ರಾಯಚೂರು/ಸಿಂಧನೂರು:
ಮಕ್ಕಳ ಕಲಿಕೆಗೆ ಮತ್ತು ಶಾಲಾ ಮೌಲಭೂತ ಸೌಲಭ್ಯಗಳಿಗೆ ಅನುವಾಗುವಂತೆ ಪುಣೆ ಮೂಲದ ಸುಜಲಾನ್ ಫೌಂಡೇಶನ್ ಆರ್ಥಿಕ ಸಹಾಯದಿಂದ ವಿವಿಧ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾಗುವ ಎಲ್ಲಾ ಆರು ವಿಷಯಗಳಿಗೆ ಸಂಬಂಧಿಸಿದಂತೆ ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು 60ಕ್ಕೂ ಹೆಚ್ಚು ಸಂಖ್ಯೆಯ ಕಲಿಕೋಪಕರಣಗಳ ಚಿತ್ರಪಟಗಳು, ಶಾಲಾ ಗ್ರಂಥಾಲಯದ ಪುಸ್ತಕಗಳನ್ನು ಜೋಡಿಸಲು ಅನುಕೂಲವಾಗುವ ಸ್ಟೀಲ್-ಗಾಜಿನ ಅಲ್ಮೇರಾ, ಕಟ್ಟಿಗೆಯ ಟೇಬಲ್‌ಗಳು, ಮೈಕ್‌ಸೆಟ್ ಸ್ಟಾಂಡ್, ಸೌಂಡ್ ಸಿಸ್ಟಮ್ ಸೇರಿದಂತೆ ಶಾಲೆಗೆ 40 ಸಾವಿರ ರೂಪಾಯಿಗಳ ಮೌಲ್ಯದ ವಿವಿಧ ಕಲಿಕೋಪಕರಣ ಮತ್ತು ಪೀಠೋಪಕರಣಗಳನ್ನು ಶಾಲೆಗೆ ದಾನವಾಗಿ ನೀಡಿದರು.

ಈ ಸಂದರ್ಭದಲ್ಲಿ ರಾಣೇಬೆನ್ನೂರಿನ ನೀಡ್ಸ್ ಸಂಸ್ಥೆಯ ಉಳುವಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸುಜಲಾನ್‌ನ ಸಿ.ಎಸ್.ಆರ್. ಅನುದಾನಿಂದ ಈ ಶಾಲೆಗೆ ಪ್ರತಿವರ್ಷವೂ ಪುಣೆ ಮೂಲದ ಸುಝಲಾನ್ ಫೌಂಡೇಶನ್, ಕಲಮಂಗಿ ಗ್ರಾಮದ ಶ್ರೀ ಚೆನ್ನಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿ ಮತ್ತು ನೀಡ್ಸ್ ಸಂಸ್ಥೆಯು ಒಂದಿಲ್ಲೊಂದು ನೆರವು ನೀಡುತ್ತಾ ಬಂದಿದೆ. ಶಾಲಾ ವಿದ್ಯಾರ್ಥಿಗಳು ಇವುಗಳ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯರಾದ ಮಲ್ಲಪ್ಪ ಬಾದರ್ಲಿ ಮಾತನಾಡುತ್ತಾ, ವಿವಿಧ ಸಂಘ-ಸಂಸ್ಥೆಗಳು, ಸಮುದಾಯ ಸರ್ಕಾರಿ ಶಾಲೆಗಳ ಶೈಕ್ಷಣಿಕ ಮತ್ತು ಮೂಲಭೂತ ಸೌಲಭ್ಯಗಳನ್ನು ಉತ್ತಮಪಡಿಸಲು ಸಹಾಯ ಸಹಕಾರ ನೀಡುತ್ತಿರುವುದು ತುಂಬಾ ಶ್ಲಾಘನೀಯ. ಇವುಗಳನ್ನು ನಮ್ಮ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ ಎಂದರು.
