ಲೇಖನದ ಹೆಸರು: ಚಲೇಜಾವ್ ಚಳಿಜ್ವರ
ವಿಶ್ವ ಮಲೇರಿಯಾ ದಿನಾಚರಣೆಯನ್ನು ಏಪ್ರಿಲ್ ೨೫ ರಂದು ಆಚರಿಸಲಾಯಿತು. ಒಮ್ಮೆ ಮಲೆನಾಡು, ಕೊಪ್ಪ ಎಲ್ಲ ಚಳಿಜ್ವರಕ್ಕೆ ಹೆಸರಾಗಿದ್ದವು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಲೇರಿಯಾ ತಡೆಯಲು ಸರಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಿನ್ನೆಲೆಲ್ಲಿ ನಾನು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಲೇರಿಯಾ ತಡೆಯಲು ಸರಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಾನು ರಾಯಚೂರು ಜಿಲ್ಲೆಯಲ್ಲಿ ಚಳಿಜ್ವರದ ವಿರುದ್ಧ ರಂಗಪ್ರದರ್ಶನಗಳು ನಾಟಕ ಪ್ರದರ್ಶನ ವಿಚಾರ ಸಂಕಿರಣ, ಜಾನಪದ ಗೀತೆಗಳ ಹಾಡುವಿಕೆ ಮೂಲಕ ಒಂದು ಆರೋಗ್ಯ ಆಂದೋಲನ ಮಾಡಿದ್ದೆ. ೭೯೯೮ ರಿಂದ ೨೦೦೮ರವೆಗೆ ಮಾಡಿದ್ದ ಆ ಕಾರ್ಯಕ್ರಮಗಳ ಬಗ್ಗೆ ಈಗ ನೆನಪು ಮಾಡಿಕೊಳ್ಳುತ್ತಿದ್ದೇನೆ.
ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರಗಳ ಆವಿಷ್ಕಾರಗಳು, ಅಭಿವೃದ್ಧಿ, ಮಾನವನನ್ನು ಅನೇಕ ಭೀಕರ ರೋಗಗಳ ಕಬಂಧ ಬಾಹುಗಳಿಂದ ರಕ್ಷಿಸಿದ್ದರೂ, ಕೆಲವು ರೋಗಗಳು ಜನರನ್ನು, ಮತ್ತೆ ಮತ್ತೆ ಕಾಡುತ್ತಿವೆ. ಪ್ಲೇಗು, ಸಿಡುಬು, ಮಾಯವಾಗಿವೆ. ಕ್ಷಯ, ಕ್ಯಾನ್ಸರ್‌ನ ಆರಂಭದ ಹಂತಗಳು. ಅಪಘಾತಗಳು ಇವುಗಳಿಗೂ, ಚಮತ್ಕಾರಿಕ ಜೀವ ಉಳಿಸುವ ಔಷಧಿಗಳು ಬಂದಿವೆ. ಜ್ಞಾನ – ವಿಜ್ಞಾನ ಹೆಚ್ಚಿದ್ದರೂ, ಜನರ ಅಲಕ್ಷ್ಯ ಹಾಗೂ ನಿಷ್ಕಾಳಜಿಗಳಿಂದ, ಹೆಚ್. ಐ.ವಿ ಸೋಂಕು ಮತ್ತು ಚಳಿಜ್ವರ ಕಡಿಮೆಯಾಗಿ, ಮತ್ತೆ ಮತ್ತೆ ಮರಳಿ ಬಂದು, ಜನರ ಜೀವ ಹಿಂಡುತ್ತಿವೆ.
