ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತರಬೇಕೆನ್ನುವ ವಕ್ಫ್ (Waqf) ತಿದ್ದುಪಡಿ ಬಿಲ್ ಜಾರಿಗೆ ವಿಜಯಪುರ ಜಿಲ್ಲೆಯೇ ಮೊದಲ ಮೆಟ್ಟಿಲಾಗಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಬಿಸಿ ಹೆಚ್ಚಾಗಿತ್ತು. 1974 ರ ವಕ್ಫ್ ಗೆಜೆಟ್ ರದ್ದಾಗಬೇಕೆಂದು ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ಶಾಸಕ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಇತರರ ಹೋರಾಟಕ್ಕೆ ಜಂಟಿ ಸಂಸದೀಯ ಸಮಿತಿ ಸ್ಪಂದಿಸಿದೆ. ಜೆಪಿಸಿ ಅಧ್ಯಕ್ಷ ಹಾಗೂ ಸದಸ್ಯರು ಪ್ರತಿಭಟನಾ ಸ್ಥಳಕ್ಕಾಗಮಿಸಿ ಹೋರಾಟಗಾರರ ಭೇಟಿ ಮಾಡಿ ವಕ್ಪ್ ಬೋರ್ಡ್ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಹೊಸ ವಕ್ಪ್ ತಿದ್ದುಪಡಿ ಬಿಲ್ ಮೂಲಕ ಪರಿಹಾರ ನೀಡುವ ಭರವಸೆ ನೀಡಿದ್ದು, ಪರಿಣಾಮ ಧರಣಿ ಸತ್ಯಾಗ್ರಹಕ್ಕೆ ತೆರೆ ಬಿದ್ದಿದೆ.
ವಕ್ಫ್ ವಿರುದ್ಧ ದಿನದಿಂದ ದಿನಕ್ಕೆ ಹೋರಾಟ ಕಾವು ಹೆಚ್ಚಾಗಿತ್ತು. ಈ ಹಿನ್ನಲೆ ಇಂದು ಪ್ರತಿಭಟನಾ ಸ್ಥಳಕ್ಕೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಹಾಗೂ ಜೆಪಿಸಿ ಸದಸ್ಯ ತೇಜಸ್ವಿ ಸೂರ್ಯ ಭೇಟಿ ನೀಡಿ ವಕ್ಪ್ ಬೋರ್ಡ್ ಸಮಸ್ಯೆಗಳನ್ನು ಆಲಿಸಿ ಅಹವಾಲು ಸ್ವೀರಿಸಿದ್ದಾರೆ. ಕನ್ಹೇರಿ ಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಠಾಧೀಶರ ಪರವಾಗಿ ಮಾತನಾಡಿ ಅಹವಾಲು ಸಲ್ಲಿಸಿದರು.
ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಮಾತನಾಡಿ, ಇಲ್ಲಿ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿರುವ ಕಾರಣ ಗೋವಾಹಾಟಿಗೆ ಹೋಗುವದನ್ನು ಬಿಟ್ಟು ಇಲ್ಲಿ ಬಂದಿದ್ದೇನೆ. ರೈತರ ಜಮೀನಿನಲ್ಲಿ ವಕ್ಪ್ ಬೋರ್ಡ್ ಆಗಿದ್ದಕ್ಕೆ ರೈತರಿಗೆ ಬೇಸರವಿದೆ. ಜಮೀನುಗಳು ವಕ್ಪ್ ಬೋರ್ಡ್ ಎಂದಾಗಿದ್ದನ್ನು ತೆರವು ಮಾಡಲು ಜೆಪಿಸಿ ರಚನೆ ಆಗಿದೆ. ವಿಜಯಪುರ ಹುಬ್ಬಳ್ಳಿಯಲ್ಲಿಯೂ ವಕ್ಪ್ ಬೋರ್ಡ್ ಸಮಸ್ಯೆಯಾಗಿದೆ. ಇಲ್ಲಿಯ ಸಮಸ್ಯೆ ಕುರಿತು ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು. ರೈತರು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆಂದು ಸಚಿವೆ ಕರಂದ್ಲಾಜೆ ಹೇಳಿದ ಕಾರಣ ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ಜಗದಂಭಿಕಾ ಪಾಲ್ ಒಬ್ಬರೇ ಬಂದಿದ್ದಾರೆ. ಇಡೀ ಕಮೀಟಿ ಯಾಕೆ ರಾಜ್ಯಕ್ಕೆ ಬಂದಿಲ್ಲ ಎಂದು ವಿರೋಧ ಪಕ್ಷದವರು ಪ್ರಶ್ನೆ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ದೇಶದಲ್ಲಿ ಒಂದು ಕೋಟಿಗೂ ಅಧಿಕ ಜನರು ಮನವಿ ಸಲ್ಲಿಸಿದ್ದಾರೆ. ಜೆಪಿಸಿ ಮೂಲಕ ವಕ್ಪ್ ಕಾಯ್ದೆಯನ್ನು ಪಾರದರ್ಶಕವಾಗಿ ಬದಲಾವಣೆ ಮಾಡುತ್ತೇವೆ. ಎಲ್ಲಾ ಪಕ್ಷದ ಮುಖಂಡರು ವಕ್ಪ್ ಜೆಪಿಸಿಯಲ್ಲಿದ್ದೇವೆ. ಯಾವುದೇ ನಿರ್ಧಾರ ಕಾಯ್ದೆ ಕುರಿತು ಎಲ್ಲವನ್ನೂ ಎಲ್ಲರ ಸಮ್ಮುಖದಲ್ಲಿ ಸಭೆ ನಡೆಸಿ ತೀರ್ಮಾನ ಮಾಡುತ್ತವೆ ಎಂದರು.
ವಂಶ ಪಾರಂಪರ್ಯವಾಗಿ ಬಂದ ಜಮೀನುಗಳು ವಕ್ಪ್ ಬೋರ್ಡ್ ಎಂದು ಮಾಡಲಾಗುತ್ತಿದೆ. ಇದಕ್ಕೆ ರಾಜ್ಯದಲ್ಲಿ ಯಾರು ಹೊಣೆ? ವಕ್ಪ್ ಸಚಿವ ಜಮೀರ್ ರೈತರ ಜಮೀನುಗಳನ್ನು ವಕ್ಪ್ ಎಂದು ಮಾಡಲು ಅಧಿಕಾರಿಗಳಿಗೆ ಟಾರ್ಗೆಟ್ ನೀಡುತ್ತಿದ್ದಾರೆ. ರೈತರಿಗೆ ವಕ್ಪ್ ಕಾನೂನು ಜಾರಿಯಾಗುವ ಮುನ್ನ ಯಾಕೆ ನೊಟೀಸ್ ನೀಡಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ವಕ್ಪ್ ಬೋರ್ಡ್ ಆಸ್ತಿ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಬೇಕು ಶಾಸಕ ಯತ್ನಾಳ್ ಮಾತನಾಡಿ, ದೇಶದಲ್ಲಿರುವ ಇಡೀ ವಕ್ಪ್ ಆಸ್ತಿ ರಾಷ್ಟ್ರೀಯ ಆಸ್ತಿಯಾಗಬೇಕು. ವಕ್ಪ್ ಬೋರ್ಡ್ ಆಸ್ತಿ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಬೇಕು, ಅದು ರಾಷ್ಟ್ರಕ್ಕೆ ಸೇರಬೇಕು. ಈ ನಿಟ್ಟಿನಲ್ಲಿ ಸಮಗ್ರ ಮಾಹಿತಿಯ ದಾಖಲೆಗಳ ಜೊತೆಗೆ ನಾವು ಮನವಿ ಸಲ್ಲಿಕೆ ಮಾಡುತ್ತೇವೆ. ಲೋಕಸಭೆಯಲ್ಲಿ ವಕ್ಪ್ ವಿರುದ್ದ ಹೋರಾಟ ಮಾಡಿದ ವಿಜಯಪುರ ಜಿಲ್ಲೆಯು ಹೆಸರು ಉಲ್ಲೇಖವಾಗಬೇಕಿದೆ ಎಂದಿದ್ದಾರೆ.
