ಓದುಗ ಮಿತ್ರರೇ,
ಕರ್ನಾಟಕದಲ್ಲಿ, ಭಾರತ ದೇಶದಲ್ಲಿ, ನೀವು ಅನೇಕ ಕೋಟೆಗಳನ್ನು ನೋಡಿರಬಹುದು. ಆದರೆ ಮೇಲಿನಿಂದ ನೋಡಿದಾಗ, ನಕ್ಷತ್ರಾಕಾರದಲ್ಲಿ ಕಾಣುವ ಕೋಟೆ, ನನಗೆ ಗೊತ್ತಿರುವಂತೆ, ಇದೊಂದೇ. ೨೦೦೬ನೇ ಇಸವಿಯ ‘ಮುಂಗಾರು ಮಳೆ’ ಚಲನಚಿತ್ರ ನೋಡಿದ್ದರೆ, ಅದರಲ್ಲಿ ನೀವು ಈ ಮಂಜರಾಬಾದ್ ಕೋಟೆ ನೋಡಿರುತ್ತೀರಿ. ಇದಿರುವುದು, ಸಕಲೇಶಪುರದಿಂದ ಸುಮಾರು ೮ಕಿ.ಮೀ. ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಸಮುದ್ರ ಮಟ್ಟದಿಂದ ೩೨೪೦ ಅಡಿ ಎತ್ತರದಲ್ಲಿದೆ, ಈ ಮಂಜರಾಬಾದ್ ಕೋಟೆ. ಕ್ರಿ.ಶ.೧೭೮೫ರಲ್ಲಿ ಆರಂಭವಾದ ಕೋಟೆ ನಿರ್ಮಾಣ ಮುಗಿಯಲು ೭ ವರ್ಷ ಹಿಡಿಯಿತು. ಸುರಕ್ಷತೆ ಹಾಗೂ ಯುದ್ಧಕ್ಕೆ ಯಾರಾದರೂ ವೈರಿ ಬಂದಲ್ಲಿ ತಡೆಯಲು, ಟಿಪ್ಪೂ ಸುಲ್ತಾನ್ ಈ ಕೋಟೆ ಕಟ್ಟಿಸಿದ್ದನಂತೆ.
೧೮ನೇ ಶತಮಾನದ ಭಾರತದ ಐತಿಹಾಸಿಕ ಹಿನ್ನೆಲೆ ಗಮನಿಸಿ. ಆಗ ಭಾರತ ದೇಶದಲ್ಲಿ ವಸಾಹತು ನಡೆಸುತ್ತಿದ್ದ ಈಸ್ಟ್ ಇಂಡಿಯಾ ಕಂಪನಿ, ಇದಕ್ಕೆ ಬೆಂಬಲವಾಗಿದ್ದ ಬ್ರಿಟಿಷ್ ಸಾಮ್ರಾಜ್ಯ, ಹಾಗೂ ಅಧಿಕಾರಕ್ಕಾಗಿ ಸ್ವರ್ಧಿಸುತ್ತಿದ್ದ ಫ್ರಾನ್ಸ್ ದೇಶ, ಇವುಗಳ ಮಧ್ಯದಲ್ಲಿ, ಟಿಪ್ಪೂ ಬಹುಶಃ, ಈ ಕೋಟೆಯ ವಿನ್ಯಾಸ ಹಾಗೂ ನಿರ್ಮಾಣದಲ್ಲಿ, ಫ್ರೆಂಚ್ ಇಂಜಿನಿಯರರ ಬೆಂಬಲ ಪಡೆದಿರಬಹುದೇನೋ!. ಈ ನಕ್ಷತ್ರಾಕಾರದ ಕೋಟೆಯಲ್ಲಿ, ಕೇವಲ ೮ ಪಾಯಿಂಟುಗಳಿದ್ದು, ಇದನ್ನು ಕಾವಲು ಗೋಪುರವಾಗಿ, ಆಯುಧ ಸಂಗ್ರಹಾಲಯವಾಗಿ ವಿನ್ಯಾಸ ಮಾಡಲಾಗಿದೆ.
ಭದ್ರಕೋಟೆಯಲ್ಲಿ ಹೆಚ್ಚು ಪಾಯಿಂಟ್‌ಗಳಿದ್ದರೆ, ಫಿರಂಗಿಗಳನ್ನು ಸಾಗಿಸಲು, ವಿವಿಧ ಪಾಯಿಂಟ್‌ಗಳ ಮಧ್ಯೆ, ಸಂಪರ್ಕಕ್ಕೆ ಕಷ್ಟವಾಗುತ್ತದೆ. ಈ ಕೋಟೆ ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪದ ಶೈಲಿ ಹೊಂದಿದ್ದು, ಕಮಾನುಗಳಿರುವ ಪ್ರವೇಶ ದಾರಿಗಳನ್ನು ಹೊಂದಿದೆ. ಈ ಕೋಟೆ ಪರ್ವತದ ಇಡೀ ಮೇಲಿನ ಭಾಗ ಆವರಿಸಿರುವುದರಿಂದ, ಮುಖ್ಯ ದ್ವಾರ ಬಿಟ್ಟರೆ, ಬೇರೆ ಎಲ್ಲಿಂದಲೂ ಒಳಬರಲು ಅಸಾಧ್ಯ. ಪರ್ವತದ ಮೇಲ್ಭಾಗ, ಯಾವಾಗಲೂ ಇಬ್ಬನಿ, ಮಂಜಿನಿಂದ ಮುಸುಕಿರುತ್ತಿದ್ದುದರಿಂದ, ಈ ಕೋಟೆಗೆ ಮಂಜರಾಬಾದ್ ಹೆಸರು ಬಂದಿದೆ.