ಈ ಹಿನ್ನೆಲೆಯಲ್ಲಿ, ಏಪ್ರಿಲ್ ೨೫ರಂದು, ವಿಶ್ವದಾದ್ಯಂತ, ವಿಶ್ವ ಮಲೇರಿಯಾ ದಿನ ಆಚರಿಸಲಾದರೂ, ಆ ದಿನದ ಮಹತ್ವ ಹಾಗೂ ಸಂದೇಶಗಳನ್ನು ಪ್ರಪಂಚದ ಎಲ್ಲಾ ಜನರಿಗೆ, ಮತ್ತೆ ಮತ್ತೆ ತಿಳಿಸಬೇಕೆಂದು, ವಿಶ್ವ ಆರೋಗ್ಯ ಸಂಸ್ಥೆ ಕರೆ ಇತ್ತಿದುವದರಿಂದ ಆ ಬಗ್ಗೆ, ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.ಮಲೇರಿಯಾ ವಿರುದ್ಧದ ಪ್ರಪಂಚದ ಪ್ರಯತ್ನಗಳನ್ನು, ಎಲ್ಲಾ ಜನರಿಗೆ ಮುಟ್ಟಿಸುವುದೇ, ಆ ದಿನಾಚರಣೆಯ ಉದ್ದೇಶ. ಚಳಿಜ್ವರ ನಿಯಂತ್ರಣ ಹಾಗೂ ನಿರ್ನಾಮ ಕಾರ್ಯಕ್ರಮದಲ್ಲಿ ವಿಶ್ವ ಸಂಸ್ಥೆಯ ಸದಸ್ಯಾಗಿರುವ, ಪ್ರಪಂಚದ ಎಲ್ಲಾ ದೇಶಗಳ ರಾಜಕೀಯ ಬದ್ಧತೆ ಹಾಗೂ ಹೆಚ್ಚಿನ ತೊಡಗಸುವಿಕೆಗಾಗಿ, ವಿಶ್ವ ಆರೋಗ್ಯ ಸಂಸ್ಥೆ, ೨೦೦೭ರ ವಿಶ್ವ ಆರೋಗ್ಯ ಸಮಾವೇಶದಲ್ಲಿ, ಈ ದಿನಾಚರಣೆ ಆರಂಭಿಸಿತು. ಚಳಿಜ್ವರ ತಡೆಯುವಿಕೆ, ಪತ್ತೆ ಹಚ್ಚುವಿಕೆ ಹಾಗೂ ಚಿಕಿತ್ಸೆಗಳ ಮಧ್ಯೆ, ಹೆಚ್ಚು ಅಂತರವಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವಂತೆ, ಚಳಿಜ್ವರದಿಂದ ಸಾಯುವವರ ಸಂಖ್ಯೆ, ೨೦೦೦ ಇಸವಿಯಿಂದ ಕಡಿಮೆಯಾಗಿದ್ದರೂ, ಈ ರೋಗ ತಡೆಯಲಾಗದೇ, ಪ್ರತೀವರ್ಷ ೧ ದಶಲಕ್ಷಕ್ಕಿಂತ ಹೆಚ್ಚು ಜೀವಗಳು ಮರಣವಪ್ಪುತ್ತಿರುವುದು, ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೂ ಸಾಯತ್ತಿರುವುದು, ವೈಪರೀತ್ಯವೇ ಸರಿ. ಪ್ರಪಂಚದ ಸುಮಾರು ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ, ಮಲೇರಿಯಾ, ಸೋಂಕಿನ ಅಪಾಯದ ಅಂಚಿನಲ್ಲಿದೆ. ಮಕ್ಕಳು ಹಾಗೂ ಗರ್ಭಿಣಿಯರು, ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿವೆ. ಗ್ರಾಮೀಣ ಭಾಗದಲ್ಲಿರುವ ಆರೋಗ್ಯ ಕಾರ್ಯಕರ್ತರು, ಜನರಲ್ಲಿ ಈ ರೋಗದ ಲಕ್ಷಣಗಳ ಬಗ್ಗೆ ಅರಿವು ಮೂಡಿಸಿ, ಸ್ಥಳೀಯ ಆರೋಗ್ಯ ಸೌಲಭ್ಯಗಳ ಮಿತಿಯಲ್ಲಿ, ಬೇಗ ಪತ್ತೆ ಹಚ್ಚುವಿಕೆಗೆ, ಹೆಚ್ಚು ಮಹತ್ವ ಕೊಡಬೇಕಾಗಿದೆ. ಅನಾಫಿಲೀಸ್ ಹೆಣ್ಣು ಸೊಳ್ಳೆ ಕಡಿತದಿಂದ ಹರಡುವ ಈ ಸೋಂಕು ರೋಗಕ್ಕೆ ಕಾರಣ, ಪ್ಯಾರಾಸೈಟ್ ಪ್ಲಾಸ್ಮೋಡಿಯಂ. ಇದು ಮಾನವ ದೇಹ ಸೇರಿ, ದೇಹರಕ್ಷಕ ಪಡೆಯಾದ ಕೆಂಪು ರಕ್ತಕಣಗಳನ್ನು ಸೋಂಕಿಗೆ ತಳ್ಳುತ್ತವೆ. ಮನುಷ್ಯರ ಯಕೃತಿನಲ್ಲಿ, ಈ ಉಪಜೀವಿಗಳು ಸಂಖ್ಯೆಯಲ್ಲಿ ಗುಣಿತವಾಗುತ್ತ, ದೇಹದ ಮುಖ್ಯ ಅಂಗಗಳಿಗೆ ರಕ್ತಪೂರೈಕೆಯನ್ನೇ ಅಲ್ಲೋಲ ಕಲ್ಲೋಲ ಮಾಡುತ್ತವೆ.ಬೆಚ್ಚನೆಯ ಹವಾಮಾನದ ಉಷ್ಣ ವಲಯದ ದೇಶಗಳಲ್ಲಿ, ಈ ರೋಗ ಹರಡಲು ಅನುಕೂಲ ವಾತಾವರಣವಿದೆ. ಬಹಳ ದೇಶಗಳಲ್ಲಿ ಮಲೇರಿಯಾ ಔಷದಕ್ಕೆ, ಈ ಪ್ಲಾಸ್ಮೋಡಿಯಂ ಒಗ್ಗಿಕೊಂಡಿದೆ. ಸೊಳ್ಳೆ ಕಡಿದ ೧೦ರಿಂದ ೧೫ ದಿನಗಳಲ್ಲಿ ಆರಂಭವಾದ ಚಳಿಜ್ವರ ಲಕ್ಷಣಗಳೆಂದರೆ, ಬಿಟ್ಟು ಬಿಟ್ಟು ಬರುವ ಜ್ವರ, ಸಂಜೆ ಜ್ವರ, ತಲೆನೋವು, ಚಳಿ ಹಾಗೂ ವಾಂತಿ. ಈ ಚಳಿಜ್ವರ ನಿಯಂತ್ರಿಸಲು ಸೊಳ್ಳೇಪರದೆಯ ಒಳಗೆ ಮಲಗಬೇಕು ಅಥವಾ ಸೊಳ್ಳೆಗಳ ಹರಡುವಿಕೆಯನ್ನು ತಡೆಯಬೇಕು. ಚಳಿಜ್ವರದ ನಿಯಂತ್ರಣ ಹಾಗೂ ಮುಂದೆ ಸಂಪೂರ್ಣ ನಿವಾರಿಸುವ ದಿಕ್ಕಿನಲ್ಲಿ, ನಾನು ರಾಯಚೂರು ಆಕಾಶವಾಣಿಯಲ್ಲಿ ಇದ್ದಾಗ, ಜಿಲ್ಲೆಯ ಲಿಂಗಸೂಗೂರು, ರಾಮದುರ್ಗ ಮುಂತಾದ, ಚಳಿಜ್ವರ ಹೆಚ್ಚಿದ್ದ ತಾಲೂಕು ಹಾಗೂ ಗ್ರಾಮಗಳಲ್ಲಿ, ೧೯೯೮ ರಿಂದ ೨೦೦೩ರ ಅವಧಿಯಲ್ಲಿ, ಆರೋಗ್ಯ ಶಿಕ್ಷಣಕ್ಕಾಗಿ, ನಾನು ಮಾಡಿದ ಚಲೇಜಾವ್ ಚಳಿಜ್ವರ ಎಂಬ ಕ್ರಾಂತಿಕಾರಕ ಅಂದೋಳನ, ಬಹುಶಃ ಎಲ್ಲರಿಗೂ ಒಂದು ಮಾದರಿಯಾಗಬಹುದೆಂದು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಲಿಂಗಸೂಗೂರಿನ ಭಾರತೀಯ ವೈದ್ಯಕೀಯ ಸಂಘ ಹಾಗೂ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಂಬಧಿಸಿದ ವೈದ್ಯರು, ರಾಜ್ಯ ಸರಕಾರಿ ಅಧಿಕಾರಿಗಳನ್ನು ಪ್ರೇರೆಪಿಸಿ, ಈ ಆರೋಗ್ಯ ಅರಿವು ಯಜ್ಞ ಮಾಡಿದ್ದೆ. ಕೇವಲ ರಾಜಕೀಯ ವ್ಯಕ್ತಿಗಳು, ಸರಕಾರಿ ಅಧಿಕಾರಿಗಳ ಭಾಷಣಗಳು, ಸಭೆಗಳಿಂದ, ಹೆಚ್ಚಿನ ಪರಿಣಾಮವಾಗದು. ಒಂದು ಕಾರ್ಯಕ್ರಮದಲ್ಲಿ ಸಾವಿರಾರು ಯುವಜನರು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಗ್ರಾಮೀಣ ಜನ, ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು, ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಾಹಿತಿಗಳು, ಅಲ್ಲಿರುವ ಮಠಗಳ ಸ್ವಾಮಿಗಳು, ಜಾನಪದ ಕಲಾವಿದರು, ನಾಟಕ ಕಲಾವಿದರು, ಎಲ್ಲರನ್ನೂ ಅಳವಡಿಸಿಕೊಂಡೆ. ರಂಗ ಕಾರ್ಯಕ್ರಮಕ್ಕೆ ಮೊದಲು, ಕೆಲವು ತಿಂಗಳು ರೇಡಿಯೋದಲ್ಲಿ ಹಾಗೂ ಪತ್ರಿಕೆಗಳಲ್ಲಿ, ಈ ರೋಗದ ವಿವಿಧ ಆಯಾಮಗಳ ಬಗ್ಗೆ ಪರಿಚಯ ಮಾಡಿಕೊಟ್ಟೆ. ಶಾಲೆ, ಕಾಲೇಜುಗಳಲ್ಲಿ, ಯುವಕ ಮಂಡಲಗಳು, ಮಹಿಳಾ ಮಂಡಲಗಳಲ್ಲಿ, ಈ ರೋಗದ ಬಗ್ಗೆ, ತಜ್ಞರ ಮಾಹಿತಿ, ಚರ್ಚೆ ನಡೆಸಿದೆವು. ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಪಂಚಾಯತಿ ಸದಸ್ಯರೊಂದಿಗೆ, ಗ್ರಾಮದಲ್ಲಿ ಸುತ್ತಾಡಿ, ಕೈಪಂಪನ್ನು (ಬೋರ್‌ವೆಲ್) ಬೇಕಾದಾಗ ಮಾತ್ರ ಬಳಸುವಂತೆ, ಸುತ್ತ ನೀರು ಚೆಲ್ಲದಂತೆ, ಮನೆಯಲ್ಲಿ ದೇವಸ್ಥಾನದಲ್ಲಿ, ಹೊಲದಲ್ಲಿ, ಬಳಸಿದ ನೀರು ಎಲ್ಲೆಲ್ಲೋ ನಿಲ್ಲದಂತೆ, ನೀರು ಮಲೆಯದಂತೆ ಮಾಡಿ, ಗ್ರಾಮದಲ್ಲಿ ಸೊಳ್ಳೆ ಸಂತತಿ ಬೆಳೆಯುವುದನ್ನು ತಡೆದೆವು. ಸೊಳ್ಳೆ ಬೆಳೆಯಬಹುದಾದ ಮನೆಯ ಮೂಲೆಯಲ್ಲಿರುವ / ಮೇಲಿರುವ ನೀರು ಸಂಗ್ರಹಾಗಾರ, ತೆರೆದ ಹೌದು, ನೆಲದ ಕೆಳಗಿನ ನೀರಿನ ಸಂಗ್ರಹ ಇಲ್ಲೆಲ್ಲಾ ಸರಿಯಾಗಿ ಮುಚ್ಚುವಂತೆ ಮಾಡಿ, ಒಡೆದ ಮಡಿಕೆ, ಹರಿದ ಟೈರು, ಬಳಸದೆ ತೆರೆದಿಟ್ಟ ಪಾತ್ರೆ, ಇವನ್ನೆಲ್ಲ ನಾಶ ಮಾಡಿ, ಎಲ್ಲೆಡೆ ಸೊಳ್ಳೆ ನಿವಾರಕ ಔಷದಿ ಪದೇ ಪದೇ ಸಿಂಪಡಿಸಲಾಯಿತು. ನೀರು ಕಾಸಿ ಸೋಸಿ ಕುಡಿಯಲು ಜನರಿಗೆ ಮತ್ತೆ ಮತ್ತೆ ಹೇಳಲಾಯಿತು.ನಂತರ ಒಂದು ಇಡೀ ದಿನ ಈಚನಾಳ್ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಿತು. ಆ ದಿನ ಇಡೀ ಗ್ರಾಮದಲ್ಲಿ, ಚಳಿಜ್ವರದ ಲಕ್ಷಣಗಳು, ವೈದ್ಯಕೀಯ ಉಪಚಾರ ತಡೆಯುವ ಕ್ರಮಗಳ ಬಗೆಗಿನ ಬೋರ್ಡ್ ಹಿಡಿದ ಯುವಜನ, ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು.