ವಕ್ಪ್ ಕಾಯ್ದೆಯನ್ನು ಪೂರ್ಣ ಬದಲಾಯಿಸಬೇಕೆಂದು ಕನ್ಹೇರಿ ಮಠದ ಸ್ವಾಮೀಜಿ ಜಿಲ್ಲೆಯಲ್ಲಿ ವಕ್ಪ್ ಸಮಸ್ಯೆಯಾಗಿದೆ, ಜಿಲ್ಲೆಯ ಮಠ ಮಾನ್ಯಗಳ ಜಮೀನು, ರೈತರ ಭೂಮಿಗಳು ವಕ್ಪ್ ಆಗಿವೆ. ರೈತರ ಜಮೀನುಗಳು ಮಠಗಳ ಸಂಘ ಸಂಸ್ಥೆಗಳ ಆಸ್ತಿಗಳು ವಕ್ಪ್ ಆಗಿವೆ. ಈ ಸಮಸ್ಯೆ ಒಂದು ಟೈರ್ 40 ಪಂಚರ್ ಆದಂತಾಗಿದೆ. ಒಂದೆರೆಡು ಪಂಚರ ಆದ ಟಯರ್ ರಿಪೇರಿ ಮಾಡಬಹುದು 40 ಪಂಚರ್ ಆದರೆ ಟಯರ್ ಬದಲಾವಣೆಯೇ ಮಾರ್ಗ. ವಕ್ಪ್ ಸಹ ಹಾಗೆ ಆಗಿದೆ. ಈ ಕಾಯ್ದೆಯನ್ನು ಪೂರ್ಣ ಬದಲಾಯಿಸಬೇಕೆಂದು ಕನ್ಹೇರಿ ಮಠದ ಸ್ವಾಮೀಜಿ ಹೇಳಿದ್ದಾರೆ.
ಬಳಿಕ ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಜೆಪಿಸಿ ಅಧ್ಯಕ್ಷ ಹಾಗೂ ಸದಸ್ಯರ ಮೇಲೆ ನಿರೀಕ್ಷೆ ಇದೆ. ಭೂಮಿ ದೇಶದ ಸಂಪತ್ತು. ಈ ಸಂಪತ್ತನ್ನೇ ವಶಕ್ಕೆ ಪಡೆಯಲಾಗುತ್ತಿದೆ ಎಂದಿದ್ದಾರೆ. ಹಾಗಾಗಿ ವಕ್ಪ್ ಕಾಯ್ದೆ ಬದಲಾಗಬೇಕು, ವಕ್ಪ್ ಟ್ರಿಬ್ಯುನಲ್ನಿಂದ ಸಮಸ್ಯೆಯಾಗಿದೆ. ಒಂದೇ ದೇಶದಲ್ಲಿ ನಮಗೆ ಒಂದು ಕಾಯ್ದೆ ವಕ್ಫ್ ಗೆ ಒಂದು ಕಾನೂನು ಏಕೆ? ಇದನ್ನು ಬದಲಾವಣೆ ಮಾಡುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ ಎಂದರು. ಸರ್ಕಾರ ಮುಂದಿನ ಅಧಿವೇಶನದಲ್ಲಿ ವಕ್ಪ್ ಅಮೆಂಡ್ಮೆಂಟ್ ಬಿಲ್‌ಪಾಸ್ ಮಾಡಬೇಕೆಂದು ಒತ್ತಾಯ ಮಾಡಿದರು.
ಕರ್ನಾಟಕದಲ್ಲಿ ಲ್ಯಾಂಡ್ ಜಿಹಾದ್, ಲ್ಯಾಂಡ್ ಟೆರೆರಿಸಮ್ ನಡೆಯುತ್ತಿದೆ ಎಂದ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ವಕ್ಪ ವಿಚಾರದಲ್ಲಿ ಕರ್ನಾಟಕದ ಜನರು ವಿಜಯಪುರ ಜಿಲ್ಲೆಯ ಜನರು ಜೀವವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದಾರೆ. ಆದ ಕಾರಣ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಅಲ್ಲಾಹನಿಗೆ ದಾನ ಮಾಡುವುದೇ ವಕ್ಪ್ ಅರ್ಥವಾಗಿದೆ. 1954 ರಲ್ಲಿ ವಕ್ಪ್ ಅಸ್ತಿ ಎಷ್ಟಿತ್ತು? ಈಗಾ ದೇಶದಲ್ಲಿ 38 ಲಕ್ಷ ಎಕರರೆಯಾಗಿದೆ. ಸೇನಾ ಇಲಾಖೆ, ರೇಲ್ವೇ ಇಲಾಖೆ ಆಸ್ತಿಯ ನಂತರ ವಕ್ಪ್ ಆಸ್ತಿ ಮೂರನೇ ಸ್ಥಾನ ಪಡೆದಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸಿಎಂ ಆದ ಬಳಿಕ ಜಮೀರ್ ವಕ್ಪ್ ಸಚಿವನಾದ ಬಳಿಕ ವಕ್ಫ್ಗೆ ಅದಾಲತ್ ನಡೆಯುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಡಿಸಿ ಹಾಗೂ ಅಧಿಕಾರಿಗಳಿಗೆ ಸಚಿವ ಜಮೀರ್ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದರು. ವಕ್ಪ್ ವಿರುದ್ದ ಕೋರ್ಟ್ಗೆ ಹೋಗದಂತೆ ಕಾಯ್ದೆಯನ್ನು ಕಾಂಗ್ರೆಸ್ ಮಾಡಿದ್ದು ಶಾಪವಾಗಿದೆ. ವಕ್ಪ್ ಟ್ರಿಬ್ರುನಲ್ನಿಂದ ನ್ಯಾಯ ಸಿಗಲ್ಲ. ಕರ್ನಾಟಕದಲ್ಲಿ ಲ್ಯಾಂಡ್ ಜಿಹಾದ್, ಲ್ಯಾಂಡ್ ಟೆರೆರಿಸಮ್ ನಡೆಯುತ್ತಿದೆ. ಕಾರಣ ನಮಗೆ ನ್ಯಾಯ ಸಿಗೋವರೆಗೂ ನಾವು ಹೋರಾಟ ಮುನ್ನಡೆಸುತ್ತೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ವಕ್ಪ್ ಅಮೆಂಡ್ಮೆಂಟ್ ಬಿಲ್ ಜಾರಿಯಾಗಲಿ ಎಂದರು.
ಕಳೆದ ನಾಲ್ಕು ದಿನಗಳಿಂದ ವಕ್ಪ್ ವಿರುದ್ದ ನಡೆಯುತ್ತಿರುವ ಹೋರಾಟಕ್ಕೆ ಇಂದು ತೆರೆ ಬಿದ್ದಿದೆ. ವಕ್ಪ್ ಅಮೆಡ್ಮೆಂಟ್ ಬಿಲ್ ಜಾರಿ ಮಾಡಲು ರಚನೆಯಾದ ಜಂಟಿ ಸಂಸದೀಯ ಮಂಡಳಿಯ ಮೂಲಕ ವಕ್ಫ್ಗೆ ಕಡಿವಾಣ ಹಾಕುತ್ತೇವೆಂದು ಸಮಿತಿ ಆಧ್ಯಕ್ಷ ಜಗದಾಂಬಿಕಾ ಪಾಲ್ ಭರವಸೆ ನೀಡಿದ ಕಾರಣ ಹೋರಾಟವನ್ನು ಹಿಂಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಯತ್ನಾಳ ನೇತೃತ್ವದಲ್ಲಿ ಜಿಲ್ಲೆ ಜಿಲ್ಲೆಗಳಿಗೂ ತೆರಳಿ ಜನರಲ್ಲಿ ವಕ್ಪ್ ಬೋರ್ಡ್ ಕುರಿತು ಜಾಗೃತಿ ಮೂಡಿಸೋ ಕಾರ್ಯ ಮಾಡುವುದಾಗಿ ಹೇಳಿದ್ದಾರೆ.
ವರದಿ-ವಿಶ್ವನಾಥ ಹರೋಲಿ