ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪರಿಣಾಮಕಾರಿ ಆಡಳಿತ, ಸಾಮಾಜಿಕ ಒಗ್ಗಟ್ಟಿಗೆ ಏಕ ರಾಷ್ಟ್ರ, ಏಕ ಚುನಾವಣೆ

ದಿನಾಂಕ 14 ಮಾರ್ಚ್ 2024 ರಂದು ಏಕ ರಾಷ್ಟ್ರ, ಏಕ ಚುನಾವಣೆ ಕುರಿತಂತೆ ರಚನೆಯಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯ ಸಮಿತಿಯು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತು. 191 ದಿನಗಳ ಕಾಲ ನಡೆದ ಸುಧೀರ್ಘ ಅಧ್ಯಯನದ ನಂತರ 18,626 ಪುಟಗಳ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.

ಸಮಿತಿಯಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ರಾಜ್ಯ ಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಶ್ರೀ ಗುಲಾಮ್ ನಬಿ ಅಜಾದ್, 15-ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ಎನ್.ಕೆ.ಸಿಂಗ್, ಖ್ಯಾತ ವಕೀಲರಾದ ಶ್ರೀ ಹರೀಶ್ ಸಾಳ್ವೆ, ಮಾಜಿ ಕಾನೂನು ಸಚಿವರಾಗಿದ್ದ ಶ್ರೀ ಅರ್ಜುನ್ ಮೇಘವಾಲ್ ಸೇರಿದಂತೆ ಅನೇಕ ಸದಸ್ಯರು ಈ ಸಮಿತಿಯಲ್ಲಿ ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಹಂಚಿಕೊಂಡಿದ್ದರು. ಈಗಾಗಲೇ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಸ್ವೀಡನ್ ಹಾಗೂ ಬೆಲ್ಜಿಯಂ ನಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದೆ.

2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮೊಟ್ಟ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಜಿ ಅವರು ಏಕ ರಾಷ್ಟ್ರ, ಏಕ ಚುನಾವಣೆಯನ್ನು ಅನುಷ್ಠಾನಗೊಳಿಸುವ ಪ್ರಸ್ತಾವನೆಯನ್ನು ಇಟ್ಟಿದ್ದರು. ಸುಮಾರು 47 ರಾಜಕೀಯ ಪಕ್ಷಗಳು ತಮ್ಮ ಸಲಹೆಗಳನ್ನು ಈ ಸಮಿತಿಗೆ ನೀಡಿದ್ದವು, ಅದರಲ್ಲಿ 32 ಪಕ್ಷಗಳು ಈ ಉಪಕ್ರಮವನ್ನು ಬೆಂಬಲಿಸಿದ್ದವು. ಅಸಮಕಾಲಿಕ ಚುನಾವಣೆಗಳಿಂದ ಹಣದುಬ್ಬರ ಹೆಚ್ಚಾಗುತ್ತದೆ, ಆರ್ಥಿಕತೆಯ ಹಾಗೂ ಸಾಮಾಜಿಕ ಸಾಮರಸ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಮಿತಿ ವರದಿ ನೀಡಿದೆ. ಸಂವಿಧಾನಕ್ಕೆ ಕನಿಷ್ಠ ತಿದ್ದುಪಡಿ ಮಾಡುವ ಮೂಲಕ ಈ ಬದಲಾವಣೆಯನ್ನು ತರಬಹುದು ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಏನಿದು ಏಕ ದೇಶ, ಏಕ ಚುನಾವಣೆ ?

