ಆ ಅಣ್ಣ ಈ ಬಾರಿ ಅತಿ ಸಂತೋಷಭರಿತನಾಗಿ ತನ್ನ ತಂಗಿಯ ಜೊತೆಗೆ ದೀಪಾವಳಿ ಆಚರಿಸಲು ನಿರ್ಧರಿಸಿದ…ಆತನ ಮನದ ತುಂಬಾ ಕಳೆದ ದೀಪಾವಳಿಯ ನೆನಪೇ ಉಳಿದಿತ್ತು…
ತಂಗಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತನ್ನ ಸಂಬಂಧಿಯೊಂದಿಗೆ ದ್ವಿಚಕ್ರದಲ್ಲಿ ಹೋಗುವ ಸಂದರ್ಭದಲ್ಲಿ ಬ್ರೇಕ್ ಸರಿಯಾಗಿ ಕೆಲಸ ಮಾಡದ ಕಾರಣ ರೋಡ್ ಡಿವೈಡರ್ ಗೆ ಗುದ್ದಿ ಆತನ ಕಾಲಿಗೆ,ಈಕೆಯ ತಲೆಗೆ ಬಿದ್ದ ಪೆಟ್ಟು, “ಪ್ರಜ್ಞೆ ಬರದ ಹೊರತು ಏನನ್ನು ಹೇಳಲಾಗದು” ಎಂದು ಡಾಕ್ಟರ್ ಹೇಳುವ ರೀತಿಯದ್ದಾಗಿತ್ತು. ಸಂಬಂಧಿಯ ಕಾಲು ಚೇತರಿಕೆ ಕಂಡಿದೆ ಈಕೆಯ ವಿಚಾರವಾಗಿ ಅಣ್ಣನ ಎದೆಯೊಳಗೆ ಗಳಿಗೆಗೆ ಒಂದೊಂದು ಪಟಾಕಿಗಳು ಸಿಡಿಯುತ್ತಿವೆ. ತಂಗಿಯ ಬಗ್ಗೆ ಚಿಂತಿಸುತ್ತಾ ಕುಳಿತಿದ್ದವನಿಗೆ, “ನಿಮ್ಮ ತಂಗಿಯ ಈ ರೀತಿಯ ಘಟನೆಗೆ ಆಕೆಯ ಪ್ರೇಮಿ ಕಾರಣ ಹುಟ್ಟುಹಬ್ಬದ ದಿನ ಅಂತ ಓವರ್ ಸ್ಪೀಡ್ ಬಂದು ಬಿದ್ದಿದ್ದಾರೆ,ಇನ್ಮುಂದೆ ಆದ್ರು ಸರಿಯಾಗಿ ಇರೋಕೆ ಹೇಳಿ ” ಎಂದು ಪೊಲೀಸರು ದೂರವಾಣಿಯ ಮೂಲಕ ತಿಳಿಸಿದಾಗ, ಸಿಡಿದ ಪಟಾಕಿಗೆ ಭೂಮಿ ಬಾಯಿ ಬಿಟ್ಟು,ತಾನು ಅದರೊಳಗೆ ಬಿದ್ದು ಹೋದಂತೆ ಭಾಸವಾಯಿತು….
