
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಟೀಸರ್ ಹಾಗೂ ಆಟಿಕಳಂಜ ಹಾಡಿನ ಮೂಲಕ ಕ್ರೇಜ್ ಹೆಚ್ಚಿಸಿರುವ ಅಧಿಪತ್ರ ಸಿನಿಮಾ ಫೆ.07ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.
ತುಳು ಸಿನಿಮಾ ‘ಸರ್ಕಸ್’ ನ ಯಶಸ್ಸಿನ ನಂತರ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ ರೂಪೇಶ್ ಶೆಟ್ಟಿ. ‘ಅಧಿಪತ್ರ’ ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್ ಆಗಿದ್ದು, ರೂಪೇಶ್ ಶೆಟ್ಟಿ ಖಡಕ್ ಪೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಯನ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ನೈಜ್ಯ ಘಟನೆ ಆಧಾರಿತವಾಗಿದ್ದು, ನಾಯಕಿಯಾಗಿ ನಿರೂಪಕಿ ಜಾಹ್ನವಿ ಜೊತೆಯಾಗಿದ್ದಾರೆ. ‘ಕೆ.ಆರ್. ಸಿನಿ ಕಂಬೈನ್ಸ್ ‘ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ಅವರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಹಾಗೂ ಬೆಳಕು ಫಿಲಂಸ್ ಅಡಿಯಲ್ಲಿ ಕಾರ್ತಿಕ್ ಶೆಟ್ಟಿ, ಸತೀಶ್ ಶೆಟ್ಟಿ ಮತ್ತು ಶ್ವೇತಾ ರವಿಚಂದ್ರ ಶೆಟ್ಟಿ ಕೂಡ ಸಹ-ನಿರ್ಮಾಪಕರಾಗಿದ್ದಾರೆ. ಕಳೆದ ತಿಂಗಳು ಡಿ.27ಕ್ಕೆ ಚಿತ್ರದ ಮೊದಲ ಹಾಡು ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಒಂದು ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ.
“ನೈಜ್ಯ ಘಟನೆಯಿಂದ ಸ್ಪೂರ್ತಿ ಪಡೆದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಕತೆ ಹೆಣೆಯಲಾಗಿದೆ” ಎಂದು ನಿರ್ದೇಶಕ ಚಯನ್ ಶೆಟ್ಟಿ ಹೇಳಿರೋದು ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ.
ಈ ಚಿತ್ರದಲ್ಲಿ ಕರಾವಳಿ ಭಾಗದ ವಿಶೇಷ ಆಚರಣೆಗಳಾದ ಆಟಿಕಳಂಜ, ಯಕ್ಷಗಾನ, ಹುಲಿ ಕುಣಿತ ಜೊತೆಗೆ ಭಿನ್ನ ಶೈಲಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಚಿತ್ರೀಕರಣ ಕೂಡ ಕರಾವಳಿ ಭಾಗದಲ್ಲಿಯೇ ಮಾಡಿದ್ದಾರೆ. ಬಿಡುಗಡೆಗೆ ಮುನ್ನವೇ ಡಬ್ಬಿಂಗ್ ಹಾಗೂ ಓಟಿಟಿ ಹಕ್ಕುಗಳಿಗೆ ಭಾರೀ ಬೇಡಿಕೆ ಬಂದಿದೆ. ಚಿತ್ರದಲ್ಲಿ ‘ಕಾಂತಾರ’ ಚಿತ್ರ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ, ಎಂ.ಕೆ. ಮಠ, ರಘು ಪಾಂಡೇಶ್ವರ್, ಕಾರ್ತಿಕ್ ಭಟ್, ಅನಿಲ್ ಉಪ್ಪಾಲ್, ಪ್ರಶಾಂತ್ ಮೊದಲಾದವರು ನಟಿಸಿದ್ದಾರೆ.