ಭಾರತದ ಎಲ್ಲಾ ರಾಜ್ಯಗಳ ವಿಧಾನ ಸಭಾ ಹಾಗೂ ಲೋಕಸಭಾ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವುದು ಇದರ ಪರಿಕಲ್ಪನೆ. ಅಂದರೆ, ಲೋಕ ಸಭಾ ಹಾಗೂ ರಾಜ್ಯ ವಿಧಾನ ಸಭಾ ಚುನಾವಣೆಗಳನ್ನು ಒಂದೇ ದಿನ ನಡೆಸುವುದು ಅಥವಾ ನಿರ್ದಿಷ್ಟ ಸಮಯದ ಚೌಕಟ್ಟಿನಲ್ಲಿ ನಡೆಸುವುದು ಇದರ ಉದ್ದೇಶವಾಗಿದೆ.
ಏಕ ದೇಶ, ಏಕ ಚುನಾವಣೆಯ ಪರಿಕಲ್ಪನೆ ನಮ್ಮ ದೇಶಕ್ಕೆ ಹೊಸತೇನಲ್ಲ, ಸ್ವಾತಂತ್ರ್ಯದ ನಂತರದಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಆದರೆ, 1968 ಹಾಗೂ 1969 ರಲ್ಲಿ ಕೆಲ ರಾಜ್ಯಗಳ ವಿಧಾನಸಭೆ ಹಾಗೂ ಕೇಂದ್ರದಲ್ಲಿ 1970 ರಲ್ಲಿ ಲೋಕಸಭೆ ಅವಧಿಪೂರ್ವ ವಿಸರ್ಜನೆ ಆಗಿದ್ದರಿಂದ ಏಕಕಾಲದಲ್ಲಿ ನಡೆಸುವ ಚುನಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು.

1983 ರಲ್ಲಿ ಏಕಕಾಲಿಕ ಚುನಾವಣೆಯನ್ನು ಮತ್ತೊಮ್ಮೆ ಪರಿಚಯಿಸುವ ಪ್ರಯತ್ನವನ್ನು ಚುನಾವಣಾ ಆಯೋಗ ಮಾಡಿತ್ತಾದರೂ ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಲಿಲ್ಲ. 1999 ರಲ್ಲಿ ಕಾನೂನು ಆಯೋಗವೂ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂದು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು, ಆದರೆ ಆಯೋಗದ ಪ್ರಸ್ತಾವನೆಗೆ ಕೇಂದ್ರ ಅನುಮತಿ ನೀಡಿರಲಿಲ್ಲ.

ಏಕಕಾಲಿಕ ಚುನಾವಣೆಯ ಪರಿಕಲ್ಪನೆ ಏಕೆ ?

2019 ಇಸವಿಯಲ್ಲಿ ನಡೆದ ಲೋಕಸಭಾ ಚುನಾವಣೆಗೆ ಖರ್ಚಾಗಿದ್ದು ರೂ.60,000 ಕೋಟಿ. ಇದರಲ್ಲಿ ಚುನಾವಣಾ ಆಯೋಗದ ಖರ್ಚು ವೆಚ್ಚಗಳು, ಭದ್ರತಾ ವೆಚ್ಚ ಸೇರಿದಂತೆ ರಾಜಕೀಯ ಪಕ್ಷಗಳು ಚುನಾವಣೆಗೆ ಖರ್ಚು ಮಾಡಿದ ಹಣವೂ ಸೇರಿದೆ. ಏಕಕಾಲಕ್ಕೆ ಲೋಕಸಭಾ ಹಾಗೂ ರಾಜ್ಯ ವಿಧಾನ ಸಭೆಯ ಚುನಾವಣೆಯನ್ನು ನಡೆಸುವ ಮೂಲಕ ಬಹಳಷ್ಟು ಖರ್ಚು-ವೆಚ್ಚಗಳನ್ನು ಉಳಿಸಬಹುದು.
ಚುನಾವಣೆ ನಡೆಯುವ 2-3 ತಿಂಗಳ ಹಿಂದಿನಿಂದಲೂ ಸುಮಾರು 25 ಲಕ್ಷ ಸರ್ಕಾರಿ ನೌಕರರು ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿರುತ್ತಾರೆ.
ಇದರಲ್ಲಿ ಶಿಕ್ಷಕರು, ಕಂದಾಯ ಇಲಾಖೆ ಸೇರಿದಂತೆ ಜನಸಮಾನ್ಯರಿಗೆ ನಿತ್ಯ ಸೇವೆ ನೀಡುವ ಅನೇಕ ನೌಕರರು ತಮ್ಮ ಕರ್ತವ್ಯವನ್ನು ಬಿಟ್ಟು ಚುನಾವಣಾ ಕೆಲಸಕ್ಕೆ ಹಾಜರಾಗುತ್ತಾರೆ. ಇದರಿಂದ, ಜನಸಾಮಾನ್ಯರಿಗೆ ಸರ್ಕಾರದ ಸೇವೆ ಸಿಗದೆ ಪರದಾಡುವ ಸ್ಥಿತಿ ಉದ್ಭವಿಸುತ್ತದೆ.

ಏಕಕಾಲದಲ್ಲಿ ಚುನಾವಣೆ ನಡೆಸಿದ್ದಲ್ಲಿ ಆಡಳಿತಾತ್ಮಕ ದಕ್ಷತೆ ಸಾಧಿಸಬಹುದು, ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಬಹುದು ಹಾಗೂ ಸರ್ಕಾರಿ ಸಿಬ್ಬಂದಿಯ, ಅಧಿಕಾರಿಗಳ ಸಮಯವನ್ನು ರಾಜ್ಯದ ಹಾಗೂ ದೇಶದ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು.

ಮತದಾರರಿಗೆ ಒಂದೇ ಬಾರಿಗೆ ಮತದಾನ ಮಾಡುವುದರಿಂದ ಮತದಾನದ ಪ್ರಮಾಣವೂ ಹೆಚ್ಚುತ್ತದೆ. ಅಲ್ಲದೆ, ಈಗಿನ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಉಚಿತ ಯೋಜನೆಗಳನ್ನು ನೀಡಿ ಮತವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ, ಈ ತಂತ್ರಗಾರಿಕೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಯಶಸ್ಸು ಕಂಡಿದೆ, ಒಂದು ವೇಳೆ ಏಕಕಾಲದಲ್ಲಿ ಚುನಾವಣೆ ನಡೆದರೆ ರಾಜಕೀಯ ಪಕ್ಷಗಳು ಉಚಿತ, ಚುನಾವಣಾ ಕೇಂದ್ರಿತ ಯೋಜನೆಗಳನ್ನು ನಿಲ್ಲಿಸಿ, ದೀರ್ಘಾವಧಿ ನೀತಿಗಳನ್ನು ರೂಪಿಸುತ್ತದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರ ಚುನಾವಣೆಯನ್ನು ಕೇಂದ್ರೀಕರಿಸದೆ ನೀತಿ ಅನುಷ್ಠಾನ ಹಾಗೂ ಆಡಳಿತದ ಮೇಲೆ ಹೆಚ್ಚು ಗಮನ ಕೊಡಬಹುದು.

ಸವಾಲುಗಳು?

