ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ನಾಗಾವಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಭವನ ಕಟ್ಟಡ ಕಾಮಗಾರಿ ಬರುವ ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐಟಿಬಿಟಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ಭರವಸೆ ನೀಡಿದರು.
ತಾಲೂಕು ಕೋಲಿ ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಬಾನರ, ನೂತನ ಅಧ್ಯಕ್ಷ ನಿಂಗಣ್ಣ ಹೆಗಲೇರಿ, ನೂತನ ನಗರಾಧ್ಯಕ್ಷ ಪ್ರಭು ಹಲಕರ್ಟಿ, ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರು ಅವರು ಸೇರಿದಂತೆ ಸಮಾಜದ ಮುಖಂಡರ ನಿಯೋಗ ಶುಕ್ರವಾರ ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸರ್ಕಾರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಸಮಾಜದ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದಾಗ, ಭವನ ಕಾಮಗಾರಿ ಬೇಗ ಮುಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಂಬಿಗರ ಚೌಡಯ್ಯ ಭವನ ಕಟ್ಟಡ ಕಾಮಗಾರಿಯು ಅನುದಾನದ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಅಗತ್ಯ ಅನುದಾನ ಒದಗಿಸುವ ಮೂಲಕ ಭವನ ಕಟ್ಟಡ ಕಾಮಗಾರಿ ಬೇಗ ಮುಗಿಯುವಂತೆ ಸೂಕ್ತ ಕ್ರಮ ಕೈಗೊಂಡು ಕೋಲಿ ಸಮಾಜದ ಸಭೆ, ಸಮಾರಂಭ, ಸಾಂಸ್ಕೃತಿಕ ಚಟುವಟಿಕೆಗಳು ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಮುಖಂಡರು ಮನವಿ ಮಾಡಿದರು.
ಚಿತ್ತಾಪುರ ಪಟ್ಟಣದಲ್ಲಿನ ಇಂದಿರಾ ಕ್ಯಾಂಟಿನ್ ಪಕ್ಕದಲ್ಲಿ ಕಳೆದ ಹದಿನೈದು ವರ್ಷಗಳಿಂದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆಗೆ ಕಟ್ಟೆ ನಿರ್ಮಾಣ ಮಾಡಿದ್ದು ಸದರಿ ಜಾಗವನ್ನು ಎಪಿಎಂಸಿಯಿಂದ ಪುರಸಭೆಗೆ ಹಸ್ತಾಂತರಿಸಿ ಕೋಲಿ ಸಮಾಜಕ್ಕೆ ಮಂಜೂರು ಮಾಡಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಚಿತ್ತಾಪುರ ತಾಲೂಕಿನಲ್ಲಿ ಕೋಲಿ ಸಮಾಜದ ಜನರು ಬಹುಸಂಖ್ಯಾತರಿದ್ದು ಪದವಿ ಪೂರ್ವ, ಪದವಿ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ವಸತಿ ನಿಲಯದ ಸೌಲಭ್ಯದಿಂದ ವಂಚಿತಾಗುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಹೊಸದಾಗಿ ಹಿಂದುಳಿದ ವರ್ಗಗಳ ವಸತಿ ನಿಲಯ ಮಂಜೂರು ಮಾಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮುಖಂಡರು ಸಚಿವರಲ್ಲಿ ಕೋರಿದರು.
ಕೋಲಿ ಸಮಾಜದ ಕುಲಗುರು ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಅತ್ಯಂತ ವೈಜ್ಞಾನಿಕವಾಗಿದ್ದು, ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿವೆ. ವಚನಗಳ ವಿಶ್ಲೇಷಣೆಯ ಗ್ರಂಥಗಳಗನ್ನು ಸರ್ಕಾರದಿಂದ ಪ್ರಕಟಿಸಿ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ, ಸಾರ್ವಜನಿಕ ಗ್ರಂಥಾಲಯಗಳಿಗೆ ಪೂರೈಸುವ ಮೂಲಕ ಚೌಡಯ್ಯನವರ ವಚನಗಳ ಪ್ರಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಕಾರ್ಯಚಟುವಟಿಕೆಗಳು ಸಮಾಜಮುಖಿಯಾಗಿ ನಡೆಯಲು, ಅಧ್ಯಯನ ಕಾರ್ಯ ಪರಿಣಾಮಕಾರಿಯಾಗಿ ನಡೆಸಲು, ಚೌಡಯ್ಯನವರ ವಚನ ಗ್ರಂಥಗಳ ಪ್ರಕಟಣೆ, ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜು, ಸ್ನಾತ್ತಕೋತ್ತರ ಕೇಂದ್ರಗಳಲ್ಲಿ ಚೌಡಯ್ಯನವರ ವಚನಗಳ ಕುರಿತು ವಿಚಾರ ಸಂಕಿರಣ, ವಿಶೇಷ ಉಪನ್ಯಾಸ ಕೈಗೊಳ್ಳಲು ಅಗತ್ಯ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು
ಕೋಲಿ ಸಮಾಜದ ನೂತನ ತಾಲೂಕು ಅಧ್ಯಕ್ಷ ನಿಂಗಣ್ಣಾ ಹೆಗಲೇರಿ, ಮಾಜಿ ಅಧ್ಯಕ್ಷ ರಾಮಲಿಂಗ ಬಾನರ, ಹಣಮಂತ ಸಂಕನೂರು, ಬಸವರಾಜ ಚಿನ್ನಮಳ್ಳಿ, ಭೀಮಣ್ಣಾ ಹೋತಿನಮಡಿ, ಮುನಿಯಪ್ಪ ಕೊಳ್ಳಿ, ಕಣರಕುಮಾರ ಅಲ್ಲೂರ್,
ರಾಜೇಶ ಹೋಳಿಕಟ್ಟಿ, ಹಣಮಂತ ಕಟ್ಟಿ, ಮಲ್ಲಿಕಾರ್ಜುನ ಹೊನ್ನಪೂರ,
ಶಿವಶರಣ ಮೆಂಗಾನೋರ, ಅಶೋಕ ಬಾನರ, ನಾಗಯ್ಯ ಗುತ್ತೆದಾರ್, ಸುರೇಶ ಗುತ್ತೆದಾರ್ .
ಲಕ್ಷ್ಮಿಕಾಂತ ಸಾಲಿ, ರಮೇಶ ಕೆಲ್ಲೂರ, ರವಿ ಪೂಜಾರಿ ಇದ್ದರು.
ವರದಿ ಮೊಹಮ್ಮದ್ ಅಲಿ ಚಿತ್ತಾಪುರ
