ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ. ವಿನಮ್ರತೆ, ಪಾಂಡಿತ್ಯದಿಂದ ಎಲ್ಲರ ಗೌರವಕ್ಕೆ ಪಾತ್ರವಾಗಿದ್ದ ಮತ್ತು ಮಿತಭಾಷಿಯಾಗಿದ್ದ ಆರ್ಥಿಕ ಸುಧಾರಣೆಯ ಆಯೋಜಕ, ಉದಾರೀಕರಣ ನೀತಿಯನ್ನು ಭಾರತದಲ್ಲಿ ಜಾರಿಗೆ ತಂದು ಭಾರತದ ಅರ್ಥವ್ಯವಸ್ಥೆಯನ್ನು ಬದಲಾಯಿಸಿದ ಭಾರತದ ಅರ್ಥ ವ್ಯವಸ್ಥೆಯ ಸುಧಾರಕ ಡಾ ಮನಮೋಹನ್ ಸಿಂಗ್ ನಿಧನರಾಗಿದ್ದಾರೆ.
1932ರ ಸೆಪ್ಟೆಂಬರ್ 26ರಂದು ಜನಿಸಿದ ಅವರಿಗೆ 92 ವರ್ಷ ತುಂಬಿತ್ತು.
ಕಷ್ಟಪಟ್ಟು ಮೇಲೆ ಬಂದ ಅಪ್ರತಿಮ ಪ್ರತಿಭಾವಂತ ಮನಮೋಹನ್ ಸಿಂಗ್ ಆಕ್ಸ್ ವರ್ಡ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಪಡೆದಾತ, ವಿಶ್ವಸಂಸ್ಥೆಯಲ್ಲಿ ಉದ್ಯೋಗ ಮಾಡಿದಾತ, ಅರ್ಥಶಾಸ್ತ್ರಜ್ಞ, ಸಲಹೆಗಾರ, ಯೋಜನಾ ಆಯೋಗದ ಉಪಾಧ್ಯಾಕ್ಷ, ರಿಸರ್ವ್ ಬ್ಯಾಂಕ್ ಮುಖ್ಯಸ್ಥ, ದೇಶವನ್ನು ಲೈಸೆನ್ಸ್ ರಾಜ್ ಮುಷ್ಠಿಯಿಂದ ಬಿಡುಗಡೆಯ ಹಾದಿಗೆ ತಂದ ಧೀಮಂತ ಹಣಕಾಸು ಮಂತ್ರಿ, ಜವಹರಲಾಲ್ ನೆಹರೂ ನಂತರ ಐದು ವರ್ಷ ಅವಧಿ ಪೂರೈಸಿ ಮತ್ತೊಂದು ಅವಧಿಗೆ ಪ್ರಧಾನಿಯಾದ ಕೀರ್ತಿ ಇವೆಲ್ಲವೂ ಡಾ. ಮನಮೋಹನ್ ಸಿಂಗ್ ಅವರ ಹೆಗ್ಗಳಿಕೆಯಾಗಿದ್ದವು. ಮನಮೋಹನ್ ಸಿಂಗ್ ಅವರು ಭಾರತದ 13ನೇ ಪ್ರಧಾನಿಯಾಗಿ ಭಾರತದ ಆಡಳಿತ ನಡೆಸಿದ್ದಾರೆ, ಆರ್ಥಿಕ ತಜ್ಞರಾಗಿಯು ಸೇವೆ ಸಲ್ಲಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸ್ವಸಾಮರ್ಥ್ಯದ ಬಲದಿಂದಲೇ ಭಾರತದ ಅತ್ಯುನ್ನತ ಸ್ಥಾನ ಅಲಂಕರಿಸಿದ ಪ್ರತಿಭಾವಂತರಾಗಿದ್ದರು.
ಈಗಿನ ಪಾಕಿಸ್ತಾನದಲ್ಲಿರುವ ಗೇಹ್ ಎಂಬ ಹಳ್ಳಿಯಲ್ಲಿ 26 ಸೆಪ್ಟೆಂಬರ್ 1932ರಲ್ಲಿ ಹುಟ್ಟಿದ ಮನಮೋಹನ್ ಸಿಂಗ್ ಬಾಲ್ಯದಿಂದಲೇ ಅಪ್ರತಿಮ ಬುದ್ಧಿವಂತರು. ಮನೆಯಲ್ಲಿ ಹೇಳಿಕೊಳ್ಳುವ ಅನುಕೂಲ ಇರಲಿಲ್ಲ, ಆದರೆ ಓದುವುದೆಂದರೆ ಇಷ್ಟ. ಭಾರತ ವಿಭಜನೆಯಾದಾಗ ಅವರ ಪರಿವಾರ ಅಮೃತಸರಕ್ಕೆ ಬಂತು. ತಮ್ಮ ಬುದ್ಧಿವಂತಿಕೆಯಿಂದ ಸ್ಕಾಲರ್‌ಶಿಪ್ ಪಡೆಯುತ್ತಲೇ ಹೋದ ಸಿಂಗ್ ಪಂಜಾಬ್, ಕೇಂಬ್ರಿಡ್ಜ್ ಆಕ್ಸ್‌ಫರ್ಡ್‌ಗಳಲ್ಲಿ ಪದವಿ ಪಡೆದರು. ಅವರದ್ದು ಅರ್ಥಶಾಸ್ತ್ರದಲ್ಲಿ ವಿಶೇಷ ಪ್ರತಿಭೆ. ವಾಪಾಸು ಬಂದ ಅವರನ್ನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸೀನಿಯರ್ ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ಎರಡು ವರ್ಷ ಕೆಲಸ ಮಾಡಿದ ಅವರು ಫ್ರೊಫೆಸರ್ ಹುದ್ದೆಗೇರಿದರು. ನಂತರ ವಿಶ್ವಸಂಸ್ಥೆಗಾಗಿ ಮೂರು ವರ್ಷ ಕೆಲಸ ಮಾಡಿದರು. ನಂತರ ಹಲವಾರು ಸರ್ಕಾರಿ ಸಂಸ್ಥೆಗಳಲ್ಲಿ ಹಣಕಾಸು ಸಲಹೆಗಾರರಾಗಿ ಕೆಲಸ ಮಾಡಿದರು. ಅಷ್ಟು ಹೊತ್ತಿಗೆ ಅವರ ಬುದ್ಧಿವಂತಿಕೆ ಎಲ್ಲಾ ಕಡೆ ಸುದ್ದಿಯಾಗಿತ್ತು. 1982ರಲ್ಲಿ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ನೇಮಕಗೊಂಡರು. 1985ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾದರು.
1991ಭಾರತ ಜಾಗತೀಕರಣಕ್ಕೆ ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದ ಕಾಲ. ಆಗ ಪಿ ವಿ ನರಸಿಂಹರಾವ್ ಅವರ ಕ್ಯಾಬಿನೆಟ್‌ನಲ್ಲಿ ಹಣಕಾಸು ಮಂತ್ರಿಯಾಗಿ ಸೂಕ್ತ ಕಾರ್ಯ ನಿರ್ವಹಿಸಿದರು. 2004ರಲ್ಲಿ ಭಾರತದ ಹದಿಮೂರನೇ ಪ್ರಧಾನಿಯಾದರು. 2004ರಿಂದ 2014ರವರೆಗೆ ಪ್ರಧಾನಿಯಾಗಿ ಮಹಾತ್ಮಗಾಂಧಿ ಉದ್ಯೋಗ ಗ್ಯಾರಂಟಿ ಯೋಜನೆ, ಆಹಾರ ಭದ್ರತಾ ಕಾಯ್ದೆಯೂ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಭಾರತದ ಅಭಿವೃದ್ಧಿಗಾಗಿ ಹಾಕಿಕೊಂಡರು.ತಮ್ಮ ಸ್ವಚ್ಛ ವ್ಯಕ್ತಿತ್ವದಿಂದ ವಿರೋಧಿ ಪಾಳಯದಲ್ಲೂ ಗೌರವಾನ್ವಿತರಾಗಿದ್ದರು.
ಬಹುಶಃ ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತಿನ ನಿಜವಾದ ಉದಾಹರಣೆಯಾಗಿದ್ದರು
ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯ ಮತ್ತು ಗ್ರೇಟ್ ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ನಂತರ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು.
1970 ರ ದಶಕದಲ್ಲಿ ಅವರು ಭಾರತ ಸರ್ಕಾರದ ಆರ್ಥಿಕ ಸಲಹಾ ಹುದ್ದೆಯನ್ನು ಅಲಂಕರಿಸಿದರು ಮತ್ತು ಮಾಜಿ ಪ್ರಧಾನಮಂತ್ರಿ ನರಸಿಂಹ ರಾವ್ ಅವರ ಆರ್ಥಿಕ ಸಲಹೆಗಾರರಾದರು. ಭಾರತೀಯ ರಿಸರ್ವ್ ಬ್ಯಾಂಕ್ , ನಿರ್ದೇಶಕರಾಗಿ (1976-80) ಮತ್ತು ಗವರ್ನರ್ (1982–85) ಸೇವೆ ಸಲ್ಲಿಸಿ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿ 1972 ರಲ್ಲಿ ಬಡ್ತಿ ಪಡೆದರು. UNCTAD ಸೆಕ್ರೆಟರಿಯೇಟ್‌ನಲ್ಲಿ ಅವರನ್ನು ದಕ್ಷಿಣ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಪಿ ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ. ಅಸ್ಸಾಮಿನಿಂದ ಐದು ಬಾರಿ ರಾಜ್ಯಸಭಾ ಸದಸ್ಯರಾಗಿ, ಒಂದು ಬಾರಿ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿ, ರಾಜ್ಯಸಭಾ ವಿರೋಧ ಪಕ್ಷದ ನಾಯಕನಾಗಿ, 2004 ರಿಂದ 2014 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
1990 ರಿಂದ ಜಿನೀವಾ ಇದರ ಜೊತೆಗೆ, ಡಾ. ಸಿಂಗ್ ಅವರು ಹಣಕಾಸು ಸಚಿವಾಲಯದ ಕಾರ್ಯದರ್ಶಿ, ಯೋಜನಾ ಆಯೋಗದ ಉಪಾಧ್ಯಕ್ಷ, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಸ್ಥಾನಗಳನ್ನು ಸಹ ನಿರ್ವಹಿಸಿದ್ದಾರೆ.
ಭಾರತದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸುವ ಪ್ರಯತ್ನದಲ್ಲಿ, ಸಿಂಗ್ 2005 ರಲ್ಲಿ US ಅಧ್ಯಕ್ಷ ಜಾರ್ಜ್ W. ಬುಷ್ ಅವರೊಂದಿಗೆ ಪರಮಾಣು ಸಹಕಾರ ಒಪ್ಪಂದಕ್ಕಾಗಿ ಮಾತುಕತೆ ನಡೆಸಿದ ಮನಮೋಹನ್ ಸಿಂಗ್ ಅವರು 1964 ರಲ್ಲಿ ಇಂಡಿಯಾಸ್ ಎಕ್ಸ್‌ಪೋರ್ಟ್ ಟ್ರೆಂಡ್ಸ್ ಮತ್ತು ಪ್ರಾಸ್ಪೆಕ್ಟ್ಸ್ ಫಾರ್ ಸೆಲ್ಫ್-ಸಸ್ಟೈನ್ಡ್ ಗ್ರೋತ್ ಎಂಬ ಪುಸ್ತಕವನ್ನು ಬರೆದರು. ಅವರು ಅರ್ಥಶಾಸ್ತ್ರದ ನಿಯತಕಾಲಿಕಗಳ ಶ್ರೇಣಿಯಲ್ಲಿ ಪ್ರಕಟವಾದ ಅನೇಕ ಲೇಖನಗಳನ್ನು ಸಹ ಬರೆದಿದ್ದಾರೆ.
ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ. ಅಗಲಿದ ಬುದ್ಧಿವಂತ, ಪ್ರಾಮಾಣಿಕರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ಶಿವನಗೌಡ ಪೊಲೀಸ್ ಪಾಟೀಲ ನವಲಹಳ್ಳಿ,
ಉಪನ್ಯಾಸಕರು ಕುಷ್ಟಗಿ.
