ಬೆಳಗಾವಿ ಜಿಲ್ಲೆ ಸುಕ್ಷೇತ್ರ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಲೋಕಾಪೂರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ನೂತನ ರೈಲು ಮಾರ್ಗ ನಿರ್ಮಾಣವಾಗಬೇಕೆಂದು ಒತ್ತಾಯಿಸಿ ಸವದತ್ತಿ ಯಲ್ಲಮ್ಮ ದೇವಿಯ ಭಕ್ತರು ಮತ್ತು ಸವದತ್ತಿ ಪಟ್ಟಣದ ಸಾರ್ವಜನಿಕರೆಲ್ಲರೂ ಸೇರಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬೃಹತ್ ಹೋರಾಟ ನಡೆಸಲು ಮುಂದಾಗಿದ್ದಾರೆ.
ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ರೈಲು ಮಾರ್ಗ ನಿರ್ಮಿಸುವಂತೆ ಸುಮಾರು ವರ್ಷಗಳಿಂದ ಹೋರಾಟ, ಪ್ರತಿಭಟನೆಗಳು ನಡೆದಿವೆ ಸದ್ಯ ಈ ರೈಲು ಹೋರಾಟ ಮತ್ತೆ ಜೀವ ಪಡೆದುಕೊಂಡಿದೆ.
ಅದರಂತೆ ಹೋರಾಟದ ರೂಪುರೇಷೆಗಳ ಕುರಿತು ಇತ್ತೀಚಿಗೆ ಪಟ್ಟಣದ ಶ್ರೀ ಕುಮಾರೇಶ್ವರ ಕಲ್ಮಠ ಮಠದಲ್ಲಿ ಪೂಜ್ಯ ಶ್ರೀ ಮ ನಿ ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೂಲಿಮಠರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಈ ಪೂರ್ವಭಾವಿ ಸಭೆಯಲ್ಲಿ ರಾಜ್ಯ ರೈಲು ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಕುತ್ಬುದ್ದಿನ್ ಕಾಜಿ, ಯಲ್ಲಮ್ಮ ದೇವಿಯ ಭಕ್ತರು ಮತ್ತು ಸವದತ್ತಿ ಪಟ್ಟಣದ ಸಾರ್ವಜನಿಕರು,ಜನಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಸಭೆಯನ್ನುದ್ದೇಶಿಸಿ ರಾಜ್ಯ ರೈಲು ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಕುತ್ಬುದ್ದಿನ್ ಕಾಜಿ ಮಾತನಾಡಿ ಡಿ.16ರಂದು ಸವದತ್ತಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಸವದತ್ತಿ ತಾಲೂಕಿನ ಎಲ್ಲ ಮಹಾಜನತೆ ಪಾಲ್ಗೊಳ್ಳಲು ಕರೆ ನೀಡಿದರು.
ರೈಲ್ವೆ ಹೋರಾಟದ ಪೂರ್ವಭಾವಿ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪೂಜ್ಯ ಶ್ರೀ ಮ ನಿ ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೂಲಿಮಠ ಅವರು ಸುದ್ದಿಗಾರರೊಂದಿಗೆ ಮಾತನಾಡಿ “ ರಾಜ್ಯ ರೈಲು ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಕುತ್ಬುದ್ದಿನ್ ಕಾಜಿಯವರು ಸವದತ್ತಿ ಯಲ್ಲಮ್ಮನ ದೇವಾಲಯದಲ್ಲಿ ಎರೆಹೊಂಡದ ನೀರನ್ನು ಹಾಕಿಕೊಂಡು ಶ್ರೀ ಯಲ್ಲಮ್ಮ ದೇವಿಯ ದರ್ಶನ ಪಡೆದು ದೇವಾಲಯದಿಂದ ಸವದತ್ತಿ ತಹಶೀಲ್ದಾರ್ ಕಛೇರಿವರೆಗೆ ಸಾರ್ವಜನಿಕರೊಂದಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಮತ್ತು ಚಳಿಗಾಲ ಅಧಿವೇಶನ ಮುಗಿಯುವವರೆಗೂ ಪಟ್ಟಣದಲ್ಲಿ ನಾವೆಲ್ಲರೂ ಸೇರಿ ಧರಣಿ ಕೂರತೆವೆ” ಎಂದು ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ವಿವರಿಸಿದರು.