ಸಕಲೇಶಪುರ ದಾಟಿದರೆ, ಕರಾವಳಿಯಿಂದ ಬಯಲು ಪ್ರದೇಶದಲ್ಲಿ, ಇದೊಂದು ತಡೆಗೋಡೆಯಾಗಿತ್ತು. ಇತರ ಕೋಟೆಗಳಂತೆ ವಿವಿಧ ಮಟ್ಟಗಳಲ್ಲಿಲ್ಲದೇ, ಬೆಟ್ಟದ ಮೇಲೆ ಒಂದೇ ಮಟ್ಟದಲ್ಲಿದೆ. ಈ ಕೋಟೆಯ ನೀರಿನ ಒಂದೇ ಮೂಲ, ಕ್ರಾಸ್ ಆಕಾರದ ಗುಂಡಿಗಳಲಿದ್ದು, ಮೆಟ್ಟಿಲುಗಳು ಅದರೊಳಗೆ ಕರೆದೊಯ್ಯುತ್ತಿದ್ದವು. ಟಿಪ್ಪೂ ಸುಲ್ತಾನನ ಕಾಲದಲ್ಲಿ ಮದ್ದು ಗುಂಡುಗಳನ್ನು ಸಂಗ್ರಹಿಸಲು, ಈ ನಕ್ಷತ್ರಕಾರದ ಕೋಟೆಯ ಬಳಕೆಯಾಗುತ್ತಿತ್ತು. ಈ ಕೋಟೆಯಿರುವ ಸ್ಥಳದಿಂದ ಮೇಲಿದ್ದ ಸೈನಿಕರಿಗೆ, ಮಂಗಳೂರು ಕಡೆಯಿಂದ ಬರುತ್ತಿದ್ದ ಆಂಗ್ಲ ಸೈನಿಕರು ಕಾಣುವಂತೆ, ಇದನ್ನು ನಿರ್ಮಿಸಲಾಗಿದೆ. ಈ ಕೋಟೆಯಲ್ಲಿನ ವಿವಿಧ ಕೋಣೆಗಳಲ್ಲಿ, ಕೆಲವು ಕುದುರೆಗಳಿಗಾಗಿ, ಕೆಲವು ಸೈನಿಕರ ಅಡಿಗೆಮನೆ, ಸ್ನಾನದ ಕೋಣೆಗಳಿಗಾಗಿ ಹಿಂದೆ ಬಳಸ್ಪಡುತ್ತಿತ್ತಂತೆ. ಈ ಕೋಟೆಯಲ್ಲಿಯ ಒಂದು ಸುರಂಗ ಮಾರ್ಗ, ಶ್ರೀರಂಗಪಟ್ಟಣಕ್ಕೆ ರಹಸ್ಯ ದಾರಿಯಾಗಿತ್ತಂತೆ. ನಂತರ ಇದನ್ನು, ಸತ್ತವರ ಹೆಣಗಳನ್ನು ಎಸೆಯಲು ಬಳಸಲಾಯಿತಂತೆ.
ಈಗ ಕೋಟೆಯ ಮೇಲಿಂದ ಪ್ರವಾಸಿಗರು, ಪಶ್ಚಿಮ ಘಟ್ಟಗಳ ದೂರದ ದೃಶ್ಯ ವೀಕ್ಷಿಸಬಹುದು.
ಬೆಂಗಳೂರಿನಿಂದ ಮಂಜರಾಬಾದ್‌ಗೆ ಮಾರ್ಗ: ಬೆಂಗಳೂರಿನಿಂದ ಹಾಸನಕ್ಕೆ ರೈಲು, ಬಸ್, ಅಥವಾ ಸ್ವಂತ ವಾಹನದಲ್ಲಿ ಹೋಗಬಹುದು. ಹಾಸನದಿಂದ ಸಕಲೇಶಪುರ ೩೫ಕಿ.ಮೀ. ರೈಲು-ಬಸ್-ವಾಹನದಲ್ಲಿ ಹೋಗಬಹುದು. ಹತ್ತಿರದ ವಿಮಾನ ನಿಲ್ದಾಣ, ಮಂಗಳೂರು.
-ಎನ್.ವ್ಹಿ. ರಮೇಶ್, ಮೈಸೂರು
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು.