ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳಿಗೆ ಸಮರ್ಪಕ ಅನುಕೂಲ ಕಲ್ಪಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಶಾಸಕ ಮಂಜುನಾಥ್ ಖಡಕ್ ವಾರ್ನಿಂಗ್.
ಶನಿವಾರ ಮಧ್ಯಾಹ್ನದಿಂದ ರಾತ್ರಿವರೆಗೂ ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆ, ನೂತನ ಸ್ನಾನದ ಕೋಳ, ಅಂತರಗಂಗೆ ಡ್ಯಾಮ್, ಪಂಪ್ ಹೌಸ್, ಬೃಹತ್ ಸ್ನಾನದ ಗೃಹ ಮತ್ತು ಶೌಚಾಲಯ, ಡಾರ್ಮೆಂಟರಿ ಸಮೀಪದ ಶೌಚಗೃಹಗಳು, ಜನತಾ ಕಾಲೋನಿ, ದೊಡ್ಡಕೆರೆ ಇನ್ನಿತರೆಡೆ ಖುದ್ದು ತೆರಳಿ ಪರಿಶೀಲನೆ ನಡೆಸಿದ ವೇಳೆ ಅಲ್ಲಿನ ಅವ್ಯವಸ್ಥೆಯನ್ನು ಕಂಡು ಗರಂ ಆಗುವುದರ ಜೊತೆಗೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮತ್ತು ಸಲಹೆ ಸೂಚನೆಗಳನ್ನು ನೀಡಿದರು.
ಅಂತರಗಂಗೆ ನೂತನ ಸ್ನಾನದ ಕೋಳ ಹೊಕ್ಕುವ ಸ್ಥಳದಲ್ಲಿ ಹಾಗೂ ಡ್ಯಾಮ್ ಲ್ಲಿ ಅಪಾರ ಪ್ರಮಾಣದ ಕಸಕಡ್ಡಿ ತ್ಯಾಜ್ಯಗಳು ಇರುವುದನ್ನು ಕಂಡು ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ನೀವು ಶುಚಿತ್ವಕ್ಕೆ ಮನ್ನಣೆ ನೀಡದೇ ಬೇಜವಾಬ್ದಾರಿ ತೋರಿದರೆ ವಾರ ಪೂರ್ತಿ ನಾನು ಬೆಟ್ಟದಲ್ಲಿಯೇ ತಂಗುತ್ತೇನೆ ಎಂದು ಎಚ್ಚರಿಸಿದರು.
ನೀರಾವರಿ ಇಲಾಖೆಯವರಿಗೆ ಸೂಚನೆ:
ಅಂತರಗಂಗೆ ಡ್ಯಾಮ್ ನೀಲನಕ್ಷೆಯನ್ನು ಪರಿಶೀಲಿಸಿ ಡ್ಯಾಮ್ ಲ್ಲಿ ನೀರು ಇನ್ನೂ ಹೆಚ್ಚು ಸಂಗ್ರಹಣೆ ಮಾಡಲು ಕ್ರಮ ವಹಿಸಬೇಕು, ಭಕ್ತಾಧಿಗಳಿಗೆ ವರ್ಷದ 365 ದಿನಗಳು ನೀರು ಸಿಗುವ ನಿಟ್ಟಿನಲ್ಲಿ ಪ್ಲಾನ್ ರೆಡಿ ಮಾಡಬೇಕು. ಅಗತ್ಯ ಇರುವಡೆ ಭಕ್ತಾದಿಗಳು ಸ್ನಾನ ಮಾಡಲು ಶವರ್ ವ್ಯವಸ್ಥೆ ಕೈಗೊಳ್ಳಬೇಕು. ಭಕ್ತಾಧಿಗಳು ಸ್ನಾನದ ಬಳಿಕ ವಸ್ತ್ರ ಧರಿಸಲು ಗೌಪ್ಯತೆ ಇರುವಂತೆ ವ್ಯವಸ್ಥೆ ಕಲ್ಪಿಸಬೇಕು. ಶೌಚಾಲಯದ ನೀರು, ಅಂತರ ಗಂಗೆ ಹಾಗೂ ನೂತನ ಸ್ನಾನದ ಗೃಹದ ಕಲುಷಿತ ನೀರು ಯುಜಿಡಿ ಗೆ ಸಂಪರ್ಕ ಹೊಂದುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.