ಸ್ವಚ್ಛತಾ ಅಭಿಯಾನ:
ಇದೇ ಸಂದರ್ಭದಲ್ಲಿ ಸುಝಲಾನ್ ಫೌಂಡೇಶನ್, ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್) ಮತ್ತು ಶ್ರೀ ಚೆನ್ನಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿಯ ಸಂಯುಕ್ತಾಶ್ರಯದಲ್ಲಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಗ್ರಾಮದ ಪ್ರಮುಖ ರಸ್ತೆ, ಓಣಿಗಳಲ್ಲಿ ಸುಮಾರು 25-ಕೆ.ಜಿಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜವನ್ನು ಸಂಗ್ರಹಿಸಿ ಗ್ರಾಮ ಪಂಚಾಯಿತಿಗೆ ನೀಡಲಾಯಿತು. ಶಾಲಾ ಮಕ್ಕಳಿಂದ ಪ್ಲಾಸ್ಟಿಕ್‌ನಿಂದ ಉಂಟಾಗುವ ಅಪಾಯಗಳು, ಸ್ವಚ್ಛ ಪರಿಸರ ವಿಷಯಗಳ ಕುರಿತು ಘೋಷಣೆಗಳನ್ನು ಕೂಗಿ ಗ್ರಾಮದಲ್ಲಿ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಂಜನೇಯ ಚಿಕ್ಕಭೇರಗಿ, ಪಿಡಿಒ ಹುಚ್ಚಪ್ಪ, ಶಿಕ್ಷಕರಾದ ವೀರೇಶ ಗೋನವಾರ, ಆರೋಗ್ಯ ಇಲಾಖೆಯ ದೊಡ್ಡಬಸವ, ಲಕ್ಷ್ಮೀ ದೇವಿ, ಸುಝಲಾನ್ ಸಿ.ಎಸ್.ಆರ್ ವ್ಯವಸ್ಥಾಪಕರಾದ ಸುಜಾತಾ, ನೀಡ್ಸ್ ಸಂಸ್ಥೆಯ ಉಳುವಪ್ಪ ಮಾತನಾಡಿದರು, ಶ್ರೀ ಚೆನ್ನಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿಯ ಅಯ್ಯನಗೌಡ ಹೊಸಮನಿ, ಹನುಮಂತಪ್ಪ ಕೆಸರಟ್ಟಿ, ಶರಣಬಸವ, ದೊಡ್ಡಬಸವ, ಅನುರಾಧಾ ಗುಡದೂರು, ಶ್ರೀದೇವಿ ಹಳೇಮನಿ, ಮಹಾಂತೇಶ ಕುಲಕರ್ಣಿ, ಗ್ರಾಮದ ಸೋಮಲಿಂಗಪ್ಪ ಸೇರಿದಂತೆ, ಪಾಲಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದರು.
ವಿಶೇಷ ಉಪನ್ಯಾಸ :
ಶಾಲಾ ಆವರಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನವೀಕರಿಸಬಹುದಾದ ಮತ್ತು ನವೀಕರಿಸಲಾದ ಸಂಪನ್ಮೂಲಗಳ ಕುರಿತು ವಿಶೇಷ ಉಪನ್ಯಾಸವನ್ನು ಸುಝಲಾನ್ ಸಿ.ಎಸ್.ಆರ್. ಮ್ಯಾನೇಜರ್ ಸುಜಾತಾ ಅರಗಂಜಿ ವಿಶೇಷ ಉಪನ್ಯಾಸ ನೀಡಿದರು. ಸುಝಲಾನ್ ಕಂಪನಿಯ ಇಂಜಿನೀಯರ್‌ಗಳಾದ ಮರ್ದಾನಸಾಬ, ಬಸವರಾಜ ಉಪ್ಪಾರ, ರಾಮಣ್ಣ ಅವರು ಸುಝಲಾನ್ ಕಂಪನಿಯ ಗಾಳಿ ಯಂತ್ರದಿಂದ ವಿದ್ಯುತ್ ತಯಾರಿಸುವ ವಿಧಾನ, ವಿದ್ಯುತ್ ಉತ್ಪಾದನೆಯ ಪ್ರಮಾಣದ ಕುರಿತು ವಿವರಿಸಿದರು. ಜೊತೆಗೆ ವಿದ್ಯುತ್ ಅಪಘಾತ ಮತ್ತು ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಸಚಿತ್ರವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಸಮಿತಿಯ ದಯಾನಂದ ಸ್ವಾಮಿ, ಸಮಿತಿಯ ಪೋಸ್ಟ್ ಶರಣೇಗೌಡ ಹಳೇಮನಿ, ಶರಣೇಗೌಡ ಪೊಲೀಸ್ ಪಾಟೀಲ್, ಆಂಜನೇಯ ಇಲ್ಲೂರು, ಕಾರ್ಯದರ್ಶಿ ಬಸವರಾಜ ಕುಲಕರ್ಣಿ, ಶಿಕ್ಷಕರಾದ ಸುಭಾಷ ಪತ್ತಾರ, ಎಂ.ಮಾರುತಿ, ರೂಪಾ, ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.
