ಶಿವಮೊಗ್ಗ: ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಹಾಗೂ ಸರಕಾರೇತರ ಸಂಸ್ಥೆ ಸ್ಪೇಸಿಸ್ ಇಂಡಿಯಾ ವತಿಯಿಂದ ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದಲ್ಲಿ ಶನಿವಾರ ವನ್ಯಜೀವಿ ಹಾಗೂ ಪಕ್ಷಿ ಸಂಕುಲದ ಬಗ್ಗೆ ಅರಿವು ಮೂಡಿಸಲು ಪ್ರಕೃತಿ ನಡಿಗೆ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭ ಶಿಕಾರಿಪುರ ವಲಯ ಅರಣ್ಯಾಧಿಕಾರಿ ಸಿದ್ದಯ್ಯ ಹಿರೇಮಠ್ ಮಾತನಾಡಿ, ಮಾನವ ಹಾಗೂ ಪ್ರಕೃತಿ ನಡುವೆ ಅವಿನಾನುಭಾವ ಸಂಬಂಧ ಇದೆ. ಆದರೆ ಹೆಚ್ಚಿನ ಜನರಿಗೆ ಅದರ ಬಗ್ಗೆ ಅರಿವು ಇರುವುದಿಲ್ಲ. ಕಾಡು ಮಾನವನ ಜೀವನಾಡಿಯಾಗಿದೆ. ಕಾಡು ಇಲ್ಲದೆ ಬದುಕು ನಡೆಸುವುದು ಅಸಾಧ್ಯ,ಆದರೆ ಅಂತಹ ಕಾಡು, ವನ್ಯಜೀವಿ ಹಾಗೂ ಪಕ್ಷಿ ಸಂಕುಲವನ್ನು ಜನರು ಸಂರಕ್ಷಿಸುವ ಬದಲಾಗಿ ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಅದೇ ರೀತಿ ವನ್ಯ ಜೀವಿ ಹಾಗೂ ಪಕ್ಷಿಗಳು ತಮ್ಮ ಜೀವ ವೈವಿಧ್ಯತೆಗೆ ತಕ್ಕಂತೆ ಜೀವಿಸಲು ಜನರು ಅಡ್ಡಿ ಪಡಿಸುತ್ತಿದ್ದಾರೆ. ಅದರಿಂದ ಜನರಿಗೆ ವ್ಯತಿರಿಕ್ತ ಪರಿಣಾಮ ಎದುರಿಸುವಂತಾಗಿದೆ. ಆದ್ದರಿಂದ ವನ, ವನ್ಯಜೀವಿ ಹಾಗೂ ಪಕ್ಷಿ ಸಂಕುಲದ ಬಗ್ಗೆ ಪ್ರತಿಯೊಬ್ಬರೂ ಅರಿತು ರಕ್ಷಣೆ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಸ್ಪೇಸಿಸ್ ಇಂಡಿಯಾ, ಇರುವೆ ಟ್ರಸ್ಟ್ ಸದಸ್ಯ ಹಾಗೂ ಪ್ರಕೃತಿ ಸಂರಕ್ಷಕ ಕಾರ್ತಿಕ್ .ಕೆದಿಲಾಯ ಮಾತನಾಡಿ, ಕಾಡು ಪ್ರಾಣಿಗಳು ಆಹಾರಕ್ಕಾಗಿ ಎಂದಿಗೂ ಮನುಷ್ಯನ ಭೇಟೆ ಮಾಡುವುದಿಲ್ಲ. ಆದರೆ ಮನುಷ್ಯನ ನಡುವಳಿಕೆ ಹಾಗೂ ತನ್ನ ಆತ್ಮ ರಕ್ಷಣೆಗಾಗಿ ಭೀತಿಯಿಂದ ದಾಳಿ ಮಾಡಬಹುದು. ಜನರ ಸ್ವಾರ್ಥಕ್ಕೆ ಕಾಡು, ಕಾಡು ಪ್ರಾಣಿ, ಪಕ್ಷಿ ಸಂಕುಲ ಬಲಿ ಆಗುತ್ತಿದೆ. ಇದರಿಂದ ಜನರಿಗೆ ನಷ್ಟ ಹೆಚ್ಚಾಗುತ್ತದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ವ್ಯಾಪಕವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಸರಕಾರೇತರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಅನುಪಿನಕಟ್ಟೆ ವಲಯ ಅರಣ್ಯಾಧಿಕಾರಿ ವಾಣಿಶ್ರೀ, ವನ್ಯಜೀವಿ ಪಶುವೈದ್ಯ ಮುರಳಿ ಮನೋಹರ್, ಪ್ರಕೃತಿ ಸಂರಕ್ಷಕ ಮಂಡಗದ್ದೆ ನಟರಾಜ್, ಪಕ್ಷಿ ಪ್ರೇಮಿ ಶ್ರೀನಿಧಿ ಹೆಬ್ಬಾರ್, ಉಪ ವಲಯ ಅರಣ್ಯಾಧಿಕಾರಿ ಚನ್ನಬಸವಪ್ಪ, ಪಕೃತಿ ಛಾಯಾಚಿತ್ರಗಾರ ನಾಗರಾಜ್ ಚಟ್ನಳ್ಳಿ, ಎನ್.ಜೆ.ಶೈಲೇಶ್, ಪತ್ರಕರ್ತ, ಮಹೇಶ್, ಎಚ್.ಜಿ.ವಿಜಯರಾಜ್, ವಿನಯ್ ಪುರದಾಳು, ಅತೀಕ್ ಅಹಮ್ಮದ್, ಉದಯ್ ಸಾಗರ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪ್ರಕೃತಿ ಪ್ರೇಮಿಗಳು ಭಾಗವಹಿಸಿದ್ದರು.
-ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