ ಸಮಸ್ಯೆ ಎಲ್ಲರಿಗೂ ತಿಳಿದಿರುವ ವಿಷಯ, ಇನ್ನು ಜುನಾಗಡ 9 ನವೆಂಬರ್ 1947 ರಲ್ಲಿಯೇ ಭಾರತದಲ್ಲಿ ಒಂದಾಯಿತು ಆದರೆ ಹೈದರಾಬಾದ್ ಮಾತ್ರ ಇದಕ್ಕೆ ಅಪವಾದವಾಯಿತು.
ಹೈದರಾಬಾದ್ ರಾಜ್ಯದಲ್ಲಿ ನಿಜಾಮ್‍ನ ಆಡಳಿತವಿತ್ತು. ನಿಜಾಮ್ ಮುಲ್ ಮುಲ್ಕ್ ಆಸಿಫ್ ಜಹಾಂ ಎಂಬುವವನು ಹೈದರಾಬಾದ್ ಸಂಸ್ಥಾನದ ಸ್ಥಾಪಕ. ಮೊಗಲ್ ದೊರೆ ಔರಂಗಜೇಬನ ಮರಣಾನಂತರ ಬಂದ ಫರೂಕ್ ಷಯರ್, ನಿಜಾಮ್ ಮುಲ್ ಮುಲ್ಕ್ ನನ್ನು ಮೊಗಲರ ನಿಯಂತ್ರಣದಿಂದ ಸ್ವತಂತ್ರ್ಯವಾಗಿ ತನ್ನನ್ನು ಸ್ವತಂತ್ರ ಅರಸನೆಂದು ಘೋಷಿಸಿದ. ನಿಜಾಮ್ ಮುಲ್ ಮುಲ್ಕ್‍ನ ತರುವಾಯ ಬಂದ ನಿಜಾಮರೆಲ್ಲ ಮೊಗಲ್ ದೊರೆಗಳಿಗೆ ನಾಮ ಮಾತ್ರ ಮಾಂಡಲೀಕರಾಗಿದ್ದರು ನಂತರ ಸಂಪೂರ್ಣವಾಗಿ ಬ್ರಿಟೀಷರ ಆಧೀನದಲ್ಲಿ ಬಂದು ಅವರ ಆದೇಶದಂತೆ ರಾಜ್ಯಭಾರ ಮಾಡಿದರು. 1724 ರಿಂದ 1948 ರ ವರೆಗೆ ಹೈದರಾಬಾದ್ ಸಂಸ್ಥಾನವನ್ನು 7 ಜನ ನಿಜಾಮರು ಆಳಿದರು. ಕೊನೆಯ ನಿಜಾಮನೇ 7ನೇ ನಿಜಾಮ್ ಉಸ್ಮಾನ್ ಅಲೀಖಾನ್. ಇವನು ಹೈದರಾಬಾದ್ ರಾಜ್ಯವು ಸ್ವತಂತ್ರ ಭಾರತದ ಅವಿಭಾಜ್ಯ ಅಂಗವಾಗಲು ಒಪ್ಪಲಿಲ್ಲ.