ಆ ಅಪಾರ್ಟ್ಮೆಂಟ್ ಗೆ “ಸೆಕ್ಯೂರಿಟಿ ಅವಶ್ಯಕತೆ ಇದೆ” ಎಂದು ಅಪಾರ್ಟ್ಮೆಂಟ್ ನ ಸರ್ವರೂ ಲಿಖಿತ ರೂಪದಲ್ಲಿ ವ್ಯವಸ್ಥಾಪಕರಿಗೆ ನೀಡಲು, ಅವರ ಪರಿಚಯಸ್ಥನೊಬ್ಬನನ್ನ ಆ ಕೆಲಸಕ್ಕೆ ನೇಮಿಸಿಕೊಂಡು,ಆ ದಿನ ಕರೆ ತಂದರು. ಆತ ನೋಡಲು ಸುಂದರ,ಅಷ್ಟೇ ಪ್ರಾಮಾಣಿಕ,ಜೊತೆಗೆ ಹಳ್ಳಿಯಿಂದ ಮೊನ್ನೆಯಷ್ಟೇ ಬಂದಿದ್ದ ಮುಗ್ಧ. ಆತನು ತಾಯಿಯನ್ನು ಕಳೆದುಕೊಂಡು, ತಂದೆಯ ಎರಡನೇ ಸಂಸಾರಕ್ಕೆ ಅನುವು ಮಾಡಿ, ತನ್ನೂರನ್ನ ತೊರೆದು ಇಲ್ಲಿಗೆ ಬಂದಿದ್ದ. ಆತನಿಗೆ ಈಗ ಕೆಲಸದ ಅವಶ್ಯಕತೆ ತುಂಬಾ ಇತ್ತು, ಆತ ಸ್ವಾಭಿಮಾನಿ ಕೂಡಾ, ಹೆಚ್ಚು ಮಾತನಾಡುವವನಲ್ಲ. ಮಾತನಾಡಿದರು ಕೂಡಾ ಎದುರಿಗಿದ್ದ ವ್ಯಕ್ತಿಯನ್ನು ಕ್ಷಣಾರ್ಧದಲ್ಲಿ ನಗಿಸಿ ಬಿಡುವಂತಹ ವ್ಯಕ್ತಿತ್ವ. ಸರಿ ಇಂಥವನನ್ನು ಈ ಅಪಾರ್ಟ್ಮೆಂಟ್ ಗೆ ಸೆಕ್ಯೂರಿಟಿಯಾಗಿ ನೇಮಿಸುವುದಾಗಿ ಎಲ್ಲರ ಒಪ್ಪಿಗೆ ತೆಗೆದುಕೊಂಡ ನಂತರ ವ್ಯವಸ್ಥಾಪಕರು ಆತನನ್ನ ನೇಮಿಸಿದರು. ಈತ ಸೆಕ್ಯೂರಿಟಿಯಾಗಿ ನಾಲ್ಕು ದಿನ ಕಳೆದಿತ್ತು…
ಆ ಅಪಾರ್ಟ್ಮೆಂಟ್ನ ಮನೆ ನಂಬರ್ 14 ರ ಆ ವ್ಯಕ್ತಿ ಸೆಕ್ಯೂರಿಟಿ ಎಂದು ಹುಡುಕುತ್ತಾ ಬಂದರು, ನ ಅವರನ್ನು ಮಾತನಾಡಿಸಲು, “ನೋಡಪ್ಪ ನನ್ ತಂಗಿ ಹಳ್ಳಿ ಹುಡುಗಿ, ಅವಳಿಗೆ ಏನಂದ್ರೇನು ಗೊತ್ತಾಗಲ್ಲ, ಆ ಸಂದರ್ಭ ಏನು? ಹೇಗಿದೆ? ಅನ್ನೋದನ್ನ ಮರೆತು, ನೇರವಾಗಿ,ನಿಷ್ಟೂರವಾಗಿ,ಮಾತಾಡ್ಬಿಡ್ತಾಳೆ, ಅವಳಿಗೆ ತಂದೆ ತಾಯಿ ಇಲ್ಲ, ಅವೆರಡು ಸ್ಥಾನವನ್ನು ಈಗ ನಾನು ಅವಳಿಗೆ ಕೊಟ್ಟಿದ್ದೀನಿ, ಅಂತ ಹುಡುಗಿ,ಅಂದ್ರೆ ನನ್ ತಂಗಿ, ಇವತ್ತು 10 ಗಂಟೆಗೆ ಬರ್ತಾಳೆ, ದಯವಿಟ್ಟು ಅವಳನ್ನ ಕರ್ಕೊಂಡು ಹೋಗಿ ನಮ್ಮನೆಗ್ ಬಿಡು ಹಾಗೆ ಸ್ವಲ್ಪ ಲಗೇಜ್ ಎತ್ತಿಕೊಂಡು ಹೋಗೋದಕ್ಕೆ ಸಹಾಯ ಮಾಡಪ್ಪ ಎಂದರು. ವಿಶೇಷವಾಗಿ ಆ ವ್ಯಕ್ತಿಗೆ ಇವನ ಮೇಲೆ ಎಲ್ಲಿಲ್ಲದ ಕಾಳಜಿ, ಆ ಕಾರಣಕ್ಕೆ ತಂಗಿಯ ವಿಷಯದಲ್ಲಿ ಇವನನ್ನು ಸಹಾಯ ಮಾಡುವಂತೆ ಕೇಳಿದರು.
