ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ.) ಸೋಮವಾರ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರರ ಮುಖಾಂತರ ಸರ್ಕಾರಿ ಬ್ಲಡ್ ಬ್ಯಾಂಕ್ ತೆರೆಯಲು ಮನವಿ ಸಲ್ಲಿಸಿತು. ಇತ್ತೀಚೆಗೆ ರಕ್ತದ ಅಭಾವ ಹೆಚ್ಚಾಗುತ್ತಿದ್ದು, ಬ್ಲಡ್ ಪಡೆಯಲು ದೂರದ ದಾವಣಗೆರೆ ಹೊಸಪೇಟೆಗಳನ್ನೇ ಅವಲಂಬಿಸುವ ಪರಿಸ್ಥಿತಿ ಬಂದಿದೆ. ಅಲ್ಲದೆ ಗರ್ಭಿಣಿ ಮಹಿಳೆಯರಿಗೆ, ಅಪಘಾತಕ್ಕೀಡಾದವರಿಗೆ ರಕ್ತ ತ್ವರಿತ ಗತಿಯಲ್ಲಿ ಸಿಗಬೇಕು ಎನ್ನುವ ಸಾಮಾಜಿಕ ಕಳಕಳಿಯಿಂದ ಪಟ್ಟಣದಲ್ಲಿ ಸರ್ಕಾರಿ ಬ್ಲಡ್ ಬ್ಯಾಂಕ್ ತೆರೆಯಲು ಒತ್ತಾಯಿಸಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಬಡರೋಗಿಗಳಿಗೆ ಸಹಾಯವಾಗುತ್ತದೆ ಎಂಬ ಸದುದ್ದೇಶದಿಂದ ಮನವಿ ಸಲ್ಲಿಸಿತು. ಅಲ್ಲದೇ ಕೊಟ್ಟೂರು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಅಭಿವೃದ್ಧಿ ಇಲ್ಲದೆ, ಇದ್ದೂ ಇಲ್ಲದಂತಾಗಿದೆ ಇದರಿಂದ ಕ್ರೀಡಾಪಟುಗಳಿಗೆ ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ ಆದ್ದರಿಂದ ತಾಲ್ಲೂಕು ಕ್ರೀಡಾಂಗಣವನ್ನು ಯುವಜನ ಸೇವಾ ಕ್ರೀಡಾ ಇಲಾಖೆ ಅಭಿವೃದ್ಧಿಗೊಳಿಸಬೇಕು ಎಂಬ ಮನವಿಯನ್ನು ಸಹ ಸಲ್ಲಿಸಿದೆ. ಅಧಿಕಾರಿಗಳು ಈ ಮನವಿಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಸಂದರ್ಭದಲ್ಲಿ ಹಳೆ ಕೊಟ್ಟೂರು ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಹೆಚ್.ವಿಜಯಕುಮಾರ್, ಉಪಾಧ್ಯಕ್ಷ ಸುವೇಭ್ ವಲಿ ಕೆ,ಪ್ರಧಾನ ಕಾರ್ಯದರ್ಶಿ ಕೆ.ಕೊಟ್ರೇಶ್, ಕಾರ್ಯಕಾರಿಣಿ ಸದಸ್ಯ ಪರಶುರಾಮ ಸುಲಾಖೆ, ಸುಬಾನ್, ಅನಿಲ್, ತೆಗ್ಗಿನಕೇರಿ ಕೊಟ್ರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಮಹಮ್ಮದ್ ಗೌಸ್, ತಾಲ್ಲೂಕು ಘಟಕದ ಉಪಾಧ್ಯಕ್ಷ ಕೆ.ರಾಜು, ರಾಕೇಶ್, ಮುಬಾರಕ್, ಪಿ.ಗಣೇಶ್, ವಿರುಪಾಕ್ಷ, ರಾಜು , ಮುಬಾರಕ್, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೊಟ್ಟೂರು ಪಟ್ಟಣದಲ್ಲಿ ಸರ್ಕಾರಿ ಬ್ಲಡ್ ಬ್ಯಾಂಕ್ ತೆರೆಯಲು ಹಾಗೂ ಕ್ರೀಡಾಂಗಣ ಅಭಿವೃದ್ಧಿಪಡಿಸಲು ಹಳೆ ಕೊಟ್ಟೂರು ಸೇವಾ ಟ್ರಸ್ಟ್ ಮನವಿ ಸಲ್ಲಿಸಿದ್ದು, ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆದು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.
-ಎಂ ಪ್ರತಿಭಾ, ಗ್ರೇಡ್ 2 ತಹಶೀಲ್ದಾರರು, ಕೊಟ್ಟೂರು.
ಕೊಟ್ಟೂರು ಪಟ್ಟಣದಲ್ಲಿ ಸರ್ಕಾರಿ ಬ್ಲಡ್ ಬ್ಯಾಂಕ್ ತೆರೆಯಲು ಮನವಿ ಸಲ್ಲಿಸಿದ್ದು, ಈಗಾಗಲೇ ೧೦೦ ಹಾಸಿಗೆಗಳ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಿದ್ದು, ರಕ್ತ ಶೇಖರಣಾ ಘಟಕವನ್ನು ತೆರೆಯಲು ಸೂಕ್ತ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು.
- ಡಾ. ಬದ್ಯಾನಾಯ್ಕ
ಆರೋಗ್ಯ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರ ಕೊಟ್ಟೂರು.
