ಶಿವಮೊಗ್ಗ : ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಾನ ಮನಸ್ಕರ ತಂಡವಾಗಿರುವ ನಮ್ಮ “ಅನವರತ” ಸಮಾಜದ ವಿವಿಧ ಕ್ಷೇತ್ರದ ನಾಗರೀಕರನ್ನು ಒಂದೆಡೆ ಸೇರಿಸಿ ಶಿವಮೊಗ್ಗ ನಗರದ ಸರ್ವತೋಮುಖ ಅಭಿವೃದ್ಧಿಗೆ, ಪ್ರಗತಿ ಪಥಕೆ ಪುಷ್ಟಿ ನೀಡಬಹುದಾದಂತಹ ಅನೇಕ ವಿಷಯಗಳನ್ನು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ವಿವಿಧ ಕ್ಷೇತ್ರದ ನಾಗರೀಕರು ನೀಡುವ ಸಲಹೆಗಳನ್ನು ಅನುಷ್ಠಾನ ಮಾಡುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ನಿರ್ಧರಿಸಿರುವ ನಮ್ಮ ಈ ತಂಡವೇ ಅನವರತ (ನಿರಂತರ…)
ಶಿವಮೊಗ್ಗ ನಗರದ ಪರಂಪರೆ ಮತ್ತು ಸಾಂಸ್ಕೃತಿಕತೆಯನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ದಿನಾಂಕ 27.11.2024ರ ಬುಧವಾರದಂದು ಅನವರತ ತಂಡದಿಂದ ಮಲೆನಾಡಿನ ಮಣ್ಣಿನ ಸಾಂಸ್ಕೃತಿಕ ಸೋಗಡನ್ನು ಬಿಂಬಿಸುವ “ಸಿಹಿಮೊಗೆ ಸಂಭ್ರಮ-01” ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವು ನಮ್ಮ ಸಂಪ್ರದಾಯ, ಶ್ರೀಮಂತ ವೈವಿಧ್ಯತೆ ಮತ್ತು ಸೃಜನಶೀಲ ಅಭಿವ್ಯಕ್ತಿಯನ್ನು ಗುರುತಿಸಲು ಸಜ್ಜಾಗಿ ನಿಂತಿದೆ.
ಒಂದು ದಿನದ ಈ ವಿಶೇಷ ಕಾರ್ಯಕ್ರಮವನ್ನು ಎರಡು ಆಯಾಮಗಳಲ್ಲಿ ವಿಂಗಡಿಸಲಾಗಿದ್ದು, ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆಯಲ್ಲಿರುವ ಸೈನ್ಸ್ ಮೈದಾನ ಹಾಗೂ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಈ ಕಾರ್ಯಕ್ರಮಗಳು ಜರುಗಲಿದೆ.
27.11.2024ರ ಬುಧವಾರದಂದು ಸಂಜೆ 6.00 ಗಂಟೆಗೆ ಶಿವಮೊಗ್ಗದ ಸೈನ್ಸ್ ಮೈದಾನ ಆವರಣದಲ್ಲಿ ನಾಡಿನ ಹೆಸರಾಂತ ಯಕ್ಷಗಾನ ಕಲಾವಿದರಾದ ಯಕ್ಷ ಧ್ರುವ ‘ಶ್ರೀ ಪಟ್ಲ ಸತೀಶ್ ‘ಅವರ ಸಾರಥ್ಯದಲ್ಲಿ ‘ಯಕ್ಷ ಸಂಭ್ರಮ’ ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ‘ಅಯೋಧ್ಯ ದೀಪ ಪ್ರಸಂಗ’ ಪ್ರಸ್ತುತ ಪಡಿಸಲಿದ್ದಾರೆ.
ಇದಕ್ಕೆ ಪೂರಕವಾದಂತೆ ತಂಡದ ವತಿಯಿಂದ ಮಲೆನಾಡಿನ ಯುವ ಪ್ರತಿಭೆಗಳನ್ನು ಗುರುತಿಸುವ ಸಲವಾಗಿ 27.11.2024ರ ಬೆಳಿಗ್ಗೆ ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಚಿತ್ರಕಲೆ ಮತ್ತು ಛಾಯಾಗ್ರಹಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದ್ದು, ಆನ್ ಲೈನ್ ಮೂಲಕ ನೊಂದಾಯಿಸಲು ಈಗಾಗಲೇ ಗೂಗಲ್ ಫಾರ್ಮ್ (Google Form) ಕೂಡಾ ತೆರೆಯಲಾಗಿದೆ.
ಒಂದು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಹಾಗೂ ಯಕ್ಷಗಾನ ಪ್ರಿಯರು ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಸಮಸ್ತ ನಾಗರೀಕರು ಬಂದು ಯಶಸ್ವಿಗೊಳಿಸಬೇಕೆಂದು ಶಿವಮೊಗ್ಗ ಶಾಸಕ ಶ್ರೀ ಎಸ್. ಎನ್. ಚನ್ನಬಸಪ್ಪ ಅವರು ಮನವಿ ಮಾಡಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