ಅವಳು ಬಂದು ಕಾರಿನಿಂದ ಇಳಿಯುವ ಹೊತ್ತಿಗೆ,ಇವನು ಅಲ್ಲಿಗೆ ಬಂದು ಅವಳಿಗೆ ಸಹಾಯ ಮಾಡಲು ಮುಂದಾದ, ಹಾಗೆ ಸುರಕ್ಷಿತವಾಗಿ ಅವಳನ್ನ ಮನೆಗೆ ಬಿಟ್ಟು ಬಂದು,ಇವನ ಕೆಲಸ ಮುಂದುವರಿಸಿದ. ಸಂಜೆ ಸುಮಾರು 5:00 ಗಂಟೆಯ ಸಮಯ,ನಾಯಿಯ ಜೊತೆಗೆ ಆಕೆ ಬರುವುದು ಕಂಡ. ಆ ನಾಯಿ ಅವಳನ್ನು ಬೀಳುವಂತೆ ಎಳೆಯುತ್ತ ಬರುವುದು ಕಂಡು,”ಅಯ್ಯೋ” ಎಂದು ತಾನೇ ನಾಯಿ ಹಿಡಿದು ಓಡಾಡಿಸಿದ. ಆಕೆಗೆ ಇದು ತುಂಬಾ ಖುಷಿ ಎನಿಸಿತು. “ತುಂಬಾ ಥ್ಯಾಂಕ್ಸ್” ಎಂದಳು. ನಕ್ಕು ಮುಖ ನೋಡುತ್ತಾ ಹೋದಳು. ಇವನಿಗೆ ಸ್ವರ್ಗ ಸಿಕ್ಕಂತಾಯಿತು.
ಹಾಗೆ ಹೋಗುವಾಗ,ಬರುವಾಗ ಇವನನ್ನು,ನಗಿಸುವುದು,ಇವನು ಸಹ ಅವಳನ್ನು ಮಾತಾಡಿಸುವುದು. ಇವರಿಬ್ಬರ ನಡುವೆ ಒಂದು ರೀತಿಯ ಸ್ನೇಹ ಮೊಳೆಯಿತು.
ಅವನು ಅವನಿಗೆ ಗೊತ್ತಿಲ್ಲದೇ,ಅವಳನ್ನು ಪ್ರೇಮಿಸಲು ಶುರು ಮಾಡಿದ. ಇವನದೆ ರೀತಿಯ ಕಲ್ಪನೆಯಲ್ಲಿ ಅವಳನ್ನು ನೋಡಲು ಪ್ರಾರಂಭ ಮಾಡಿದ, ಒಮ್ಮೆ ಅವಳು ಬಾರದಾದಾಗ,ಇವನು ಚಡಪಡಿಸಲು ಶುರು ಮಾಡುತ್ತಿದ್ದ. ಹೀಗಿರಲು ಒಂದು ದಿನ…ತರಕಾರಿ ತರಲು ಅವಳು ಹೋದದ್ದು ಕಂಡು,ಒಂದು ಪ್ರೇಮ ನಿವೇದನೆ ಪತ್ರ ತಾಯಾರು ಮಾಡಿದ, ಅವಳು ಲಿಫ್ಟ್ ಗೆ ಹೋಗಲು, ತಾನೂ ಅವಳ ಜೊತೆಗೆ ಲಿಫ್ಟ್ ಸೇರಿ, ಲಿಫ್ಟ್ ಮೇಲೆ ಹೋಗಲು ಶುರುವಾದಾಗ, “ಅದು…ಈ ಪತ್ರ,ನೀವು ಫ್ರೀ ಇದ್ದಾಗ ನೋಡಿ” ಆದ್ರೆ ಒಮ್ಮೆ ಓದಲೇ ಬೇಕು pls” ಎಂದು ಅವಳ ಕೈಗೆ ಕೊಟ್ಟ. ಅಷ್ಟರಲ್ಲಿ ಲಿಫ್ಟ್ ಓಪನ್ ಆಯಿತು ಪತ್ರ ಪಡೆದ ಅವಳು, ಲಿಫ್ಟ್ ಇಂದ ಹೊರ ನಡೆದಳು, ಇವನು ಹಾಗೆ ಕೆಳಗೆ ಬಂದ…ಬಂದವನಿಗೆ ಭಯ,ಮನೆಯಲ್ಲಿ ಅವರಣ್ಣನಿಗೆ ತೋರಿಸಿದರೆ, ಅಥವಾ ಅವಳೇ ಓದಿದ ಮೇಲೆ ಬಂದು ಕೆನ್ನೆಗೆ ಬಾರಿಸಿಬಿಟ್ಟರೆ. ಇಲ್ಲ ಎಲ್ಲ ಓಕೆ ಎಂದು ಒಪ್ಪಿಕೊಂಡು ಬಿಟ್ಟರೆ. ಅವಳನ್ನು ಸಂತೋಷವಾಗಿಡುವಷ್ಟು ಯೋಗ್ಯತೆ ನನಗಿದೆಯೇ..? ಎಂದು ತನಗೆ ತಾನೇ ಎಲ್ಲ ಪ್ರಶ್ನೆ ಕೇಳಿಕೊಳ್ಳುತ್ತಿದ್ದ…
ಬೆಳಿಗ್ಗೆ 8:00 ಕ್ಕೆ ಮನೆ ಇಂದ ಬಂದು ಡ್ಯೂಟಿ ಗೆ ತಯಾರಾಗಿದ್ದೆ,ಅಲ್ಲಿಗಾಗಲೇ ಬಂದು ನನಗಾಗಿ ಕಾಯುತ್ತಿದ್ದ ಅವಳ ಮುಖ ಗಮನಿಸಿ “ಬಹುಷಃ ಇದು ಏನೋ ಯಡವಟ್ಟು ಮಾಡೋ ಹಾಗಿದೆ,ಕ್ಷಮೆ ಕೇಳೋದೇ ವಾಸಿ” ಎಂದು ಭಯದ ಹೆಜ್ಜೆ ಹಾಕಿದೆ. ನಿನ್ ಪತ್ರ ಓದಿದೆ. ಈ ವಯಸ್ಸಿಗೆ ಬರೋ ಸಾಮಾನ್ಯ ಖಾಯಿಲೆ ನಿಂಗೂ ಬಂದಿದೆ. ಬರ್ಬೇಕು, ಆದ್ರೆ ಅದು “ನಮ್ಮ ನಮ್ಮ ಯೋಗ್ಯತೆ ಮೀರಿ ಅಲ್ಲ. ನಾನು ಇಷ್ಟ ಪಡೋ ನಾಯಿಗೆ ತಿಂಗಳಿಗೆ 10.000ಖರ್ಚು ಮಾಡ್ತೀವಿ. ನಿನ್ ಸಂಬಳ ಅದುಕ್ಕಿಂತಲೂ ಕಡಿಮೆ ಇದೆ. ಓದಿಗೆ ತಕ್ಕಂತೆ ಉದ್ಯೋಗ ಪಡ್ಕೋಳೋ ಯೋಗ್ಯತೆ ಎಲ್ಲದೋರು ಕೂಡ,ಯೋಗ್ಯತೆ ಮೀರಿ,ಹುಡ್ಗಿನ ಬಯಸ್ತಾರೆ. ನಾನು ನಿಂಗೆ ಒಂದು ಚಾಲೆಂಜ್ ಮಾಡ್ತೀನಿ. ಇನ್ನು 3 ವರ್ಷದ ಅವಧಿಯಲ್ಲಿ,ನಿನ್ ಸ್ಟೇಟಸ್ ಬದ್ಲಾಗ್ಬೇಕು, ಅದುನ್ನ ಯೋಚಿಸು, ಎಂದು ಪತ್ರ ಹರಿದು ಹಾಕಿ ಹೋದಳು. ಆ ದಿನ ಎಲ್ಲಿಲ್ಲದ ಬೇಸರ ಕಾಡತೊಡಗಿತು….
ನನ್ನ ಸ್ನೇಹಿತ ತನ್ನದೊಂದು ದೊಡ್ಡ ಮಾಲ್ ನಲ್ಲಿ ಸೇಲ್ಸ್ ಪ್ರಮೋಟರ್ ಹುದ್ದೆಗೆ ಸೇರಿಸಿದ ತಿಂಗಳಿಗೆ 25000 ಸಂಬಳದ ಜೊತೆಗೆ ನನ್ನ ಮಾರಾಟದ ಪ್ರತಿಯೊಂದು ವಸ್ತುಗಳ ಮೇಲೆ ಬೋನಸ್ ಕೂಡಾ, ನಾನು ಆ ದಿನ ನಡೆದ ಘಟನೆಯನ್ನು ಮರೆಯಲಾರೆ, ಅದು ಪ್ರೇಮ ದೊರೆಯದ ಬೇಸರಕ್ಕಿಂತ,ನನ್ನ ಬದಲಾವಣೆ ಮಾಡಿದ ಆ ದೇವತೆಯ ಬಗೆಗೆ ನನಗೆ ಅಪಾರ ಗೌರವ…ಹೌದು ಅವಳ ಆ ಮಾತು ಅಕ್ಷರಸಹ ಸತ್ಯ…ಮೊದಲು ದುಡಿದು ಗಳಿಸಲು ಅವಳು ನೀಡಿದ ಆ ಪ್ರೇರಣೆ ಅದ್ಭುತ. ಹಾಗಾಗಿ ಈಗ ತುಂಬಾ ಒಳ್ಳೆಯ ಕೆಲಸ,ಹಾಗೂ ಬೋನಸ್ ಪಡೆವ ಅದ್ಭುತ ಅವಕಾಶ…
ಹಾಗೆ ಹಳೆಯ ನೆನಪಾಗಿ ಒಮ್ಮೆ ಮಾತನಾಡಿಸಲು ಫೋನ್ ಮಾಡಲು ಅವರಣ್ಣ ನಡೆದ ವಿಷಯ ತಿಳಿಸಿದರು, ನೋಡಲು ಬಂದವನಿಗೆ ಅವರಣ್ಣ”ನಿನ್ ವಿಷಯದಲ್ಲಿ ಅವಳು ಸ್ವಲ್ಪ ದುಡಿಕಿದ್ಲು ಅನ್ಸುತ್ತೆ,ಮನಸಿಗೆ ಹಚ್ಕೋಬೇಡಪ್ಪ, ಸರಿ ಅಲ್ಲಿ ನೋಡು ಎಂದು ಕಿಟಕಿಯಿಂದ ಅವಳನ್ನ ತೋರಿಸುವ ವೇಳೆಗೆ “ತಲೆ ಗಾಯ ವಾಸಿ ಆಯಿತಾ..?ನನ್ ಬಿಟ್ಟು ಎಲ್ಲೂ ಹೋಗ್ಬೇಡ”ಎಂದು ಅವರಕ್ಕನ ಮಗನನ್ನು ಕೈ ಹಿಡಿದು ಬೇಡಿಕೊಳ್ಳಲು ಅವನು “ನಿನ್ ಬಿಟ್ರೆ ನಂಗು ಯಾರಿದರೆ…?ಎಂದು ಅವಳ ತಲೆ ನೇವರಿಸಿದ. ಇದನ್ನು ಕಂಡ ಅವನ ಕಣ್ಣು ತುಂಬಿಕೊಂಡರು “ಒಳ್ಳೆ ಜೋಡಿ ಸರ್” ಎಂದದಕ್ಕೆ “ಡಾಕ್ಟರ್,ಹಳೆಯ ಕಹಿ ನೆನಪು ಅವಳಿಗೆ ಹೇಳಲು ಹೋಗಬೇಡಿ,ಒಂದು ವಾರ ಪೂರ್ತಿ ಆರಾಮಾಗಿರ್ಲಿ, ನಿದ್ರೆ ಮಾಡೋ ಟೈಮ್ ನಲ್ಲಿ ಮಾತಾಡಿಸಿ ಎಚ್ಚರ ಮಾಡ್ಬೇಡಿ,”ಎಂದಿದಾರಪ್ಪ,ಎಂದು ನನಗೆ ಕೈ ಮುಗಿದರು. ಸರ್ ಕೈ ಮುಗಿಬೇಡಿ ಎಂದವನೇ,ಅಲ್ಲಿಂದ ಹೊರಟೆ. ಬರುವಾಗ ಇದ್ದ ಅವಳ ನಂಬರ್ ಡಿಲೀಟ್ ಮಾಡಿಬಿಟ್ಟೆ….
ನನಗೆ ಹೊಸದಾಗಿ ಮಾರಾಟದ ಆಯಾಮ ಕಲಿಸುವ ಕೆಲಸ ಅಲ್ಲಿನ ಅಧಿಕಾರಿಗಳು “ಶ್ವೇತಾ” ಎಂಬ ಹುಡುಗಿಗೆ ವಹಿಸಿದರು. ಅವಳು ಮಾತಿನಲ್ಲಿ ನಿಪುಣೆ. ವ್ಯಾಪಾರಕ್ಕೆ ಬಂದವರಿಗೆ ಹೇಗಾದರೂ ಒಂದು ವಸ್ತು ಮಾರಿಯೆ ಬಿಡುವಂತ ಬುದ್ಧಿವಂತೆ, ಅವಳು ವ್ಯಾಪಾರದ ಎಲ್ಲ ಆಯಾಮ ಕಲಿಸಿದಳು, ಹಾಗೆ ಆತ್ಮೀಯ ಗೆಳತಿಯಾದಳು. ನಾನು ಮಧ್ಯಾಹ್ನ ಊಟ ತರಾಳರಾದ್ದರಿಂದ ಅವಳೇ ನನಗೂ ಊಟ ತರುತ್ತಿದ್ದಳು. ಇಬ್ಬರು ಜೊತೆಗೆ ಊಟ ಮಾಡುತ್ತಿದ್ದೆವು. ಒಮ್ಮೊಮ್ಮೆ ನನಗೆ ಅವಶ್ಯಕತೆ ಇದ್ದಾಗ ಹಣದ ಸಹಾಯ ಮಾಡುತ್ತಿದ್ದಳು. ಒಮ್ಮೆ ಅವರ ಮನೆಗೆ ಕರೆದುಕೊಂಡು ಹೋಗಿ ಅಮ್ಮ,ಅಣ್ಣನಿಗೆ ಪರಿಚಯ ಮಾಡಿದಳು. ನಾವಿಬ್ರು ಅತ್ಯಂತ ಆತ್ಮೀಯ ಗೆಳೆಯರು ಎಂದು ಎಲ್ಲ ಸಿಬ್ಬಂದಿಗಳಿಗೂ ಹೇಳಿದ್ದರಿಂದ ಯಾರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ನಾವು ಒಂದು ದಿನ ನೋಡದೆ ಇರಲಾರದ ಹಾಗೆ ಹತ್ತಿರವಾಗಿದ್ದೆವು. ಒಮ್ಮೆ ಅವರಮ್ಮನಿಗೆ ತೀರಾ ಸುಸ್ತಾಗಿ ಬಿದ್ದು ಆಸ್ಪತ್ರೆ ಸೇರಿಸಿದ್ದರಂತೆ,ತುರ್ತಾಗಿ 2 ಬಾಟಲಿ ರಕ್ತ ಬೇಕಿದೆ ಎಂದು ತಿಳಿಯುತ್ತಿದ್ದಂತೆ, ನಾನು ಮತ್ತು ಅವರಣ್ಣ ರಕ್ತ ಕೊಟ್ಟೆವು. ಆ ದಿನ ಅವಳು ನನ್ನ ಹಣೆಗೆ ಮುತ್ತಿಟ್ಟು. ನಾನು ನಿನ್ನ ತುಂಬಾ ಪ್ರೇಮಿಸ್ತೀನಿ ಎಂದಳು.ಅವನ ಆನಂದ ಹೇಳತೀರದಾಯ್ತು. ಈಗಾಗಲೇ ಅವಳು ಅಣ್ಣ,ಅಮ್ಮ ಎಲ್ಲರ ಒಪ್ಪಿಗೆ ಪಡೆದು ಕೊಂಡಿದ್ದಾಳೆ.