ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ 1998-99 ನೇ ಸಾಲಿನಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಪ್ರೌಢಶಾಲೆ ಇಲ್ಲಿ ಎಸ್. ಎಸ್. ಎಲ್. ಸಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳಿಂದ “ಗುರುವಂದನಾ ಮತ್ತು ಸ್ನೇಹ ಭಾವಯಾನ ಕಾರ್ಯಕ್ರಮ” ವನ್ನು ದಿನಾಂಕ 24/11/2024 ರಂದು ಹಮ್ಮಿಕೊಂಡಿದ್ದು, ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಸಾವಿರಾರು ಶಿಷ್ಯ ಬಳಗವನ್ನು ಹೊಂದಿರುವ ದೇವರಹಳ್ಳಿ ಪ್ರೌಢಶಾಲೆ ಅನೇಕ ಸಾಧನೆಗಳಿಗೆ ಸ್ಪೂರ್ತಿಯಾಗಿದೆ. ಅದಕ್ಕೆ ಕಾರಣೀಭೂತರಾದ ಎಲ್ಲಾ ಗುರುಗಳಿಗೆ ಗೌರವಾರ್ಪಣೆ ಮಾಡುವುದು ಅತ್ಯಂತ ಪುಣ್ಯ ಕಾರ್ಯ ಎಂದು ಆಶಿಸುತ್ತಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಒಂದರಿಂದ ಹತ್ತನೇ ತರಗತಿಯವರೆಗೆ ಓದಿದ್ದ ವಿದ್ಯಾರ್ಥಿಗಳು ಹಾಗೂ ಗುರುಗಳಿಗೆ ಆಹ್ವಾನ ನೀಡಲಾಗಿದ್ದು, ಹಿರೇಉಡ, ಕೆ. ರಾಮಗೊಂಡನಹಳ್ಳಿ, ಚಿಕ್ಕ ದೇವರಹಳ್ಳಿ, ದೇವರಹಳ್ಳಿ ತಾಂಡ, ರಂಗಾಪುರ ತಾಂಡ, ಗೊಪ್ಪೇನಹಳ್ಳಿ ಹಾಗೂ ವಿವಿಧ ಗ್ರಾಮಗಳಿಂದ ಬರುತ್ತಿದ್ದ ಎಲ್ಲಾ ವಿದ್ಯಾರ್ಥಿಗಳೂ ಸೇರಲಿದ್ದಾರೆ. ಎಸ್. ಎಸ್. ಎಲ್. ಸಿ ಮುಗಿದು 25 ವರ್ಷಗಳಾಗಿರುವ ಪ್ರಯುಕ್ತ ಸಿಲ್ವರ್ ಜೂಬ್ಲಿ ಅಂಗವಾಗಿ ಸರಿಸುಮಾರು 45 ಗುರುಗಳಿಗೆ ಗುರುವಂದನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವು ಶ್ರೀಮತಿ ಸುಶೀಲಮ್ಮ ಎನ್ ಮುಖ್ಯ ಶಿಕ್ಷಕರು ಶ್ರೀ ಲಕ್ಷ್ಮೀ ರಂಗನಾಥ ಪ್ರೌಢಶಾಲೆ ದೇವರಹಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಶ್ರೀ ಕೆ. ಎಸ್. ಮಂಜಪ್ಪ ಮುಖ್ಯ ಶಿಕ್ಷಕರು ಎ.ಸಿದ್ದಪ್ಪ ಬಡಾವಣೆ, ಶ್ರೀಮತಿ ಯಶೋದಮ್ಮ ಡಿ. ಸಿ ಮುಖ್ಯ ಶಿಕ್ಷಕರು ಬಾಲಕಿಯ ಶಾಲೆ, ಶ್ರೀಮತಿ ಬಸಮ್ಮ ಮುಖ್ಯ ಶಿಕ್ಷಕರು ಬಾಲಕರ ಶಾಲೆ ಹಾಗೂ ಶ್ರೀ ರಂಗಸ್ವಾಮಿ ಡಿ. ಜಿ. ಮುಖ್ಯ ಶಿಕ್ಷಕರು ಗುರುಕುಲ ವಿದ್ಯಾಸಂಸ್ಥೆ ಇವರು ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮವನ್ನು ಮೊದಲ ಅಕ್ಷರ ತಿದ್ದಿಸಿ, ಅಕ್ಕರಬೀಜ ಬಿತ್ತಿದ ಶ್ರೀಮತಿ ಗಿರಿಜಮ್ಮ ಗುಳ್ಳೆಹಳ್ಳಿ ಇವರು ಉದ್ಘಾಟಿಸಲಿದ್ದಾರೆ. ಶಿಕ್ಷಕ ಸಾಹಿತಿ ರಂಗನಾಥ ಕ ನಾ ದೇವರಹಳ್ಳಿ ಇವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದು, ಗುರುನಮನ ನುಡಿಗಳನ್ನು ಶ್ರೀ ಪ್ರವೀಣ್ ಕೆ. ಎನ್ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗಳು ಹಾವೇರಿ ಇವರು ನುಡಿಯಲಿದ್ದು, ಅಗಲಿದ ಗುರುಗಳು ಹಾಗೂ ಗೆಳೆಯರಿಗೆ ನಮನ ಮತ್ತು ದೇವರಹಳ್ಳಿಯಲ್ಲಿ ಓದಿ ಈಗ ಗುರುಗಳಾಗಿ ನಾಡಿನಾದ್ಯಂತ ಸೇವೆ ಸಲ್ಲಿಸುತ್ತಿರುವ ಗುರುಗಳಿಗೆ ಗೌರವಾರ್ಪಣೆ ನಡೆಯುತ್ತದೆ.
ಒಟ್ಟು 106 ವಿದ್ಯಾರ್ಥಿಗಳನ್ನು ಹೊಂದಿರುವ ಶ್ರೀ ಲಕ್ಷ್ಮೀ ರಂಗನಾಥ ಪ್ರೌಢಶಾಲೆ ದೇವರಹಳ್ಳಿ ಇದು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಆಶ್ರಯದಲ್ಲಿ ನಡೆಯುತ್ತಿದ್ದು, ಸಂಸ್ಥೆಯ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ “ಸೇವೆ.. ಸೇವೆ.. ಸೇವೆ” ಎಂಬ ಮಂತ್ರವನ್ನು ಮೈಗೂಡಿಸಿಕೊಂಡು ಪ್ರಸ್ತುತ ಕಾರ್ಯಕ್ರಮದ ಮೂಲಕ ನಾಡಿನಾದ್ಯಂತ ಶಿಕ್ಷಣ ಹಾಗೂ ಸಾಂಸ್ಕೃತಿಕ ಜೀವನಕ್ಕೆ ಉತ್ತಮ ಸಂದೇಶ ನೀಡಲು ಬಯಸಿದ್ದಾರೆ.
ವರದಿ : ವೆಂಕಟೇಶ್ ಬಿ ಪಿ, ದೇವರಹಳ್ಳಿ