ಹನೂರು: ಸ್ವಾಸ್ಥ್ಯ ಸಮಾಜಕ್ಕೆ ಮದ್ಯ ಮಾರಾಟ ಕಂಟಕವಾಗಿರುವುದರಿಂದ ಸರ್ಕಾರ ಅಬಕಾರಿ ಇಲಾಖೆಯಲ್ಲಿ ಕೆಲವು ಪರ್ಯಾಯ ಮಾರ್ಪಡುಗಳನ್ನು ತರಬೇಕಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಹನೂರು ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಚಾಮರಾಜನಗರ ಜಿಲ್ಲೆ, ಗ್ರಾಮ ಪಂಚಾಯಿತಿ, ಸಾಲೂರು ಮಠ, ಶ್ರೀ ಮಲೆಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಗಾಂಧಿ ಸ್ಮೃತಿ ಜನಜಾಗೃತಿ ಜಾಥಾ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ 35 ಸಾವಿರ ಕೋಟಿ ಆದಾಯ ತರುತ್ತಿದೆ ಎಂಬ ಮಾಹಿತಿ ಇದೆ. ಆದಾಯ ನೋಡುವುದರ ಜೊತೆಗೆ ಸಮಾಜದ ಒಳಿತನ್ನು ಸಹ ಪರಿಗಣಿಸಬೇಕು. ಎಷ್ಟೋ ಕುಟುಂಬಗಳು ಈ ಮದ್ಯ ವ್ಯಸನದಿಂದ ಸಂಕಷ್ಟಕ್ಕೆ ತುತ್ತಾಗಿವೆ ಇಂತಹ ಪರಿಸ್ಥಿತಿ ಮತ್ತು ವಾತಾವರಣವನ್ನು ಮನಗಂಡು ವ್ಯಕ್ತಿಯ ಬದುಕಲ್ಲಿ ಹಾಗೂ ಸಮಾಜದಲ್ಲಿ ಬದಲಾವಣೆ ತರಲು ವಿವಿಧ ಸಂಘ ಸಂಸ್ಥೆಗಳು ಮುಂದಾಗಿರುವುದು ಶ್ಲಾಘನೀಯ ವಿಚಾರ. ಈ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ವೀರೇಂದ್ರ ಹೆಗಡೆಯವರ ಪರಿಕಲ್ಪನೆ ಮಾದರಿಯಾದದ್ದು ನವಜೀವನ ಸದಸ್ಯರು ಮದ್ಯ ತ್ಯಜಿಸುವುದರ ಜೊತೆಗೆ ಇನ್ನಿತರರನ್ನು ಮದ್ಯ ಮುಕ್ತರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮ.ಮ.ಬೆಟ್ಟ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಚಂದ್ರಶೇಖರ್, ಚಾಮುಲ್ ನಿರ್ದೇಶಕ ಮಹಾದೇವಪ್ರಸಾದ್, ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ರಾಜಶೇಖರ ಆರಾಧ್ಯ, ಅಧ್ಯಕ್ಷ ಎಂ.ಎಸ್.ರವಿಶಂಕರ್, ಉಪಾಧ್ಯಕ್ಷ ಪ್ರಸಾದ್ ಊರ್ದಳ್ಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಪ್ರಾದೇಶಿಕ ಯೋಜನಾಧಿಕಾರಿ ಮಾಧವ, ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ, ಚಾ.ನ.ತಾ.ಯೋಜನಾಧಿಕಾರಿ ಹರೀಶ್ ಕುಮಾರ್, ಹನೂರು ತಾಲ್ಲೂಕು ಯೋಜನಾಧಿಕಾರಿ ಪ್ರವೀಣ್, ಮುಖಂಡರಾದ ವಿಜಯ್ ಕುಮಾರ್, ಕೌದಳ್ಳಿ ಶಿವರಾಮು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಘದ ಮಹಿಳಾ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್