ಎಂದು ಗೊತ್ತಾದ ಮೇಲಂತು. ಆನಂದ ಜಾಸ್ತಿ ಆಯಿತು. ಹಳೆಯ ಯಾವ ನೆನಪಿಲ್ಲದೆ. ಇವಳ ಜೊತೆಗೆ ಬೆರೆತುಹೋದೆ. ಹೀಗಿರಲು ನಾನು ಒಂದು ದಿನ ಅವಳಿಗೆ ನನ್ನ ಮನದ ಮಾತು ಹೇಳಿಕೊಳ್ಳೋಣ ಎಂದು ಕಾಯುತ್ತಿದ್ದೆ. ಇದ್ದಕ್ಕಿಂದಂತೆ ಪ್ರಪಂಚವೆ ಸ್ತಬ್ದವಾಗಿ ಹೋಯ್ತು, ಕೊರೋನ ಖಾಯಿಲೆ ಸಲುವಾಗಿ ಪೂರ್ತಿ ಲಾಕ್ಡೌನ್ ಆಯ್ತು. ಫೋನ್ ನಲ್ಲಿ ಮಾತಾಡಿ ಕೊಳ್ಳುತ್ತಿದ್ದೆವು. ಆ ಒಂದೆರಡು ದಿನದಿಂದ ಅದು ನಿಂತಿತು, ಮನಸು ಪ್ರತಿ ಕ್ಷಣ ಅವಳ ಮಾತು ಕೇಳಲು ಬಯಸಿ ಒಮ್ಮೆ ಹಾಗೆ ನಿಧಾನವಾಗಿ ಒಬ್ಬನೇ ಅವಳನ್ನು ಕಾಣಲು ಹೊರಟೆ….
ಮನೆ ಮುಂದೆ ತರಗೆಲೆಗಳು ಬಿದ್ದಿವೆ. ಒಳಗೆ ಹೋಗಲು ಬಾಗಿಲು ಮುಚ್ಚದೆ ಹಾಗೆ ತೆರೆದಿದೆ. ನಿಶಬ್ದವಾದ ಮನೆಯಲ್ಲಿ ಯಾರು ಇಲ್ಲದಂತೆ ಇದೆ. ಆದರೂ ಧೈರ್ಯ ಮಾಡಿ ಸ್ವಲ್ಪ ಮುಂದೆ ಹೋಗಲು….
ನನ್ನ ಹೃದಯದ ಬಡಿತ ನಿಂತಂತೆ, ಉಸಿರೇ ಹಾರಿಹೋದಂತೆ, ಹೃದಯ ಕಿತ್ತು ಜೋತು ಬಿದ್ದಂತೆ, ಭೂಮಿ ಬಾಯಿ ತೆರೆದು ನನ್ನನ್ನ ಒಳಗೆ ಸೇರಿಸಿಕೊಂಡಂತೆ…ತುಟಿ ಪಟ ಪಟನೆ ಬಡಿದು ಕೊಂಡವು, ಕಣ್ಣು ಕ್ಷಮಿಸು ಎನ್ನುವ ಹಾಗೆ ನೀರು ತುಂಬಿಕೊಂಡವು. ಹಾಗೆ ಅಲ್ಲೇ ಕೂತುಕೊಂಡ ನನ್ನನ್ನ,ಒಂದು ಕೈ ಭುಜದ ಮೇಲೆ ಬಂತು. ತಿರುಗಿ ನೋಡಲು,ಅವಳ ಅಣ್ಣ. “ಅಮ್ಮ,ತಂಗಿ ಇಬ್ಬರು, ಕೊರೋನಾ ಗೆ……..” ಜೋರಾಗಿ ಅಳಲಾರಂಭಿಸಿದ….ನಾನು ಅವನನ್ನ ಅಪ್ಪಿಕೊಂಡೆ….
-ಗಿರೀಶ ಎಸ್ ಸಿ (ರಾಗಿ),ಶ್ಯಾನುಭೋಗನಹಳ್ಳಿ
ರಾಮನಗರ.