ಶಿವಮೊಗ್ಗ: ನಾಳೆ ಮಾಡಬೇಕಿರುವ ಕೆಲಸವನ್ನು ಇಂದು ಮಾಡಿ, ಇಂದು ಮಾಡುವುದನ್ನು, ಈಗಲೇ ಮಾಡಿ. ಇದರಿಂದ ನಾವು ಅಂದುಕೊಂಡ ಕಾರ್ಯ ಬಹು ಬೇಗ ಯಶಸ್ವಿಯಾಗುತ್ತದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಸಾಗರ ಇವರು ತಿಳಿಸಿದರು. ಅವರು ಕರ್ನಾಟಕ ನಾಟಕ ಅಕಾಡಮಿ ಹಾಗು ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಇವರ ಸಹಯೋಗದಲ್ಲಿ ಕುಪ್ಪಳ್ಳಿಯಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ 5 ದಿನಗಳ ಕಾಲ ನಡೆದ, ನಾಟಕ ರಚನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಶಿಬಿರದಲ್ಲಿ ಕಲಿತ ರಂಗ ಸಂಗತಿಗಳು ಆದಷ್ಟು ಬೇಗ ನಾಟಕ ರೂಪ ತಾಳಿ ಉತ್ತಮ ಪುಸ್ತಕಗಳು ಹೊರಬರಲಿ ಎಂದು ಆಶಿಸಿದರು. ಶಿಬಿರ ನಿರ್ದೇಶಕ ಡಾ. ಕೆ.ಎನ್ ನಾರಾಯಣಸ್ವಾಮಿ ಮಾತನಾಡುತ್ತಾ, ಅತೀ ಕಡಿಮೆ ಸಮಯದ ಈ ಶಿಬಿರದಲ್ಲಿ ಎಲ್ಲವನ್ನೂ ಹೇಳಲಾಗಲ್ಲ. ಆದರೆ ಅಧ್ಯಯನ ಮತ್ತು ಹಲವು ರಂಗ ನಾಟಕಗಳನ್ನು ನೋಡುವುದರ ಮೂಲಕ ಇದನ್ನು ಸಾದ್ಯವಾಗಿಸಬಹುದು. ಇದಕ್ಕಾಗಿ ರಂಗ ಇಚ್ಛಾಶಕ್ತಿ ಬೇಕು. ಇದನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ನಾಟಕ ಅಕಾಡೆಮಿಯ ರಿಜಿಸ್ಟಾರ್ ಆದ ಶ್ರೀಮತಿ ನಿರ್ಮಲ ಮಠಪತಿ ಅವರು ಮಾತನಾಡಿ, ಈ ಶಿಬಿರದ ಶಿಬಿರಾರ್ಥಿ ಗಳಿಂದ ರಚನೆಗೊಂಡವುಗಳಲ್ಲಿ, ಅತ್ಯುತ್ತಮ ಮೂರು ನಾಟಕಗಳನ್ನು ಆಯ್ಕೆ ಮಾಡಿ ಅಕಾಡಮಿ ವತಿಯಿಂದ ಮುದ್ರಿಸಿ, ಪ್ರದರ್ಶನ ಮಾಡಲಾಗುವುದು ಎಂದರು.
ಸಭೆಯಲ್ಲಿ ರಂಗ ಸಾಹಿತಿ ಡಿ.ಎಸ್. ಚೌಗಲೆ, ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತಿ ಇದ್ದರು. ಅಕಾಡಮಿಯ ಶಿವಮೊಗ್ಗ ಜಿಲ್ಲಾ ಸಂಚಾಲಕ ಡಾ. ಗಣೇಶ್ ಕೆಂಚನಾಲ್ ನಿರೂಪಿಸಿದರು, ಶಿಬಿರದ ಸಂಚಾಲಕ ಹಾಗೂ ಅಕಾಡಮಿ ಸದಸ್ಯ ರವೀಂದ್ರನಾಥ ಸಿರಿವರ ಸ್ವಾಗತಿಸಿ, ಅಕಾಡಮಿ ಸದಸ್ಯೆ ಮಮತಾ ವಂದಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ.