ಹನೂರು: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಆಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಮಲೆ ಮಾದೇಶ್ವರ ಬೆಟ್ಟ ಮುಖ್ಯ ರಸ್ತೆಗೆ ಅಂದಾಜು 15 ಕೋಟಿ ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ಹನೂರು – ಮಲೆಮಾದೇಶ್ವರ ಬೆಟ್ಟ ಮುಖ್ಯ ರಸ್ತೆ ಮರು ಡಾಂಬರೀಕರಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ 15 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಬಹುಬೇಗ ಪೂರ್ಣಗೊಳಿಸುವ ಉದ್ದೇಶದಿಂದ ಮೂರು ಭಾಗಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಹನೂರಿನಿಂದ ಕೌದಳ್ಳಿ ವರೆಗೆ, ಕೌದಳ್ಳಿಯಿಂದ ತಾಳುಬೆಟ್ಟದವರೆಗೆ ಮತ್ತು ತಾಳುಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದ ವರೆಗೆ ಮೂರು ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ.
ಹನೂರಿನಿಂದ ಮಲೆ ಮಹದೇಶ್ವರ ಬೆಟ್ಟ ಮತ್ತು ಪಾಲಾರ್ ವರೆಗೆ ಕೇಶಿಫ್ ರಸ್ತೆ ನಿರ್ಮಾಣಕ್ಕಾಗಿ ಈಗಾಗಲೇ ಡಿಪಿಆರ್ ಸಲ್ಲಿಸಲಾಗಿದೆ. ಬಹು ಮುಖ್ಯವಾಗಿ ಮಲೆಮಾದೇಶ್ವರ ಬೆಟ್ಟ ರಸ್ತೆ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕು.
ರಾಜ್ಯದಲ್ಲಿ ಹೆಚ್ಚು ಆದಾಯ ನೀಡುವ ದೇವಸ್ಥಾನಗಳಲ್ಲಿ ಮಲೆಮಾದೇಶ್ವರ ಬೆಟ್ಟ ಎರಡನೆಯ ಸ್ಥಾನದಲ್ಲಿದೆ. ಈ ಕ್ಷೇತ್ರವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವುದು ನಮ್ಮ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳು ಮತ್ತು ಪ್ರಾಧಿಕಾರದ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಈಗಾಗಲೇ ತಿರುಪತಿಗೆ ಭೇಟಿ ನೀಡಿ ಅಲ್ಲಿನ ಮಾದರಿಗಳ ಬಗ್ಗೆ ಅಧ್ಯಯನ ಮಾಡಿ ಬಂದಿದ್ದೇವೆ .
ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಚಾಮರಾಜನಗರ ಜಿಲ್ಲೆಯು ಸಹ ಒಂದಾಗಿದೆ. ವರದಿ ಅನುಸಾರ ಜಿಲ್ಲೆಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ. ಸಚಿವ ಸಂಪುಟ ಸಭೆಯ ನಂತರ ಕ್ಷೇತ್ರದ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಹೆಚ್ಚಿನ ಆದ್ಯತೆ ನೀಡುವ ಭರವಸೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಚಿನ್ನಣ್ಣ, ಸಹಾಯಕ ಅಭಿಯಂತರ ಮಹೇಶ್, ಯಲ್ಲೆಮಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಮುಖಂಡರಾದ ಮಂಜೇಶ್, ಚಿನ್ನ ವೆಂಕಟ ಮುಂತಾದವರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
