ಬೀದರ್ : ಬಿ. ಕಾಂ ಮತ್ತು ಬಿ. ಬಿ. ಎ ಪದವಿ ಕೋರ್ಸಗಳಲ್ಲಿ ಅರ್ಥಶಾಸ್ತ್ರ ವಿಷಯವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕರು ಭೋಧಿಸುತ್ತಿದ್ದಾರೆ. ಅವರನ್ನು ಕೈ ಬಿಟ್ಟು ಅರ್ಥಶಾಸ್ತ್ರದ ಉಪನ್ಯಾಸಕರನ್ನೇ ಬೋಧಿಸಲು ಅನುಮತಿ ನೀಡುವಂತೆ ಅರ್ಥಶಾಸ್ತ್ರ ಅಧ್ಯಾಪಕರ ಸಂಘ ಒತ್ತಾಯಿಸಿದೆ.
ನಿನ್ನೆ ಬೀದರ್ ವಿಶ್ವವಿದ್ಯಾಲಯದ ಆವರಣದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲಾಯಿತು. ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಸುಚಿತಾನಂದ್ ಎಂ. ಮಲ್ಕಾಪುರೆ, ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಅರ್ಥಶಾಸ್ತ್ರದ ಉಪನ್ಯಾಸಕರೇ ಬೋಧನೆ ಮಾಡುತ್ತಿದ್ದಾರೆ. ಆದರೆ ನಮ್ಮ ಬೀದರ್ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರನ್ನು ಕಡೆಗಣಿಸಿ ವಾಣಿಜ್ಯ ವಿಭಾಗದ ಉಪನ್ಯಾಸಕರನ್ನೇ ಬೋಧಿಸಲು ಅನುವು ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಅರ್ಥಶಾಸ್ತ್ರದ ಉಪನ್ಯಾಸಕರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಕುಲಸಚಿವರು ಬಿ. ಕಾಂ, ಬಿ. ಬಿ. ಎ ಮತ್ತು ಬಿ. ಎ ಅಧ್ಯಯನ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯರಿಗೆ ನೀಡಿದ ಸಭಾ ಸೂಚನಾ ಪತ್ರದ ನಿರ್ಣಯ ತೆಗೆದುಕೊಂಡಿಲ್ಲ. ಅವರು ಸಮಿತಿಯನ್ನು ರಚಿಸಿದ್ದಾರೆ ಆದರೆ ಅದರ ವರದಿಯನ್ನು ಬಹಿರಂಗ ಮಾಡಲಿಲ್ಲ. ತರಗತಿಗಳು ಪ್ರಾರಂಭವಾಗಿ ಎರಡು ತಿಂಗಳು ಕಳೆದರು ಕೂಡ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬಿರುತ್ತದೆ ಎಂದು ಮನವಿ ಪತ್ರದಲ್ಲಿ ದೂರಲಾಗಿದೆ.
ಕುಲಸಚಿವರಿಗೆ ಹಲವಾರು ಸಲ ಮನವಿಪತ್ರ ಸಲ್ಲಿಸಿದರೂ ಕೂಡಾ ಅವರು ಸ್ಪಂದಿಸಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಇಂದು ಧರಣಿ ಸತ್ಯಾಗ್ರಹ ನಡೆಸಬೇಕಾಯಿತು. ದಯವಿಟ್ಟು ನಮ್ಮ ಮನವಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ನಮಗೆ ನ್ಯಾಯ ಸಿಗುವವರೆಗೂ ನಾವು ಮೌಲ್ಯಮಾಪನ ಕಾರ್ಯಕ್ಕೆ ಬಹಿಷ್ಕಾರ ಹಾಕಲು ನಿರ್ಧಾರ ಮಾಡಿದ್ದೇವೆ ಎಂದು ಎಚ್ಚರಿಕೆ ನೀಡಲಾಗಿದೆ.
ವರದಿ:- ರೋಹನ್ ವಾಘಮಾರೆ