ಏಕಕಾಲದಲ್ಲಿ ಚುನಾವಣೆ ನಡೆದರೆ ವಿದ್ಯುನ್ಮಾನ ಮತಯಂತ್ರಗಳನ್ನು ಖರೀದಿಸಲು 10,000 ಕೋಟಿಯಷ್ಟು ಹಣಬೇಕು ಎಂದು ಚುನಾವಣಾ ಆಯೋಗ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿತ್ತು. ಅಲ್ಲದೆ ಏಕಕಾಲದಲ್ಲಿ ಚುನಾವಣೆ ನಡೆದಲ್ಲಿ ಇ.ವಿ.ಎಂ. ಗಳನ್ನು ಸುರಕ್ಷಿತವಾಗಿಡಲು ಸ್ಥಳ, ಹೆಚ್ಚುವರಿ ಸಿಬ್ಬಂದಿಯ ಅವಶ್ಯಕತೆ ಇದೆ ಎಂದು ಹೇಳಿತ್ತು.
ಹೊಸ ಇ.ವಿ.ಎಂ. ಗಳ ಉತ್ಪಾದನೆ, ಹೆಚ್ಚುವರಿ ಗೋದಾಮು ಕೇಂದ್ರಗಳನ್ನು ಹುಡುಕುವುದಕ್ಕೆ ಸಾಕಷ್ಟು ಸಮಯ ಬೇಕಾಗಿರುವುದರಿಂದ ಏಕಕಾಲದಲ್ಲಿ ಚುನಾವಣೆಯನ್ನು ನಡೆಸಲು 2029 ರಲ್ಲಷ್ಟೇ ಸಾಧ್ಯ ಎಂದು ಆಯೋಗವು ಕೇಂದ್ರ ಕಾನೂನು ಸಚಿವಾಲಯಕ್ಕೆ ತಿಳಿಸಿದೆ.
ಏಕ ರಾಷ್ಟ್ರ, ಏಕ ಚುನಾವಣೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಕೆಲ ರಾಜಕೀಯ ಪಕ್ಷಗಳ ಮುಖಂಡರು ಹೇಳುತ್ತಾದರೂ ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಒಕ್ಕೂಟ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಪ್ರತಿ ಬಾರಿ ನಡೆಯುವ ಚುನಾವಣೆಯಲ್ಲಿ ಖರ್ಚಾಗುವ ಹಣವನ್ನು ಉಳಿಸಿ ನಾಗರಿಕ ಕೇಂದ್ರಿತ ಸೇವೆಗಳಿಗೆ ಉಪಯೋಗಿಸಬಹುದು. ಪದೇ ಪದೇ ಚುನಾವಣೆ ಬರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ ಇದರಿಂದ ಸರ್ಕಾರದ ಅನೇಕ ಕಾರ್ಯಕ್ರಮಗಳು, ನೀತಿಗಳು ಸ್ಥಗಿತಗೊಳ್ಳುತ್ತದೆ. ಒಂದೇ ಬಾರಿಗೆ ಚುನಾವಣೆ ನಡೆಸುವುದರಿಂದ ಸರ್ಕಾರಕದ ಕಾರ್ಯಕ್ಷಮತೆ ಹೆಚ್ಚುತ್ತದೆ.

ಏಕ ರಾಷ್ಟ್ರ, ಏಕ ಚುನಾವಣೆಯಿಂದ ದೇಶದ ಬೆಳವಣಿಗೆ ಸಾಧ್ಯ

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯ ಸಮಿತಿ ನೀಡಿರುವ ವರದಿಯಲ್ಲಿ ಈ ಹಿಂದೆ ನಮ್ಮ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದಾಗ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿ.ಡಿ.ಪಿ) ಹೆಚ್ಚಾಗಿರುವ ನಿದರ್ಶನಗಳಿವೆ ಎಂದು ಉಲ್ಲೇಖಿಸಿದ್ದಾರೆ.
ಏಕಕಾಲದಲ್ಲಿ ಚುನಾವಣೆ ನಡೆಸಿ ಖರ್ಚು ವೆಚ್ಚ ಕಡಿಮೆ ಮಾಡಿಕೊಂಡು, ಜನರ ತೆರಿಗೆಯ ಹಣವನ್ನು ನಾಗರೀಕ ಕೇಂದ್ರಿತ ಸೇವೆಗೆ ಬಳಕೆ ಮಾಡಿಕೊಂಡಿರುವ ಬೆಲ್ಜಿಯಂ, ಸ್ವೀಡನ್, ದಕ್ಷಿಣ ಆಫ್ರಿಕಾ ಹಾಗೂ ದಕ್ಷಿಣ ಆಫ್ರಿಕಾ ಎಲ್ಲರನ್ನೂ ಒಗ್ಗೂಡಿಸಿ, ತಾಂತ್ರಿಕ, ಆಡಳಿತಾತ್ಮಕ ಅಡೆ-ತಡೆಗಳನ್ನು ಹಿಮ್ಮೆಟ್ಟಿ, ಸಂವಹನ ಸಾಧಿಸಿ ಏಕಕಾಲದಲ್ಲಿ ಚುನಾವಣೆ ನಡೆಸಬಹುದು ಎಂದು ತೋರಿಸಿಕೊಟ್ಟಿದೆ.
ಸಂಪನ್ಮೂಲಗಳ ಸದ್ಬಳಕೆ, ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡಲು, ರಾಜಕೀಯ ಸ್ಥಿರತೆ ಕಾಪಾಡಿಕೊಳ್ಳಲು ಏಕ ದೇಶ, ಏಕ ಚುನಾವಣೆ ಅತ್ಯಗತ್ಯವಾಗಿದೆ.

-ಪವನ್ ಎಸ್ ,ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