ಶಿವಮೊಗ್ಗ : ಶಿವಮೊಗ್ಗದ ಚರಕೋತ್ಸವ ಸಮಿತಿಯು ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿರುವ ಗಾಂಧಿ ಭವನದ ಮುಂದೆ ಸಾರ್ವಜನಿಕರಿಗೆ “ದೀಪಾವಳಿ ಆಚರಿಸಲು ದೀಪ ಮಾತ್ರ ಸಾಕು”, ಪರಿಸರ ಸ್ನೇಹಿ ದೀಪಾವಳಿ ಆಚರಿಸಿ ” ಮತ್ತು “ಕನ್ನಡ ಉಳಿಸಿ ಬೆಳೆಸಿ” ಎಂಬ ಬಿತ್ತಿ ಪತ್ರವನ್ನು ಬರೆಯುವ ಪ್ರಾತ್ಯಕ್ಷಿಯ ಮೂಲಕ ಪರಿಸರ ಸ್ನೇಹಿ ದೀಪಾವಳಿಯ ಅರಿವನ್ನು ಮೂಡಿಸಿ ಮತ್ತು ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿತು.
ಮಕ್ಕಳಿಗೆ ಪಟಾಕಿ ಎಂದರೆ ಇಷ್ಟ, ಹಾಗಾಗಿ ಸಣ್ಣ ಸಣ್ಣ ಪಟಾಕಿಗಳನ್ನ ಮಕ್ಕಳಿಗೆ ತಿಳುವಳಿಕೆಗಾಗಿ, ವೈಜ್ಞಾನಿಕ ಮನೋಭಾವನೆ ಬೆಳೆಯಲು ಕೊಡಿಸಬಹುದೇನೋ. ಆದರೆ ದೊಡ್ಡವರಾಗುತ್ತಾ ಆಗುತ್ತಾ, ಪಟಾಕಿಯನ್ನು ನಿಲ್ಲಿಸುತ್ತಾ ಬರಬಹುದು. ಇದರ ಬಗ್ಗೆ ಅವಿರತವಾದ ಜಾಗೃತಿ ಕಾರ್ಯಕ್ರಮಗಳು ಆಗಬೇಕು. ಜನರು ಹೆಚ್ಚು ದೀಪಗಳನ್ನು ಬೆಳಗಿ ದೀಪಾವಳಿ ಆಚರಿಸಬೇಕೆ ಹೊರತು, ಸಾವಿರಾರು ರೂಪಾಯಿ ಖರ್ಚು ಮಾಡಿ ಪಟಾಕಿ ಸಿಡಿಸಬಾರದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ಹೆಚ್ಚಾಗಬೇಕು, ಮಾಲಿನ್ಯ ನಿವಾರಿಸುವ ಜವಾಬ್ದಾರಿಯನ್ನ ಜನರ ಹೆಗಲ ಮೇಲೆ ಹೆಚ್ಚಾಗಿ ಹೊರಿಸಬೇಕು. ದೀಪಾವಳಿ ಸಂದರ್ಭದಲ್ಲಿ ಎಲ್ಲಾ ಪರಿಸರವಾದಿಗಳು ಫ್ರೀಡಂ ಪಾರ್ಕಿನ ಮುಂಭಾಗದಲ್ಲಿ, ದಿನನಿತ್ಯ ಜಾಗೃತಿ ಮೂಡಿಸಿದರೆ ಮಾತ್ರ ಶಿವಮೊಗ್ಗದಲ್ಲಿ ಮಾಲಿನ್ಯ ನಿಲ್ಲಿಸಲು ಸಾಧ್ಯ. ಒಬ್ಬರು ಇಬ್ಬರಿಂದ ಸಾಧ್ಯವಾಗದಂತ ಕೆಲಸವಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ , ಚಿತ್ರದುರ್ಗದ ಡಾ. ಎಚ್ ಕೆ ಎಸ್ ಸ್ವಾಮಿ ಯವರು ತಿಳಿಸಿದರು.
ಕನ್ನಡ ಉಳಿಸಿ, ಬೆಳೆಸಿ, ಅದನ್ನ ರಕ್ತಗತ ಮಾಡಿಕೊಂಡಾಗ ಮಾತ್ರ ಮಾತೃಭಾಷೆಗಳು ಉಳಿಯುತ್ತವೆ. ಭಾಷೆಗಳಲ್ಲೂ ಸಹ ನಮಗೆ ಗುಲಾಮಗಿರಿಯ ಅನುಭವವಾಗಿದೆ, ನಮ್ಮ ಭಾಷೆಯಲ್ಲಿ ನಾವು ನಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದಾಗ, ನಾವು ಈ ಭೂಮಿಯ ಮೇಲೆ ಇರುವುದಕ್ಕಿಂತ ನಾಶವಾಗುವುದೆ ಮೇಲು ಎಂಬ ಗಾಂಧೀಜಿಯವರ ಮಾತುಗಳನ್ನ ಗಂಭೀರವಾಗಿ ತೆಗೆದುಕೊಂಡು, ನಾವು ನಮ್ಮ ಒಳ್ಳೆಯ ವಿಚಾರಗಳನ್ನ, ಭಾಷಣಗಳನ್ನ, ಬರವಣಿಗೆಗಳನ್ನ, ಮಾತೃಭಾಷೆ ಮುಖಾಂತರ ಮಾಡಿ, ಜನಸಾಮಾನ್ಯರಿಗೂ ಸಹ ಜ್ಞಾನ ತಲುಪುವಂತೆ ಮಾಡಬೇಕಾದ್ದು ನಮ್ಮ ಕರ್ತವ್ಯ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು ಸಮಿತಿಯ ಸದಸ್ಯರು ತಿಳಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