ಭಾರತದ ಒಕ್ಕೂಟಕ್ಕೆ ಸೇರುವುದು, ಬ್ರಿಟೀಷ್ ಆಧಿಪತ್ಯದಲ್ಲಿರುವುದಕ್ಕಿಂತಲೂ ಕೆಟ್ಟದ್ದು ಎಂದು ನಿಜಾಮ ನಂಬಿದ್ದ. ಭಾರತ ಸ್ವತಂತ್ರ್ಯವಾದ ಕೂಡಲೇ ನಿಜಾಮನು ತನ್ನನ್ನು ಒಬ್ಬ ಸಾರ್ವಭೌಮ ಸುಲ್ತಾನನೆಂದು ಘೋಷಿಸಿಕೊಂಡು, ಒಕ್ಕೂಟದ ಸರ್ಕಾರವು ತನ್ನ ಸ್ವಾತಂತ್ರ್ಯವನ್ನು ಮನ್ನಿಸಬೇಕೆಂದು ತಿಳಿಸಿದ. ಒಂದು ಸ್ವತಂತ್ರ್ಯ ರಾಜ್ಯವು ಇನ್ನೊಂದು ಸ್ವತಂತ್ರ್ಯ ರಾಜ್ಯದೊಂದಿಗೆ ಹೇಗೆ ವ್ಯವಹರಿಸಬೇಕೆಂದು ಅದೇ ರೀತಿಯಾಗಿ ಭಾರತ ಸರ್ಕಾರ ತನ್ನೊಂದಿಗೆ ವರ್ತಿಸಬೇಕೆಂದು ನಿಜಾಮನು ಹೇಳತೊಡಗಿದ ಮೇಲೆ ದೊಡ್ಡ ಗೊಂದಲವುಂಟಾಯಿತು. ಆದರೆ ಅಂದಿನ ಭಾರತದ ಪ್ರಥಮ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲರು ಜನಾಭಿಪ್ರಾಯ ಪಡೆದು ಹೈದರಾಬಾದ್ ಭಾರತದ ಒಕ್ಕೂಟದಲ್ಲಿಯೇ ಸೇರಬೇಕೆಂದು ಸೂಚಿಸಿದ ವಿಷಯ ನಿಜಾಮನಿಗೆ ಹಿಡಿಸಲಿಲ್ಲ.
1942 ರ ಜನಗಣತಿಯ ಪ್ರಕಾರ ಹೈದ್ರಾಬಾದ್ ರಾಜ್ಯದ ಜನಸಂಖ್ಯೆ ಸುಮಾರು 1 ಕೋಟಿ 63 ಲಕ್ಷದಷ್ಟಿತ್ತು. ಹೈದರಾಬಾದ್ ರಾಜ್ಯದ ವಿಸ್ತೀರ್ಣ 82,313 ಚದರ ಮೈಲುಗಳಷ್ಟಿತ್ತು, ಹೈದರಾಬಾದ್ ರಾಜ್ಯದಲ್ಲಿ ಮೂರು ಭಾಷೆಯ ಪ್ರದೇಶಗಳಿದ್ದವು. ತೆಲುಗು, ಕನ್ನಡ ಹಾಗೂ ಮರಾಠಿ, ಅಂದರೆ ಈಗಿನ ತೆಲಂಗಾಣ, ಕರ್ನಾಟಕ ರಾಜ್ಯದ ಹೈದರಾಬಾದ್ ಕರ್ನಾಟಕ ಪ್ರದೇಶ ಹಾಗೂ ಮಹಾರಾಷ್ಟ್ರದ ಮರಾಠ್‍ವಾಡಾ, ಒಟ್ಟು 16 ಜಿಲ್ಲೆಗಳು. ಈ ಪ್ರದೇಶಗಳಲ್ಲಿ ಅಂದು ಶೇ 86% ರಷ್ಟು ಹಿಂದುಗಳಿದ್ದರು ಎಂಬುದು ದಾಖಲೆಗಳಿಂದ ಕಂಡುಬರುತ್ತದೆ. ಅಲ್ಲಿನ ಜನ ನಿಜಾಮನ ದಮನಕಾರಿ, ಮತಾಂಧ ಆಡಳಿತದಿಂದ ತತ್ತರಿಸಿದ್ದರು. ರಾಜ್ಯದಲ್ಲಿ ಎಲ್ಲ ಉನ್ನತ ಹುದ್ದೆಗಳು ಮುಸ್ಲಿಮರಿಗಾಗಿ ಮೀಸಲಿದ್ದವು. ಉರ್ದು ಕಲಿಯುವುದು ಕಡ್ಡಾಯವಾಗಿತ್ತು. ಬಹುಸಂಖ್ಯಾತರಾಗಿದ್ದ ತೆಲುಗು, ಕನ್ನಡ, ಮರಾಠಿ ಭಾಷಿಗರು ಕಡೆಗಣಿಸಲ್ಪಟ್ಟಿದ್ದರು. ಸನಾತನ ಧರ್ಮ,
ಸಾಂಸ್ಕೃತಿಕ, ಕಲೆ, ಸಾಹಿತ್ಯ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದವು. ಬಲವಂತದ ಮತಾಂತರ, ಸ್ತ್ರೀಯರ ಮೇಲೆ ಅತ್ಯಾಚಾರ, ದೇವಸ್ಥಾನಗಳನ್ನು ನೆಲಸಮ ಮಾಡುವುದು ಹೀಗೆ ಅತ್ಯಂತ ಕ್ರೂರ ಹಾಗೂ ಹ್ಯೇಯ ಪರಿಸ್ಥಿತಿ ಹೈದರಾಬಾದ್ ರಾಜ್ಯದಲ್ಲಿತ್ತು.
ಈ ಭಾಗದಲ್ಲಿ ರಜಾಕರ ವಿರುದ್ಧ ಹೋರಾಟವು ನಿರಂತರವಾಗಿ ಸಾಗಿತ್ತು. ಹೈದರಾಬಾದ್ ಸ್ವತಂತ್ರ್ಯ ಸಂಗ್ರಾಮದಲ್ಲಿ ರೈತರು ಸ್ವತಂತ್ರ ಹೋರಾಟಗಾರರ ಪಾತ್ರ ಮಹಾ ಬಹುಮುಖ್ಯವಾಗಿತ್ತು. ಸ್ವಾಮಿ ರಮಾನಂದ ತೀರ್ಥರು ಈ ಹೋರಾಟದ ಮುಂಚೂಣಿಯಲ್ಲಿದ್ದರು.
ಹೋರಾಟಗಾರು ನಿರ್ಭೀತರಾಗಿದ್ದು ರಜಾಕರ ವಿರುದ್ಧ ನಿರಂತರ ಹೋರಾಟ ನಡೆಸಿದರು. ದೇಶಪ್ರೇಮದ ಭಾಷಣಗಳನ್ನು ಮಾಡುತ್ತಿದ್ದರು. ಅನೇಕರು ಪ್ರವಾಸ ಮಾಡಿ ಜನರನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದರು. ಅನೇಕ ಕ್ಯಾಂಪ್‍ಗಳನ್ನು ಸ್ಥಾಪಿಸಿ ಹೋರಾಟ ನಡೆಸುತ್ತಿದ್ದರು. ಗುಪ್ತಚರದಳದ ಸಹಾಯದಿಂದ ಸಂದೇಶಗಳನ್ನು ರವಾನಿಸುತ್ತಿದ್ದರು. ರಜಾಕರ ಕಣ್ಣುತಪ್ಪಿಸಿ ರಾಷ್ಟ್ರೀಯ ಶಾಲೆಗಳನ್ನು ನಡೆಸುತ್ತಿದ್ದರು. ರಾಷ್ಟ್ರಪ್ರೇಮದ ಕುರಿತ ಲೇಖನಗಳನ್ನು ಬರೆಯುತ್ತಿದ್ದರು. ಹೀಗೆ ನಿಜಾಮನ, ರಜಾಕರ ವಿರುದ್ಧ ಹೋರಾಟ ಸಾಗಿತ್ತು.
ಮುಂಚೂಣಿ ನಾಯಕರ ಹೋರಾಟದ ಜೊತೆ ಸಂಘಟನೆ, ದೂರದೃಷ್ಟಿ ಮತ್ತು ಚತುರ ಯೋಜನೆಗಳು ನಮ್ಮ ಸಂಘಟಿತ ಶಕ್ತಿಯನ್ನು ಸರ್ದಾರ್ ಪಟೇಲರಿಗೆ ತಲುಪಿಸುವಲ್ಲಿ ಯಶಸ್ವಿಯಾದವು. ನಾವು ನೆನಪಿಡಲೇಬೇಕಾದ, ಅಭಿನಂದನೀಯ ವೀರರೆಂದರೆ ಕುಟುಂಬದ ನಾರಿಯರು! ಮನೆಯಿಂದ ಮನೆಗೆ, ಹಳ್ಳಿಯಿಂದ ಹಳ್ಳಿಗೆ ವಿಶಿಷ್ಟ ರೀತಿಯ ಗೌಪ್ಯ ಸಂಕೇತದ ರೂಪದಲ್ಲಿ ಸಮ್ಮತಿಯ ಕುರುಹಗಳಂತೆ ಚಪಾತಿಗಳ ಮತ್ತು ಕಮಲದ ಹೂವುಗಳ ವರ್ಗಾವಣೆ ಮತ್ತು ರವಾನೆ ಮರೆಯುವಂತಿಲ್ಲ. ಹೀಗಾಗಿ ಹೈದ್ರಾಬಾದ್ ವಿಮೋಚನೆಯ ಕೀರ್ತಿ ಪುರುಷರಷ್ಟೇ ನಮ್ಮ ಭಾಗದ ಗೃಹಿಣಿಯರಿಗೂ ಸಲ್ಲುತ್ತದೆ.
ಬೀದರ್ ಜಿಲ್ಲೆಯ ಶರಣರು ಹಾಗೂ ರಾಯಚೂರು ಜಿಲ್ಲೆಯ ರೈತ ಮಹಿಳೆಯರು ವಿಶೇಷವಾಗಿ ನಿಜಾಮನ ಕೊನೆಯ ಅವಧಿಯಲ್ಲಿ ತಮ್ಮ ತಮ್ಮ ಪೂಜಾ ಕೇಂದ್ರಗಳಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳನ್ನು ತಡೆಯುವಲ್ಲಿ ಭಜನೆ ಮತ್ತು ಹರಿಕಥೆಗಳನ್ನು ಸಂಯೋಜಿಸಿದರು. ಈ ಮೂಲಕ ಧರ್ಮ ಜಾಗೃತಿಯ ಮುಖಾಂತರ ಹೈದ್ರಾಬಾದ್ ಕರ್ನಾಟಕ ವಿಮೋಚನೆಗೆ ಸಾಂಸ್ಕೃತಿಕ ಬೆಂಬಲ ನೀಡಿದರು.
ನಮ್ಮ ಭಾಗದ ನಾಯಕರ ಹೋರಾಟದ ಜೊತೆಗೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲರ ದೂರದೃಷ್ಟಿ ಹಾಗೂ ದಿಟ್ಟ ಹೆಜ್ಜೆಯಿಂದ ಸೆಪ್ಟೆಂಬರ್ 13, 1948 ರಂದು ಭಾರತೀಯ ಸೇನೆಯು ಹೈದರಾಬಾದಿನ ಮೇಲೆ ದಾಳಿ ಮಾಡಿತು. ಭಾರತದ ಸೈನ್ಯ ಹೈದರಾಬಾದನ್ನು ಪ್ರವೇಶಿಸಿದ ಕೂಡಲೇ ರಾಜಾಕಾರರು ದಿಕ್ಕುಪಾಲಾಗಿ ಓಡಿಹೋದರು. ಭಾರತದ ಸೈನ್ಯ ನಿಜಾಮನ ಎಲ್ಲಾ ಸೈನ್ಯಾಧಿಕಾರಿಗಳನ್ನು ಬಂಧಿಸಿತು. ಒಟ್ಟು 108 ಗಂಟೆಗಳಲ್ಲಿ “Operation Polo” ಎಂಬ ಸೈನಿಕ ಕಾರ್ಯಾಚರಣೆಯು ಮುಗಿದುಹೋಗಿತ್ತು. ಕೊನೆಗೂ ಮತಾಂಧ ನಿಜಾಮನ ಹೈದರಾಬಾದ್ ಸಂಸ್ಥಾನ 17, ಸೆಪ್ಟೆಂಬರ್ 1948ರಂದು ಭಾರತದ ಒಕ್ಕೂಟದಲ್ಲಿ ವಿಲೀನವಾಯಿತು. ನಿಜಾಮನು ಕೇಂದ್ರ ಒಕ್ಕೂಟಕ್ಕೆ ಸೇರುವುದಾಗಿ ಸೆಪ್ಟೆಂಬರ್ 17ರಂದು ಆಕಾಶವಾಣಿಯಲ್ಲಿ ಘೋಷಿಸಿದ. ಭಾರತ ಸರಕಾರದ ಅಧಿಕೃತ ಅಧಿಕಾರಿಯಾಗಿ ನಿಯುಕ್ತಗೊಂಡು 225 ವರ್ಷಗಳ ಕಾಲ ಅಂಧಕೂಪದಲ್ಲಿದ್ದ ಹೈದರಾಬಾದಿನ ಜನ ಅಂದು ಹೊಸ ಬೆಳಕಿನ ಹೊಸ ಪರ್ವದಲ್ಲಿ ಪ್ರವೇಶ ಮಾಡಿದುದು ಇತಿಹಾಸದ ಒಂದು ಮಹತ್ವಪೂರ್ಣ ಘಟನೆ.