ರಂಗಕಾರ್ಯಕ್ರಮದಲ್ಲಿ, ಚಳಿಜ್ವರದ ಬಗ್ಗೆ ೪ ವೈದ್ಯರು, ತಲಾ ೫ ನಿಮಿಷಗಳ ಭಾಷಣ ಮಾಡಿದರೆ, ಜನರೊಂದಿಗೆ ತಜ್ಞರು ಸಂಭಾಷಿಸಿ, ಅವರ ಪ್ರಶ್ನೆ ಸಂದೇಹಗಳಿಗೆ ಉತ್ತರಿಸಿದರು. ಜಾನಪದ ಕಲಾವಿದರು ಜಾನಪದ ಧಾಟಿಯಲ್ಲಿ, ಆರೋಗ್ಯ ಸಂದೇಶದ ಹಾಡುಗಳನ್ನು ಹಾಡಿದರೆ, ವಿದ್ಯಾರ್ಥಿಗಳು ಕೋಲಾಟ, ಕುಣಿತ ಮಾಡಿದರು. ನಾನು ನನ್ನ ಹವ್ಯಾಸಿ ತಂಡದೊಂದಿಗೆ, ನಾನೇ ಬರೆದ ಆಪರೇಷನ್ – ಎಂ (ಆಪರೇಷನ್ ಮಾಸ್ಕಿಟೋ) ನಾಟಕ ಆಡಿದೆವು. ಈ ನನ್ನ ಫ್ಯಾಂಟಸಿ ನಾಟಕದಲ್ಲಿ ಸೂತ್ರಧಾರನಾಗಿ ನಾನು, ನಟಿಯೊಂದಿಗೆ, ಸೊಳ್ಳೆಲೋಕಕ್ಕೆ ಹೋಗಿ, ಸೊಳ್ಳೆರಾಣಿ ಹಾಗೂ ಸೊಳ್ಳೆಗಳಿಂದ ಅವುಗಳ ಪ್ರಯತ್ನ, ಸಾಧನೆ ತಿಳಿದು ಬರುವ ಮೂಲಕ, ಹಾಸ್ಯ ಹಾಗೂ ವ್ಯಂಗ ಶೈಲಿಯಲ್ಲಿ, ಆರೋಗ್ಯ ಶಿಕ್ಷಣ ನೀಡಿದೆ. ಗ್ರಾಮದಲ್ಲಿ ಚಳಿಜ್ವರದ ಬಗ್ಗೆ ಜಾಥಾ ಹೊರಡುವವರಿಗೆ, ನಾಟಕ ಕಲೆಯ ಮೂಲಕ ಸಂದೇಶ ಪ್ರಸಾರಿಸಿ, ಸಾವಿರಾರು ಗ್ರಾಮೀಣ ಮಹಿಳೆಯರು, ಪುರುಷರು ಇವರೆಲ್ಲ, ಸ್ಥಳದಲ್ಲೇ ಚಲೇಜಾವ್ ಚಳಿಜ್ವರ ಎಂದು ಸಾಮೂಹಿಕವಾಗಿ ಘೋಷಿಸುತ್ತಾ, ಚಳಿಜ್ವರ ತಡೆಯುವ ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಿದ್ದು, ಒಂದು ದಾಖಲೆ. ಮುಂದೆ ವಿವಿಧ ಗ್ರಾಮಗಳಲ್ಲಿ, ಈ ನಾಟಕದ ಮರು ಪ್ರದರ್ಶನಗಳ ಮೂಲಕ, ಜನಜಾಗೃತಿ, ಆರೋಗ್ಯ ಜಾಗೃತಿ ಮೂಡಿಸಿ, ಅಲ್ಲೆಲ್ಲಾ ಮಲೇರಿಯಾ ರೋಗಿಗಳ ಸಂಖ್ಯೆ ಕಡಿಮೆಯಾಯಿತೆಂಬುದು ಹೆಮ್ಮೆಯ ವಿಷಯ. ಬೆಳಗಾಂ ಜಿಲ್ಲೆಯ ಅಥಣಿ ತಾಲೂಕಿನ ಮಲಾಬಾದ್ ಗ್ರಾಮದ, ದೇವದಾಸಿ ಪುನರ್ವಸತಿ ಶಾಲೆಯ ಮಕ್ಕಳೊಂದಿಗೆ, ೧೪-೮-೨೦೧೪ರಂದು, ನಾನೂ ಅಭಿನಯಿಸಿದ ಆಪರೇಷನ್ – ಎಂ ನಾಟಕ ಪ್ರಯೋಗ, ಸುತ್ತ ಮುತ್ತಲಿನ ಗ್ರಾಮೀಣ ಪ್ರೇಕ್ಷಕರಿಗೆ, ಚಳಿಜ್ವರ ತಡೆಯಲು ಪ್ರೇರಕವಾಗಿ, ಮಾರ್ಗದರ್ಶಕ ನೀಡಿತೆಂಬುದು ನನ್ನ ಅಭಿಮಾನದ ವಿಷಯ.
ಈಗ ಮಲೇರಿಯಾ ಬಗ್ಗೆ ಸಂಕ್ಷಿಪ್ತವಾಗಿ ನೆನಪಿಡಿ; ಮಲೇರಿಯಾ ಒಂದು ಸಾಂಕ್ರಾಮಿಕ ರೋಗ. ಮಲೇರಿಯಾ ಪ್ಲಾಸ್ಮೋಡಿಯಂ ಪರೋಪಜೀವಿಯಿಂದ ಬರುತ್ತದೆ. ಮಲೇರಿಯಾ ಸೋಂಕಿತ ಅನಾಫಿಲೀಸ್ ಸೊಳ್ಳೆ ಕಚ್ಚುವುದರಿಂದ ಬರುತ್ತದೆ.ಮಲೇರಿಯಾ ಜ್ವರದೊಂದಿಗೆ ಚಳ (ನಡುಕ) ಇರುತ್ತದೆ. ಜ್ವರ ಬಂದಾಗ ಅಗತ್ಯವಾಗಿ ರಕ್ತ ಪರೀಕ್ಷೆ ಮಾಡಿಸಿ. ಹಾಗಾದರೆ ಮಲೇರಿಯಾ ಸೊಳ್ಳೆಗಳು ಎಲ್ಲಿ ಉತ್ಪತ್ತಿಯಾಗುತ್ತವೆ? ಮಲೇರಿಯಾ ಸೊಳ್ಳೆಗಳು ನಿಂತಿರುವ ಸ್ವಚ್ಛವಾದ ನೀರು, ನಿಧಾನವಾಗಿ ಹರಿಯುವ ನದಿ-ಕೆರೆಗಳು ಮತ್ತು ನದಿಗಳ ಮರಳು ದಂಡೆ, ನೀರಾವರಿಯ ನಾಲೆ, ಭತ್ತದ ಗದ್ದೆಗಳು, ಬಾವಿಗಳು, ಕೊಳಗಳು ಇತ್ಯಾದಿ ನೀರಿನ ತಾಣಗಳಲ್ಲಿ ಉತ್ಪತ್ತಿಯಾಗುತ್ತವೆ. ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ನೀರು ನಿಂತಿರುತಿರುವಲ್ಲಿ ಅಂದರೆ, ಮಡಕೆ, ಕುಡಿಕೆ, ಹೂದಾನಿ ಮಾಳಿಗೆ, ತೆರೆದ ತೊಟ್ಟಿಗಳು, ಹಳೆಯ ಡಬ್ಬಿಗಳು, ಪಶುಗಳು ನೀರು ಕುಡಿಯುವ ತೊಟ್ಟಿಗಳು, ಹಳೆಯ ಟೈರುಗಳು ಇತ್ಯಾದಿಗಳಲ್ಲಿಯೂ ಸಹ ಅನಾಫಿಲೀಸ್ ಸೊಳ್ಳೆಗಳು ಉತ್ಪತ್ತಿ ಆಗುತ್ತದೆ. ಮಲೇರಿಯಾ ಸೊಳ್ಳೆಗಳು ಮನೆ ಮತ್ತು ದನದ ಕೊಟ್ಟಿಗೆಗಳಲ್ಲಿ ಇರುತ್ತವೆ. ಇವು ತಮ್ಮ ಸ್ವಭಾವಕ್ಕೆ, ಅನುಗುಣವಾಗಿ ಮನೆಯ ಒಳಗೆ ಅಥವಾ ಹೊರಗೆ ವಿಶ್ರಮಿಸುತ್ತವೆ. ಟೇಬಲ್ ಕೆಳಗೆ, ಪರದೆಗಳ ಹಿಂಬದೆ ಹೀಗೆ ಕಡಿಮೆ ಬೆಳಕು ಇರುವ ಜಾಗಗಳಲ್ಲಿ ಇವು ಹೆಚ್ಚಾಗಿ ವಿಶ್ರಮಿಸುತ್ತವೆ.ಮಲೇರಿಯಾ ಸೊಳ್ಳೆಗಳು ಸಾಮಾನ್ಯವಾಗಿ ಸಂಜೆ ಹೊತ್ತಿನಲ್ಲಿ ಕಚ್ಚಲು ಆರಂಭಿಸಿತ್ತವೆ. ಇಡೀ ರಾತ್ರಿ ಕಚ್ಚುತ್ತಲೇ ಇರುತ್ತವೆ.ರೋಗನಿವಾರಕ ಸೊಳ್ಳೆಗಳು ಯಾಶವುದೇ ಮಲೇರಿಯಾ ಸೋಮಕು ಇರುವ ರೋಗಿಯನ್ನು ಕಚ್ಚಿ ರಕ್ತ ಹೀರಿದಾಗ, ಆ ರಕ್ತದೊಂದಿಗೆ ಮಲೇರಿಯಾ ಪರೋಪ ಜೀವಿಗಳು ಸೊಳ್ಳೆಯ ಶರೀರವನ್ನು ಸೇರಿ ಅವು ಸೋಮಕು ಹೊಂದುತ್ತವೆ. ಮತ್ತು ಇಡೀ ಜೀವಿತಕಾಲದಲ್ಲಿ ಅವು ಸೋಂಕಿತವಾಗಿಯೇ ಇರುತ್ತವೆ.
ಮಲೇರಿಯಾ ಅಥವಾ ಚಳಿಜ್ವರ ತಡೆಗಟ್ಟುವ ಕ್ರಮಗಳೇನು?
ಮಲಗುವಾಗ ಕೀಟನಾಶಕ ಸಂಸ್ಕರಿತ ಸೊಳ್ಳೆ ಪರದೆಯನ್ನು ಉಪಯೋಗಿಸಿ.ಮನೆಯ ಒಳಗಡೆ ಕೀಟನಾಶಕ ಸಿಂಪಡಣೆಯನ್ನು ಮಾಡಿಸಿ.ಸೊಳ್ಳೆಗಳು ಹುಟ್ಟಿ ಬೆಳೆಯುವ ಹಳ್ಳ – ಕೊಳ್ಳ ಇತ್ಯಾದಿಗಳನ್ನು ಮುಚ್ಚಿರಿ.ಕೆರೆಕುಂಟೆಗಳಲ್ಲಿ ಶೇಖರವಾಗಿರುವ ನೀರಿನಲ್ಲಿ ಗಂಬೂಜಿಯಾ/ಗಪ್ಪಿ ಮೀನನ್ನು ಸಾಕಿ. ಮನೆಯ ಸುತ್ತ-ಮುತ್ತ ಸ್ವಚ್ಚತೆಯನ್ನು ಕಾಪಾಡಿ. ಮಲೇರಿಯಾ ರೋಗಕ್ಕಾಗಿ ಸಂಪೂರ್ಣ ಚಿಕಿತ್ಸೆಯನ್ನು ಮಾಡಿಸಿ.
-ಎನ್.ವ್ಹಿ. ರಮೇಶ್, ಮೈಸೂರು
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು.