ಹನೂರು:ದಾನ ಮಾಡುವ ಮನಸ್ಸು ಕೆಲವರಿಗಷ್ಟೇ ಇರುತ್ತದೆ ಈ ಪೈಕಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಅವರು ದಾರಳತನ ಶ್ಲಾಘನೀಯವಾದದ್ದು ಎಂದು ಶಾಸಕ ಎಂ.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಸಪ್ಪನ ದೊಡ್ಡಿ ಉನ್ನತೀಕರಿಸಿದ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿ ಶಾಸಕ ಎಂ.ಆರ್.ಮಂಜುನಾಥ್ ಉದ್ಘಾಟನೆಯನ್ನು ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಮಂಜುನಾಥ್ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್ ತಂತ್ರಜ್ಞಾನಗಳು ವಿದ್ಯಾರ್ಥಿಗಳ ಕಲಿಕೆಗೆ ದೊರೆತಿರುವುದು ಉತ್ತಮವಾದದ್ದು, ಸ್ಪರ್ಧಾತ್ಮಕ ಈ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಅವಶ್ಯಕ ಮತ್ತು ಅನಿವಾರ್ಯವಾಗಿದೆ ಎಂದರು.
ಶೈಕ್ಷಣಿಕ ವಲಯದ ಬಸಪ್ಪನ ದೊಡ್ಡಿ ಉನ್ನತಿಕರಿಸಿದ ಸರ್ಕಾರಿ ಶಾಲೆಯಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಬೆಂಗಳೂರು ಹಾಗೂ ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ರಾಜ್ಯ ಸರ್ಕಾರದ ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆಯಡಿ ಶಾಲಾ ಮಕ್ಕಳಿಗೆ ಪೌಷ್ಟಿಕತೆ ವೃದ್ಧಿಸಲು ಪೂರಕ ಪೌಷ್ಟಿಕ ಆಹಾರವನ್ನು ವಾರದಲ್ಲಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿಗೂ ಎಷ್ಟೋ ಮನೆಗಳಲ್ಲಿ ಮೂರು ಹೊತ್ತಿನ ಊಟಕ್ಕೂ ಕಷ್ಟವಿದೆ. ಕಟ್ಟ ಕಡೆಯ ವ್ಯಕ್ತಿಗೆ ಮೂಲಭೂತ ಸೌಕರ್ಯ ದೊರಕಿಲ್ಲ. ಇಂತಹ ಹಿನ್ನಲೆಯಿಂದ ಶಾಲೆಗೆ ಬರುವ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವ ಇಂತಹವರಿಗೆ ಮಧ್ಯಾಹ್ನದ ಬಿಸಿಯೂಟ ವರವಾಗಿದೆ. ಇದರಿಂದ ಮಕ್ಕಳ ಶಾಲಾ ಹಾಜರಾತಿ, ಶಾರಿರೀಕ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಸರ್ಕಾರದ ಜೊತೆಗೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಕೈ ಜೋಡಿಸಿರುವುದಕ್ಕೆ ಅನಂತ ಅನಂತ ಧನ್ಯವಾದಗಳನ್ನು ತಿಳಿಸಿದ ಅವರು ಬಸಪ್ಪನ ದೊಡ್ಡಿ ಶಾಲೆಯ ಮುಖ್ಯ ಶಿಕ್ಷಕ ವೀರಪ್ಪ ಅವರು ಸೇವೆ ಸಲ್ಲಿಸಿದ ಶಾಲೆಗಳಲ್ಲಿ ಸ್ವಂತ ಹಾಗೂ ದಾನಿಗಳ ಸಹಾಯದಿಂದ ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಪರಿಕರಗಳು ಸಾಮಾಗ್ರಿಗಳನ್ನು ಒದಗಿಸಲು ಶ್ರಮಿಸುತ್ತಿರುವುದು ಅವರು ಶಾಲೆ ಮತ್ತು ವಿದ್ಯಾರ್ಥಿಗಳ ಮೇಲೆ ಇಟ್ಟಿರುವ ಕಳಕಳಿಗೆ ಸಾಕ್ಷಿಯಾಗಿದೆ ಎಂದರು.
ವೇದಿಕೆ ಕಾರ್ಯಕ್ರಮದ ಬಳಿಕ ಶಾಸಕ ಎಂ.ಆರ್.ಮಂಜುನಾಥ್ ಮಕ್ಕಳ ಸಾಲಿನಲ್ಲಿ ಕುಳಿತು ಉಪಹಾರ ಸೇವಿಸಿ ತಮ್ಮ ಸರಳತೆ ಮೆರೆದರು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಣ ಅಧಿಕಾರಿ ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಅಕ್ಷರ ದಾಸೋಹ ವಿಭಾಗದ ರಂಗಸ್ವಾಮಿ, ಗ್ರಾ.ಪಂ.ಅಧ್ಯಕ್ಷ ಮುತ್ತುರಾಜು, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಲ್ಲೇಶ್, ಮುಖ್ಯ ಶಿಕ್ಷಕ ವೀರಪ್ಪ ಇನ್ನಿತರರು ಇದ್ದರು.
ವರದಿ ಉಸ್ಮಾನ್ ಖಾನ್