ಹೈದ್ರಾಬಾದ್ ರಾಜ್ಯದ ಮುಕ್ತಿಯ ಸಂಘರ್ಷ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಸುಮಾರು 13 ತಿಂಗಳು ಕಾಲ ಜರುಗಿದ ಸಂಧಾನ, ಮಾತುಕತೆ ವಿಫಲವಾದಾಗ ಕೊನೆಗೆ ಸೈನ್ಯದ ಸಹಾಯದಿಂದ ದಾಳಿಮಾಡಿ ನಿಜಾಮ್‍ನನ್ನು ಮಣಿಸಿ ಹೈದ್ರಾಬಾದ್ ಸಂಸ್ಥಾನವನ್ನು ಭಾರತದ ಸಂಯುಕ್ತ ಗಣರಾಜ್ಯದಲ್ಲಿ ಸೇರಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಪ್ರಾಣ ತೆತ್ತವರು ಅದೆಷ್ಟೋ! ರಾಷ್ಟ್ರಮಟ್ಟದಲ್ಲಿ ಸರ್ದಾರ್ ಪಟೇಲ್ ಮೂರೂ ರಾಜ್ಯಗಳಿಗೆ ಸಂಬಂಧಿಸಿದ ಅನೇಕ ಸಂಘಟನೆಗಳು, ಹೋರಾಟಗಾರರ ಸಂಘಟಿತ ಪ್ರಯತ್ನವೂ ಇದೆ.
ಭಾರತಕ್ಕೆ ಸ್ವಾತಂತ್ರ್ಯ ಸುಮ್ಮನೇ ಕಟ್ಟೆಯ ಮೇಲೆ ಕೂತು ಹರಟೆ ಹೊಡೆಯುವುದರಿಂದ ಬಂದಿಲ್ಲ ಈ ದೇಶದ ಲಕ್ಷ ಲಕ್ಷ ಜನ ಪ್ರಾಣತ್ಯಾಗ ಮಾಡಿ ಈ ಭೂಮಿಯನ್ನು ಪರಕೀಯರಿಂದ ರಕ್ಷಿಸಿದ್ದಾರೆ. ಈ ಸಂಗತಿಗಳು ಅಪ್ರಸ್ತುತವೂ ಅಲ್ಲ ಕೆಲಸಕ್ಕೆ ಬಾರದವುಗಳೂ ಅಲ್ಲ. ಇದು ಸದಾ ಅವಿಚ್ಛಿನ್ನವಾಗಿ ಹರಿದುಬರುತ್ತಿರುವ ನಮ್ಮ ಕ್ಷಾತ್ರತೇಜಸ್ಸಿನ ರೋಚಕ ಕಥೆ. ಈ ಐತಿಹಾಸಿಕ ವಾಸ್ತವತೆಯ ವಾರಸುದಾರರಾದ ನಾವು ಇದನ್ನು ತಿಳಿದು ನಮ್ಮ ಮುಂದಿನ ಪೀಳಿಗೆಗೆ ರವಾನಿಸಲೇಬೇಕಾದುದು ನಮ್ಮ ಅತ್ಯಂತ ಮಹತ್ವಪೂರ್ಣ ಜವಾಬ್ದಾರಿ. ಕೋಮು ಸೌಹಾರ್ದತೆ, ಧರ್ಮ ಸಹಿಷ್ಣುತೆ ಎಂಬ ಹುಚ್ಚು ಆವೇಶದಲ್ಲಿ ಸತ್ಯ ಸಂಗತಿಗಳನ್ನು ಹೂತುಹಾಕಿ ಅದರ ಮೇಲೆ ಕಲ್ಲು ಚಪ್ಪಡಿಗಳನ್ನು ಹಾಸುವುದು ಅತ್ಯಂತ ದ್ರೋಹದ ಕೆಲಸ.
ಸೆಪ್ಟೆಂಬರ್ 17, 1948 ಇತಿಹಾಸದಲ್ಲಿ ಮಹತ್ವದ ದಿನ. ಇದನ್ನು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ.
ಹೈದರಾಬಾದ್ ಕರ್ನಾಟಕ ರಾಜ್ಯದ ಬೀದರ್, ಗುಲ್ಬರ್ಗಾ ಮತ್ತು ರಾಯಚೂರು ಈಶಾನ್ಯ ಜಿಲ್ಲೆಗಳ ದೊಡ್ಡ ಭಾಗಗಳನ್ನು ಒಳಗೊಂಡಿತ್ತು. ಈ ಪ್ರದೇಶಗಳಲ್ಲಿನ ಲಿಂಗಾಯತ ಅಲ್ಪಸಂಖ್ಯಾತರು ತಮ್ಮನ್ನು ನಿರ್ಲಕ್ಷಿಸಲಾಗಿದೆ ಮತ್ತು ನಿಜಾಮ್ ಮತ್ತು ರಜಾಕರ ದಬ್ಬಾಳಿಕೆಗೆ ಅಸಮಾಧಾನಗೊಂಡಿದ್ದಾರೆ ಎಂದು ಹೆಚ್ಚಾಗಿ ನಂಬಿದ್ದರು.
ನಿಜಾಮನು ತನ್ನ ಆಡಳಿತವನ್ನು ಬಲವಂತದಿಂದ ಉರುಳಿಸುವವರೆಗೂ ಭಾರತಕ್ಕೆ ಸೇರಲು ನಿರಾಕರಿಸಿದನು. ನಿಜಾಮರ ವಿರುದ್ಧದ ‘ಪೊಲೀಸ್ ಕ್ರಮ’ದ ನಂತರ, ಹೈದರಾಬಾದ್ ಪ್ರಾಂತ್ಯ ಮತ್ತು ಅದರ ನಾಗರಿಕರು 17 ಸೆಪ್ಟೆಂಬರ್ 1948 ರಂದು ಸ್ವತಂತ್ರರಾದರು. ಈ ದಿನವನ್ನು ಕರ್ನಾಟಕ ಸರ್ಕಾರವು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವೆಂದು ಆಚರಿಸುತ್ತದೆ.
ಸೆಪ್ಟೆಂಬರ್ 17, 1948 ಇತಿಹಾಸದಲ್ಲಿ ಮಹತ್ವದ ದಿನ. ಇದನ್ನು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ. 1948 ರಲ್ಲಿ, ಹೈದರಾಬಾದ್ ರಾಜ್ಯವನ್ನು ಭಾರತದಲ್ಲಿ ಅಧಿಕೃತವಾಗಿ ವಿಲೀನಗೊಳಿಸಿದಾಗ, ಅದರ ಕೆಲವು ಭಾಗಗಳನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲಾಯಿತು. 2019 ರಲ್ಲಿ, ಹೈದರಾಬಾದ್-ಕರ್ನಾಟಕ ಪ್ರದೇಶವನ್ನು ಅಧಿಕೃತವಾಗಿ ಕಲ್ಯಾಣ-ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
-ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ,
ಉಪನ್ಯಾಸಕರು, ಕೊಪ್ಪಳ .9845646370