ಸಸ್ಪೆಂಡ್ ಮಾಡುತ್ತೇನೆ:
ಬೃಹತ್ ಸ್ನಾನದ ಗೃಹ ಮತ್ತು ಶೌಚಾಲಯ ಹಾಗೂ ಹಿಂಬಾಗದ ತೆರೆದ ಸಾಮೂಹಿಕ ಶೌಚಾಲಯ ಡಾರ್ಮೆಂಟರಿ ಸಮೀಪದ ಶೌಚಗೃಹಗಳಲ್ಲಿ ಅಶುಚಿತ್ವ ಕಂಡು ಕುಪಿತರಾದ ಶಾಸಕ ಮಂಜುನಾಥ್ ಸ್ಥಳದಲ್ಲಿದ್ದ ದೇವಾಲಯದ ಇಂಜಿನಿಯರ್ ಅವರನ್ನು ಉದ್ದೇಶಿಸಿ ಭಕ್ತಾಧಿಗಳಿಗೆ ಈ ರೀತಿಯ ಅನುಕೂಲವನ್ನು ಕಲ್ಪಿಸೋದ, ಇದೇ ಪುನರಾವರ್ತನೆ ಆದರೆ ಸಸ್ಪೆಂಡ್ ಮಾಡುತ್ತೇನೆ ಎಂದು ಎಚ್ಚರಿಸಿದರು.
ಉಪ ಕಾರ್ಯದರ್ಶಿಗೂ ತರಾಟೆ:
ಡಾರ್ಮೆಂಟ್ರಿ ಸಮೀಪದ ಶೌಚಾಲಯ ಪರಿಶೀಲನೆ ವೇಳೆ ಭಕ್ತಾದಿ ಒಬ್ಬರು ಇಲ್ಲಿ ಯಾವುದೇ ರೀತಿಯ ಸ್ವಚ್ಛತೆ ಇಲ್ಲ, ಎಲ್ಲಾ ಗಲೀಜಿನಿಂದ ಕೂಡಿದೆ ಎಂದು ದೂರಿದರು. ಈ ವೇಳೆ ಶೌಚಾಲಯದ ಒಳಗಡೆ ಪ್ರವೇಶಿಸಿ ಪರಿಶೀಲಿನ ನಡೆಸಿದ ವೇಳೆ ಗಬ್ಬು ನಾರುವ ಅವ್ಯವಸ್ಥೆಯನ್ನು ಕಂಡು ನೀವು ಈ ರೀತಿಯ ಶೌಚಾಲಯವನ್ನು ಬಳಸುತ್ತೀರಾ, ನೂರಾರು ಜನರು ತಂಗುವ ಡಾರ್ಮೆಂಟರಿ ಸಮೀಪದ ಶೌಚಾಗೃಹವನ್ನು ಈ ರೀತಿ ಇಟ್ಟರೆ ಭಕ್ತಾದಿಗಳು ಡಾರ್ಮೆಂಟ್ರಿ ಒಳಗಡೆ ಹಾಗೂ ಹೊರಗಡೆ ಬಹಿರ್ದೆಸೆಗೆ ಹೋಗುತ್ತಾರೆ ಗಲೀಜು ಮಾಡುತ್ತಾರೆ ಆಗ ಅವರದು ತಪ್ಪು ಎನ್ನುತ್ತಿರಾ ಎಂದು ತರಾಟೆ ತೆಗೆದುಕೊಂಡರು. ಬಳಿಕ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್,ಎಇಇ ಚಿನ್ನಣ್ಣ ಹಾಗೂ ಎಇ ಮಹೇಶ್ ಚಾಮುಲ್ ನಿರ್ದೇಶಕರಾದ ಮಹದೇವ್ ಪ್ರಸಾದ್, ಮುಖಂಡರುಗಳಾದ ಡಿ.ಆರ್ ಮಾದೇಶ್,ಸುರೇಶ್,ಡಿಕೆ ರಾಜು,ಬಸವರಾಜು,ನವೀನ್ ಕುಮಾರ್,ವಿಜಯ್ ಕುಮಾರ್,ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್