ನಂತರ ನ್ಯಾಯವಾದಿ R.B ಶಂಕರಗೌಡ್ರ ಮಾತನಾಡಿ “ಸವದತ್ತಿ ಯಲ್ಲಮ್ಮ ಕ್ಷೇತ್ರ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಾದರೆ ಈ ಕ್ಷೇತ್ರಕ್ಕೆ ರೈಲ್ವೆ ಸೌಲಭ್ಯ ಅತ್ಯಂತ ಅವಶ್ಯಕವಾಗಿದೆ.ಆದ್ದರಿಂದ ಲೋಕಾಪುರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ರೈಲು ಮಾರ್ಗ ನಿರ್ಮಾಣಕ್ಕಾಗಿ ಒತ್ತಾಯಿಸಿ ಇದೇ ಡಿ.16 ರಂದು ನಮ್ಮ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಅವರಿಗೆ ನಾವು ಮನವಿ ಸಲ್ಲಿಸಲಿದ್ದೇವೆ.ಆದಷ್ಟು ಬೇಗ ಈ ರೈಲು ಯೋಜನೆ ಕಾರ್ಯ ರೂಪಕ್ಕೆ ಬರಬೇಕು. ಇದಕ್ಕಾಗಿ ಎಲ್ಲಾ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಬೆಂಬಲ ನೀಡಬೇಕೆಂದು ಹೇಳಿದರು.
ಈ ಸಭೆಯಲ್ಲಿ ರಾಮದುರ್ಗ ರೈಲ್ವೆ ಹೋರಾಟ ಮುಖಂಡ ಶಫಿ ಬೆಣ್ಣಿ ಮಾತನಾಡಿ “ನಮ್ಮ ಭಾಗದಲ್ಲಿ ಶಬರಿ ಶ್ರೀ ರಾಮರಿಗೆ ಬಾರೆಹಣ್ಣು ಸೇವಿಸಲು ಕೊಟ್ಟಂತಹ ಸ್ಥಳ ಶಬರಿಕೊಳ್ಳ,ಅದರ ಜತೆ ಶಿವನ ಮೂರ್ತಿ, ಶಿರಸಂಗಿ ಕಾಳಮ್ಮ,ಸವದತ್ತಿ ಯಲ್ಲಮ್ಮ ಸೇರಿ ಹಲವಾರು ಐತಿಹಾಸಿಕ ಕ್ಷೇತ್ರಗಳಿವೆ. ಇವುಗಳ ಅಭಿವೃದ್ಧಿಗೆ ರೈಲು ಸಂಪರ್ಕ ಅವಶ್ಯಕವಾಗಿದೆ.ಇದಕ್ಕಾಗಿ ಸವದತ್ತಿ ಮತ್ತು ರಾಮದುರ್ಗ ಜನತೆ ಜಂಟಿಯಾಗಿ ಹೋರಾಟ ಮಾಡಿದರೆ ನಮ್ಮ ಹೋರಾಟಕ್ಕೆ ಪ್ರತಿಫಲ ಖಂಡಿತವಾಗಿ ಸಿಗುತ್ತದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈಲು ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಕುತ್ಬುದ್ದಿನ್ ಕಾಜಿ, ಪೂಜ್ಯ ಶ್ರೀ ಮ ನಿ ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೂಲಿಮಠ, ನ್ಯಾಯವಾದಿ R.B ಶಂಕರಗೌಡ್ರ , ಫಕರುಸಾಬ್ ನದಾಫ್, ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡರಾದ ಶಫಿ ಬೆಣ್ಣಿ,ಗೈಬು ಜೈನೆಖಾನ,ಎಂ.ಕೆ.ಯಾದವಾಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
